ಬೆಂಗಳೂರು: ಪರಿಸರ ಕಾಯಿದೆ ಉಲ್ಲಂಘನೆ ಹಿನ್ನೆಲೆಯಲ್ಲಿ ಬಿಗ್ ಬಾಸ್ ಸೀಸನ್ 12 (Bigg Boss Kannada 12 reality Show) ಕಾರ್ಯಕ್ರಮ ಮುಚ್ಬಲು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ಜಾರಿ ಮಾಡಲಾಗಿದೆ. ʼಕಾನೂನಿಗಿಂತ ಯಾರೂ ದೊಡ್ಡವರಲ್ಲ. ಪರಿಸರ ಕಾಯಿದೆ ಉಲ್ಲಂಘಿಸಿದರೆ ಕ್ರಮ ಅನಿವಾರ್ಯʼ ಎಂದು ರಾಜ್ಯ ಪರಿಸರ ಮತ್ತು ಅರಣ್ಯ ಸಚಿವ ಈಶ್ವರ ಖಂಡ್ರೆ (Minister Eshwar Khandre) ಹೇಳಿದ್ದಾರೆ.
ಅವರು ಈ ಕುರಿತು ಸೋಶಿಯಲ್ ಮೀಡಿಯಾ ಎಕ್ಸ್‌ನಲ್ಲಿ ಹೀಗೆ ಬರೆದುಕೊಂಡಿದ್ದಾರೆ:
ಪರಿಸರ ಕಾಯಿದೆ ಉಲ್ಲಂಘನೆ ಹಿನ್ನಲೆಯಲ್ಲಿ ಬಿಗ್ ಬಾಸ್ ಸೀಸನ್ 12 ಕಾರ್ಯಕ್ರಮ ಮುಚ್ಬಲು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ಜಾರಿ.
ರಾಮನಗರ ಜಿಲ್ಲೆಯ ಬಿಡದಿ ಬಳಿ ಇರುವ ವೆಲ್ಸ್ ಸ್ಟುಡಿಯೋಸ್ ಅಂಡ್ ಎಂಟರ್‌ಟೈನ್ಮೆಂಟ್ ಪ್ರೈ. ಲಿ. (ಜಾಲಿವುಡ್ ಸ್ಟುಡಿಯೋ) ಸಂಸ್ಥೆಗೆ ಜಲ ಕಾಯಿದೆ ಹಾಗೂ ವಾಯು ಕಾಯಿದೆಯಡಿ ಅಗತ್ಯ ಅನುಮತಿಗಳನ್ನು ಪಡೆಯದೆ ಕಾರ್ಯಾಚರಣೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ನೋಟಿಸ್ ನೀಡಲಾಗಿದೆ.
ಇದನ್ನೂ ಓದಿ: Bigg Boss Kannada 12: ಬಿಗ್‌ಬಾಸ್ ಸ್ಪರ್ಧಿಗಳು ಬಿಡದಿಯ ಖಾಸಗಿ ರೆಸಾರ್ಟ್‌ಗೆ ಶಿಫ್ಟ್
ಬಿಗ್ ಬಾಸ್ ಕಾರ್ಯಕ್ರಮ ನಡೆಯುತ್ತಿರುವ ಈ ಸ್ಟುಡಿಯೋಗೆ ಮಂಡಳಿ ಈಗಾಗಲೇ ಎರಡು ಬಾರಿ ನೋಟಿಸ್ ನೀಡಿದ್ದರೂ ಅನುಪಾಲನೆ ಆಗದ ಕಾರಣ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಎಸ್.ಟಿ.ಪಿ. ಸರಿಯಾಗಿ ಕಾರ್ಯನಿರ್ವಹಿಸದಿರುವುದು, ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿಲ್ಲದಿರುವುದು ಹಾಗೂ ಜನರೇಟರ್‌ಗಳಿಗೂ ಅಗತ್ಯ ಅನುಮತಿ ಇಲ್ಲದಿರುವುದು ಗಮನಕ್ಕೆ ಬಂದಿದೆ.
ಕಾನೂನಿಗಿಂತ ಯಾರೂ ದೊಡ್ಡವರಲ್ಲ. ಪರಿಸರ ಕಾಯಿದೆ ಉಲ್ಲಂಘಿಸಿದರೆ ಕ್ರಮ ಅನಿವಾರ್ಯ.
ಬಿಗ್ ಬಾಸ್ ಶೋ ಸ್ಥಗಿತ?
ಕನ್ನಡ ಬಿಗ್ ಬಾಸ್ ನಡೆಯುತ್ತಿದ್ದ ಜಾಲಿವುಡ್ ಡೇಸ್‌ಗೆ ಪರಿಸರ ನಿಯಮ ಉಲ್ಲಂಘನೆ ಆರೋಪದಡಿ ಇಲಾಖೆಯಿಂದ ನೋಟಿಸ್ ನೀಡಲಾಗಿತ್ತು. ಈ ನೋಟಿಸ್‌ಗೆ ಯಾವುದೇ ಪ್ರತಿಕ್ರಿಯೆ ನೀಡದ ಪರಿಣಾಮ, ಬಿಗ್ ಬಾಸ್ ಮನೆಗೆ ಬೀಗವನ್ನು ಜಡಿಯಲಾಗಿದೆ. ನಿನ್ನೆ ಬೆಂಗಳೂರಿನ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಇರುವ ಜಾಲಿವುಡ್ ಸ್ಟುಡಿಯೋಸ್‌ಗೆ ರಾಮನಗರ ತಹಶೀಲ್ದಾರ್, ಪೊಲೀಸರು ಭೇಟಿ ನೀಡಿದ್ದರು. ಜಾಲಿವುಡ್ ಸ್ಟುಡಿಯೋಸ್ ಒಳಗೆ ಪ್ರವೇಶಿಸಿದ ತಹಶೀಲ್ದಾರ್, ಒಳಗೆ ಇರುವವರನ್ನು ಹೊರ ಕಳುಹಿಸುವಂತೆ ಸೂಚಿಸಿದ್ದರು.
ಈ ಬಳಿಕ ರಾಮನಗರ ತಹಶೀಲ್ದಾರ್, ಪೊಲೀಸರ ಸಮ್ಮುಖದಲ್ಲಿ ಜಾಲಿವುಡ್ ಸ್ಟುಡಿಯೋಗೆ ಬೀಗ ಜಡಿಯಲಾಗಿದೆ. ಜಾಲಿವುಡ್ ಸ್ಟುಡಿಯೋಸ್ ಮತ್ತು ಎಂಟರ್ಟೈನ್ಮೆಂಟ್ ಪ್ರೈವೆಟ್ ಲಿಮಿಟೆಡ್‌ಗೆ ಬೀಗಮುದ್ರೆ ಹಾಕಲಾಗಿದೆ. ಇಲ್ಲಿದ್ದ ಎಲ್ಲ ಸ್ಪರ್ಧಿಗಳನ್ನು ಇನ್ನೋವಾ ಕಾರಿನ ಮೂಲಕ ರಾಮನಗರ ತಾಲೂಕಿನ ಬಿಡದಿ ಪಕ್ಕದಲ್ಲಿರುವ ಈಗಲ್ ಟನ್ ರೆಸಾರ್ಟ್‌ಗೆ ಶಿಫ್ಟ್ ಮಾಡಲಾಗಿದೆ. ಈ ರೆಸಾರ್ಟ್ನಲ್ಲಿ 12 ರೂಮ್ ಬುಕ್ ಮಾಡಲಾಗಿದೆ ಎಂಬ ಮಾಹಿತಿ ಇದೆ.