ಫೋಟೋ ಗ್ಯಾಲರಿ ಬಿಗ್​ಬಾಸ್ ಬಜೆಟ್​ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ಸಂಪಾದಕೀಯ ಉದ್ಯೋಗ

ಬಳ್ಳಾರಿ ಮಾಡೆಲ್ ಹೌಸ್‌ಗೆ ಬೆಂಕಿ ಪ್ರಕರಣ; ಬಾಲಾರೋಪಿಗಳು ಸೇರಿ 8 ಮಂದಿ ವಶಕ್ಕೆ

ಶಾಸಕ ಜನಾರ್ದನ ರೆಡ್ಡಿ ಅವರಿಗೆ ಸೇರಿದ ಜಿ ಸ್ಕೈರ್ ಲೇಔಟ್​​ನಲ್ಲಿರುವ ಮಾಡೆಲ್ ಹೌಸ್​ನಲ್ಲಿ ಸಂಭವಿಸಿದ ಅಗ್ನಿ ಅವಘಡ ಸಂಬಂಧ ಪೊಲೀಸರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರೂ ಸೇರಿದಂತೆ ಒಟ್ಟು 8 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ.

ಸಂಗ್ರಹ ಚಿತ್ರ

ಬಳ್ಳಾರಿ: ಶಾಸಕ ಜನಾರ್ದನ ರೆಡ್ಡಿ (Janardhan Reddy) ಅವರಿಗೆ ಸೇರಿದ ಜಿ ಸ್ಕೈರ್ ಲೇಔಟ್​​ನಲ್ಲಿರುವ (Bellary model house fire incident) ಮಾಡೆಲ್ ಹೌಸ್​ನಲ್ಲಿ ಸಂಭವಿಸಿದ ಅಗ್ನಿ ಅವಘಡ ಸಂಬಂಧ ಪೊಲೀಸರು ಕಾನೂನು ಸಂಘರ್ಷಕ್ಕೆ ಒಳಗಾದ ಬಾಲಕರೂ ಸೇರಿದಂತೆ ಒಟ್ಟು 8 ಮಂದಿಯನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಶನಿವಾರ ಮಾಧ್ಯಮಗಳಿಗೆ ಮಾಹಿತಿ ನೀಡಿರುವ ಬಳ್ಳಾರಿ ವಲಯ ಐಜಿಪಿ ಡಾ. ಪಿ.ಎಸ್‌ ಹರ್ಷ ''ಅಗ್ನಿ ಅವಘಡದ ಪ್ರಕರಣವನ್ನು ನಾವು ಬೇಧಿಸಿದ್ದೇವೆ. ಒಟ್ಟು 8 ಮಂದಿಯನ್ನು ವಶಕ್ಕೆ ಪಡೆದಿದ್ದೇವೆ. ಇದರಲ್ಲಿ ಕೆಲವರು ಅಪ್ರಾಪ್ತರಿದ್ದಾರೆ. ಅವರ ವಯಸ್ಸಿಗೆ ಸಂಬಂಧಿಸಿದ ದಾಖಲೆಗಳನ್ನು ಪರಿಶೀಲಿಸುತ್ತಿದ್ದೇವೆ. ವಿಚಾರಣೆ ಪೂರ್ಣಗೊಂಡ ಬಳಿಕ ಇತರ ಮಾಹಿತಿಯನ್ನು ತಿಳಿಸಲಾಗುವುದು ಎಂದು ತಿಳಿಸಿದ್ದಾರೆ.

ಗಂಗಾವತಿ ಶಾಸಕ ಜನಾರ್ದನ ರೆಡ್ಡಿ ಸೈಟ್ ಎಂಜಿನಿಯರ್ ರಿಜ್ವಾನ್ ನೀಡಿದ ದೂರಿನ ಮೇರೆಗೆ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 8 ರಿಂದ 10 ಜನ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದಾರೆ. ಮನೆಯಲ್ಲಿದ್ದ 1 ಕೋಟಿ 25 ಲಕ್ಷ ಮೌಲ್ಯದ ಪರಿಕರಗಳು ನಷ್ಟವಾಗಿವೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಜಿಲ್ಲಾ ವರಿಷ್ಠಾಧಿಕಾರಿಗಳು

