ಬೆಳಗಾವಿ: ಕೇವಲ 50 ಸಾವಿರ ರೂ. ಸಾಲ ವಾಪಸ್ ಕೊಡದಿದ್ದಕ್ಕೆ ಅಪ್ರಾಪ್ತ ವಯಸ್ಸಿನ ಬಾಲಕಿಯನ್ನು ಅಪಹರಿಸಿ ಒತ್ತಾಯಪೂರ್ವಕವಾಗಿ ಮದುವೆಯಾಗಿರುವ ಘಟನೆ (Child Marriage) ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ.
ವಿಶಾಲ್ ಡವಳಿ, ಬಾಲಕಿಯನ್ನು ಮದುವೆಯಾದ ಆರೋಪಿಯಾಗಿದ್ದಾನೆ. ಸವದತ್ತಿ ತಾಲೂಕಿನ ಯಕ್ಕುಂಡಿ ಗ್ರಾಮದ 17 ವರ್ಷದ ಬಾಲಕಿ ಬೆಳಗಾವಿಯ ಅನಗೋಳದಲ್ಲಿ ವಾಸವಿದ್ದಳು. ಆಕೆಯ ತಂದೆ ತೀರಿಕೊಂಡಿದ್ದು, ತಾಯಿ ವಾಚ್‌ಮನ್ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಕುಟುಂಬದ ಆಸ್ಪತ್ರೆ ಖರ್ಚಿಗಾಗಿ ಬಾಲಕಿ ತಾಯಿ, ಪಕ್ಕಿರವ್ವ ನಗರದ ವಡಗಾಂವಿಯ ರೇಖಾ ಡವಳಿ ಎಂಬುವವರ ಬಳಿ 50 ಸಾವಿರ ರೂ. ಸಾಲ ಪಡೆದುಕೊಂಡಿದ್ದರು.
ಪಡೆದುಕೊಂಡ ಸಾಲಕ್ಕೆ ಬಾಲಕಿ ತನ್ನ ಕಿವಿ ಓಲೆಯನ್ನು ಸಾಲಗಾರರಿಗೆ ಕೊಟ್ಟು ಸ್ವಲ್ಪ ಸಮಯದ ನಂತರ ಸಾಲ ತೀರಿಸುವುದಾಗಿ ಹೇಳಿದ್ದಳು. ಹಣ ವಾಪಸ್ ಕೊಡಲು ತಡವಾಗಿದ್ದಕ್ಕೆ ಕೋಪಗೊಂಡ ಆರೋಪಿ ರೇಖಾ ಡವಳಿ, ಬಾಲಕಿಗೆ ಹಣ ಕೊಡುವಂತೆ ಕಿರುಕುಳ ನೀಡಿದ್ದಾಳೆ. ಅಷ್ಟೇ ಅಲ್ಲದೆ ಹಣ ಕೊಡಲು ಸಾಧ್ಯವಾಗದಿದ್ದರೆ ತನ್ನ ಮಗ ವಿಶಾಲ್ ಜತೆ ಬಾಲಕಿಯನ್ನು ಮದುವೆ ಮಾಡಿ ಕೊಡುವಂತೆ ಒತ್ತಾಯ ಮಾಡಿದ್ದಳು.
ಇಷ್ಟಕ್ಕೆ ಸುಮ್ಮನಾಗದ ಆರೋಪಿ ರೇಖಾ ಪತಿ ಪುಂಡಲೀಕ ಹಾಗೂ ತನ್ನ ಇಬ್ಬರು ಮಕ್ಕಳಾದ ವಿಶಾಲ್ ಹಾಗೂ ಶ್ಯಾಮ್ ಜತೆಗೂಡಿ ಅಪ್ರಾಪ್ತೆಯನ್ನು ಕಳೆದ ನವೆಂಬರ್ 17 ರಂದು ತಮ್ಮ ಮನೆಗೆ ಕರೆದೊಯ್ದಿದ್ದಾರೆ. ಮಗಳನ್ನು ಬಿಡುವಂತೆ ತಾಯಿ ಅಂಗಲಾಚಿದರೂ ಬಿಡದ ಆರೋಪಿತರು ಅಥಣಿಗೆ ಕರೆದೊಯ್ದು, ದೇವಸ್ಥಾನವೊಂದರಲ್ಲಿ ವಿಶಾಲ್ ಜತೆ ಬಾಲಕಿಯ ಮದುವೆ ಮಾಡಿಸಿದ್ದಾರೆ.
