Heavy rain in Belagavi: ಗೋಕಾಕ್‌ನಲ್ಲಿ ಭಾರಿ ಮಳೆಗೆ ಮನೆ ಕುಸಿದು ಮಹಿಳೆ ಸಾವು, ಇಬ್ಬರಿಗೆ ಗಂಭೀರ ಗಾಯ
Gokak News: ಬೆಳಗಾವಿ ಜಿಲ್ಲೆ ಗೋಕಾಕ್‌ನ ಸಂಗಮ ನಗರದಲ್ಲಿ ಅವಘಡ ನಡೆದಿದೆ. ಸೋಮವಾರ ರಾತ್ರಿಯಿಂದ ಸತತವಾಗಿ ಸುರಿದ ಮಳೆಗೆ ಗೋಡೆಗಳು ನೆನೆದು ಮನೆ ಕುಸಿದು, ಮಹಿಳೆ ಮೃತಪಟ್ಟಿದ್ದಾರೆ. ಇನ್ನು ಭಾರಿ ಮಳೆ ಹಿನ್ನೆಲೆಯಲ್ಲಿ ಬುಧವಾರವೂ ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ-ಪ್ರೌಢಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.


ಗೋಕಾಕ್: ಬೆಳಗಾವಿ ಜಿಲ್ಲೆಯಲ್ಲಿ ಕೆಲ ದಿನಗಳಿಂದ ಸತತ ಮಳೆಯಾಗುತ್ತಿದೆ. ಈ ನಡುವೆ ಭಾರಿ ಮಳೆಗೆ ಮನೆ ಕುಸಿದು ಮಹಿಳೆಯೊಬ್ಬರು ಮೃತಪಟ್ಟು, ಇಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ (Heavy rain in Belagavi) ಗೋಕಾಕ್‌ನ ಸಂಗಮ ನಗರದಲ್ಲಿ ನಡೆದಿದೆ. ಫರೀದಾಬಾನು ಶಕೀಲಹ್ಮದ್ ಕನವಾಡ ಮೃತ ಮಹಿಳೆ. ಗಾಯಾಳುಗಳನ್ನು ಚಿಕಿತ್ಸೆಗಾಗಿ ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾತ್ರಿಯಿಂದ ಸತತವಾಗಿ ಸುರಿಯುತ್ತಿರುವ ಮಳೆಗೆ ಗೋಡೆಗಳು ನೆನೆದು ಮನೆ ಕುಸಿದಿದೆ. ಗೋಕಾಕ್ ತಹಸೀಲ್ದಾರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಸಂಬಂಧಿಕರ ಅಕ್ರಂದನ ಮುಟ್ಟಿದೆ.
ನಾಳೆಯೂ ಶಾಲಾ-ಕಾಲೇಜುಗಳಿಗೆ ರಜೆ
ಬೆಳಗಾವಿ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದೆ. ಹೀಗಾಗಿ, ಇಂದು ಮತ್ತು ನಾಳೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಅವಶ್ಯಕತೆ ಇದ್ದರೆ ಮಾತ್ರ ಜನರು ಹೊರಗಡೆ ಬರಬೇಕು. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ನೆನ್ನೆ ಮತ್ತು ಇಂದು ಶಾಲೆಗಳಿಗೆ ರಜೆ ಘೋಷಿಸಿದ್ದೆವು. ಬುಧವಾರವೂ ಜಿಲ್ಲೆಯ ಎಲ್ಲ ಅಂಗನವಾಡಿ, ಪ್ರಾಥಮಿಕ-ಪ್ರೌಢಶಾಲೆಗಳು ಮತ್ತು ಪದವಿಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ತಿಳಿಸಿದ್ದಾರೆ.
ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಮಳೆ ಪ್ರಮಾಣ ಹೆಚ್ಚಾಗಿದೆ. ಆ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ನಾನು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಜಿ.ಪಂ. ಸಿಇಒ ಅವರು ಕೂಡಿಕೊಂಡು ವಿಪತ್ತು ನಿರ್ವಹಣಾ ಪ್ರಾಧಿಕಾರದ ಜತೆಗೆ ಸಭೆ ಮಾಡಿದ್ದೇವೆ ಎಂದಿದ್ದಾರೆ.
