ಬೆಳಗಾವಿ: ಕಳೆದ ವಾರ ರಾಜ್ಯದ ಹಲವು ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ ಸುರಿದಿತ್ತು. ಇದೀಗ ಬೆಳಗಾವಿಯಲ್ಲಿ ಮಂಗಳವಾರ ಸಂಜೆ ಮತ್ತೆ ಗುಡುಗು ಸಹಿತ ಆಲಿಕಲ್ಲು ಮಳೆ ಅಬ್ಬರಿಸಿದ್ದು, ನಗರದ ತಗ್ಗು ಪ್ರದೇಶಗಳು ಜಲಾವೃತವಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಒಂದೂವರೆ ಗಂಟೆ ಕಾಲ ಸುರಿದ ಭಾರಿ ಮಳೆಯಿಂದ ರಸ್ತೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ನಿಂತಿದ್ದು, ಹಲವು ಬಡಾವಣೆಗಳಲ್ಲಿ ಮನೆ, ಅಂಗಡಿಗಳಿಗೆ ನೀರು ನುಗ್ಗಿದೆ.

ಇನ್ನು ಬೆಳಗಾವಿ ಜಿಲ್ಲಾಧಿಕಾರಿ ಕಚೇರಿಗೂ ಮಳೆ ನೀರು ನುಗ್ಗಿ ಪ್ರಮುಖ ದಾಖಲೆಗಳು ಹಾಗೂ ಕಂಪ್ಯೂಟರ್‌ಗಳು ಹಾನಿಗೊಳಗಾಗಿದ್ದು, ರಸ್ತೆಗಳು ನದಿಯಂತಾಗಿ ಸಾರ್ವಜನಿಕರು ತತ್ತರಿಸಿದ್ದಾರೆ. ಡಿಸಿ ಕಚೇರಿ ಕಟ್ಟಡದಲ್ಲಿ ಸೋರಿಕೆ ಉಂಟಾಗಿ, ಜಿಲ್ಲಾಧಿಕಾರಿ ಅವರ ಕೊಠಡಿಗೂ ರಾಡಿ ಮಿಶ್ರಿತ ನೀರು ನುಗ್ಗಿದ್ದರಿಂದ ಕಚೇರಿಯ ಸಿಬ್ಬಂದಿ ನೀರನ್ನು ಹೊರಹಾಕಲು ಹೈರಾಣಾಗಿದ್ದಾರೆ.
Health Tips: ಈ ಆಹಾರ ಅರಿವಿಲ್ಲದೆಯೇ ನಿಮ್ಮ ರಕ್ತದೊತ್ತಡ ಹೆಚ್ಚಿಸಬಹುದು; ಎಚ್ಚರ!
ವರುಣನ ಆರ್ಭಟದಿಂದ ಅಂಗಡಿಗಳು, ಮಾರ್ಕೆಟ್, ಮನೆಗಳಿಗೆ ಚರಂಡಿ ನೀರು ನುಗ್ಗಿ ನಗರದ ಹಲವೆಡೆ ಅವಾಂತರ ಸೃಷ್ಟಿಯಾಗಿದೆ. ಪೋರ್ಟ್ ರೋಡ್ ಜಲಾವೃತವಾಗಿದ್ದರಿಂದ ರವಿವಾರ ಪೇಟೆ ಬೆಲ್ಲದ ಮಾರ್ಕೆಟ್ ಹಾಗೂ ಕಾಂದಾ ಮಾರುಕಟ್ಟೆ ಕೆರೆಯಂತಾಗಿದೆ. ಮಾರುಕಟ್ಟೆಯಲ್ಲಿ ತರಕಾರಿ, ಹಣ್ಣು, ಹೂಗಳು ಮಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದರಿಂದ ವ್ಯಾಪಾರಸ್ಥರು ಪರದಾಡುವಂತಾಯಿತು.