ಬೆಳಗಾವಿ, ಮೇ 3: ಭಾನುವಾರ (ಮೇ 3) ಬೆಳ್ಳಂಬೆಳಗ್ಗೆ ಬೆಳಗಾವಿ ನಗರದಲ್ಲಿ ಜವರಾಯ ಆರ್ಭಟಿಸಿದ್ದು, ಬೇಸಗೆ ರಜೆಯ ಮಜದಲ್ಲಿದ್ದ ಇಬ್ಬರು ಮಕ್ಕಳು ಅಸುನೀಗಿದ್ದಾರೆ. ಪ್ರಸಿದ್ಧ ಬೆಳಗಾವಿ ಕಪಿಲೇಶ್ವರ ದೇವಾಲಯ ಹೊಂಡದಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರು ಪಾಲಾಗಿದ್ದಾರೆ (Belagavi News). ಶಿವಂ ಪರಶುರಾಮ ಸುಂಡೀಕರ್ (7), ಪರಶುರಾಮ ನಿಲಜಕರ್ (11) ಮೃತರು (Drowned). ಭಾನುವಾರ ಬೆಳಗ್ಗೆ ನಗರದ ಕಪಿಲೇಶ್ವರ ಹೊಂಡದಲ್ಲಿ ಈಜಲು ಇಬ್ಬರು ತೆರಳಿದ್ದರು. ಈ ವೇಳೆ ನೀರಿನ ಆಳ ಅರಿಯದೆ ಮುಳುಗಿದ್ದಾರೆ.
ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳ ಹಾಗೂ ಎಸ್‌ಡಿಆರ್‌ಎಫ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ಕೈಗೊಂಡಿದ್ದಾರೆ. ಈ ವೇಳೆ ಇಬ್ಬರು ಬಾಲಕರ ಮೃತದೇಹವನ್ನು ಹೊಂಡದಿಂದ ಹೊರತಗೆಯಲಾಗಿದೆ.
ಸ್ಥಳಕ್ಕೆ ಖಡೇಬಜಾರ್ ಪೊಲೀಸ್ ಠಾಣೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಾಲಕರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಘಟನಾ ಸ್ಥಳಕ್ಕೆ ಖಡೇಬಜಾರ್ ಪೊಲೀಸರು ಭೇಟಿ ನೀಡಿದ್ದಾರೆ.
ಗುಂಪಾಗಿ ಈಜಲು ತೆರಳಿದ್ದ ಬಾಲಕರು
ಬೇಸಗೆಯ ಬಿಸಿಲಿನ ಬೇಗೆಯಿಂದ ಪಾರಾಗಲು ಈ ಬಾಲಕರು ಗುಂಪಾಗಿ ಈಜಲು ತೆರಳಿದ್ದರು ಎನ್ನಲಾಗಿದೆ. ಮೃತ ಬಾಲಕರು ಶಿವಾಜಿ ನಗರ ಪ್ರದೇಶದ ನಿವಾಸಿಗಳು. ಕಪಿಲೇಶ್ವರ ಹೊಂಡವು ದಶಕಗಳಿಂದ ಸರಿಯಾದ ನಿರ್ವಹಣೆಯಿಲ್ಲದೆ ನಿರ್ಲಕ್ಷ್ಯಕ್ಕೆ ಒಳಗಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಹೊಂಡದ ಸುತ್ತಲೂ ಯಾವುದೇ ಸುರಕ್ಷತಾ ಬೇಲಿ ಅಥವಾ ಎಚ್ಚರಿಕೆ ಫಲಕಗಳಿಲ್ಲದಿರುವುದು ಇಂತಹ ದುರಂತಗಳಿಗೆ ಕಾರಣವಾಗುತ್ತಿದೆ ಎಂದು ಆಕ್ರೋಶ ಕೇಳಿ ಬರುತ್ತಿದೆ.
ಒಂದೇ ಕುಟುಂಬದ ನಾಲ್ವರು ತುಂಗಭದ್ರಾ ನದಿಯಲ್ಲಿ ನೀರುಪಾಲು
ಭೂತನಾಳ ಕೆರೆಯಲ್ಲಿ ದುರಂತ: ಮೂವರು ನೀರುಪಾಲು
ಕೆಲ ದಿನಗಳ ಹಿಂದೆ ವಿಜಯಪುರದಲ್ಲಿಯೂ ಇಂತಹದ್ದೇ ದುರಂತವೊಂದು ಸಂಭವಿಸಿತ್ತು.ಕೆರೆಯಲ್ಲಿ ಮುಳುಗಿ ಬೆಂಗಳೂರು ಮೂಲದ ಮೂವರು ಜಲಸಮಾಧಿಯಾಗಿದ್ದರು. ವಿಜಯಪುರದ ಐತಿಹಾಸಿಕ ಭೂತನಾಳ ಕೆರೆಯಲ್ಲಿ ಈ ದುರಂತ ನಡೆದಿತ್ತು. ಮೊಹಮ್ಮದ್ ಹಯಾತ್(12), ಹೈದರ್ ಪಾಷಾ(32) ಮತ್ತು ಅಬ್ದುಲ್ ಖುದ್ದೂಸ್ (35) ಮೃತರು.
ಕುಟುಂಬ ಸಮೇತ ಒಟ್ಟು 14 ಜನರು ವಿಜಯಪುರಕ್ಕೆ ಪ್ರವಾಸಕ್ಕಾಗಿ ಆಗಮಿಸಿ ಭೂತನಾಳ ಕೆರೆಯ ವೀಕ್ಷಣೆಗೆ ತೆರಳಿದ್ದರು. ಈ ವೇಳೆ ಬಾಲಕ ಮಹಮ್ಮದ್ ಹಯಾತ್ ನೀರಿಗೆ ಇಳಿದಾಗ ಆಕಸ್ಮಿಕವಾಗಿ ಮುಳುಗಿದ್ದ. ಬಾಲಕನನ್ನು ರಕ್ಷಿಸಲು ಹೈದರ್ ಪಾಶಾ ಹಾಗೂ ಅಬ್ದುಲ್ ಖುದ್ದುಸ್ ನೀರಿಗೆ ಇಳಿದಾಗ ಮೂವರು ಮುಳುಗಿ ಅನಾಹುತ ಸಂಭವಿಸಿತ್ತು. ಬಾಲಕ ಮೊಹಮ್ಮದ್ ಹಯಾತ್ ಮತ್ತು ಹೈದರ್ ಕೆರೆಯಲ್ಲೇ ಮೃತಪಟ್ಟಿದ್ದರೆ ಆಸ್ಪತ್ರೆಗೆ ಸಾಗಿಸುವಾಗ ಅಬ್ದುಲ್ ಖುದ್ದೂಸ್ ಸಾವನ್ನಪ್ಪಿದ್ದರು.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.