ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ದೇವಸ್ಥಾನಕ್ಕೆ 16 ಲಕ್ಷ ರುಪಾಯಿಯ ಬೆಳ್ಳಿ ಬಾಗಿಲು ಮಾಡಿಸಿದ್ದ ದಾನಜ್ಜಿಯ ಭೀಕರ ಕೊಲೆ; ಆಸ್ತಿಗಾಗಿ ಸಂಬಂಧಿಕರಿಂದಲೇ ಕೃತ್ಯ

Bagalkot News: ಪರೋಪಕಾರಿ ಗುಣದಿಂದ ದಾನಜ್ಜು ಎಂದೇ ಖ್ಯಾತರಾಗಿದ್ದ ಬಾಗಲಕೋಟೆ ಜಿಲ್ಲೆಯ ಜಗದಾಳ ಗ್ರಾಮದ 80 ವರ್ಷದ ವೃದ್ಧೆ ಚಂದ್ರವ್ವ ನೀಲಗಿ ಅವರನ್ನು ಅಣ್ಣನ ಮಕ್ಕಳೇ ಆಸ್ತಿಗಾಗಿ ಹತ್ಯೆ ಮಾಡಿದ್ದಾರೆ. 11 ಎಕರೆ ಆಸ್ತಿಗಾಗಿ ಈ ಅಮಾನವೀಯ ಕೃತ್ಯ ಎಸಗಲಾಗಿದೆ.

ಸಾಂದರ್ಭಿಕ ಚಿತ್ರ.

ಬಾಗಲಕೋಟೆ, ಜ. 15: ಬಾಗಲಕೋಟೆ ಜಿಲ್ಲೆಯ ಜಗದಾಳ ಗ್ರಾಮದಲ್ಲಿ 80 ವರ್ಷದ ವೃದ್ಧೆ ಚಂದ್ರವ್ವ ನೀಲಗಿ ಅವರನ್ನು ಅಣ್ಣನ ಮಕ್ಕಳೇ ಆಸ್ತಿಗಾಗಿ ಹತ್ಯೆ ಮಾಡಿರುವ ಭೀಕರ ಘಟನೆ ನಡೆದಿದೆ. 11 ಎಕರೆ ಆಸ್ತಿಗಾಗಿ ಈ ಅಮಾನವೀಯ ಕೃತ್ಯ ಎಸಗಲಾಗಿದೆ ಎಂದು ಮೂಲಗಳು (Bagalkot News). ಬಾಗಲಕೋಟೆ ಜಿಲ್ಲೆ ತೇರದಾಳ ಮತ್ತು ರಬಕವಿಬನಹಟ್ಟಿ ಭಾಗದಲ್ಲಿ ಚಂದ್ರವ್ವ ನೀಲಗಿ ದಾನಜ್ಜಿ ಎಂದೇ ಜನಪ್ರಿಯರಾಗಿದ್ದರು. ಈ ಹಿಂದೆ ಅವರು ಪ್ರಭುಲಿಂಗ ದೇವರಿಗೆ 16 ಲಕ್ಷ ರುಪಾಯಿಯ ಬೆಳ್ಳಿ ಬಾಗಿಲು ದಾನ ಮಾಡಿ ಸುದ್ದಿಯಾಗಿದ್ದರು.

ದಾನಜ್ಜಿ ಜೀವನದುದ್ದಕ್ಕೂ ತರಕಾರಿ ಮಾರಾಟ ಮಾಡಿಕೊಂಡು ಜೀವನ ನಡೆಸಿದ್ದರು. 60 ವರ್ಷಗಳಿಂದ ತೇರದಾಳದ ಪ್ರಭುಲಿಂಗೇಶ್ವರ ದೇವಸ್ಥಾನದ ಬಳಿ ತರಕಾರಿ ವ್ಯಾಪಾರ ಮಾಡುತ್ತಿದ್ದ ಅವರು, ಕೂಡಿಟ್ಟ ಹಣವನ್ನು ದಾನ ಮಾಡುವ ಮೂಲಕ ಗಮನ ಸೆಳೆದಿದ್ದರು.

