B Sriramulu: ರೆಡ್ಡಿ- ರಾಮುಲು ಜಗಳ ತಾರಕಕ್ಕೆ, ದಿಲ್ಲಿಗೆ ಬರಲು ಒಂದು ವಾರ ಸಮಯ ಕೇಳಿದ ರಾಮುಲು
ದೆಹಲಿ ಭೇಟಿಗೂ ಮುನ್ನ ಅತ್ಯಾಪ್ತರು, ಬೆಂಬಲಿಗರೊಂದಿಗೆ ರಾಮುಲು ನಿರಂತರ ಸಂಪರ್ಕದಲ್ಲಿದ್ದಾರೆ. ನಿನ್ನೆ ಬಳ್ಳಾರಿಯ ನಿವಾಸದಲ್ಲೂ ಸಾಲು ಸಾಲು ಸಭೆ ನಡೆಸಿದ್ದಾರೆ. ಜನಾರ್ದನ ರೆಡ್ಡಿ ಅವರ ಪ್ರೆಸ್‌ಮೀಟ್ ಬಳಿಕ ರಾಮುಲು ಪೋನ್ ಕಾಲ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.


ಬಳ್ಳಾರಿ: ಗಣಿ ನಾಡಿನಲ್ಲಿ ಬಿಜೆಪಿ (BJP) ನಾಯಕರ ನಡುವೆ ಎದ್ದ ವಾಕ್ಸಮರ ಈಗ ದಿಲ್ಲಿಗೂ ಮುಟ್ಟಿದೆ. ಜನಾರ್ದನ ರೆಡ್ಡಿ (Janardhan Reddy) ಹಾಗೂ ಬಿ. ಶ್ರೀರಾಮುಲು (B Sriramulu) ಇಬ್ಬರಿಗೂ ಗಪ್‌ಚುಪ್ ಆಗಿರಲು ಹೈಕಮಾಂಡ್ ಸೂಚಿಸಿದೆ. ಆದರೆ ಅವರ ನಡುವಿನ ಮುನಿಸು ಮುಂದುವರಿದಿದೆ. ದೆಹಲಿ (Dehli) ಭೇಟಿಗೆ ಒಂದು ವಾರ ಸಮಯಾವಕಾಶ ಕೇಳಿರುವ ಶ್ರೀರಾಮುಲು, ಅದಕ್ಕೂ ಮುನ್ನ ಆಪ್ತರನ್ನು ಭೇಟಿ ಮಾಡುತ್ತಿದ್ದಾರೆ.
ಬಳ್ಳಾರಿಯಲ್ಲಿರುವ ಶ್ರೀರಾಮುಲು ಅವರಿಗೆ ಸ್ವತಃ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಅವರೇ ಫೋನ್ ಮಾಡಿ, ಮನವೊಲಿಕೆಗೆ ಯತ್ನಿಸಿದ್ದರು. ಈ ವೇಳೆ ರಾಮುಲು ಇತ್ತೀಚಿಗೆ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ತಮಗಾದ ಅವಮಾನವನ್ನು ವಿವರಿಸಿದರು. ದೆಹಲಿಗೆ ಬನ್ನಿ ಮಾತನಾಡೋಣ. ಯಾವುದೇ ಆತುರದ ನಿರ್ಧಾರ ತೆಗೆದುಕೊಳ್ಳಬೇಡಿ ಎಂದು ಜೆಪಿ ನಡ್ಡಾ ಅವರು ಶ್ರೀರಾಮುಲು ಅವರಿಗೆ ಹೇಳಿದ್ದಾರೆ ಎನ್ನಲಾಗಿದೆ.
ಇದಕ್ಕು ಮುನ್ನ ಬಳ್ಳಾರಿಯ ತಮ್ಮ ನಿವಾಸದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ರಾಮುಲು, ಸದ್ಯಕ್ಕೆ ನನಗೆ ಪಕ್ಷ ಬಿಡುವ ಯಾವುದೇ ಆಲೋಚನೆ ಇಲ್ಲ. ಬಿಜೆಪಿ ನನಗೆ ತಾಯಿ ಇದ್ದಂತೆ. ದಶಕಗಳವರೆಗೆ ನನಗೆ ಎಲ್ಲವನ್ನು ಕೊಟ್ಟು ಬೆಳೆಸಿದೆ. ಅಷ್ಟು ಬೇಗನೆ ನಾನು ತಾಯಿ - ಮಗನ ಸಂಬಂಧವನ್ನು ಕಳೆದುಕೊಳ್ಳಲು ಇಷ್ಟಪಡುವುದಿಲ್ಲ ಎಂದು ಹೇಳಿದ್ದರು.
ದೆಹಲಿ ಭೇಟಿಗೂ ಮುನ್ನ ಅತ್ಯಾಪ್ತರು, ಬೆಂಬಲಿಗರೊಂದಿಗೆ ರಾಮುಲು ನಿರಂತರ ಸಂಪರ್ಕದಲ್ಲಿದ್ದಾರೆ. ನಿನ್ನೆ ಬಳ್ಳಾರಿಯ ನಿವಾಸದಲ್ಲೂ ಸಾಲು ಸಾಲು ಸಭೆ ನಡೆಸಿದ್ದಾರೆ. ಜನಾರ್ದನ ರೆಡ್ಡಿ ಅವರ ಪ್ರೆಸ್‌ಮೀಟ್ ಬಳಿಕ ರಾಮುಲು ಪೋನ್ ಕಾಲ್‌ಗಳಲ್ಲಿ ಬ್ಯುಸಿಯಾಗಿದ್ದಾರೆ.
