ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬಾಗಲಕೋಟೆಯಲ್ಲಿ ದಾಂಡಿಯಾ ಸಂಭ್ರಮದ ವೇಳೆ ಗಲಾಟೆ; ಚಾಕುವಿನಿಂದ ಇರಿದು ಯುವಕನ ಕೊಲೆ

ಯುವಕನೊಬ್ಬ ದಾಂಡಿಯಾ ನೃತ್ಯ ಮಾಡುತ್ತಿದ್ದ ಯುವತಿಯರನ್ನು ಚುಡಾಯಿಸಿ, ಪೂಜೆ ಮಾಡುತ್ತಿದ್ದ ಯುವಕರೊಂದಿಗೂ ಕಿರಿಕ್​ ಮಾಡಿದ್ದಾನೆ. ಆತನಿಗೆ ಅಲ್ಲಿದ್ದ ಯುವಕ ಬುದ್ಧಿವಾದ ಹೇಳಿದ್ದಕ್ಕೆ ತನ್ನ ಗ್ಯಾಂಗ್‌ನೊಂದಿಗೆ ಬಂದು ಜಗಳ ತೆಗೆದಿದ್ದಾನೆ. ಈ ವೇಳೆ ಜಗಳ ತಾರಕ್ಕಕ್ಕೇರಿ ಯುವಕನನ್ನು ಚಾಕುವಿನಿಂದ ಇರಿದು ಕೊಲ್ಲಲಾಗಿದೆ.

ಬಾಗಲಕೋಟೆ: ಜಿಲ್ಲೆಯ ಮುಧೋಳದ ವಿನಾಯಕ ನಗರದಲ್ಲಿ ನವರಾತ್ರಿ ಹಿನ್ನೆಲೆ ಆಯೋಜಿಸಿದ್ದ ದಾಂಡಿಯಾ ಸಂಭ್ರಮದ ವೇಳೆ ಚಾಕು ಇರಿದು ಯುವಕನನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ನಿತಿನ್ ನಿಂಬಾಳ್ಕರ್(25) ಹತ್ಯೆಯಾದ ಯುವಕ. ಸಂಜು ಎಂಬುವವನಿಗೆ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಮುಧೋಳ ಪೊಲೀಸ್ ಠಾಣಾಯಲ್ಲಿ ಪ್ರಕರಣ ದಾಖಲಾಗಿದೆ.

ಶ್ರೀನಿವಾಸ ಕದರಿ ಎಂಬಾತ ಚಾಕು ಇರಿದ ಆರೋಪಿಯಾಗಿದ್ದಾನೆ. ದಸರಾ ಪ್ರಯುಕ್ತ ವಿನಾಯಕ ನಗರದಲ್ಲಿ ದಾಂಡಿಯಾ ನೃತ್ಯ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ವೇಳೆ ಶ್ರೀನಿವಾಸ್​ ಕದರಿ (22) ಎಂಬ ಯುವಕ ಬಂದಿದ್ದಾನೆ. ಆತ ಮದ್ಯದ ಮತ್ತಿನಲ್ಲಿ ತೇಲಾಡುತ್ತಿದ್ದ ಎನ್ನಲಾಗಿದೆ. ದಾಂಡಿಯಾ ನೃತ್ಯ ಮಾಡುತ್ತಿದ್ದ ಯುವತಿಯರನ್ನು ಚುಡಾಯಿಸಿ, ಪೂಜೆ ಮಾಡುತ್ತಿದ್ದ ಯುವಕರೊಂದಿಗೂ ಕಿರಿಕ್​ ಮಾಡಿದ್ದಾನೆ.

ಆಗ ಅಲ್ಲಿದ್ದ ನಿತಿನ್ ನಿಂಬಾಳ್ಕರ್​​, ಇಲ್ಲಿಂದ ಹೋಗು ಎಂದು ಶ್ರೀನಿವಾಸ್​ಗೆ ಎಚ್ಚರಿಕೆ ನೀಡಿದ್ದಾನೆ. ಆದರೂ ಮತ್ತೆ ಅನುಚಿತ ವರ್ತನೆ ಮುಂದುವರಿಸಿದ್ದರಿಂದ ನಿತಿನ್​​ ಒಂದೇಟು ಹೊಡೆದು ಕಳಿಸಿದ್ದಾನೆ. ಅಲ್ಲಿಂದ ತನ್ನ ಏರಿಯಾಗೆ ಹೋದ ಶ್ರೀನಿವಾಸ್, ಸ್ನೇಹಿತರಾದ ಸಂಪತ್ ಮತ್ತು ಪ್ರದೀಪ್‌ನನ್ನು ಕರೆದುಕೊಂಡು ಬಂದು ಪುನಃ ನಿತಿನ್ ಜತೆ ಜಗಳ ಮಾಡಿದ್ದಾನೆ. ನೋಡನೋಡುತ್ತಿದ್ದಂತೆ ಜಗಳ ವಿಕೋಪಕ್ಕೆ ತಿರುಗಿದ್ದು, ಚಾಕುವಿನಿಂದ ನಿತಿನ್ ಎದೆ, ಹೊಟ್ಟೆಗೆ ಇರಿದು ಕೊಲೆ ಮಾಡಿದ್ದಾರೆ.

ಜಗಳ ಬಿಡಿಸಲು ಬಂದ ನಿತಿನ್ ಚಿಕ್ಕಪ್ಪ ಸಂಜಯ್ ನಿಂಬಾಳ್ಕರ್​​​ಗೂ ಚಾಕುವಿನಿಂದ ಇರಿಯಲಾಗಿದ್ದು, ಅವರಿಗೆ ಗಂಭೀರ ಗಾಯಗಳಾಗಿವೆ. ಸದ್ಯ ಅವರನ್ನು ಬಾಗಲಕೋಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.