ಬೆಳಗಾವಿ, ಡಿ.26: ಜಿಲ್ಲೆಯಲ್ಲಿ ಘೋರ ಘಟನೆ ನಡೆದಿದೆ. ಕಾಲುವೆಯಲ್ಲಿ ಈಜಲು ಹೋಗಿದ್ದ ಇಬ್ಬರು ಬಾಲಕರು ನೀರಲ್ಲಿ ಮುಳುಗಿ ಮೃತಪಟ್ಟಿರುವುದು (Belagavi News) ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚುಂಚನೂರು ಬಳಿ ನಡೆದಿದೆ. ಬಸವರಾಜ ಸೋಮಣ್ಣವರ್ (10) ಹಾಗೂ ಹನುಮಂತ (10) ಮೃತ ಬಾಲಕರು. ನೀರಿನ ರಭಸ ಹೆಚ್ಚಾಗಿ ಕಾಲುವೆಯಲ್ಲಿ ಬಾಲಕರು ಕೊಚ್ಚಿ ಹೋಗಿದ್ದಾರೆ.
ಸದ್ಯ ಇಬ್ಬರು ಬಾಲಕರ ಶವಗಳನ್ನು ಸ್ಥಳೀಯರು ಹಾಗೂ ಪೊಲೀಸರು ಹೊರಗಡೆ ತೆಗೆದಿದ್ದು, ಕಟಕೋಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸೀಬರ್ಡ್ ಸ್ಲೀಪರ್ ಬಸ್ ಚಾಲಕ ಚಿಕಿತ್ಸೆ ಫಲಿಸದೇ ಸಾವು
ಚಿತ್ರದುರ್ಗ: ಜಿಲ್ಲೆಯ ಹಿರಿಯೂರು ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ನಡೆದ ಲಾರಿ-ಸೀಬರ್ಡ್ ಸ್ಲೀಪರ್ ಬಸ್ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಖಾಸಗಿ ಬಸ್ ಚಾಲಕ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಇದರಿಂದ ಮೃತಪಟ್ಟವರ ಸಂಖ್ಯೆ 7 ಕ್ಕೆ ಏರಿಕೆಯಾಗಿದೆ. ಖಾಸಗಿ ಬಸ್ ಚಾಲಕ ಮೊಹಮ್ಮದ್ ರಫೀಕ್ (42) ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.
ಹಾವೇರಿ ಜಿಲ್ಲೆ ಶಿಗ್ಗಾಂವಿ ನಿವಾಸಿಯಾಗಿದ್ದ ರಫೀಕ್ ಅಪಘಾತದ ಬಳಿಕ ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ನಿನ್ನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಇಂದು ಬೆಳಗ್ಗೆ ಮೃತಪಟ್ಟಿದ್ದಾರೆ.ಕಿಮ್ಸ್ ಆಸ್ಪತ್ರೆ ಶವಾಗಾರ ಎದುರು ಮೊಹಮದ್ ರಫೀಕ್ ನೆನೆದು ಕುಟುಂಬದವರು ಕಣ್ಣೀರಿಟ್ಟಿದ್ದಾರೆ.
ಆತನೇ ನಮಗೆಲ್ಲ ಆಸರೆಯಾಗಿದ್ದ, ಕುಟುಂಬವನ್ನು ಮುನ್ನಡೆಸುತ್ತಿದ್ದ, ಅಪಘಾತದಲ್ಲಿ ಬದುಕುಳಿದಾಗ ಸ್ವಲ್ಪ ಸಮಾಧಾನ ಆಗಿತ್ತು. ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ನೆನ್ನೆ ಕರೆದುಕೊಂಡು ಬಂದಿದ್ದೆವು. ಆದರೆ ರಾತ್ರಿ ಆಪರೇಷನ್ ಮಾಡುವವರೆಗೂ ಮಾತನಾಡ್ತಾ ಇದ್ದರು. ರಾತ್ರಿ 12:30ಕ್ಕೆ ಆಪರೇಷನ್ ಗೆ ಕರೆದುಕೊಂಡು ಹೋಗಿದ್ದರು. ಆಪರೇಷನ್ ಮುಗಿದ ಮೇಲೆ ಕೇವಲ ಉಸಿರಾಟ ಇತ್ತು. ಆದರೆ ಇದೀಗ ರಫೀಕ್ ಸಾವನ್ನಪ್ಪಿದ್ದಾನೆ ಎಂದು ಅವರ ಸಹೋದರ ತಿಳಿಸಿದ್ದಾರೆ.
ಚಿತ್ರದುರ್ಗದಲ್ಲಿ ತಪ್ಪಿತು ಮತ್ತೊಂದು ಬಸ್ ದುರಂತ; ಪವಾಡ ರೀತಿಯಲ್ಲಿ 43 ಶಾಲಾ ಮಕ್ಕಳು ಪಾರು!
ಅಪಘಾತದಲ್ಲಿ ಮೃತಪಟ್ಟವರ ಕುಟುಂಬಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದಿಂದ 5 ಲಕ್ಷ ರೂಪಾಯಿ ಪರಿಹಾರ ನೀಡಲಾಗುವುದು ಎಂದು ಈಗಾಗಲೇ ಘೋಷಿಸಿದ್ದಾರೆ. ಜೊತೆಗೆ, ಕೇಂದ್ರ ಸರ್ಕಾರದಿಂದ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಡಿ ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ. ಹೀಗಾಗಿ ಮೃತರ ಕುಟುಂಬಗಳಿಗೆ ಒಟ್ಟು 7 ಲಕ್ಷ ರೂಪಾಯಿ ನೆರವು ದೊರೆಯಲಿದೆ.