ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Pralhad Joshi: ಕಾಂಗ್ರೆಸ್‌ ಶಾಸಕರ ಖರೀದಿಗೆ ಕಾಂಗ್ರೆಸ್‌ನಲ್ಲೇ ಪೈಪೋಟಿ: ಪ್ರಲ್ಹಾದ್‌ ಜೋಶಿ

ಬಹುಶಃ ನವೆಂಬರ್‌ ವೇಳೆಗೆ ಸಿಎಂ ಬದಲಾವಣೆ ಆಗಬಹುದು ಎಂಬ ಚರ್ಚೆ ಕಾಂಗ್ರೆಸ್‌ ಶಾಸಕರಲ್ಲಿ ಹರಿದಾಡುತ್ತಿದೆ. ಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್‌ನ ಉಭಯ ಗುಂಪಿನವರು ಬಹುಶಃ ಶಾಸಕರ ಖರೀದಿಗೆ ಪ್ರಯತ್ನ ನಡೆಸಿರಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದ್ದಾರೆ.

ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ.

ಬಾಗಲಕೋಟೆ: ರಾಜ್ಯ ಕಾಂಗ್ರೆಸ್‌ನಲ್ಲಿ ಸಿಎಂ ಬದಲಾವಣೆ ಚರ್ಚೆ ಜೋರಾಗಿದ್ದು, ಕಾಂಗ್ರೆಸ್ಸಿನಿಂದ ಕಾಂಗ್ರೆಸ್‌ ಶಾಸಕರ ಖರೀದಿಗೇ ಪೈಪೋಟಿ ನಡೆದಂತಿದೆ. ಅದರ ಪರಿಣಾಮವಾಗಿಯೇ ಶಾಸಕರ ಆಡಿಯೋ ವೈರಲ್‌ ಆಗುತ್ತಿವೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಹೇಳಿದ್ದಾರೆ. ಬಾಗಲಕೋಟೆ ಜಿಲ್ಲೆ ಪಟ್ಟದಕಲ್‌ನಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವರು, ಬಹುಶಃ ನವೆಂಬರ್‌ ವೇಳೆಗೆ ಸಿಎಂ ಬದಲಾವಣೆ ಆಗಬಹುದು ಎಂಬ ಚರ್ಚೆ ಕಾಂಗ್ರೆಸ್‌ ಶಾಸಕರಲ್ಲಿ ಹರಿದಾಡುತ್ತಿದೆ. ಸಿಎಂ ಸ್ಥಾನಕ್ಕಾಗಿ ಕಾಂಗ್ರೆಸ್‌ನ ಉಭಯ ಗುಂಪಿನವರು ಬಹುಶಃ ಶಾಸಕರ ಖರೀದಿಗೆ ಪ್ರಯತ್ನ ನಡೆಸಿರಬೇಕು ಎಂದು ತಿಳಿಸಿದರು.

ಆ ಪಕ್ಷದಲ್ಲಿ ನವೆಂಬರ್‌ನಲ್ಲಿ ಸಿಎಂ ಬದಲಾವಣೆ ಎಂಬ ವದಂತಿ ಇರುವುದರಿಂದ ಸಿಎಂ ಕುರ್ಚಿಗಾಗಿ ಸಿಎಂ-ಡಿಸಿಎಂ ಗುಂಪಿನಲ್ಲಿ ಹಗ್ಗ-ಜಗ್ಗಾಟ ನಡೆದಂತಿದೆ. ತಮ್ಮ ಬಲ ಪ್ರದರ್ಶನಕ್ಕಾಗಿ ಶಾಸಕರ ಖರೀದಿಗೆ ಮುಂದಾಗಿರುವ ಉಭಯ ಗುಂಪಿನವರು ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ವೈಯಕ್ತಿಕ ಲಾಭಕ್ಕಾಗಿ ಶಾಸಕರಾದವರಿಗೆ ಇದೊಂದು ʼಗೋಲ್ಡನ್‌ ಅಪಾರ್ಚ್ಯುನಿಟಿʼ ಆಗಿದೆ ಎಂದು ಸಚಿವ ಜೋಶಿ ದೂರಿದರು.

ʼರಾಜೀವ್‌ ಗಾಂಧಿ ವಸತಿ ನಿಗಮದ ಅನುದಾನ ಬಿಡುಗಡೆಗೆ ಲಂಚ ಅನಿವಾರ್ಯʼ ವಾಗಿರುವ ಬಗ್ಗೆ ವಸತಿ ಸಚಿವ ಜಮೀರ್‌ ಅಹ್ಮದ್‌ ಆಪ್ತ ಕಾರ್ಯದರ್ಶಿ ಜತೆ ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್‌.ಪಾಟೀಲ್‌ ಮಾತನಾಡಿರುವ ಆಡಿಯೋ ವೈರಲ್‌ ಆಗಿದೆ. ಅಲ್ಲದೇ, ʼಈ ಆಡಿಯೋದಲ್ಲಿರುವ ಧ್ವನಿ ಸಹ ತಮ್ಮದೇʼ ಎಂದು ಪಾಟೀಲ್‌ ಒಪ್ಪಿಕೊಂಡಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯ ತಾಲೂಕು ಕಚೇರಿಗಳಿಗೆ ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರು ದಿಢೀರ್‌ ಭೇಟಿ ನೀಡಿದ ವೇಳೆ ʼಯಾವುದಕ್ಕೆ ಎಷ್ಟು ರೇಟ್‌?ʼ ಬೋರ್ಡ್‌ ಹಾಕಿಬಿಡಿʼ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದ ವಿಡಿಯೋ ಸಹ ವೈರಲ್‌ ಆಗಿವೆ. ಇನ್ನು, ಗುತ್ತಿಗೆದಾರರು ಇದು 60 ಪರ್ಸೆಂಟ್‌ ಸರ್ಕಾರ ಎನ್ನುತ್ತಿದ್ದಾರೆ. ರಾಜ್ಯ ಕಾಂಗ್ರೆಸ್‌ ಸರ್ಕಾರ ಭ್ರಷ್ಟಾಚಾರ ಪೀಡಿತ ಎಂಬುದಕ್ಕೆ ಇಷ್ಟು ಸಾಕಲ್ಲವೇ ನಿದರ್ಶನ ಎಂದು ರಾಜ್ಯ ಸರ್ಕಾರದ ವಿರುದ್ಧ ಪ್ರಲ್ಹಾದ್‌ ಜೋಶಿ ಕಿಡಿಕಾರಿದರು.

ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಹಿಂದೆ ಬಸವರಾಜ ರಾಯರೆಡ್ಡಿ ಅವರು ʼಅತಿ ಹೆಚ್ಚು ಭ್ರಷ್ಟಾಚಾರ ಇರುವುದು ತಮ್ಮ ಸರ್ಕಾರದಲ್ಲಿʼ ಎಂದಿದ್ದರು. ಈಗ ದುಡ್ಡು ಕೊಡದೆ ಬಡವರಿಗೆ ಮನೆ ಸಿಗುವುದಿಲ್ಲ ಎಂಬ ಬಿ.ಆರ್‌. ಪಾಟೀಲರ ಆಡಿಯೋ ವೈರಲ್‌ ಆಗಿದೆ. ಅವರೂ ಆ ಹೇಳಿಕೆಯನ್ನು ಒಪ್ಪಿಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೇ ಈಗೇನು ಹೇಳುತ್ತೀರಿ? ಎಂದು ಸಚಿವ ಜೋಶಿ ಪ್ರಶ್ನಿಸಿದರು.

ಭ್ರಷ್ಟಾಚಾರದ ಮೊಟ್ಟೆಯಿಟ್ಟು ಮರಿ ಬೆಳೆಸಿದ್ದೇ ಕಾಂಗ್ರೆಸ್‌‌

ರಾಜ್ಯ ಕಾಂಗ್ರೆಸ್‌ ಸರ್ಕಾರದಲ್ಲಿ ವರ್ಗಾವಣೆ ದಂಧೆ, ಹಗರಣವೇ ನಡೆಯುತ್ತಿದೆ ಎಂದು ಸ್ವತಃ ಕಾಂಗ್ರೆಸ್‌ ಶಾಸಕರೇ ಹೇಳುತ್ತಿದ್ದಾರೆ. ಭ್ರಷ್ಟಾಚಾರದ ಮೊಟ್ಟೆಯಿಟ್ಟು ಮರಿ ಬೆಳೆಸಿದ್ದೇ ಕಾಂಗ್ರೆಸ್‌ ಪಕ್ಷ. ಯುಪಿಎ ಸರ್ಕಾರದಲ್ಲಿ ₹12 ಲಕ್ಷ ಕೋಟಿ ಭ್ರಷ್ಟಾಚಾರ ನಡೆದಿತ್ತು. ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಬೇಲ್‌ ಮೇಲಿದ್ದಾರೆ. ಹೀಗಾಗಿ ರಾಜ್ಯ ಕಾಂಗ್ರೆಸ್ಸಿಗರಿಗೆ ಹೇಳೋರು-ಕೇಳೋರು ಯಾರೂ ಇಲ್ಲವೆಂದು ವಾಗ್ದಾಳಿ ನಡೆಸಿದರು.

ಈ ಸುದ್ದಿಯನ್ನೂ ಓದಿ | Karnataka Rains:‌ ನಾಳೆ ದಕ್ಷಿಣ ಕನ್ನಡ, ಉಡುಪಿ ಸೇರಿ ಆರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್; ಭಾರಿ ಮಳೆ ನಿರೀಕ್ಷೆ

ಗೃಹಲಕ್ಷ್ಮಿ ವಿಳಂಬಕ್ಕೆ ಕೇಂದ್ರ ಕಾರಣ ಎನ್ನುವುದು ಹಾಸ್ಯಾಸ್ಪದ

ರಾಜ್ಯದಲ್ಲಿ ಗೃಹಲಕ್ಷ್ಮಿ ಹಣ ಜನರಿಗೆ ಸರಿಯಾಗಿ ತಲುಪುತ್ತಿಲ್ಲ. ಇದಕ್ಕೆ ಕೇಂದ್ರ ಸರ್ಕಾರವೇ ಕಾರಣ ಎಂದಿದ್ದಾರೆ. ಇದು ಶೋಭೆ ತರದು. ಪುಣ್ಯಕ್ಕೆ ಇಲ್ಲಿ ಹೆಚ್ಚು ಮಳೆಯಾಗಿದೆ. ಇದಕ್ಕೂ ಕೇಂದ್ರ ಕಾರಣವೆಂದಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಲೇವಡಿ ಮಾಡಿದರು.