ಅಪರಿಚಿತ ವ್ಯಕ್ತಿಗಳು‌ ಬೆಂಕಿ ಹಚ್ಚಿದ್ದಾರೆ ಎಂದು ನಿನ್ನೆ(ಶುಕ್ರವಾರ) ರಾತ್ರಿ ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ. ಘಟನಾ ಸ್ಥಳಕ್ಕೆ ಎಫ್​ಎಸ್​ಎಲ್​ ತಂಡ ತೆರಳಿ ಪರಿಶೀಲನೆ‌ ಮಾಡಲಿದೆ. ಈ ಮಾಡೆಲ್ ಹೌಸ್ ಜನಾರ್ದನ ರೆಡ್ಡಿ ಅವರಿಗೆ ಸಂಬಂಧಿಸಿದ ಮನೆ, ಅಲ್ಲಿ ಯಾರೂ ವಾಸವಿಲ್ಲ. ಘಟನೆ ಸಂಬಂಧ ಎಂಟು ಜನರನ್ನು ವಶಕ್ಕೆ ಪಡೆದಿದ್ದೇವೆ. ಅವರಲ್ಲಿ ಆರು ಮಂದಿ ಅಪ್ರಾಪ್ತರು ಹಾಗೂ ಇಬ್ಬರು ವಯಸ್ಕರಿದ್ದಾರೆ. ರಿಲ್ಸ್, ಪೋಟೋ ಶೂಟ್‌ಗೆ ಸಂಬಂಧಿಸಿದಂತೆ ಈ ಮನೆಗೆ ಭೇಟಿ ನೀಡಿದ್ದರು ಅಂತ ಮಾಹಿತಿ ಸಿಕ್ಕಿದೆ. ಪೋಟೋ‌ ಶೂಟ್‌ಗಾಗಿ ಮಾಡೆಲ್ ಹೌಸ್​ನ ಮೊದಲ ಮಹಡಿಗೆ ಹೋಗಿದ್ದಾರೆ. ಸಿಗರೇಟ್ ವಿಚಾರವಾಗಿ ಬೆಂಕಿ ತಾಗಿರುವ ಶಂಕೆ ಇದೆ. ಆರೋಪಿತರಲ್ಲಿ ಇಬ್ಬರು ಮುಂಬೈಯಿಂದ ಬಂದವರಿದ್ದಾರೆ. ಇವರು ಯಾರೂ ರಾಜಕೀಯ ಹಿನ್ನೆಲೆಯನ್ನು ಹೊಂದಿಲ್ಲ. ಇನ್ನೂ ಪರಿಶೀಲನೆ ಮಾಡಲಾಗುವುದು'' ಎಂದು ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಸುಮನ್​ ಪನ್ನೇಕರ್ ಮಾಹಿತಿ ನೀಡಿದ್ದಾರೆ.

ಇನ್ನು ಘಟನೆ ಬಗ್ಗೆ ಜನಾರ್ದನರೆಡ್ಡಿ ಪ್ರತಿಕ್ರಿಯಿಸಿ, ಶಾಸಕ ಭರತ್‌ ರೆಡ್ಡಿ ಮನಸ್ಸು ಮಾಡಿದ್ರೆ ನಾನು ಐದೇ ನಿಮಿಷದಲ್ಲಿ ರೆಡ್ಡಿ ಮನೆ ಸುಟ್ಟು ಹಾಕ್ತೀನಿ ಎಂದು ಹೇಳಿದ್ದ. ಇದಾದ 15 ದಿನಗಳೂ ಆಗಿಲ್ಲ, ಈ ಈಗ ನಮ್ಮ ಮಾಡೆಲ್‌ ಹೌಸ್‌ಗೆ ಬೆಂಕಿ ಹಚ್ಚಲಾಗಿದೆ. 150 ಎಕರೆಯಲ್ಲಿ ನಾವು ಲೇಔಟ್‌ ಮಾಡಿದ್ದೇವೆ. ಅಲ್ಲಿನ ಮಾಡೆಲ್‌ ಹೌಸ್‌ಗೆ ಬೆಂಕಿ ಹಚ್ಚಲಾಗಿದ್ದು, ಕೃತ್ಯ ಎಸಗಿದವರ ವಿಡಿಯೋ ರೆಕಾರ್ಡ್‌ ಆಗಿದೆ. ಹೀಗಾಗಿ ಎಸ್‌ಪಿ ಅವರ ಗಮನಕ್ಕೆ ತಂದಿದ್ದೇವೆ. ಆರೋಪಿಗಳನ್ನು ಪೊಲೀಸರು ಪತ್ತೆ ಹಚ್ಚಲಿದ್ದಾರೆ ಎಂಬ ನಂಬಿಕೆ ಇದೆ ಎಂದು ತಿಳಿಸಿದ್ದಾರೆ.