16 ಲಕ್ಷ ರುಪಾಯಿ ಮೌಲ್ಯದ ಬೆಳ್ಳಿ ಬಾಗಿಲು

2022ರಲ್ಲಿ ಪ್ರಭುಲಿಂಗೇಶ್ವರ ದೇವಸ್ಥಾನದ ಗರ್ಭಗುಡಿಗೆ 20 ಕೆಜಿ ತೂಕದ ಬರೋಬ್ಬರಿ 16 ಲಕ್ಷ ರುಪಾಯಿ ಮೌಲ್ಯದ ಬೆಳ್ಳಿ ಬಾಗಿಲನ್ನು ದಾನ ಮಾಡಿದ್ದರು. ಇದು ರಾಜ್ಯಾದ್ಯಂತ ಸುದ್ದಿಯಾಗಿತ್ತು. ಇದಲ್ಲದೆ ಚಂದ್ರವ್ವ ದೇವಸ್ಥಾನಕ್ಕೆ 3 ಲಕ್ಷ ರುಪಾಯಿ ವೆಚ್ಚದ ಕೊಠಡಿಯನ್ನು ನಿರ್ಮಿಸಿ ಕೊಟ್ಟಿದ್ದರು. ಇದೇ ಕಾರಣಕ್ಕೆ ಅವರನ್ನು ಸ್ಥಳೀಯರು ದಾನಜ್ಜಿ ಎಂದೇ ಕರೆಯುತ್ತಿದ್ದರು.

ಪ್ರೀತಿಗೆ ಒಪ್ಪದ ವಿವಾಹಿತೆಯನ್ನು ಇರಿದು ಕೊಂದ ಎರಡು ಮಕ್ಕಳ ತಂದೆ!

ಆಸ್ತಿಗಾಗಿ ಕೊಲೆ

ಹೀಗೆ ದಾನದ ಮೂಲಕವೇ ಪರೋಪಕಾರಿಯಾಗಿದ್ದ ಚಂದ್ರವ್ವ ಆಸ್ತಿಯ ಕಾರಣಕ್ಕೆ ಕೊಲೆಯಾಗಿದ್ದು ಸ್ಥಳೀಯರಿಗೆ ಆಘಾತ ತಂದಿತ್ತಿದೆ. ಅವರು ಮತ್ತು ಅವರ ಅಣ್ಣನ ಮಕ್ಕಳ ನಡುವೆ 11 ಎಕರೆ ಆಸ್ತಿಯ ವಿಚಾರವಾಗಿ ಮೊದಲಿನಿಂದಲೂ ಭಿನ್ನಾಭಿಪ್ರಾಯಗಳಿದ್ದವು. ಜನವರಿ 13ರಂದು ಸರ್ವೆ ಅಧಿಕಾರಿಗಳು ಆಸ್ತಿಯ ಸರ್ವೆಗಾಗಿ ಬಂದಿದ್ದ ಸಂದರ್ಭದಲ್ಲಿ, ಚಂದ್ರವ್ವ ಅವರನ್ನು ಘಟಪ್ರಭಾ ಕಾಲುವೆಗೆ ತಳ್ಳಿ ಕೊಲೆ ಮಾಡಲು ಪ್ರಯತ್ನಿಸಲಾಗಿತ್ತು. ನಂತರ ಅವರನ್ನು ಉಳಿಸುವ ರೀತಿಯಲ್ಲಿ ಆರೋಪಿಗಳು ಆಸ್ಪತ್ರೆಗೂ ದಾಖಲಿಸಿದ್ದರು. ಆದರೆ ಚಂದ್ರವ್ವ ಮೃತಪಟ್ಟಿದ್ದರು.

ಕೊಲೆ ಮಾಡಿದ ನಂತರ ದಾನಜ್ಜಿ ಅಣ್ಣನ ಮಕ್ಕಳು ಶವವನ್ನು ಆತುರವಾಗಿ ಅಂತ್ಯ ಸಂಸ್ಕಾರ ಮಾಡಲು ಪ್ರಯತ್ನ ನಡೆಸಿದ್ದರು. ಆದರೆ ಸ್ಥಳೀಯರಲ್ಲಿ ಅನುಮಾನಗಳು ಹುಟ್ಟಿಕೊಂಡಿದ್ದವು. ಹೀಗಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ವಿಚಾರಣೆ ವೇಳೆ ಕೃತ್ಯ ಬಯಲಾಗಿತ್ತು.

ರಬಕವಿಬನಹಟ್ಟಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಸದ್ಯ 5 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.