ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Bellari Firing: ಬಳ್ಳಾರಿ ಗಲಾಟೆ: ಜನಾರ್ದನ ರೆಡ್ಡಿ ಮೇಲೇ ಫೈರಿಂಗ್, ಪೆಟ್ರೋಲ್‌ ಬಾಂಬ್‌ ತಂದಿದ್ರು:‌ ಶ್ರೀರಾಮುಲು ಆರೋಪ

ನಾನು ಮನಸ್ಸು ಮಾಡಿದ್ರೆ ಬಳ್ಳಾರಿ ಭಸ್ಮ ಮಾಡ್ತೇನೆ ಅಂತ ಭರತ್ ರೆಡ್ಡಿ ಹೇಳಿದ್ದಾರೆ. ಯಾವನೋ ಒಬ್ಬ ಪೆಟ್ರೋಲ್ ಬಾಂಬ್ ಎಸೆದಿದ್ದಾನೆ. ಅವರ ಮನೆ ಸುಡ್ತಿದ್ದೆ ಅಂತ ಭರತ್ ರೆಡ್ಡಿ ಅಂದಿದ್ದಾರೆ. ಅದಕ್ಕಾಗಿ ಅವರು ಎಲ್ಲವನ್ನೂ ತಂದಿದ್ದಾರೆ. ಜನಾರ್ದನ ರೆಡ್ಡಿ ಅವರ ಮನೆ ಸುಡ್ತಿದ್ದೆ, ಬಳ್ಳಾರಿಯನ್ನ ಭಸ್ಮ ಮಾಡ್ತೇನೆ ಅನ್ನೋದನ್ನ ಕೇಳಿದ್ರೆ ಪೆಟ್ರೋಲ್ ಬಾಂಬ್ ಅವರೇ ತಂದಿದ್ದು ಎಂದು ಭರತ್ ರೆಡ್ಡಿ ವಿರುದ್ಧ ಶ್ರೀರಾಮುಲು ಗಂಭೀರ ಆರೋಪ ಮಾಡಿದರು.

ಶ್ರೀರಾಮುಲು, ಜನಾರ್ದನ ರೆಡ್ಡಿ

ಬಳ್ಳಾರಿ, ಜ.02: ನಿನ್ನೆ ರಾತ್ರಿ ಬಳ್ಳಾರಿಯಲ್ಲಿ ನಡೆದ ವಾಲ್ಮೀಕಿ ಬ್ಯಾನರ್ ಗಲಾಟೆ (Bellari Firing) ವೇಳೆ ಶಾಸಕ ಜನಾರ್ದನ ರೆಡ್ಡಿ (Janardhna Reddy) ಮೇಲೆಯೇ ಗುಂಡು ಹಾರಿಸಲಾಗಿದೆ. ಯಾವನೋ ಒಬ್ಬ ಪೆಟ್ರೋಲ್ ಬಾಂಬ್ ಎಸೆದ ಎಂದು ಮಾಜಿ ಸಚಿವ ಬಿ ಶ್ರೀರಾಮುಲು (B Sriramulu) ಗಂಭೀರ ಆರೋಪ ಮಾಡಿದ್ದಾರೆ.

ಗಲಾಟೆ ಸಂಬಂಧ ಶಾಸಕ ಗಾಲಿ ಜನಾರ್ದನ ರೆಡ್ಡಿ (Gali Janardhan Reddy) ನಿವಾಸದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶ್ರೀರಾಮುಲು, ನಿನ್ನೆ ಆದ ಘಟನೆ ನಮ್ಮೆಲ್ಲರಿಗೂ ನೋವು ತರಿಸಿದೆ. ಏನು ನಡೆಯಬಾರದಿತ್ತೋ ಅದೆಲ್ಲಾ ನಡೆದು ಹೋಗಿದೆ. ಅಮಾಯಕ ರಾಜಶೇಖರ್ ಅನ್ನೋ ಯುವಕನ ಸಾವಾಗಿದೆ. ಮಗನ ಬಗ್ಗೆ ತಾಯಿ ಕನಸು ಕಟ್ಟಿಕೊಂಡಿದ್ದಳು. ಆ ಯುವಕ ಯಾವುದೇ ಪಾರ್ಟಿಗೆ ಸೇರಿರಲಿ. ಬಿಜೆಪಿ ಆಗಲಿ, ಕಾಂಗ್ರೆಸ್ ಆಗಲಿ. ಫೈರಿಂಗ್‌ನಲ್ಲಿ ರಾಜಶೇಖರ್ ಸಾವಾಗಿದೆ. ರಾಜಶೇಖರ್ ರೆಡ್ಡಿಗೆ ಸಂತಾಪ ಸೂಚಿಸುತ್ತೇನೆ. ಆ ಕುಟುಂಬಕ್ಕೆ ನೋವು ತಡೆಯುವ ಶಕ್ತಿ ಕೊಡಲೆಂದು ದೇವರಲ್ಲಿ ಪ್ರಾರ್ಥನೆ ಮಾಡ್ತೇನೆ ಎಂದು ಬೇಸರ ಹೊರಹಾಕಿದರು.

