ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಬಳ್ಳಾರಿ ಘರ್ಷಣೆ; ಮೊದಲು ಕಾಂಗ್ರೆಸ್‌ ಶಾಸಕನನ್ನು ಒಳಗೆ ಹಾಕಿ ಎಂದ ವಿಜಯೇಂದ್ರ

BY Vijayendra: ಮಾಜಿ ಸಚಿವ ಮತ್ತು ಶಾಸಕ ಜಿ. ಜನಾರ್ಧನ ರೆಡ್ಡಿ ಅವರ ಬಳ್ಳಾರಿಯ ನಿವಾಸಕ್ಕೆ ಶುಕ್ರವಾರ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ ಭೇಟಿ ನೀಡಿದರು. ಈ ವೇಳೆ ಮಾತನಾಡಿದ ಅವರು, ನಿನ್ನೆ ಇಲ್ಲಿನ ಶಾಸಕ ನಾ.ರಾ.ಭರತ್ ರೆಡ್ಡಿ ನೇತೃತ್ವದಲ್ಲಿ ಗೂಂಡಾಗಿರಿ ನಡೆದಿದೆ. ಬ್ಯಾನರ್ ವಿಚಾರದಲ್ಲಿ ಗಲಾಟೆ, ದೊಂಬಿ ಎಬ್ಬಿಸಿ ಸಾವಿರಾರು ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರ ಜತೆ ಗೂಂಡಾಗಳನ್ನು ಕರೆದುಕೊಂಡು ಬಂದು ಗೂಂಡಾಗಿರಿ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ.

ಮೊದಲು ಬಳ್ಳಾರಿ ಕಾಂಗ್ರೆಸ್‌ ಶಾಸಕನನ್ನು ಒಳಗೆ ಹಾಕಿ: ವಿಜಯೇಂದ್ರ ಕಿಡಿ

ಬಳ್ಳಾರಿಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಮಾತನಾಡಿದರು. -

Profile
Siddalinga Swamy Jan 2, 2026 10:04 PM

ಬಳ್ಳಾರಿ, ಜ.2: ಮುಖ್ಯಮಂತ್ರಿಗಳು ಮತ್ತು ಗೃಹ ಸಚಿವರು ದ್ವೇಷ ಭಾಷಣ ಮಸೂದೆಯಡಿ ಮೊದಲ ಅಪರಾಧಿ ನಿಮ್ಮ ಶಾಸಕ ನಾರಾ ಭರತ್ ರೆಡ್ಡಿ. ಅವರ ಮಾತುಗಳು ಪ್ರಚೋದನೆಯಲ್ಲದೇ ಮತ್ತೇನು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ (BY Vijayendra) ಪ್ರಶ್ನಿಸಿದ್ದಾರೆ. ಶುಕ್ರವಾರ ಸಂಜೆ ಮಾಜಿ ಸಚಿವ ಮತ್ತು ಶಾಸಕ ಜಿ. ಜನಾರ್ಧನ ರೆಡ್ಡಿ ಅವರ ಬಳ್ಳಾರಿಯ ನಿವಾಸಕ್ಕೆ ಭೇಟಿ ನೀಡಿದ ವೇಳೆ ಮಾಧ್ಯಮಗಳ ಜತೆ ಮಾತನಾಡಿದರು.

ಜನಾರ್ದನ ರೆಡ್ಡಿ ಅವರ ಮನೆ ನುಚ್ಚು ನೂರು ಮಾಡುತ್ತೇನೆ; ಪುಡಿಪುಡಿ ಮಾಡುತ್ತೇನೆ. ಭಸ್ಮ ಮಾಡುತ್ತೇನೆ; ಮುಗಿಸಿಬಿಡುವೆ ಎಂಬ ಧಾಟಿಯಲ್ಲಿ ಕೈ ಶಾಸಕ ಮಾತನಾಡಿದ್ದಾರೆ ಎಂದು ಆರೋಪಿಸಿದ ಅವರು, ಕಾಂಗ್ರೆಸ್ ಸರ್ಕಾರಕ್ಕೆ ನಾಡಿನ ನೆಲದ ಕಾನೂನಿನ ಬಗ್ಗೆ ಗೌರವ ಇದ್ದರೆ, ಮೊದಲು ನಿಮ್ಮ ಶಾಸಕನನ್ನು ಒದ್ದು ಒಳಗೆ ಹಾಕಿ ಎಂದು ಆಗ್ರಹಿಸಿದರು.