ಇಬ್ಬರ ಮುನಿಸು ಪಕ್ಷದ ಮೇಲೆ ಎಫೆಕ್ಟ್ ಆಗದಂತೆ ನೋಡಿಕೊಳ್ಳಲು ರಾಜ್ಯ ನಾಯಕರಿಗೆ ಹೈಕಮಾಂಡ್ ಸೂಚನೆ ನೀಡಿದೆ. ರಾಮುಲುರನ್ನು ಕರೆದು ಮಾತಾಡಲು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರಗೆ ದೆಹಲಿ ಬಿಜೆಪಿ ನಾಯಕರಿಂದ ಸಂದೇಶ ಬಂದಿದೆ. ಏನೇ ಗೊಂದಲ ಇದ್ದರೂ ಪಕ್ಷದ ಚೌಕಟ್ಟಿನಲ್ಲಿ ಬಗೆಹರಿಸಲು ಸೂಚನೆ ನೀಡಲಾಗಿದೆ. ದೆಹಲಿಗೆ ರಾಮುಲು ಅವರನ್ನು ಕರೆದುಕೊಂಡು ಬರಲು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿಗೆ ಸೂಚನೆ ನೀಡಲಾಗಿದೆ.
ಬಳ್ಳಾರಿಯ ಬಿಜೆಪಿ ಬಣ ಬಡಿದಾಟಕ್ಕೆ ತಡೆ ಹಾಕಲು ಹೈಕಮಾಂಡ್ ಮುಂದಾಗಿರುವಂತೆಯೇ, ಇತ್ತ ರಾಮುಲು ಆಪ್ತರು, ಬೆಂಬಲಿಗರಿಂದ ಅಭಿಪ್ರಾಯ ಸಂಗ್ರಹ ನಡೆದಿದೆ. ರಾಮುಲು ಕೇಳಿರುವ ಒಂದು ವಾರದ ಸಮಯಾವಾಕಾಶ ಇನ್ನಷ್ಟು ಕುತೂಹಲ ಹೆಚ್ಚಿಸಿದೆ. ಬಿ. ಶ್ರೀರಾಮುಲು ಅವರನ್ನು ಬೆಳೆಸಿದ್ದೇ ನಾನು ಎಂಬ ರೆಡ್ಡಿ ಹೇಳಿಕೆಗೆ ತಿರುಗೇಟು ಕೊಟ್ಟಿದ್ದ ರಾಮುಲು, ನಾನು ಸ್ವಂತ ಶಕ್ತಿಯಿಂದ ಬೆಳೆದಿದ್ದೇನೆ. ನನ್ನ ಬೆನ್ನಿಗೆ ಕಾರ್ಯಕರ್ತರ ಪಡೆ ಇದೆ. ಗಾಲಿ ಜನಾರ್ದನ ರೆಡ್ಡಿ ಸುಳ್ಳಿನ ಮೇಲೆ ಕೋಟೆ ಕಟ್ಟಲು ಹೊರಟಿದ್ದಾರೆ. ಇದನ್ನು ನಂಬುವಷ್ಟು ಜನರು ಮೂರ್ಖರಲ್ಲ. ಬಳ್ಳಾರಿಗೆ ಎಲ್ಲವೂ ಗೊತ್ತಿದೆ ಎಂದಿದ್ದರು.
ಕೋರ್ ಕಮಿಟಿ ಸಭೆಯಲ್ಲಿ ಸಂಡೂರು ವಿಧಾನಸಭೆ ಉಪಚುನಾವಣೆ ಸೋಲಿನ ಬಗ್ಗೆ ಚರ್ಚೆಯಾಗಿದ್ದು, ಈ ವೇಳೆ ನೀವು ಸರಿಯಾಗಿ ಕೆಲಸ ಮಾಡಿಲ್ಲ ಎಂದು ಶ್ರೀರಾಮುಲು ವಿರುದ್ಧವೇ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರ್ವಾಲ್ ಅವರು ಗಂಭೀರ ಆರೋಪ ಮಾಡಿದ್ದರು. ಇದರಿಂದ ತೀವ್ರ ಅಸಮಾಧಾನಗೊಂಡ ಶ್ರೀರಾಮುಲು, ಇನ್ನೂ ಕೂಡ ಸದಾನಂದ ಗೌಡ ಸಮಿತಿ ಉಪಚುನಾವಣೆ ಸೋಲಿನ ಕುರಿತ ವರದಿಯನ್ನೇ ಕೊಟ್ಟಿಲ್ಲ. ಅದಕ್ಕೂ ಮೊದಲು ನೀವು ಹೇಗೆ ಕೆಲಸ ಮಾಡಿಲ್ಲ ಎನ್ನುತ್ತಿರಿ ಎಂದು ಶ್ರೀರಾಮುಲು ಸಭೆಯಲ್ಲೇ ಪ್ರಶ್ನಿಸಿದ್ದರು.
ಇದನ್ನೂ ಓದಿ: G.Janardhana Reddy: ಶ್ರೀರಾಮುಲು ಆರೋಪದ ಬೆನ್ನಲ್ಲೇ ಸುದ್ದಿಗೋಷ್ಠಿ ಕರೆದ ಜನಾರ್ದನ ರೆಡ್ಡಿ; ದೂರ ಆಗ್ತಾರಾ ಆಪ್ತ ಮಿತ್ರರು?