ಬ್ಯಾನರ್ ಕಟ್ಟೋದು ಬೇಡ ಅಂತ ಹೇಳಿಲ್ಲ. ಕಾರು ಹೋಗೋದಕ್ಕೆ ಜಾಗ ಬಿಟ್ಟು ಕಟ್ಟಲು ಹೇಳಲಾಗಿತ್ತು. ಜಗಳ ಮಾಡಲೇಬೇಕು ಎಂದು ಪ್ಲಾನ್ ಮಾಡಿಕೊಂಡು ಬಂದಿದ್ದಾರೆ. ಜನಾರ್ದನ ರೆಡ್ಡಿ ಬರುವಾಗ ಏಕಾಏಕಿ ಜಗಳ ಆಯ್ತು. ನಾನೂ ಬಂದೆ. ಜನಾರ್ದನ ರೆಡ್ಡಿ ಮೇಲೆ ಗುಂಡು ಹಾರಿತು. ಅಷ್ಟರೊಳಗೆ ಪೊಲೀಸರು ಬಂದು, ಚದುರಿಸಿದರು. ಆಗ ಗುಂಪು ಜಾಸ್ತಿ ಆಗಿ ಘೋಷಣೆಗಳು ಜಾಸ್ತಿ ಆದ್ವು. ಅದಕ್ಕೂ ಮೊದಲು ಸತೀಶ್ ರೆಡ್ಡಿ ಬಾಡಿಗಾರ್ಡ್‌ಗಳು ಸಿನಿಮಾದಲ್ಲಿ ಹೊಡೆದಂತೆ ಬುಲೆಟ್ ಫೈರ್ ಮಾಡಿದರು. ಬಳ್ಳಾರಿಯಲ್ಲಿ 1982ರಲ್ಲಿ ಮಾತ್ರ ಒಂದು ಘಟನೆ ನಡೆದಿತ್ತು. ಆ ರೀತಿಯ ಘಟನೆ ಮತ್ತೆ ಇದೀಗ ನಡೆದಿದೆ. ಜನಾರ್ದನ ರೆಡ್ಡಿ ಅವರ ಮನೆ ಮುಂದೆ ಬ್ಯಾನರ್ ಕಟ್ಟಿ ಗಲಾಟೆ ಮಾಡಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಫೈರಿಂಗ್ ಮಾಡಿದ್ದಾರೆ. ಫೈರಿಂಗ್ ಮಾಡೋದಕ್ಕೆ ಅವಕಾಶ ಯಾರು ಕೊಟ್ಟರು? ಮೇಲ್ನೋಟಕ್ಕೆ ಅವರಿಂದಲೇ ಫೈರಿಂಗ್ ಆಗಿರೋದು ಗೊತ್ತಾಗ್ತಿದೆ ಎಂದು ತಿಳಿಸಿದರು.

