ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮುಸ್ಲಿಮರ ಅಸಮಾಧಾನದ ನಡುವೆ ದಾವಣಗೆರೆ ದಕ್ಷಿಣದಲ್ಲಿ ಸಮರ್ಥ್‌ ಗೆದ್ದಿದ್ದೇಗೆ?; ಬಾಗಲಕೋಟೆಯಲ್ಲಿ ಮೇಟಿ ಗೆಲುವಿಗೆ ಪ್ರಮುಖ ಕಾರಣಗಳು

Karnataka By-Election Results 2026: ಪಂಚ ರಾಜ್ಯ ಚುನಾವಣೆ ಜತೆಗೆ ರಾಜ್ಯದ ಎರಡು ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶವೂ ಸೋಮವಾರ ಹೊರಬಿದ್ದಿದೆ. ದಾವಣಗೆರೆ ದಕ್ಷಿಣ ಹಾಗೂ ಬಾಗಲಕೋಟೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಗೆಲುವು ಕಂಡಿದ್ದಾರೆ. ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಪಕ್ಷದ ಗೆಲುವಿಗೆ ಕಾರಣವಾದ ಪ್ರಮುಖ ಅಂಶಗಳು ಇಲ್ಲಿವೆ.

ದಾವಣಗೆರೆ/ ಬಾಗಲಕೋಟೆ: ರಾಜ್ಯದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪ ಚುನಾವಣೆಯಲ್ಲಿ (Karnataka By-Election Results 2026) ಕಾಂಗ್ರೆಸ್‌ ಪಕ್ಷ ಭರ್ಜರಿ ಜಯ ದಾಖಲಿಸುವ ಮೂಲಕ ಬಿಜೆಪಿಗೆ ಟಕ್ಕರ್‌ ನೀಡಿದೆ. ಇನ್ನು ವಿಶೇಷವಾಗಿ ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಟಿಕೆಟ್‌ ಗೊಂದಲ, ಮುಸ್ಲಿಂ ಮುಖಂಡರ ಅಸಮಾಧಾನದಿಂದ ಕೈ ಅಭ್ಯರ್ಥಿ ಸಮರ್ಥ್‌ ಶಾಮನೂರು ಗೆಲುವು ಕಷ್ಟ ಎಂದು ವಿಶ್ಲೇಷಿಸಲಾಗಿತ್ತು. ಆದರೆ, ಈ ಎಲ್ಲಾ ಲೆಕ್ಕಾಚಾರಗಳನ್ನು ತಲೆಕೆಳಗೆ ಮಾಡಿ ಕಾಂಗ್ರೆಸ್‌ ಅಭ್ಯರ್ಥಿ ಗೆದ್ದಿದ್ದಾರೆ.

ಈ ಉಪ ಚುನಾವಣೆ ಗೆಲುವು ಸಿಎಂ ಸಿದ್ದರಾಮಯ್ಯಗೆ ಆನೆ ಬಲ ತಂದುಕೊಟ್ಟಿದೆ. ಆದರೆ, ದಾವಣಗೆರೆ ದಕ್ಷಿಣದಲ್ಲಿ ಗೆಲುವು ಅಷ್ಟು ಸುಲಭವಾಗಿರಲಿಲ್ಲ. ತಮ್ಮ ಸಮಾಜದ ಅಭ್ಯರ್ಥಿಗೆ ಟಿಕೆಟ್‌ ನೀಡದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ಪಕ್ಷದ ವಿರುದ್ಧ ಮುಸ್ಲಿಂ ಮುಖಂಡರು ತಿರುಗಿಬಿದ್ದಿದ್ದರು. ಇದರಿಂದ ಕಾಂಗ್ರೆಸ್‌ ಪಕ್ಷದ ನಾಯಕರಿಗೆ ಒಳ ಏಟಿನ ಆತಂಕವಿತ್ತು. ಇದು ಚುನಾವಣೆಯಲ್ಲಿ ಎಸ್‌ಡಿಪಿಐ ಅಭ್ಯರ್ಥಿ ಅಫ್ಸರ್ ಕೊಡ್ಲಿಪೇಟೆಗೆ 18 ಸಾವಿರ ಮತಗಳು ಬಂದಿರುವುದನ್ನು ನೋಡಿದರೆ ತಿಳಿಯುತ್ತದೆ.

ಕ್ಷೇತ್ರದಲ್ಲಿ ಎಸ್‌ಡಿಪಿಐ ಸ್ಪರ್ಧೆಯಿಂದ ಮುಸ್ಲಿಂ ಮತಗಳು ವಿಭಜನೆಯಾಗಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ಒಂದು ವೇಳೆ ಕಾಂಗ್ರೆಸ್‌ ಪಕ್ಷದ ವಿರುದ್ಧ ಅಸಮಾಧಾನಗೊಂಡ ಮತದಾರರು ಬಿಜೆಪಿಗೆ ಬೆಂಬಲ ಸೂಚಿಸಿದ್ದರೆ ಕೈ ಅಭ್ಯರ್ಥಿ ಸಮರ್ಥ್‌ ಸೋಲಿನ ಸುಳಿಯಲ್ಲಿ ಸಿಲುಕಬೇಕಿತ್ತು. ಹೀಗಾಗಿ ಈ ಪರಿಣಾಮಗಳನ್ನು ಮನಗಂಡ ಸಿಎಂ ಸಿದ್ದರಾಮಯ್ಯ ಅವರು ಸ್ವತಃ ಅಖಾಡಕ್ಕೆ ಇಳಿದು, ಮುಸ್ಲಿಂ ನಾಯಕರ ಮುನಿಸು ಶಮನ ಮಾಡಲು ಪ್ರಯತ್ನಿಸಿದರು. ಸಚಿವ ಜಮೀರ್‌ ಅಹ್ಮದ್‌ರನ್ನು ಕ್ಷೇತ್ರಕ್ಕೆ ಕರೆಸಿ ಪ್ರಚಾರ ಮಾಡಿಸಿದ್ದು, ಅಹಿಂದ ಮತಗಳು ಚದುರಿಹೋಗದಂತೆ ನೋಡಿಕೊಂಡಿದ್ದರಿಂದ ಕೈ ಅಭ್ಯರ್ಥಿ ಗೆಲುವು ಸಾಧ್ಯವಾಗಿದೆ.

