Belagavi News: ಇಟಲಿ ತಾಯಿಯ ಮಡಿಲು ಸೇರಿದ ಕುಂದಾನಗರಿಯ ಅನಾಥ ಕಂದ
ಬೆಳಗಾವಿಯ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನದ ಗಂಗಮ್ಮ ಚಿಕ್ಕುಂಬಿಮಠ ಕೇಂದ್ರದ ಆರೈಕೆಯಲ್ಲಿದ್ದ ಅನಾಥ ಮಗುವನ್ನು ಇಟಲಿ ದಂಪತಿ ದತ್ತು ಪಡೆದಿದ್ದಾರೆ. 6 ವರ್ಷಗಳ ಹಿಂದೆ ಇಟಲಿ ಮೂಲದ ಪಿಸಿಷಿಯನ್ ಡಾ.ಕೂಸ್ಟಾಂಜಾ ಮತ್ತು ಬುಯಾರ್ ಡೆಡೆ ದಂಪತಿ ಭಾರತದ ಒಂದು ಮಗುವನ್ನು ದತ್ತು ಪಡೆದುಕೊಳ್ಳಬೇಕು ಎಂದು ನಿರ್ಧರಿಸಿದ್ದರು. ಅದರಂತೆ ಈಗ ದತ್ತು ಪಡೆದುಕೊಂಡಿದ್ದಾರೆ.

ಮಗುವಿನೊಂದಿಗೆ ಡಾ.ಕೂಸ್ಟಾಂಜಾ ಮತ್ತು ಬುಯಾರ್ ಡೆಡೆ ದಂಪತಿ.

ಬೆಳಗಾವಿ: ಮಕ್ಕಳಿಗಾಗಿ ಅದೆಷ್ಟೋ ದೇವರ ಹರಕೆ ಹೊತ್ತು ಸಂತಾನ ಭಾಗ್ಯ ಪಡೆಯುವವರ ಮಧ್ಯೆ ಅಂಗವೈಕಲ್ಯದ ಕಾರಣಕ್ಕೆ ಸ್ವಂತ ಗರ್ಭದಲ್ಲಿ ಜನಿಸಿದ್ದ ಮಗುವನ್ನೇ ಕಸದ ತೊಟ್ಟಿಯಲ್ಲಿ ಎಸೆದಿದ್ದ ದುರುಳರ ಕುಡಿ, ಸದ್ಯ ಇಟಲಿಯ ತಾಯಿಯೊಬ್ಬರ ಮಡಿಲಿಗೆ ಸೇರಿ ಬೆಚ್ಚಗಿನ ಆಸರೆ ಪಡೆದುಕೊಂಡ ಅಪರೂಪದ ಘಟನೆ ಕುಂದಾನಗರಿಯಲ್ಲಿ ನಡೆದಿದೆ. ಹುಟ್ಟಿದ ಮಗು ಅಂಗವೈಕಲ್ಯದಿಂದ ಕೂಡಿದೆ ಎಂಬ ಒಂದೇ ಕಾರಣಕ್ಕೆ 2 ವರ್ಷಗಳ ಹಿಂದೆ ಪೋಷಕರು ಮಗುವನ್ನು ಕಸದ ತೊಟ್ಟಿಗೆ ಎಸೆದಿದ್ದರು. ಸ್ಥಳೀಯರು ಮಗುವನ್ನು ಗಮನಿಸಿ ನಗರದ ಜಿಲ್ಲಾಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದರು (Belagavi News). ವೈದ್ಯರು ಮಗುವಿಗೆ ಚಿಕಿತ್ಸೆ ನೀಡಿ ತಮ್ಮ ಆರೈಕೆಯಲ್ಲೇ ಉಳಿಸಿಕೊಂಡಿದ್ದರು. ನಂತರ ಪುಟ್ಟ ಕಂದಮ್ಮನನ್ನು ಬೆಳಗಾವಿಯ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನದ ಗಂಗಮ್ಮ ಚಿಕ್ಕುಂಬಿಮಠ ಕೇಂದ್ರದ ಆರೈಕೆಯಲ್ಲಿತ್ತು.
