G.Janardhana Reddy: ಶ್ರೀರಾಮುಲು ಆರೋಪದ ಬೆನ್ನಲ್ಲೇ ಸುದ್ದಿಗೋಷ್ಠಿ ಕರೆದ ಜನಾರ್ದನ ರೆಡ್ಡಿ; ದೂರ ಆಗ್ತಾರಾ ಆಪ್ತ ಮಿತ್ರರು?
G.Janardhana Reddy: ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದ ಮಾಜಿ ಸಚಿವ ಬಿ. ಶ್ರೀರಾಮುಲು ಮತ್ತು ಗಾಲಿ ಜನಾರ್ದನ ರೆಡ್ಡಿ ಮಧ್ಯೆ ಬಿರುಕು ಮೂಡಿದೆ. ಇದರ ಬೆನ್ನಲ್ಲೇ ಇಂದು ಜನಾರ್ದನ ರೆಡ್ಡಿ ಸುದ್ದಿಗೋಷ್ಠಿ ಕರೆದಿದ್ದು, ಕುತೂಹಲ ಮೂಡಿಸಿದೆ.
ಬೆಂಗಳೂರು: ರಾಜ್ಯ ಬಿಜೆಪಿ (BJP)ಯಲ್ಲಿ ಬಣ ಸಂಘರ್ಷ ಜೋರಾಗಿದ್ದು, ಒಂದು ಕಾಲದಲ್ಲಿ ಆತ್ಮೀಯ ಸ್ನೇಹಿತರಾಗಿದ್ದ ಮಾಜಿ ಸಚಿವ ಬಿ. ಶ್ರೀರಾಮುಲು (B.Sriramulu) ಮತ್ತು ಗಾಲಿ ಜನಾರ್ದನ ರೆಡ್ಡಿ (G.Janardhana Reddy) ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿದೆ. ಮೊದಲ ಬಾರಿಗೆ ಜನಾರ್ದನ ರೆಡ್ಡಿ ವಿರುದ್ಧವೇ ಶ್ರೀರಾಮುಲು ಅವರು ಸಾರ್ವಜನಿಕವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು, ನನ್ನನ್ನು ರಾಜಕೀಯವಾಗಿ ಮುಗಿಸಲು ಜನಾರ್ದನ ರೆಡ್ಡಿ ಯತ್ನಿಸುತ್ತಿದ್ದಾರೆ ಎಂದು ದೂರಿದ್ದಾರೆ. ಇದರ ಬೆನ್ನಲ್ಲೇ ಇಂದು (ಜ. 23) ಜನಾರ್ದನ ರೆಡ್ಡಿ ಮಧ್ಯಾಹ್ನ 12 ಗಂಟೆಗೆ ಬೆಂಗಳೂರಿನ ನಿವಾಸದಲ್ಲಿ ಸುದ್ದಿಗೋಷ್ಠಿ ಕರೆದಿದ್ದಾರೆ.
ಅಲ್ಲದೆ ಇತ್ತೀಚೆಗೆ ನಡೆದ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆಯಲ್ಲಿ ಶ್ರೀರಾಮುಲು ಅವರು ರಾಜ್ಯ ಉಸ್ತುವಾರಿ ರಾಧಾ ಮೋಹನ್ ಅಗರವಾಲ್ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ಜನಾರ್ದನ ರೆಡ್ಡಿ ಕರೆದಿರುವ ಸುದ್ದಿಗೋಷ್ಠಿ ಕುತೂಹಲ ಕೆರಳಿಸಿದೆ. ಶ್ರೀರಾಮುಲು ಆರೋಪಕ್ಕೆ ಅವರು ಯಾವ ರೀತಿ ಉತ್ತರಿಸುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ.
ಇತ್ತೀಚೆಗೆ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಸಂಡೂರು ಜಟಾಪಟಿ ವಿಚಾರ ಚರ್ಚೆಗೆ ಬಂದಿತ್ತು. ಸೋಲಿಗೆ ಶ್ರೀರಾಮುಲು ಕಾರಣ ಎಂಬ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ಆರೋಪ ವ್ಯಕ್ತಪಡಿಸಿದ್ದರು. ಇದನ್ನು ಅನೇಕರು ವಿರೋಧಿಸಿದ್ದರು. ಹಿರಿಯ ನಾಯಕ, ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರೂ ಆಕ್ಷೇಪ ವ್ಯಕ್ತಪಡಿಸಿದ್ದರು. ʼʼಸಂಡೂರು ಉಪಚುನಾವಣೆ ಸೋಲಿನ ವಿಚಾರಕ್ಕೆ ಸಂಬಂಧಪಟ್ಟಂತೆ ನನ್ನ ನೇತೃತ್ವದ ಸಮಿತಿ ತನಿಖೆ ನಡೆಸುತ್ತಿದೆ. ನಮ್ಮ ಸಮಿತಿ ಇನ್ನೂ ವರದಿ ಕೊಟ್ಟಿಲ್ಲ. ಶ್ರೀರಾಮುಲು ವಿರುದ್ದ ಕೇಳಿ ಬಂದಿರುವ ಕೆಲವು ಆರೋಪಕ್ಕೆ ದಾಖಲೆ ಸಲ್ಲಿಸುವಂತೆ ಸೂಚಿಸಿದ್ದೇನೆ. ನೀವು ಏಕಾಏಕಿ ಈ ರೀತಿ ಆರೋಪ ಮಾಡಿದ್ದು ಸರಿಯಲ್ಲʼʼ ಎಂದು ಸದಾನಂದ ಗೌಡ ತಿಳಿಸಿದ್ದರು. ಸಿಟ್ಟಾಗಿದ್ದ ಶ್ರೀರಾಮುಲು ಅವರನ್ನು ಸಮಾಧಾನಿಸಲು ಕೊನೆಗೆ ಅಗರವಾಲ್ ತಮ್ಮ ಮಾತನ್ನು ವಾಪಸ್ ಪಡೆಯುವುದಾಗಿ ಹೇಳಿದ್ದರು ಎನ್ನಲಾಗಿದೆ.