ʼಮೋದಿಮಯ್ ಭಾರತ್ʼ ನಕ್ಷೆ ಬಿಡುಗಡೆ ಮಾಡಿದ ಬಿಜೆಪಿ: ಪಶ್ಚಿಮ ಬಂಗಾಳವನ್ನು ತಲುಪಿದೆ ಕೇಸರಿ ಅಲೆ

ಬಾಗಲಕೋಟೆಯಲ್ಲಿ ಉಮೇಶ್‌ ಮೇಟಿಗೆ ಗೆಲುವಿಗೆ ಕಾರಣವಾದ ಅಂಶಗಳು

ಬಾಗಲಕೋಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ವಿರುದ್ಧ ಕಾಂಗ್ರೆಸ್‌ ಅಭ್ಯರ್ಥಿ ಉಮೇಶ್‌ ಮೇಟಿ ಭರ್ಜರಿ ಗೆಲುವು ದಾಖಲಿಸಿದ್ದಾರೆ. ಬಿಜೆಪಿಯ ವೀರಣ್ಣ ಚರಂತಿಮಠ್​​ಗೆ 76,587 ಮತಗಳು ಬಿದ್ದಿದ್ದರೆ, ಕಾಂಗ್ರೆಸ್​​ ಅಭ್ಯರ್ಥಿ ಉಮೇಶ್​​ ಮೇಟಿ ಪರ 98,919 ಮತ​​ ಚಲಾವಣೆ ಆಗಿವೆ. ಹೀಗಾಗಿ 22,332 ಮತಗಳ ಅಂತರದಿಂದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಜಯಭೇರಿ ಬಾರಿಸಿದ್ದಾರೆ. ಕ್ಷೇತ್ರದಲ್ಲಿ ಮೇಟಿ ಗೆಲುವಿಗೆ ಕಾರಣವಾದ ಅಂಶಗಳು ಇಲ್ಲಿವೆ.

  • ಅನುಕಂಪದ ಅಲೆ: ಎಚ್.ವೈ.ಮೇಟಿ ಅವರ ನಿಧನದಿಂದಾಗಿ ಎದುರಾದ ಈ ಚುನಾವಣೆಯಲ್ಲಿ ಅವರ ಪುತ್ರ ಉಮೇಶ್ ಮೇಟಿ ಪರವಾಗಿ ಕ್ಷೇತ್ರದಲ್ಲಿ ಅನುಕಂಪದ ಅಲೆ ಕಂಡುಬಂದಿತ್ತು.
  • ಸಿದ್ದರಾಮಯ್ಯ ಪ್ರಭಾವ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಾಗಲಕೋಟೆ ಪ್ರತಿಷ್ಠೆಯ ಕಣವಾಗಿತ್ತು. ಸ್ವತಃ ಸಿದ್ದರಾಮಯ್ಯ ಅವರು ಕ್ಷೇತ್ರದಲ್ಲಿ ವ್ಯಾಪಕ ಪ್ರಚಾರ ನಡೆಸಿದ್ದು ಕಾಂಗ್ರೆಸ್ ಗೆಲುವಿಗೆ ಪ್ರಮುಖ ಕಾರಣವಾಗಿದೆ.
  • ಅಹಿಂದ ಮತಗಳ ಕ್ರೋಡೀಕರಣ: ಕುರುಬ ಸಮಾಜದ ಪ್ರಮುಖ ನಾಯಕತ್ವದ ಜತೆಗೆ ಅಹಿಂದ ವರ್ಗದ ಮತಗಳು ಈ ಬಾರಿ ಕಾಂಗ್ರೆಸ್‌ಗೆ ಗಟ್ಟಿಯಾಗಿ ಬೆಂಬಲ ನೀಡಿರುವುದು ಕಾಂಗ್ರೆಸ್ ಗೆಲುವಿಗೆ ಕಾರಣವಾಗಿದೆ.
  • ಸಚಿವ ಸತೀಶ್‌ ಜಾರಕಿಹೊಳಿ ತಂತ್ರಗಾರಿಕೆ: ಕ್ಷೇತ್ರದ ಚುನಾವಣೆ ಉಸ್ತುವಾರಿ ವಹಿಸಿದ್ದ ಸಚಿವ ಸತೀಶ್ ಜಾರಕಿಹೊಳಿ ಅವರ ಸಮರ್ಥ ಸಂಘಟನೆ ಮತ್ತು ತಂತ್ರಗಾರಿಕೆ ಪಕ್ಷಕ್ಕೆ ವರವಾಗಿದೆ.