ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

CM Siddaramaiah: ಸಿಎಂ ಸಿದ್ದರಾಮಯ್ಯಗೆ ತೀವ್ರ ಹೊಟ್ಟೆನೋವು; ಬೆಳಗಾವಿ ಸರ್ಕೀಟ್‌ ಹೌಸ್‌ನಲ್ಲಿ ವಿಶ್ರಾಂತಿ

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೊಟ್ಟೆನೋವು ವಿಚಾರ ತಿಳಿಯುತ್ತಿದ್ದಂತೆ ಸಿಎಂ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಬೆಳಗಾವಿ ಸರ್ಕೀಟ್‌ ಹೌಸ್‌ಗೆ ತೆರಳಿ ತಂದೆಯ ಆರೋಗ್ಯ ವಿಚಾರಿಸಿದ್ದಾರೆ. ಇದೇ ವೇಳೆ ಬಿಜೆಪಿ ಶಾಸಕ ರಮೇಶ್‌ ಜಾರಕಿಹೊಳಿ ಹಾಗೂ ಜೆಡಿಎಸ್‌ ಶಾಸಕ ಜಿ.ಟಿ.ದೇವೇಗೌಡ ಸೇರಿ ಹಲವರು ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ಬೆಳಗಾವಿ, ಡಿ.17: ಚಳಿಗಾಲದ ಅಧಿವೇಶನ ನಡುವೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನ ಸದನಕ್ಕೆ ಗೈರಾಗಿದ್ದ ಸಿಎಂ ಅವರು, ಬೆಳಗಾವಿ ಸರ್ಕೀಟ್ ಹೌಸ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಮಧ್ಯಾಹ್ನದ ಬಳಿಕ ಸಿಎಂ ಸಿದ್ದರಾಮಯ್ಯ ಅವರಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಹೀಗಾಗಿ ವೈದ್ಯರ ಸಲಹೆಯಂತೆ ಅವರು ಅಧಿವೇಶನಕ್ಕೆ ಹೋಗದೆ ವಿಶ್ರಾಂತಿ ಪಡೆಯುತ್ತಿದ್ದಾರೆ. ಇನ್ನು ಸಂಜೆಯವರೆಗೆ ನಿಗದಿಯಾಗಿದ್ದ ಎಲ್ಲಾ ಅಧಿಕೃತ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.

ಈ ವಿಷಯ ತಿಳಿಯುತ್ತಿದ್ದಂತೆ ಸಿಎಂ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಸರ್ಕೀಟ್‌ ಹೌಸ್‌ಗೆ ಧಾವಿಸಿ ತಂದೆಯ ಆರೋಗ್ಯ ವಿಚಾರಿಸಿದ್ದಾರೆ. ಇದೇ ವೇಳೆ ವಿವಿಧ ಪಕ್ಷಗಳ ನಾಯಕರು ಅರ್ಕೀಟ್‌ ಹೌಸ್‌ಗೆ ಭೇಟಿ ನೀಡಿ ಸಿಎಂ ಆರೋಗ್ಯ ವಿಚಾರಿಸಿದ್ದಾರೆ. ಬಿಜೆಪಿ ನಾಯಕ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರು ಏಕಾಂಗಿಯಾಗಿ ಬಂದು ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಭೇಟಿಯ ಬಳಿಕ ಮಾತನಾಡಿದ ಜಾರಕಿಹೊಳಿ, 'ಇದು ಕೇವಲ ಸೌಜನ್ಯದ ಭೇಟಿ. ಸಿಎಂ ಅವರಿಗೆ ಧೈರ್ಯ ಹೇಳುವ ಅವಶ್ಯಕತೆಯಿಲ್ಲ, ಅವರೇ ನಮಗೆ ಧೈರ್ಯ ಹೇಳುವಷ್ಟು ಗಟ್ಟಿಯಾಗಿದ್ದಾರೆ. ಯಾವುದೇ ರಾಜಕೀಯ ಚರ್ಚೆ ನಡೆದಿಲ್ಲ' ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ ಶಾಸಕ ಜಿ.ಟಿ. ದೇವೇಗೌಡ ಅವರು ಕೂಡ ಸಿಎಂ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

ಕುಣಿಗಲ್‌ಗೆ ಅನುದಾನ ನೀಡಿಕೆಯಲ್ಲಿ ತಾರತಮ್ಯ ನಿವಾರಣೆ: ಸಿಎಂ ಭರವಸೆ

ಸಿಎಂ ಅವರ ಆಪ್ತ ಸಚಿವ ಬೈರತಿ ಸುರೇಶ್ ಅವರು ಮಾಧ್ಯಮಗಳೊಂದಿಗೆ ಮಾತನಾಡಿ, ಸಿಎಂ ಆರೋಗ್ಯದ ಬಗ್ಗೆ ಆತಂಕ ಪಡುವ ಅಗತ್ಯವಿಲ್ಲ. ಅವರ ಜತೆಗೆ ನಾನು ಊಟ ಮಾಡಿದ್ದೇನೆ, ಅವರು ಚೆನ್ನಾಗಿದ್ದಾರೆ. ನಾಳೆ ಸದನದಲ್ಲಿ ಹಲವು ಪ್ರಮುಖ ವಿಷಯಗಳಿಗೆ ಸಿಎಂ ಉತ್ತರ ನೀಡಬೇಕಿದೆ, ಹೀಗಾಗಿ ಅದಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಅವರು ಪರಿಶೀಲಿಸುತ್ತಿದ್ದಾರೆ ಎಂದು ತಿಳಿಸಿದ್ದಾರೆ.