ಬೆಳಗಾವಿ: ಶಿವಂ ಅಸೋಸಿಯೇಟ್ಸ್ ವಿರುದ್ಧದ 4,500 ಕೋಟಿ ರೂ. ವಂಚನೆ ಆರೋಪ ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರವು ಸಿಐಡಿಗೆ ವಹಿಸಿದೆ. ಬೆಳಗಾವಿಯಲ್ಲಿ ಮಾಜಿ ಸೈನಿಕರು ಹಾಗೂ ಸಾರ್ವಜನಿಕರ ಹಣ ದುರಪಯೋಗದ ಗಂಭೀರ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ್ ನೀಲಣ್ಣವರ್ ಅವರನ್ನು ಶುಕ್ರವಾರ ರಾತ್ರಿ ಬಂಧಿಸಲಾಗಿತ್ತು. ಇದೀಗ ಪ್ರಕರಣವನ್ನು ಸಿಐಡಿಗೆ ವರ್ಗಾಯಿಸಲಾಗಿದೆ.
ಆರ್ಬಿಐ, ಸಹಕಾರ ಇಲಾಖೆ ಮಾರ್ಗಸೂಚಿ ಪಾಲಿಸದೇ ಠೇವಣಿ ಸಂಗ್ರಹ
ಪ್ರಕರಣದ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿರುವ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಅವರು, ಶಿವಂ ಅಸೋಸಿಯೇಟ್ಸ್ ಮಾಲೀಕ ಶಿವಾನಂದ ನೀಲಣ್ಣವರ ವಂಚನೆ ಪ್ರಕರಣ ಕೇವಲ ಒಂದು ಜಿಲ್ಲೆಯ ಪ್ರಕರಣವಲ್ಲ. ಇದೊಂದು ಅಂತರ್ ಜಿಲ್ಲೆ ಮತ್ತು ಅಂತಾರಾಜ್ಯದ ಪ್ರಕರಣವಾಗಿದೆ. ತಪಾಸಣೆ ವೇಳೆ ಅವರ ಮನೆ, ಕಚೇರಿಯಲ್ಲಿ ಸುಮಾರು ಬಾಂಡ್ಸ್, ಚೆಕ್ ಸಿಕ್ಕಿವೆ. ಅವು 50 ಕೋಟಿ ರೂ.ಗೂ ಮೀರಿದೆ. ಹಾಗಾಗಿ, ಇದೊಂದು ಗಂಭೀರ ಪ್ರಕರಣ ಎಂದು ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಹೇಳಿದ್ದಾರೆ.
ಶಿವಾನಂದ ನೀಲಣ್ಣವರ ವಿರುದ್ಧ ಕೆಪಿಐಡಿ ಆಕ್ಟ್ ಸೆಕ್ಷನ್ 9, ಬಡ್ಸ್ ಆಕ್ಟ್ ಸೆಕ್ಷನ್ 21, (1), (2) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಶಿವಂ ಅಸೋಸಿಯೇಟ್ಸ್ ಮೂಲಕ ಯಾವುದೇ ಸೆಬಿ, ಆರ್ಬಿಐ, ಸಹಕಾರ ಇಲಾಖೆ ಮಾರ್ಗಸೂಚಿಗಳನ್ನು ಪಾಲಿಸದೇ ಅನಧಿಕೃತವಾಗಿ ಠೇವಣಿಗಳನ್ನು ಸಂಗ್ರಹಿಸಿದ್ದಾರೆ. ಹೆಚ್ಚಿನ ಬಡ್ಡಿ ನೀಡುವುದಾಗಿ 35 ಸಾವಿರ ಜನರಿಂದ ಹಣ ಠೇವಣಿ ಇರಿಸಿಕೊಂಡಿದ್ದಾರೆ ಎಂದರು.
ಶಿವಾನಂದ ನೀಲಣ್ಣವರ ಕಚೇರಿ, ಮನೆ ತಪಾಸಣೆ ವೇಳೆ ಹಣ ವರ್ಗಾವಣೆ ಮಾಡಿರುವ, ಠೇವಣಿದಾರರ ಪಟ್ಟಿ ಸೇರಿ ಹಲವು ದಾಖಲೆಗಳು ಸಿಕ್ಕಿವೆ. ಯಾವುದೇ ರೀತಿ ಲೈಸೆನ್ಸ್ ಕೂಡ ತೋರಿಸಿಲ್ಲ. ಈ ಎಲ್ಲ ಅಂಶಗಳನ್ನು ಒಳಗೊಂಡ 150 ಪುಟಗಳ ವರದಿಯನ್ನು ಉಪವಿಭಾಗಾಧಿಕಾರಿಗಳು ನೆನ್ನೆ ರಾತ್ರಿ ನನಗೆ ನೀಡಿದ್ದಾರೆ. ಆ ವರದಿಯನ್ನು ಪರಿಶೀಲನೆ ನಡೆಸಿ, ನೆನ್ನೆ ರಾತ್ರಿಯೇ ನಾನು ಸರ್ಕಾರಕ್ಕೆ ಸಲ್ಲಿಸಿದ್ದೇನೆ. ಮುಂದೆ ಕಂದಾಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳು ರಾಜ್ಯ ನೋಡಲ್ ಅಧಿಕಾರಿ ನೇಮಕ ಮಾಡುತ್ತಾರೆ. ಅವರು ಚರಾಸ್ಥಿ, ಸ್ಥಿರಾಸ್ಥಿ ಜಪ್ತಿ ಮಾಡಿಸಿಕೊಳ್ಳಲು ಅಧಿಕಾರ ಇರುತ್ತದೆ. ಅಲ್ಲದೇ ಬ್ಯಾಂಕ್ ಖಾತೆ ಫ್ರೀಜ್ ಮಾಡಲಿದ್ದಾರೆ. ಈ ಸಂಬಂಧ ವಿಶೇಷ ಕೋರ್ಟ್ ಕೂಡ ರಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದ್ದಾರೆ.
ಶಿವಾನಂದ ನೀಲಣ್ಣವರ ಜೊತೆಗೆ ಇರುವವರ ಮೇಲೆ ನಿಗಾ ಇಟ್ಟಿದ್ದೇವೆ. ಇಂದು ಸಂಜೆ ವೇಳೆಗೆ ಎಲ್ಲರಿಗೂ ನೋಟಿಸ್ ಕೊಡುತ್ತೇವೆ. ಪ್ರಾಥಮಿಕ ತನಿಖೆಯಲ್ಲಿ ವಂಚನೆ ಸ್ಕೀಂ ಅಂತಾ ಗೊತ್ತಾಗಿದೆ. ಠೇವಣಿ ಹಣ ಸುರಕ್ಷಿತವಾಗಿ ಇಡುವ ಜವಾಬ್ದಾರಿ ನಮ್ಮದು. ಠೇವಣಿದಾರರನ್ನು ರಕ್ಷಿಸುವುದು ನಮ್ಮ ಮೊದಲ ಆದ್ಯತೆಯಾಗಿದೆ. ಜನರ ಠೇವಣಿ ಹಣ ಸುರಕ್ಷಿತವಾಗಿದೆ. ಠೇವಣಿದಾದರರು ನಮ್ಮ ಘಟಕಕ್ಕೆ ಅಥವಾ ಮಾಳಮಾರುತಿ ಠಾಣೆಗೆ ಆಗಮಿಸಿ ದೂರು ನೀಡಬಹುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.