Bellary Firing: ಬಳ್ಳಾರಿ ಗಲಾಟೆ ಪ್ರಕರಣ: ಜನಾರ್ದನ ರೆಡ್ಡಿ, ಶ್ರೀರಾಮುಲು ಮೇಲೆ ಎಫ್‌ಐಆರ್

ಮಳೆ ಸುರಿಸಿದಂತೆ ಕಲ್ಲು ಸುರಿಸಿದ್ದಾರೆ. ನಮ್ಮ ಕಾರ್ಯಕರ್ತರು, ಮುಖಂಡರು ಗಾಯಗೊಂಡಿದ್ದಾರೆ. ಈಗಾಗಲೇ ನಮ್ಮವರನ್ನ ಡಿಸ್ಚಾರ್ಜ್ ಮಾಡಿದ್ದಾರೆ. ಅವರು ಕಲ್ಲು ತೂರಾಟ ಮಾಡಿದಾಗ, ನಮ್ಮವರೂ ಕಲ್ಲು ತೂರಿದ್ದಾರೆ. ಅವರ ಗನ್‌ಮ್ಯಾನ್‌ಗಳೇ ಗುಂಡು ಹಾರಿಸಿದ್ದಾರೆ. ಸತೀಶ್ ರೆಡ್ಡಿ ಹಾಲಿ, ಮಾಜಿ ಶಾಸಕನೂ ಅಲ್ಲ. ಬಿಹಾರ ಮಾದರಿಯಲ್ಲಿ ಸತೀಶ್ ರೆಡ್ಡಿ ಗನ್ ಇಟ್ಕೊಂಡಿದ್ದಾನೆ. ಎಷ್ಟು ದೌರ್ಜನ್ಯ ಇವರದ್ದು? ಆ ರೀತಿ ಫೈರ್ ಮಾಡುತ್ತಾ ಹೋದ್ರೆ ಏನ್ ಮಾಡೋದಕ್ಕೆ ಆಗ್ತದೆ? ಹಾಗಾಗಿ ಕಾರ್ಯಕರ್ತರೆಲ್ಲರೂ ಒಂದೆಡೆ ಸೇರಿದ್ದಾರೆ. ಆದ್ರೂ ನಾವು ಶಾಂತಿ, ಕಾನೂನು ಸುವ್ಯವಸ್ಥೆ ಹಾಳಾಗಬಾರದು ಎಂದು ಹೇಳಿದ್ದೇವೆ. ಸತ್ಯವನ್ನು ಯಾರೂ ಮುಚ್ಚಿಡಲು ಆಗಲ್ಲ. ಕೆಟ್ಟ ಕೆಲಸ ಮಾಡಿದ ದಿನ ರಾಜಕಾರಣದಲ್ಲಿ ಇರೋದಿಲ್ಲ. ಶಾಂತವಾಗಿರುವ ಊರಲ್ಲಿ ಈ ರೀತಿ ದೌರ್ಜನ್ಯ ಮಾಡಿ, ಫೈರಿಂಗ್ ಮಾಡೋದು ಅಂದ್ರೆ ಏನು? ಇದು ಪೋಲಿಸರಿಂದ ಆಗಿರೋ ಫೈರಿಂಗ್ ಅಲ್ಲ. ಖಾಸಗಿ ವ್ಯಕ್ತಿಯಿಂದ ಆಗಿರೋದು. ನಮ್ಮ ತಾಯಿ-ತಂದೆ ಅದನ್ನ ಕಲಿಸಿಲ್ಲ. ಧರ್ಮದ ಪರವಾಗಿ ನಾವಿರುವವರು. ಯಾರ ಗನ್‌ನಿಂದ ಯಾರು ಹಾರಿಸಿದ್ದಾರೆ ಅದನ್ನ ಪತ್ತೆ ಹಚ್ಚಲು ಹೇಳಿದ್ದೇನೆ. ನಮ್ಮ ಗನ್‌ಮ್ಯಾನ್ ಬಳಿಯ ಬುಲೆಟ್‌ಗಳನ್ನೂ ಲೆಕ್ಕ ಮಾಡಲಿ. ಕೂಡಲೇ ಎಫ್‌ಎಸ್‌ಎಲ್ ಕೊಡಿ ಎಂದು ಮನವಿ ಮಾಡಿದರು.

ನಾನು ಮನಸ್ಸು ಮಾಡಿದ್ರೆ ಬಳ್ಳಾರಿ ಭಸ್ಮ ಮಾಡ್ತೇನೆ ಅಂತ ಭರತ್ ರೆಡ್ಡಿ ಹೇಳಿದ್ದಾರೆ. ಯಾವನೋ ಒಬ್ಬ ಪೆಟ್ರೋಲ್ ಬಾಂಬ್ ಎಸೆದಿದ್ದಾನೆ. ಅವರ ಮನೆ ಸುಡ್ತಿದ್ದೆ ಅಂತ ಭರತ್ ರೆಡ್ಡಿ ಅಂದಿದ್ದಾರೆ. ಅದಕ್ಕಾಗಿ ಅವರು ಎಲ್ಲವನ್ನೂ ತಂದಿದ್ದಾರೆ. ಜನಾರ್ದನ ರೆಡ್ಡಿ ಅವರ ಮನೆ ಸುಡ್ತಿದ್ದೆ, ಬಳ್ಳಾರಿಯನ್ನ ಭಸ್ಮ ಮಾಡ್ತೇನೆ ಅನ್ನೋದನ್ನ ಕೇಳಿದ್ರೆ ಪೆಟ್ರೋಲ್ ಬಾಂಬ್ ಅವರೇ ತಂದಿದ್ದು ಎಂದು ಭರತ್ ರೆಡ್ಡಿ ವಿರುದ್ಧ ಗಂಭೀರ ಆರೋಪ ಮಾಡಿದರು.