ನೆನ್ನೆ ಕೊಯ್ನಾ ಜಲಾಶಯದಿಂದ ಕೃಷ್ಣಾ ನದಿಗೆ 53 ಸಾವಿರ ಕ್ಯೂಸೆಕ್ ನೀರು ಬಿಡುವ ಮಾಹಿತಿ ಸಿಕ್ಕಿದೆ. ಆ ನೀರು ನಮ್ಮ ಜಿಲ್ಲೆ ತಲುಪಲು ಸುಮಾರು 40 ಗಂಟೆ ಬೇಕಾಗುತ್ತದೆ. ಮುನ್ನೆಚ್ಚರಿಕೆ ಕ್ರಮವಾಗಿ ನಮ್ಮ ಜಲಸಂಪನ್ಮೂಲ ಇಲಾಖೆಯ ಎಸಿಎಸ್ ಅವರು ಆಲಮಟ್ಟಿ ಜಲಾಶಯದಿಂದ ಇಂದು ಬೆಳಗ್ಗೆಯಿಂದಲೇ 1.5 ಲಕ್ಷ ಕ್ಯೂಸೆಕ್ ನೀರನ್ನು ಬಿಡಲು ಸೂಚಿಸಿದ್ದಾರೆ. ಅದನ್ನು ಮುಖ್ಯ ಇಂಜಿನಿಯರ್ ನಿರ್ವಹಣೆ ಮಾಡುತ್ತಿದ್ದಾರೆ. ರಾಜಾಪುರ ಬ್ಯಾರೇಜ್ ಬಳಿ 70 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ. ಕಲ್ಲೋಳ ಬ್ಯಾರೇಜ್ನಲ್ಲಿ ವೇದಗಂಗಾ ಮತ್ತು ದೂಧಗಂಗಾ ನದಿಗಳ 93 ಸಾವಿರ ಕ್ಯೂಸೆಕ್ ನೀರು ಹರಿಯುತ್ತಿದೆ. ಇದರ ಜೊತೆಗೆ ಘಟಪ್ರಭಾ ನೀರು ಸೇರಿಕೊಂಡು ಹಿಪ್ಪರಗಿ ಬ್ಯಾರೇಜ್ ಮೂಲಕ ಆಲಮಟ್ಟಿ ಜಲಾಶಯಕ್ಕೆ ಸೇರುತ್ತದೆ ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ | Karnataka Weather: ಇಂದು ಉಡುಪಿ, ಉತ್ತರ ಕನ್ನಡ, ಬೆಳಗಾವಿಗೆ ರೆಡ್ ಅಲರ್ಟ್; ಬಿರುಸಿನ ಮಳೆ ಸಾಧ್ಯತೆ
ದುರಾದೃಷ್ಟವಶಾತ್ ಗೋಕಾಕಿನಲ್ಲಿ ಮನೆ ಬಿದ್ದು ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. ಬಹಳ ಹಳೆಯ ಮನೆಯಲ್ಲಿ ಅವರು ವಾಸವಿದ್ದರು. ಅವರ ಕುಟುಂಬಕ್ಕೆ ನಾನು ಸಾಂತ್ವನ ಹೇಳುತ್ತೇನೆ. ಮೃತರಿಗೆ ಪರಿಹಾರಧನ ತಕ್ಷಣ ನೀಡಲಾಗುವುದು. ಗಾಯಾಳುಗಳು ಏಳು ದಿನ ಆಸ್ಪತ್ರೆಯಲ್ಲಿ ದಾಖಲಾದರೆ ಅವರಿಗೂ ಪರಿಹಾರ ವಿತರಿಸುವಂತೆ ಅಲ್ಲಿನ ತಹಶಿಲ್ದಾರ್ ಅವರಿಗೆ ಸೂಚಿಸಿದ್ದೇನೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.