ಈ ರೀತಿ ಗೂಂಡಾಗಿರಿ ನಡೆಯುವುದಿಲ್ಲ ಎಂದು ಅವರಿಗೂ ಅರ್ಥ ಆಗಬೇಕು. ಮಹರ್ಷಿ ವಾಲ್ಮೀಕಿಯವರಿಗೆ ಯಾವ ರೀತಿ ಗೌರವ ಕೊಡಬೇಕೆಂಬ ಸೌಜನ್ಯ ಇವರಿಗೆ ಇಲ್ಲ. ಒಳ್ಳೆಯ ವಾತಾವರಣ ಹಾಳು ಮಾಡುವ ದುಸ್ಸಾಹಸಕ್ಕೆ ಕೈ ಹಾಕಿದ್ದು ಇದನ್ನು ಬಿಜೆಪಿ ಬಲವಾಗಿ ಖಂಡಿಸುತ್ತದೆ ಎಂದು ತಿಳಿಸಿದರು.

Ballari Clash case

ಶ್ರೀರಾಮುಲು, ಆನಂದ್ ಸಿಂಗ್, ಸೋಮಶೇಖರ ರೆಡ್ಡಿ ಅವರು 25 ವರ್ಷಗಳ ಹಿಂದೆ ಇದೇ ವೃತ್ತದಲ್ಲಿ ಮಹರ್ಷಿ ವಾಲ್ಮೀಕಿಯವರ ಪ್ರತಿಮೆ ಇಟ್ಟು ಗೌರವ ಕೊಡುವ ಕೆಲಸ ಮಾಡಿದ್ದಾರೆ. ಇದೀಗ ರಾಜಕೀಯ ತೆವಲಿಗೆ ಈ ರೀತಿ ಗೂಂಡಾಗರ್ದಿ ಮಾಡಿಕೊಂಡು ಬ್ಯಾನರ್, ಪೋಸ್ಟರನ್ನು ಅನುಮತಿ ಇಲ್ಲದೇ ಹಾಕಿಕೊಂಡು ನಮ್ಮ ಕಾರ್ಯಕರ್ತರ ಮೇಲೆ ಗೂಂಡಾಗರ್ದಿ ಮಾಡಿದ್ದು, ಗುಂಡು ಹಾರಿಸಿದ್ದು ಜನಾರ್ದನ ರೆಡ್ಡಿಯವರ ಮನೆ ಮೇಲೆ ನಿಂತಿದ್ದವರ ಮೇಲೆ ರಾಜಕೀಯ ವ್ಯಕ್ತಿಗಳು ಗನ್‍ಮನ್‍ಗಳ ಮೂಲಕ ಗುಂಡು ಹಾರಿಸಿದ್ದು ಅಕ್ಷಮ್ಯ ಅಪರಾಧ ಎಂದು ಆರೋಪಿಸಿದರು.

ಎಲ್ಲವೂ ಕೈಮೀರಿ ಹೋಗುವ ಮೊದಲು ಗೃಹ ಸಚಿವರು ಎಚ್ಚೆತ್ತುಕೊಂಡು ಸರಿಯಾದ ರೀತಿಯಲ್ಲಿ ಕ್ರಮ ಕೈಗೊಳ್ಳಲಿ ಎಂದು ಒತ್ತಾಯಿಸಿದರು. ಕಾಂಗ್ರೆಸ್ ಪಕ್ಷದ ಖಾಸಗಿ ಗನ್‍ಮನ್‍ಗಳ ಗುಂಡಿನಿಂದಲೇ ಅವರು ಪ್ರಾಣ ಕಳಕೊಂಡಿದ್ದಾರೆ ಎಂದು ಅವರು ಆರೋಪಿಸಿದರು. ಇದಕ್ಕೆ ಆಡಳಿತ ಪಕ್ಷದ ಶಾಸಕ ಭರತ್ ರೆಡ್ಡಿಯವರೇ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.

