ಬೆಳಗಾವಿ, ಡಿ.7: ವಿಧಾನಮಂಡಲ ಚಳಿಗಾಲದ ಅಧಿವೇಶನಕ್ಕೆ ಪರ್ಯಾಯವಾಗಿ ಮಹಾಮೇಳಾವ್ ಮಾಡಲು ಯತ್ನಿಸಿದ ಮಹಾರಾಷ್ಟ್ರ ಏಕೀಕರಣ ಸಮಿತಿಯ 20ಕ್ಕೂ ಅಧಿಕ ಕಾರ್ಯಕರ್ತರನ್ನು ಬೆಳಗಾವಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ನು ಮಹಾಮೇಳಾವ್‌ಗೆ ನಿಷೇಧ ಹಿನ್ನೆಲೆ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಕಾರ್ಯಕರ್ತರು, ಕೊಲ್ಲಾಪುರದಲ್ಲಿ ವಾಯವ್ಯ ಕರ್ನಾಟಕ ಸಾರಿಗೆ ಬಸ್‌ಗೆ ʼಜೈ ಮಹಾರಾಷ್ಟ್ರʼ ಎಂದು ಸ್ಟೀಕರ್ ಅಂಟಿಸಿ ಪುಂಡಾಟ ಮೆರೆದಿದ್ದಾರೆ.
ವ್ಯಾಕ್ಸಿನ್ ಡಿಪೊ ಮೈದಾನದಲ್ಲಿ ಮಹಾಮೇಳಾವ್ ನಡೆಸಲು ಎಂಇಎಸ್‌ನವರು ಯೋಜಿಸಿದ್ದರು. ಮೈದಾನಕ್ಕೆ ತೆರಳಲು ಯತ್ನಿಸಿದ ಮುಖಂಡರಾದ ಮನೋಹರ ಕಿಣೇಕರ, ಮಾಲೋಜಿರಾವ್ ಅಷ್ಟೇಕರ, ಶುಭಂ ಶೆಳಕೆ ಮತ್ತಿತರರನ್ನು ಎರಡನೇ ರೈಲ್ವೆ ಗೇಟ್ ಬಳಿ ಪೊಲೀಸರು ವಶಕ್ಕೆ ಪಡೆದರು. ಆಗ 'ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಲೇಬೇಕು' ಎಂದು ಕಾರ್ಯಕರ್ತರು ನಾಡವಿರೋಧಿ ಘೋಷಣೆ ಕೂಗಿದರು.
ಕನ್ನಡ ಹೋರಾಟಗಾರರೂ ವಶಕ್ಕೆ
ಎಂಇಎಸ್ ನಾಡವಿರೋಧಿ ನಿಲುವು ಖಂಡಿಸಿ, ಬೆಳಗಾವಿ ಎರಡನೇ ರೈಲ್ವೆ ಗೇಟ್ ಬಳಿ ಪ್ರತಿಭಟನೆಗೆ ಬಂದಿದ್ದ ಕರ್ನಾಟಕ ರಕ್ಷಣಾ ವೇದಿಕೆ ನಾರಾಯಣಗೌಡ ಬಣ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.
ಮಹಾಮೇಳಾವ್‌ಗೆ ಅವಕಾಶ ನಿರಾಕರಿಸಿದ್ದರೂ ಎಂಇಎಸ್‌ನವರು ವ್ಯಾಕ್ಸಿನ್ ಡಿಪೊ ಮೈದಾನದತ್ತ ಧಾವಿಸುತ್ತಲೇ ಇದ್ದರು. ಪೊಲೀಸರು ಅವರನ್ನು ವಶಕ್ಕೆ ಪಡೆದು, ತಮ್ಮ ವಾಹನದಲ್ಲಿ ಕರೆದೊಯ್ದರು.
ಕೆಎಸ್‌ಆರ್‌ಟಿಸಿ ಬಸ್‌ಗೆ ʼಜೈ ಮಹಾರಾಷ್ಟ್ರʼ ಸ್ಟೀಕರ್
ಚಿಕ್ಕೋಡಿ: ಬೆಳಗಾವಿಯಲ್ಲಿ ಎಂಇಎಸ್ ಮಹಾಮೇಳಾವ್‌ಗೆ ನಿಷೇಧ ಹಿನ್ನೆಲೆ ಕೊಲ್ಲಾಪುರದಲ್ಲಿ ಶಿವಸೇನೆಯ ಪುಂಡಾಟ ಮುಂದುವರಿದಿದೆ. ಕರ್ನಾಟಕದ ಸಾರಿಗೆ ಬಸ್ ತಡೆದು ʼಜೈ ಮಹಾರಾಷ್ಟ್ರʼ ಎಂದು ಸ್ಟೀಕರ್ ಅಂಟಿಸಿ ಕಾರ್ಯಕರ್ತರು ಪುಂಡಾಟ ಮೆರೆದಿದ್ದಾರೆ. ಪುಣೆಯಿಂದ ಹಲ್ಯಾಳಕ್ಕೆ ಹೊರಟಿದ್ದ ಬಸ್ ಅನ್ನು ಮಹಾರಾಷ್ಟ್ರದ ಕೊಲ್ಲಾಪುರ ಬಸ್ ನಿಲ್ದಾಣದಲ್ಲಿ ಶಿವಸೇನೆಯ ಉದ್ಧವ್ ಠಾಕ್ರೆ ಬಣದ ಕಾರ್ಯಕರ್ತರು ತಡೆದು ಪುಂಡಾಟ ನಡೆಸಿದ್ದಾರೆ.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ಆರಂಭ, ಅಗಲಿದ ಗಣ್ಯರಿಗೆ ಸಂತಾಪ
ಅಥಣಿಯಲ್ಲಿ ಮಹಾರಾಷ್ಟ್ರ ಬಸ್‌ಗಳನ್ನು ತಡೆದು ಕರವೇ ಆಕ್ರೋಶ
ಒಂದೆಡೆ ಕೊಲ್ಲಾಪುರದಲ್ಲಿ ಕರ್ನಾಟಕ ಬಸ್‌ಗಳನ್ನು ತಡೆದು ಶಿವಸೇನೆ ಪ್ರತಿಭಟಿಸಿದ್ದರೆ, ಮತ್ತೊಂದೆಡೆ ಎಂಇಎಸ್ ಕಾರ್ಯಕರ್ತರ ಪುಂಡಾಟ ಖಂಡಿಸಿ ಕರವೇ ಕಾರ್ಯಕರ್ತರು ಬೆಳಗಾವಿ ಜಿಲ್ಲೆಯಲ್ಲಿ ಪ್ರತಿಭಟನೆ ನಡೆಸಿದರು. ಕೊಲ್ಲಾಪುರದಲ್ಲಿ ಕರ್ನಾಟಕ ಬಸ್‌ಗಳನ್ನು ಶಿವಸೇನೆ ತಡೆದಿದ್ದನ್ನು ಖಂಡಿಸಿ ಕರವೇ ಕಾರ್ಯಕರ್ತರು ಅಥಣಿಯಲ್ಲಿ ಮಹಾರಾಷ್ಟ್ರ ಬಸ್‌ಗಳನ್ನು ತಡೆದು ಆಕ್ರೋಶ ವ್ಯಕ್ತಪಡಿಸಿದರು. ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಕರವೇ ಶಿವರಾಮೇಗೌಡ ಬಣದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಇದರಿಂದಾಗಿ ಕರ್ನಾಟಕ- ಮಹಾರಾಷ್ಟ್ರ ಗಡಿಗಳಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.