ಬೆಳಗಾವಿ: ಬೈಲಹೊಂಗಲ ತಾಲೂಕಿನ ಇಂಚಲ ಗ್ರಾಮದ ಬಿ.ಸಿ.ಎಂ. ಹಾಸ್ಟೆಲ್ ಸಮೀಪ ವಿಬಿಜಿ ರಾಮ್‌ಜಿ ಯೋಜನೆಯಡಿ ನಡೆಯುತ್ತಿದ್ದ ಕಾಮಗಾರಿ ಸ್ಥಳದಲ್ಲಿ ಕೂಲಿ ಕಾರ್ಮಿಕರಿಗೆ ದೊರೆತ ಪುರಾತನ ಕಾಲದ 14 ನಾಣ್ಯಗಳನ್ನು (Ancient gold coins) ಇಂಚಲ ಗ್ರಾಪಂ ಕಾರ್ಯಾಲಯಕ್ಕೆ ಒಪ್ಪಿಸುವ ಮೂಲಕ ಪ್ರಾಮಾಣಿಕತೆ ಮೆರೆದ ಘಟನೆ ಶುಕ್ರವಾರ ನಡೆದಿದೆ.
ಕಾಮಗಾರಿ ನಿರ್ವಹಿಸುತ್ತಿದ್ದ ವೇಳೆ ಕೂಲಿ ಕಾರ್ಮಿಕರಿಗೆ ನಾಣ್ಯಗಳು ದೊರೆತಿದ್ದು, ಅವುಗಳನ್ನು ತಮ್ಮ ಬಳಿ ಇಟ್ಟುಕೊಳ್ಳದೆ ಕೂಡಲೇ ಇಂಚಲ ಗ್ರಾಪಂ ಕಾರ್ಯಾಲಯಕ್ಕೆ ತಂದು ಅಧಿಕಾರಿಗಳ ಸಮಕ್ಷಮದಲ್ಲಿ ಒಪ್ಪಿಸಿದ್ದಾರೆ.

ನಾಣ್ಯಗಳನ್ನು ಸ್ವೀಕರಿಸಿದ ಬಳಿಕ ಪಂಚಾಯತ್ ಅಭಿವೃದ್ಧಿ ಅಧಿಕಾರಿ, ಉಪತಹಶೀಲ್ದಾರರು, ಗ್ರಾಮ ಆಡಳಿತಾಧಿಕಾರಿಗಳು, ಗ್ರಾಮಸ್ಥರು ಹಾಗೂ ನಾಣ್ಯಗಳನ್ನು ಪತ್ತೆಹಚ್ಚಿದ ಕೂಲಿ ಕಾರ್ಮಿಕರ ಸಮ್ಮುಖದಲ್ಲಿ ಪಂಚನಾಮೆ ನಡೆಸಲಾಯಿತು. ಬಳಿಕ ದೊರೆತಿರುವ 14 ನಾಣ್ಯಗಳನ್ನು ಪಂಚನಾಮೆ ಹಾಗೂ ವರದಿಯೊಂದಿಗೆ ತಾಪಂ ಕಾರ್ಯಾಲಯಕ್ಕೆ ಹಸ್ತಾಂತರಿಸಲಾಗಿದೆ.
ನಾಣ್ಯಗಳು ಯಾವ ಕಾಲಕ್ಕೆ ಸೇರಿವೆ, ಅವುಗಳ ಐತಿಹಾಸಿಕ ಮಹತ್ವವೇನು ಎಂಬುದು ಸಂಬಂಧಿಸಿದ ತಜ್ಞರು ಹಾಗೂ ಸಕ್ಷಮ ಪ್ರಾಧಿಕಾರದ ಪರಿಶೀಲನೆಯ ಬಳಿಕ ಸ್ಪಷ್ಟವಾಗಬೇಕಿದೆ.
ಕಾಮಗಾರಿ ಸ್ಥಳದಲ್ಲಿ ದೊರೆತ ಅಮೂಲ್ಯ ವಸ್ತುಗಳನ್ನು ಸ್ವಾರ್ಥಕ್ಕಾಗಿ ಬಳಸಿಕೊಳ್ಳದೆ, ಸರ್ಕಾರದ ಗಮನಕ್ಕೆ ತಂದು ಅಧಿಕಾರಿಗಳಿಗೆ ಒಪ್ಪಿಸಿದ ಕೂಲಿ ಕಾರ್ಮಿಕರ ನಡೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಈ ಕುರಿತು ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸೆ.4ರಂದು ವರದಿ ಸಲ್ಲಿಸಿದ್ದು, ನಾಣ್ಯಗಳನ್ನು ನಿಯಮಾನುಸಾರ ಸಕ್ಷಮ ಪ್ರಾಧಿಕಾರಕ್ಕೆ ಹಸ್ತಾಂತರಿಸಿ ಮುಂದಿನ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.
ಚಿತ್ರದಲ್ಲಿರುವ ನಾಣ್ಯಗಳು ಗಂಗರ ಕಾಲದ ತಲಕಾಡಿನ ಪಶ್ಚಿಮ ಗಂಗರು ಅಥವಾ ವಿಜಯನಗರ ಸಾಮ್ರಾಜ್ಯ ಕಾಲದ ಚಿನ್ನದ ನಾಣ್ಯಗಳಾಗಿವೆ. ‘ಗಜಪತಿ ವರಾಹ, ’ವರಾಹ, ಪಗೋಡ ನಾಣ್ಯಗಳು ಇವೆ.
ನಾಣ್ಯಗಳ ಮೇಲ್ಭಾಗದಲ್ಲಿ ಅಲಂಕೃತಗೊಂಡ ಆನೆಯ ಚಿತ್ರವಿದೆ. ಗಂಗರ ರಾಜಲಾಂಛನವು ಮದಜಲ ಸುರಿಸುವ ಆನೆಯಾಗಿದ್ದು, ಮದಗಜದ ಚಿತ್ರವಿರುವ ನಾಣ್ಯಗಳನ್ನು ‘ಗಜಪತಿ ಗದ್ಯಾಣ, ಗಜಪತಿ ವರಾಹ ಎಂದು ಕರೆಯಲಾಗುತ್ತಿತ್ತು. ಸುಮಾರು ಕ್ರಿ.ಶ. 10ನೇ ಶತಮಾನದಿಂದ 15ನೇ ಶತಮಾನದ ಮಧ್ಯಕಾಲೀನ ಕರ್ನಾಟಕ ಅವಧಿಗೆ ಸೇರಿದವು. ಇವು ಅಪರಂಜಿ ಚಿನ್ನದ ನಾಣ್ಯಗಳಾಗಿವೆ.