ಇನ್ನು ಬಿಜೆಪಿ ರಾಜ್ಯ ಕೋರ್ ಕಮಿಟಿಯಲ್ಲಿ ಜಿಲ್ಲಾಧ್ಯಕ್ಷರ ನೇಮಕಾತಿ ಬಗ್ಗೆ ರಾಜ್ಯ ಉಸ್ತುವಾರಿ ರಾಧಾ ಮೋಹನ್ ದಾಸ್ ಅಗರವಾಲ್ ವಿರುದ್ಧ ಹಲವರು ಅಸಮಾಧಾನ ವ್ಯಕ್ತಪಡಿಸಿದ್ದರು. ಮಂಡಲ ಮತ್ತು ಜಿಲ್ಲಾಧ್ಯಕ್ಷರನ್ನು ಮನ ಬಂದಂತೆ ನೇಮಕ ಮಾಡಲಾಗಿದೆ. ವಯೋಮಾನದ ಮಾನದಂಡ ಎಷ್ಟು ಕಡೆ ಪಾಲನೆಯಾಗಿದೆ? ಇದನ್ನೆಲ್ಲಾ ನೀವು ಗಮನಿಸಿಲ್ಲವೇ ಎಂದು ಕೋರ್ ಕಮಿಟಿ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವೇಳೆ ಕೋರ್ ಕಮಿಟಿ ಸದಸ್ಯರೇ ಜಿಲ್ಲಾಧ್ಯಕ್ಷರ ಹೆಸರು ಸೂಚಿಸಲಿ ಎಂದು ರಾಜ್ಯಾಧ್ಯಕ್ಷ ವಿಜಯೇಂದ್ರ ಸಮಾಧಾನಿಸಲು ಯತ್ನಿಸಿದ್ದರು.
ಈ ಸುದ್ದಿಯನ್ನೂ ಓದಿ: B Sriramulu: ನನ್ನನ್ನು ರಾಜಕೀಯವಾಗಿ ಮುಗಿಸಲು ಜನಾರ್ದನ ರೆಡ್ಡಿ ಕುತಂತ್ರ; ಆಪ್ತನ ವಿರುದ್ಧ ಶ್ರೀರಾಮುಲು ಗಂಭೀರ ಆರೋಪ
ಶ್ರೀರಾಮುಲು ಹೇಳಿದ್ದೇನು?
ʼʼಜನಾರ್ದನ ರೆಡ್ಡಿ ನನ್ನನ್ನು ರಾಜಕೀಯವಾಗಿ ಮುಗಿಸಲು ಯತ್ನಿಸುತ್ತಿದ್ದಾರೆ. ರೆಡ್ಡಿ ಮಾತು ಕೇಳಿ ನನ್ನ ಬಗ್ಗೆ ಲಘುವಾಗಿ ಮಾತನಾಡಿದ್ದಾರೆʼʼ ಎಂದು ಒಂದು ಕಾಲದ ತಮ್ಮ ಆಪ್ತ ಸ್ನೇಹಿತನ ವಿರುದ್ಧವೇ ಶ್ರೀರಾಮುಲು ಕಿಡಿಕಾರಿದ್ದರು. ʼʼಇತ್ತೀಚೆಗೆ ಜನಾರ್ದನ ರೆಡ್ಡಿ ಅವರು ತಾವು ಹೇಳಿದ್ದೇ ನಡೆಯಬೇಕು. ನಾನು ಹೇಳಿದವರೇ ಗೆಲ್ಲಬೇಕು ಎಂದು ಇಲ್ಲಿನಿಂದ ದಿಲ್ಲಿವರೆಗೆ ಏನೇನೋ ಸುಳ್ಳು ಹೇಳಿ, ನನ್ನನ್ನು ರಾಜಕೀಯವಾಗಿ ಮುಗಿಸಬೇಕು ಎಂದು ಕುತಂತ್ರ ಮಾಡುತ್ತಿದ್ದಾರೆ. ನಾನು ಜನಾರ್ದನ ರೆಡ್ಡಿ ವಿರುದ್ಧ ಯಾವತ್ತೂ ನಡೆದುಕೊಂಡಿಲ್ಲ. ಅವರು ಪಾರ್ಟಿಗೆ ಮತ್ತೆ ಬರುತ್ತೇನೆ ಎಂದಾಗ, ಅವರನ್ನು ಕರೆದುಕೊಳ್ಳಲು ನಾನೇ ಹೇಳಿದ್ದೆ. ಆದರೆ, ಈಗ ನನ್ನ ವಿರುದ್ಧವೇ ಅಪಪ್ರಚಾರ ಮಾಡಿಸುತ್ತಿದ್ದಾರೆʼʼ ಎಂದು ಅಸಮಾಧಾನ ಹೊರಹಾಕಿದ್ದರು.