ಬ್ಯಾನರ್‌ ಅಳವಡಿಕೆ ವಿಚಾರದಲ್ಲಿ ಜನಾರ್ದನ ರೆಡ್ಡಿ ಮನೆ ಮುಂದೆ ಬಿಜೆಪಿ-ಕಾಂಗ್ರೆಸ್‌ ಕಾರ್ಯಕರ್ತರ ಮಧ್ಯೆ ಗಲಾಟೆ; ಓರ್ವ ಸಾವು

ಈ ಘಟನೆಯಲ್ಲಿ ವಾಲ್ಮೀಕಿ ಮಹರ್ಷಿಗಳನ್ನು ತರೋದು ಬೇಡ. ಒಂದು ಜಾತಿಯನ್ನ ಇದರಲ್ಲಿ ಯಾಕ್ ತರ್ತೀರಿ? ಮೂರ್ತಿ ಪ್ರತಿಷ್ಟಾಪನೆಗೆ ಯಾರೂ ಬೇಡ ಅನ್ನಲ್ಲ. ನಿಮ್ಮ ಸ್ವಾರ್ಥಕ್ಕಾಗಿ ವಿರೋಧ ಮಾಡ್ತಾರೆ ಅನ್ನೋದು ಸರಿಯಲ್ಲ. ರಾಜಕೀಯ ನಿಂತ ನೀರಲ್ಲ, ಹರಿಯುವ ನೀರು. ರಾಜಕೀಯ ಶಾಶ್ವತ ಅಲ್ಲ. ಅವರ ಕಲ್ಚರ್ ಏನೇ ಇರಲಿ, ಏನೇ ಭಾಷೆ ಬಳಸಲಿ. ಶಾಂತಿಗೆ ನಾವು ಗೌರವ ಕೊಟ್ಕೊಂಡು ಬಂದಿದ್ದೇವೆ. ಅಮಾಯಕನ ಸಾವಾಯ್ತು, ಯಾರು ಜವಾಬ್ದಾರರು? ಶಕ್ತಿ ಪ್ರದರ್ಶನ ಚುನಾವಣೆಯಲ್ಲಿ ಮಾತ್ರ ಇರಲಿ ಎಂದು ಗುಡುಗಿದರು.

ಕೂಡಲೇ ಘಟನೆಯ ತನಿಖೆ ಮಾಡಲಿ. ಸಿಟ್ಟಿಂಗ್ ಹೈಕೋರ್ಟ್ ಜಡ್ಜ್ ಅವರಿಂದ ತನಿಖೆ ಮಾಡ್ಸಿ. ನಾವು ಎಲ್ಲೂ ಓಡಿ ಹೋಗಲ್ಲ. ನಿರೀಕ್ಷಣಾ ಜಾಮೀನು ಅದೆಲ್ಲಾ ತಗೋಳಲ್ಲ. ಪೊಲೀಸರು ನಮ್ಮನ್ನು ರಕ್ಷಣೆ ಮಾಡಿದ್ದಾರೆ. ಸಿಟ್ಟಿಂಗ್ ಜಡ್ಜ್ ಅವರಿಂದ ಆಗದೇ ಇದ್ರೆ ಸಿಬಿಐ ತನಿಖೆ ಆಗಲಿ. ನೀವು ಜಗಳ ಮಾಡಬೇಕು ಅನ್ಕೊಂಡ್ರೆ ನಾವೇನ್ ಮಾಡೋದಕ್ಕೆ ಆಗ್ತದೆ. ಗೆದ್ದಾಗಿನಿಂದಲೂ ಜನಾರ್ದನ ರೆಡ್ಡಿ ಅವರಿಗೆ ತೊಂದ್ರೆ ಕೊಡ್ತಿದ್ದೀರಿ. ಎಷ್ಟು ದಿನಗಳ ಕಾಲ ಕೈ ಕಟ್ಟಿ ಕೂರೋದಕ್ಕೆ ಆಗುತ್ತೆ? ನಮ್ಮ ಪಾರ್ಟಿಯ ಶಾಸಕರು ಅವರು. ಅವರ ಪರವಾಗಿ ನಾವು ನಿಂತಿದ್ದೇವೆ. ಇದಕ್ಕೆ ಏನೋ ಒಂದು ಬಣ್ಣ ಹಚ್ಚಲು ಹೋಗಬೇಡಿ ಎಂದು ವಾಗ್ದಾಳಿ ನಡೆಸಿದರು.