6 ವರ್ಷಗಳ ಹಿಂದೆ ಇಟಲಿ ಮೂಲದ ಪಿಸಿಷಿಯನ್ ಡಾ.ಕೂಸ್ಟಾಂಜಾ ಮತ್ತು ಬುಯಾರ್ ಡೆಡೆ ದಂಪತಿ ಭಾರತದ ಒಂದು ಮಗುವನ್ನು ದತ್ತು ಪಡೆದುಕೊಳ್ಳಬೇಕು ಎಂದು ನಿರ್ಧರಿಸಿದ್ದರು. ಈ ಕುರಿತು ಕಾನೂನು ಪ್ರಕಾರ ಅರ್ಜಿ ಸಲ್ಲಿಸಿದ್ದರು. 1 ವರ್ಷದ ಹಿಂದೆಯಷ್ಟೇ ಸೇವಾ ಪ್ರತಿಷ್ಠಾನದಲ್ಲಿ ಆಶ್ರಯ ಪಡೆಯುತ್ತಿದ್ದ ಮಗುವಿನ ಮಾಹಿತಿ ಈ ಇಟಲಿ ದಂಪತಿ ಗಮನಕ್ಕೆ ಬಂದಿತ್ತು.
ಅಂಗವೈಕಲ್ಯದಿಂದ ಬಳಲುತ್ತಿದ್ದ ಮಗು ಚಿಕಿತ್ಸೆ ಪಡೆಯುತ್ತಿರುವುದನ್ನು ಗಮನಿಸಿದ್ದ ಡಾ.ಕೂಸ್ಟಾಂಜಾ ಮತ್ತು ಬುಯಾರ್ ಡೆಡೆ ದಂಪತಿ ಆರ್ಥಿಕ ಸಹಾಯ ಮಾಡುತ್ತಿದ್ದರು. ಮಗು ಆದಷ್ಟು ಬೇಗ ಗುಣಮುಖವಾಗಿ ತಮ್ಮ ಮಡಿಲು ತುಂಬಿಸಿಕೊಳ್ಳುವ ಉತ್ಸುಕತೆಯಲ್ಲಿ ಈ ಕುಟುಂಬ ಶಬರಿ ರಾಮನಿಗೆ ಕಾಯ್ದಂತೆ ಮಗುವಿಗಾಗಿ ಕಾಯುತ್ತಿದ್ದರು.
ಕೊನೆಗೂ ಇಟಲಿ ದಂಪತಿ ಕನಸು ನನಸಾಗುವ ಸಮಯ ಬಂದಿದೆ. ಹೆತ್ತವರಿಗೆ ಬೇಡವಾಗಿ ಕಸದ ತೊಟ್ಟಿಗೆ ಸೇರಿದ ಮಗುವನ್ನು ದೂರದ ಇಟಲಿ ದಂಪತಿ ದತ್ತು ಪಡೆದುಕೊಂಡಿದ್ದಾರೆ. ಪುಟ್ಟ ಕಂದಮ್ಮನನ್ನು ಎದೆಗೆ ತಬ್ಬಿಕೊಂಡ ತಾಯಿ ಹೃದಯದ ಕಣ್ಣಲ್ಲಿ ಸಂತೃಪ್ತಿ ಎದ್ದು ಕಾಣುತ್ತಿದೆ. ಕಾನೂನು ಪ್ರಕ್ರಿಯೆಯ ಮೂಲಕ ಸದ್ಯ ಮಗು ಇಟಲಿ ದಂಪತಿಯ ಕೈ ಹಿಡಿದುಕೊಂಡಿದೆ.
ವಿದೇಶಕ್ಕೆ ಹಾರಿದ 13ನೇ ಮಗು
ಸಮಾಜದಲ್ಲಿ ನಾನಾ ಕಾರಣಕ್ಕೆ ಹೆತ್ತವರಿಂದ ದೂರವಾಗಿ ಆಶ್ರಯವಿಲ್ಲದೆ ಅನಾಥವಾಗಿದ್ದವರ ಪಾಲಿಗೆ ಬೆಳಗಾವಿಯ ಸ್ವಾಮಿ ವಿವೇಕಾನಂದ ಸೇವಾ ಪ್ರತಿಷ್ಠಾನದ ಗಂಗಮ್ಮ ಚಿಕ್ಕುಂಬಿಮಠ ಬಾಲಕಲ್ಯಾಣ ಕೇಂದ್ರ ಸಂಜೀವಿನಿ ಎನಿಸಿಕೊಂಡಿದೆ. ಈ ಕೇಂದ್ರದಲ್ಲಿ ಬೆಳೆದ ಸಾವಿರಾರು ಮಕ್ಕಳು ವಿವಿಧ ರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಸುಂದರ ಬದುಕು ಕಟ್ಟಿಕೊಂಡಿದ್ದಾರೆ. ಈವರೆಗೆ ಒಟ್ಟು 13 ಮಕ್ಕಳನ್ನು ವಿದೇಶದ ದಂಪತಿ ದತ್ತು ಪಡೆದು ಆಶ್ರಯ ನೀಡುತ್ತಿರುವುದು ಈ ಸಂಸ್ಥೆಯ ಇನ್ನೊಂದು ವಿಶೇಷ.