ನಿನ್ನೆ ಇಲ್ಲಿನ ಶಾಸಕ ನಾ.ರಾ.ಭರತ್ ರೆಡ್ಡಿ ನೇತೃತ್ವದಲ್ಲಿ ಗೂಂಡಾಗರ್ದಿ ನಡೆದಿದೆ. ಮಾಜಿ ಸಚಿವ ಮತ್ತು ಶಾಸಕ ಜನಾರ್ಧನ ರೆಡ್ಡಿ ಅವರ ಮನೆ ಮುಂದೆ ಬ್ಯಾನರ್ ವಿಚಾರದಲ್ಲಿ ಗಲಾಟೆ, ದೊಂಬಿ ಎಬ್ಬಿಸಿ ಸಾವಿರಾರು ಸಂಖ್ಯೆಯ ಕಾಂಗ್ರೆಸ್ ಕಾರ್ಯಕರ್ತರ ಜತೆ ಗೂಂಡಾಗಳನ್ನು ಕರೆದುಕೊಂಡು ಬಂದು ಗೂಂಡಾಗರ್ದಿ ಮಾಡಿದ್ದಾರೆ. ನಮ್ಮ ಕಾರ್ಯಕರ್ತರ ಮೇಲೆ ಕಲ್ಲುಗಳನ್ನು ಬೀಸಿದ್ದಾರೆ. ಸತೀಶ್ ರೆಡ್ಡಿ ಎಂಬ ವ್ಯಕ್ತಿ ಖಾಸಗಿ ಗನ್‍ಮನ್‍ಗಳನ್ನು ಬಳಸಿ ಗುಂಡು ಹಾರಿಸಿದ್ದಾಗಿ ಅವರು ಆರೋಪಿಸಿದರು. ಈ ಗೂಂಡಾಗರ್ದಿಯನ್ನು ಬಿಜೆಪಿ ಖಂಡಿಸುತ್ತದೆ ಎಂದರು.

ಈ ಗೂಂಡಾಗರ್ದಿ ಮೂಲಕ ಜನಾರ್ಧನ ರೆಡ್ಡಿ, ಶ್ರೀರಾಮುಲು, ಆನಂದ್ ಸಿಂಗ್, ಸೋಮಶೇಖರ ರೆಡ್ಡಿ, ನಮ್ಮ ಪಕ್ಷದ ಕಾರ್ಯಕರ್ತರನ್ನು ಬೆದರಿಸಬಹುದು; ಹೆದರಿಸಬಹುದೆಂಬ ಭ್ರಮೆಯಲ್ಲಿ ಕಾಂಗ್ರೆಸ್ ಪಕ್ಷದ ಶಾಸಕ ಅಥವಾ ಗೂಂಡಾ ಶಾಸಕ ವರ್ತನೆ ಮಾಡಿದ್ದಾರೆ. ಇದರಿಂದ ನಮ್ಮ ಕಾರ್ಯಕರ್ತರು ಧೃತಿಗೆಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ ಅವರು, ನಿನ್ನೆಯ ಗೂಂಡಾಗರ್ದಿಯಲ್ಲಿ ಏಟು ತಿಂದು ಬಳ್ಳಾರಿಯ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿರುವ ಕಾರ್ಯಕರ್ತರನ್ನೂ ಮಾತನಾಡಿಸಿ ಬಂದಿರುವುದಾಗಿ ಹೇಳಿದರು.

ಬಳ್ಳಾರಿ ಗಲಭೆ; ಅಧಿಕಾರ ಸ್ವೀಕರಿಸಿದ ಒಂದೇ ದಿನದಲ್ಲಿ ಎಸ್‌ಪಿ ಪವನ್ ನೆಜ್ಜೂರ್ ಅಮಾನತು

ಬಳ್ಳಾರಿ ನಗರದಲ್ಲಿ ನಿನ್ನೆ ರಾತ್ರಿ ನಡೆದ ಗಲಾಟೆಯಲ್ಲಿ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಿಜೆಪಿ ಕಾರ್ಯಕರ್ತರ ಆರೋಗ್ಯವನ್ನು ಬಿಜೆಪಿಯ ರಾಜ್ಯ ಅಧ್ಯಕ್ಷ ಬಿ.ವೈ.ವಿಜಯೇಂದ್ರ ವಿಚಾರಿಸಿದರು. ಈ ವೇಳೆ ಮಾಜಿ ಸಚಿವರಾದ ಬಿ. ಶ್ರೀರಾಮುಲು, ಆನಂದ್ ಸಿಂಗ್ ಹಾಗೂ ಇತರರು ಇದ್ದರು.