ಭರತ್ ರೆಡ್ಡಿಗೆ ನಾನು ಮನವಿ ಮಾಡೋದು ಒಂದೇ. ನಿಮಗೆ ಉಜ್ವಲ ಭವಿಷ್ಯ ಇದೆ. ಇನ್ನೂ ವಯಸ್ಸು ಸಣ್ಣದಿದೆ. ಈ ಸ್ಪೀಡ್ ಒಳ್ಳೆಯದಲ್ಲ, ಆಕ್ಸಿಡೆಂಟ್ ಆಗುತ್ತೆ ಎಂದು ರಾಮುಲು ಎಚ್ಚರಿಸಿದ್ದಾರೆ. ಅಲ್ಲದೇ, ಪಕ್ಷ ಹಾಗೂ ಜನಾರ್ದನ ರೆಡ್ಡಿ ಪರವಾಗಿ ಟೊಂಕ ಕಟ್ಟಿ ನಿಲ್ತೇವೆ. ನಮ್ಮ ಮನೆ ಮುಂದೆ ಶವ ಇಟ್ಟು ಪ್ರತಿಭಟನೆ ಮಾಡ್ತೇವೆ ಎಂದಿದ್ರಂತೆ. ಬನ್ನಿ ಯಾರು ಬೇಡ ಅಂತಾರೆ. ನೀವೇ ಗುಂಡು ಹಾರಿಸಿದ್ದೀರಿ. ಇದರಲ್ಲಿ ನಮ್ಮದೇನಿದೆ. ಈ ರೀತಿಯ ಗೂಂಡಾಗಿರಿ ದೌರ್ಜನ್ಯ ಬಹಳ ದಿನ ನಡೆಯಲ್ಲ. ಇದಕ್ಕೆ ನಾವೇನೂ ಭಯ ಬೀಳಲ್ಲ. ತನಿಖೆ ಆಗಬೇಕು, ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದರು.

ನೀವು ಯಾವಾಗ ಹೇಳ್ತೀರಿ, ಆಗ ನಾನೇ ಅಲ್ಲಿಗೆ ಬರ್ತೀನಿ. ಜನಾರ್ದನ ರೆಡ್ಡಿ ಹಾಗೂ ಸೋಮಶೇಖರ್ ರೆಡ್ಡಿ ಇಬ್ಬರನ್ನೂ ಕರೆದುಕೊಂಡು ಬರ್ತೀನಿ. ಕಾನೂನು ಸಲಹೆಗಾರರ ಜೊತೆ ಈಗಾಗಲೇ ಮಾತಾಡಿದ್ದೇವೆ. ಜನಾರ್ದನ ರೆಡ್ಡಿ ಅವರೂ ಕೇಸ್ ದಾಖಲಿಸುವುದಾಗಿ ಹೇಳಿದ್ದಾರೆ. ನಮ್ಮ ಕಡೆಯಿಂದ ಒಂದು ಸಣ್ಣ ತಪ್ಪೂ ನಡೆದಿಲ್ಲ. ಅವರ ಪ್ಲಾನ್ ಫೇಲಾದಾಗ ನಮ್ಮ ತಲೆಗೆ ಕಟ್ಟುವ ಕೆಲಸ ಮಾಡ್ತಿದ್ದಾರೆ. ಆ ಬುಲೆಟ್ ತೆಗೆದು ತನಿಖೆ ಮಾಡಲಿ ಎಂದು ತಿಳಿಸಿದರು.

ಹರೀಶ್‌ ಕೇರ

View all posts by this author