ಇನ್ನು ಮದುವೆ ಬಳಿಕ ಯುವಕನ ಕುಟುಂಬದವರು ಕಿರುಕುಳ ನೀಡಿರುವುದಾಗಿ ಬಾಲಕಿ ಕಡೆಯವರು ದೂರು ನೀಡಿದ್ದಾರೆ. ಈ ಸಂಬಂಧ ನಗರದ ತಿಲಕವಾಡಿ ಪೊಲೀಸ್ ಠಾಣೆಯಲ್ಲಿ ನಾಲ್ವರ ವಿರುದ್ಧ ಶುಕ್ರವಾರ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಈ ಸುದ್ದಿಯನ್ನೂ ಓದಿ | ಅಂಗಡಿಯಿಂದ ಹೆಡ್‌ಫೋನ್ ಖರೀದಿಸಿ ತೆರಳಿದ ಶಂಕಿತ ; ಸೈಫ್ ಮನೆಗೆ ನುಗ್ಗಿದ್ದ ಆರೋಪಿಯ ಮತ್ತೊಂದು ಸಿಸಿಟಿವಿ ದೃಶ್ಯ ವೈರಲ್
ರೋಡ್ ರೇಜ್ ನಡೆಸಿದ ಇಬ್ಬರು ದುಷ್ಕರ್ಮಿಗಳ ಬಂಧನ

ಬೆಂಗಳೂರು: ಬೆಂಗಳೂರಿನಲ್ಲಿ ನಡೆದಿದ್ದ ರೋಡ್ ರೇಜ್ ಪ್ರಕರಣದಲ್ಲಿ ಕಾರಿನ ಮೇಲೆ ದಾಳಿ ಮಾಡಿ ಅದರ ಗ್ಲಾಸ್ ಗೆ ಒದ್ದಿದ್ದ ಇಬ್ಬರು ದುಷ್ಕರ್ಮಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದು, ಅದರ ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.
ಡಿಸೆಂಬರ್ 28ರಂದು ಬೆಂಗಳೂರಿನ ಕೋರಮಂಗಲದಲ್ಲಿ ನಡೆದಿದ್ದ ರಸ್ತೆ ಹಲ್ಲೆ ಪ್ರಕರಣದಲ್ಲಿ ದ್ವಿಚಕ್ರ ವಾಹನ ಸವಾರರು ಕಾರನ್ನು ಬೆನ್ನಟ್ಟಿದ್ದರು. ಟ್ರಾಫಿಕ್ ಸಿಗ್ನಲ್‌ನಲ್ಲಿ ನಿಂತಿದ್ದ ಕಾರಿಗೆ ಚಲನೆಗೆ ಅಡ್ಡಿಪಡಿಸಿ ಚಾಲಕನ್ನು ಹೊರಗೆಳೆಯಲು ಯತ್ನಿಸಿ ಸಾಧ್ಯವಾಗದೆ ಕಾರಿನ ಬಾನೆಟ್ ಮೇಲೆ ಹತ್ತಿ ವಿಂಡ್ ಶೀಲ್ಡ್ ಅನ್ನು ಒದ್ದಿದ್ದರು.
ಈ ಕುರಿತ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿತ್ತು. ದುಷ್ಕರ್ಮಿಗಳ ದಾಳಿಗೆ ವ್ಯಾಪಕ ಆಕ್ರೋಶ ಕೂಡ ವ್ಯಕ್ತವಾಗಿತ್ತು. ವಿವೇಕ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. ಸೋನಿ ಸಿಗ್ನಲ್ ಕಡೆಯಿಂದ ಶ್ರೀನಿವಾಗಿಲು ಜಂಕ್ಷನ್ ಕಡೆಗೆ ಹೋಗುತ್ತಿದ್ದ ಸೆಲೆರಿಯೋ ಕಾರಿನ ಮೇಲೆ ದ್ವಿಚಕ್ರ ವಾಹನದಲ್ಲಿ ಬಂದ ಇಬ್ಬರು ಯುವಕರು ನೋಡ ನೋಡುತ್ತಲೇ ದಾಳಿ ನಡೆಸಿದ್ದರು.
ಈ ಪೈಕಿ ಒಬ್ಬಾತ ಏಕಾಏಕಿ ಕಾರಿನ ಬಾನೆಟ್ ಮೇಲೆ ಏರಿ ಮುಂಭಾಗದ ಗ್ಲಾಸ್ ಅನ್ನು ಒದ್ದಿದ್ದ. ಈ ಸಂಬಂಧ ವಿವೇಕ್ ನಗರ ಪೊಲೀಸ್ ಠಾಣೆಯಲ್ಲಿ ಕಲಾವತಿ ಎಂಬವರು ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಬೆಂಗಳೂರಿನ ವಿವೇಕನಗರ ಪೊಲೀಸರು ಕೊನೆಗೂ ಆರೋಪಿಗಳ ಹೆಡೆಮುರಿ ಕಟ್ಟಿದ್ದು, ವಾಹನ ಸಮೇತ ಇಬ್ಬರನ್ನೂ ಬಂಧಿಸಿ ಠಾಣೆಗೆ ಕರೆತಂದಿದ್ದಾರೆ. ಇಬ್ಬರ ವಿರುದ್ಧವೂ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಬೆಂಗಳೂರು ಪೊಲೀಸರು ಈ ಕುರಿತ ವಿಡಿಯೋವನ್ನೂ ಎಕ್ಸ್ ನಲ್ಲಿ ಹಂಚಿಕೊಂಡಿದ್ದಾರೆ.