ಹುಕ್ಕೇರಿ: ಇಲ್ಲಿನ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ, 15 ಸಾವಿರ ರೂ. ಲಂಚ ಪಡೆಯುತ್ತಿದ್ದ ಸಹಾಯಕ ನಿರ್ದೇಶಕಿಯನ್ನು ಹಣ ಸಮೇತ ವಶಕ್ಕೆ ಪಡೆದಿದ್ದಾರೆ. ಸಹಾಯಕ ನಿರ್ದೇಶಕಿ ಸವಿತಾ ಹಲಕಿ ಅವರು, ತಾಲೂಕಿನ ಶಿಪೂರ ಆರ್.ಎಂ.ಎಸ್.ಎ. ಹೈಸ್ಕೂಲ್ನ ಪ್ರಭಾರಿ ಮುಖ್ಯಾಧ್ಯಾಪಕ ಪರುಶುರಾಮ ಹೆಜ್ಜೆ ಅವರಿಂದ 15 ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ಈ ದಾಳಿ ನಡೆದಿದೆ.
ದೂರಿನಲ್ಲಿ ತಿಳಿಸಿರುವಂತೆ, ಇದಕ್ಕೂ ಮೊದಲು ಇದೇ ಕೆಲಸಕ್ಕೆ ಪರುಶುರಾಮ ಹೆಜ್ಜೆ ಅವರಿಂದ 20 ಸಾವಿರ ರೂ. ಪಡೆದಿದ್ದ ಸವಿತಾ ಹಲಕಿ ಅವರು, ಇನ್ನೂ ಹೆಚ್ಚಿನ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ಕೊಡಲು ಸಾಧ್ಯವಾಗದೆ ಬೇಸತ್ತ ಮುಖ್ಯಾಧ್ಯಾಪಕರು ಲೋಕಾಯುಕ್ತರಿಗೆ ದೂರು ನೀಡಿದ್ದರು.
ದೂರಿನ ಮೇರೆಗೆ ಬೆಳಗಾವಿ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕರಾದ ವೆಂಕಟೇಶ ಯಡಹಳ್ಳಿ ಮತ್ತು ಸಂಗಮೇಶ ಹೊಸಮನಿ ಅವರ ನೇತೃತ್ವದಲ್ಲಿ ಸಿಬ್ಬಂದಿ ಬಲೆ ಬೀಸಿದ್ದರು. ದೂರುದಾರರಿಂದ ಹಣ ಪಡೆಯುತ್ತಿದ್ದಂತೆಯೇ ದಾಳಿ ಮಾಡಿ, ನಗದು ಹಣವನ್ನು ವಶಪಡಿಸಿಕೊಂಡು ಕಚೇರಿಯ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ದಾಳಿ ಬಳಿಕ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿ ಟಿ.ಆರ್. ಮಲ್ಲಾಡದ ಅವರು ಕಚೇರಿಗೆ ಬಂದು, ಸವಿತಾ ಹಲಕಿ ಅವರನ್ನು ಕರೆದು ವಿಚಾರಣೆ ನಡೆಸಿದರು.
ಸವಿತಾ ಹಲಕಿ ಅವರು 2022 ರಿಂದ ಹುಕ್ಕೇರಿಯಲ್ಲಿ ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಲಂಚ ಸ್ವೀಕಾರ ಕುರಿತು ಲೋಕಾಯುಕ್ತ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ನಡೆಸಲಾಗುತ್ತಿದೆ.