ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Plane Emergency landing: ತಾಂತ್ರಿಕ ದೋಷ; ಬೆಳಗಾವಿಯಲ್ಲಿ ವಿಮಾನ ತುರ್ತು ಭೂಸ್ಪರ್ಶ

Star Air Flight Emergency Landing: ಟೇಕ್‌ಆಫ್ ಆದ ಕೆಲವೇ ನಿಮಿಷಗಳಲ್ಲಿ ವಿಮಾನದ ಎಂಜಿನ್‌ನಲ್ಲಿ ಇಂಧನ ಸೋರಿಕೆ ಸೇರಿ ತಾಂತ್ರಿಕ ದೋಷ ಕಂಡುಬಂದಿದೆ. ಇದನ್ನು ಗಮನಿಸಿದ ಪೈಲಟ್‌ಗಳು ತಕ್ಷಣವೇ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ವಾಪಸ್‌ ಆಗಿ ತುರ್ತು ಭೂಸ್ಪರ್ಶ ಮಾಡಿದ್ದಾರೆ.

ಮುಂಬೈಗೆ ತೆರಳುತಿದ್ದ ವಿಮಾನ ಬೆಳಗಾವಿಯಲ್ಲಿ ತುರ್ತು ಭೂಸ್ಪರ್ಶ

Prabhakara R Prabhakara R Aug 16, 2025 6:10 PM

ಬೆಳಗಾವಿ: ಬೆಳಗಾವಿಯಿಂದ ಮುಂಬೈಗೆ ತೆರಳುತಿದ್ದ ವಿಮಾನದ ಎಂಜಿನ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದರಿಂದ ವಿಮಾನವು ಟೇಕ್ ಆಫ್ ಆದ ಕೆಲವೇ ಹೊತ್ತಿನಲ್ಲಿ ವಾಪಸ್‌ ಬಂದು, ತುರ್ತು ಭೂಸ್ಪರ್ಶ (Plane Emergency landing) ಮಾಡಿರುವುದು ಶನಿವಾರ ಬೆಳಗ್ಗೆ ನಡೆದಿದೆ. ಇದರಿಂದ ಭಾರಿ ದುರಂತವೊಂದು ತಪ್ಪಿದೆ.

ಬೆಳಗ್ಗೆ 7:50 ಕ್ಕೆ ಬೆಳಗಾವಿಯಿಂದ ಹೊರಟು 8:50 ಕ್ಕೆ ಮುಂಬೈನಲ್ಲಿ ಇಳಿಯಬೇಕಿದ್ದ ವಿಮಾನವು ಟೇಕ್ ಆಫ್ ಆದ ಕೂಡಲೇ ತಾಂತ್ರಿಕ ತೊಂದರೆ ಅನುಭವಿಸಿದೆ. ಸ್ಟಾರ್ ಏರ್ ಸಂಸ್ಥೆಯ ವಿಮಾನ ಇದಾಗಿದ್ದು, ಬೆಳಗ್ಗೆ 7.50ಕ್ಕೆ ಬೆಳಗಾವಿಯಿಂದ ಹೊರಟಿತ್ತು. ಈ ವೇಳೆ, ತಾಂತ್ರಿಕ ದೋಷ‌ ಕಂಡು ಬಂದ ಹಿನ್ನೆಲೆಯಲ್ಲಿ 8.30ಕ್ಕೆ ವಿಮಾನವು ಬೆಳಗಾವಿಗೆ ವಾಪಸ್ ಬಂದಿದೆ.

ಟೇಕ್‌ಆಫ್ ಆದ ಕೆಲವೇ ನಿಮಿಷಗಳಲ್ಲಿ ಎಂಜಿನ್‌ನಲ್ಲಿ ಇಂಧನ ಸೋರಿಕೆ (ಫ್ಯೂಯೆಲ್ ಲೀಕ್) ಸೇರಿ ತಾಂತ್ರಿಕ ದೋಷ ಕಂಡುಬಂದಿದೆ. ಇದನ್ನು ಗಮನಿಸಿದ ಪೈಲಟ್‌ಗಳು ತಕ್ಷಣವೇ ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ವಾಪಸ್‌ ಆಗಿ ತುರ್ತು ಭೂಸ್ಪರ್ಶ ಮಾಡಿದ್ದಾರೆ.

ಬೆಳಗಾವಿಯಿಂದ ಗೋವಾಗೆ ತಲುಪಿದ್ದ ವಿಮಾನವು ಅಲ್ಲಿಂದ ನೇರವಾಗಿ ಬೆಳಗಾವಿಗೆ ಬಂದು ಲ್ಯಾಂಡ್ ಆಗಿದೆ. 48 ಪ್ರಯಾಣಿಕರು ಈ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು. ಮುಂಬೈಗೆ ಹೋಗಲು ಪ್ರಯಾಣಿಕರಿಗೆ ಬೇರೆ ವಿಮಾನದ ವ್ಯವಸ್ಥೆ ಮಾಡಲಾಗಿದೆ ಎಂದು ಬೆಳಗಾವಿ ವಿಮಾನ ನಿಲ್ದಾಣ ನಿರ್ದೇಶಕ ಎಸ್. ತ್ಯಾಗರಾಜನ್ ಮಾಹಿತಿ ನೀಡಿದ್ದಾರೆ.

ವಿಮಾನ ತುರ್ತು ಭೂಸ್ಪರ್ಶದ ಬಗ್ಗೆ ಸ್ಟಾರ್ ಏರ್ ಸಂಸ್ಥೆ ಪ್ರತಿಕ್ರಿಯಿಸಿ, ಭವಿಷ್ಯದಲ್ಲಿ ಇಂತಹ ಘಟನೆಗಳನ್ನು ತಡೆಗಟ್ಟಲು ಕ್ರಮ ಕೈಗೊಳ್ಳಲಾಗುತ್ತದೆ. ಎಂಜಿನ್ ವೈಫಲ್ಯದ ಕಾರಣವನ್ನು ತಿಳಿಯಲು ತಾಂತ್ರಿಕ ತಂಡವು ತನಿಖೆ ನಡೆಸುತ್ತಿದೆ ಎಂದು ತಿಳಿಸಿದೆ. ಅಲ್ಲದೇ ತುರ್ತು ಪರಿಸ್ಥಿತಿಯಲ್ಲಿ ಸಿಬ್ಬಂದಿಯ ವೃತ್ತಿಪರತೆಗೆ ಧನ್ಯವಾದಗಳನ್ನು ಅರ್ಪಿಸುತ್ತಾ, ಪ್ರಯಾಣಿಕರಿಗೆ ಉಂಟಾದ ಅನಾನುಕೂಲತೆಗೆ ತೀವ್ರ ವಿಷಾದ ವ್ಯಕ್ತಪಡಿಸುವುದಾಗಿ ವಿಮಾನಯಾನ ಸಂಸ್ಥೆ ತಿಳಿಸಿದೆ.