ಖುಷಿ ತಂದಿದೆ
ಚಿಕ್ಕುಂಬಿಮಠ ಬಾಲಕಲ್ಯಾಣ ಕೇಂದ್ರದ ಅಧ್ಯಕ್ಷೆ ಡಾ. ಮನಿಷಾ ಭಾಂಡನಕರ್ ಅವರು ಈ ಬಗ್ಗೆ ಮಾಹಿತಿ ನೀಡಿ, ʼʼಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಮಗು ಕೇವಲ 7 ತಿಂಗಳಲ್ಲಿ ಜನಿಸಿದ್ದರಿಂದ ಈ ಸಮಸ್ಯೆ ಎದುರಾಗಿತ್ತು. ಮಗುವಿನ ತೂಕ 1.3 ಕೆ.ಜಿ. ಇದ್ದ ಕಾರಣ ಆರೋಗ್ಯದಲ್ಲಿ ಸಾಕಷ್ಟು ಸಮಸ್ಯೆಗಳು ಇದ್ದವು. ಕೆಎಲ್ಇ ಆಸ್ಪತ್ರೆಯಲ್ಲಿ 1 ತಿಂಗಳು ಚಿಕಿತ್ಸೆ ಕೊಡಿಸಿದ್ದೇವೆ. ಅಲ್ಲದೆ ಮಗುವಿಗೆ ನಾವು ಬಹಳಷ್ಟು ಆರೈಕೆ ಮಾಡಿದ್ದು, ಸದ್ಯ ಇಟಲಿ ದಂಪತಿ ಆಶ್ರಯ ಪಡೆದಿದ್ದು ಖುಷಿಯ ಸಂಗತಿʼʼ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: DK Shivakumar: ನೀರಾವರಿ ಸಚಿವರುಗಳ ಸಭೆಯಲ್ಲಿ ಮೇಕೆದಾಟು, ಮಹದಾಯಿ ಚರ್ಚೆ: ಡಿಕೆ ಶಿವಕುಮಾರ್
ಡಾ.ಕೂಸ್ಟಾಂಜಾ, ಬುಯಾರ್ ಡೆಡೆ ದಂಪತಿ ಹೇಳಿದ್ದೇನು?
ನಂಬಿಕಸ್ಥರು, ಸುಸಂಸ್ಕೃತರೆಂಬ ಕಾರಣಕ್ಕೆ ಭಾರತೀಯ ಮಗು ದತ್ತು ಪಡೆಯುತ್ತಿದ್ದೇವೆ. ವಿಶೇಷ ಚೇತನ ಮಗುವಿನ ಭವಿಷ್ಯ ರೂಪಿಸಿದ ಧನ್ಯತೆಯ ಕಾರಣಕ್ಕೆ ನಮ್ಮ ಆಯ್ಕೆ ಇದಾಗಿದೆ. ಮಗುವಿನ ಭವಿಷ್ಯ ಉಜ್ವಲವಾಗಿಸುವ ನಿಟ್ಟಿನಲ್ಲಿ ನಾವು ಪ್ರಯತ್ನಿಸುತ್ತೇವೆ. ಮಗುವನ್ನು ನಮ್ಮ ಜತೆ ಕರೆದುಕೊಂಡು ಹೋಗಲು ತುಂಬಾ ಸಂತೋಷವಾಗುತ್ತಿದೆʼʼ ಎಂದು ಡಾ.ಕೂಸ್ಟಾಂಜಾ, ಬುಯಾರ್ ಡೆಡೆ ದಂಪತಿ ಹೇಳಿದ್ದಾರೆ.