ನೆಲಮಂಗಲ, ಡಿ. 8: ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ವತಿಯಿಂದ ನೆಲಮಂಗಲದಲ್ಲಿ ಸೋಮವಾರ ಬೃಹತ್ ಪ್ರತಿಭಟನೆ (BJP Protest) ನಡೆಸಲಾಯಿತು. ಬೆಂಗಳೂರು ಗ್ರಾಮಾಂತರ ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಕೆ.ಪಿ. ಭೃಂಗೀಶ್ ಅವರ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ರೈತರು ತಮ್ಮ ಎತ್ತಿನ ಗಾಡಿಗಳು ಮತ್ತು ಟ್ಯ್ರಾಕ್ಟರ್‌ಗಳ ಮೂಲಕ ಆಗಮಿಸಿ, ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ರೈತರ ಬೇಡಿಕೆಗಳೇನು?
ಸ್ಥಳೀಯವಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆ ಬಮುಲ್‌ನಲ್ಲಿ ಶೀಘ್ರವಾಗಿ 5ರಿಂದ 10 ರೂ.ಗಳವರೆಗೆ ಹಾಲಿನ ಧರ ಏರಿಕೆ ಪ್ರೋತ್ಸಾಹಧನ ರೈತರಿಗೆ ನೀಡಬೇಕು. ಹೊಸಕೋಟೆ, ನೆಲಮಂಗಲ, ದೊಡ್ಡಬಳ್ಳಾಪುರ, ದೇವನಹಳ್ಳಿ ತಾಲೂಕುಗಳಲ್ಲಿ ಸುಸಜ್ಜಿತವಾದ ರೈತ ನೇರ ಮಾರುಕಟ್ಟೆಯನ್ನು ರೈತರಿಗೆ ಒದಗಿಸಿಕೊಡಬೇಕು.
ಮಾವು ಮತ್ತು ತೆಂಗು ಬೆಳೆಗಾರರಿಗೆ ರೈತರ ನೇರ ಮಾರಾಟಕ್ಕೆ ಅನುಕೂಲವಾಗುವಂತೆ ಮಾರುಕಟ್ಟೆ ವ್ಯವಸ್ಥೆ ಮಾಡುವುದು. ನೆಲಮಂಗಲ ತಾಲೂಕಿನ ದಾಬಸ್‌ಪೇಟೆಯಲ್ಲಿ ರೈತರು ಬೆಳೆದ ಬೆಳೆಗಳಿಗೆ, ತರಕಾರಿಗಳಿಗೆ ಅನುಕೂಲವಾಗುವಂತೆ ಶೀಥಲೀಕರಣ ಕೇಂದ್ರ ನಿರ್ಮಿಸಬೇಕು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳಲ್ಲಿ ಕೆರೆಗಳ ಹೂಳು ತೆಗೆಯುವ ಕಾರ್ಯ ಕೈಗೊಂಡು ನೀರು ತುಂಬುವಂತೆ ಮಾಡಬೇಕು.
ನಮ್ಮ ಮೆಟ್ರೋ ಹಳದಿ ಮಾರ್ಗಕ್ಕೆ ಇನ್ನಷ್ಟು ರೈಲು, ಬಿಇಎಂಎಲ್ ಜೊತೆ ಒಪ್ಪಂದ
ಬೆಂ.ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ರೇಷ್ಮೆ ಕೇಂದ್ರವನ್ನು ಅಭಿವೃದ್ಧಿ ಪಡಿಸುವುದು, ಬೆಂಗಳೂರು ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳಿಗೆ ಕುಡಿಯುವ ನೀರಿನ ಅನುಕೂಲಕ್ಕೆ ಅಂದರೆ ಎತ್ತಿನಹೊಳೆ ಅಥವಾ ಹೇಮಾವತಿ ನದಿಯ ನೀರನ್ನು ಹರಿಸಿ ಶೀಘ್ರಗತಿಯಲ್ಲಿ ಜನಸಾಮಾನ್ಯರಿಗೆ ಮತ್ತು ರೈತರ ವ್ಯವಸಾಯಕ್ಕೆ ಉಪಯೋಗಿಸಲು ಅನುಕೂಲ ಮಾಡಿಕೊಡಬೇಕು. ಬೆಂ.ಗ್ರಾಮಾಂತರ ಜಿಲ್ಲೆಯಲ್ಲಿ ಪಶು ಆಹಾರ ಘಟಕವನ್ನು ಶೀಘ್ರವೇ ನಿರ್ಮಿಸಬೇಕು, ಬೆಂ.ಗ್ರಾಮಾಂತರ ಜಿಲ್ಲೆಯ 4 ತಾಲೂಕುಗಳಲ್ಲಿ ರೈತರು ಬೆಳೆದ ರಾಗಿ ಅಕಾಲಿಕ ಮಳೆಯಿಂದ ಹಾಳಾಗಿದ್ದು, ಇದಕ್ಕೆ ತಕ್ಷಣ ಸೂಕ್ತ ಪರಿಹಾರ ನೀಡಬೇಕು.ರಾಗಿ ಖರೀದಿ ಕೇಂದ್ರ ಹಾಗೂ ನಂದಿನಿ ಉತ್ಪನ್ನಗಳ ಮಾರಾಟ ಕೇಂದ್ರಗಳನ್ನು ಸ್ಥಾಪಿಸಬೇಕು ಎಂಬುವುದು ಸೇರಿ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ರೈತರು ಒತ್ತಾಯಿಸಿದ್ದಾರೆ.
ಇದೇ ವೇಳೆ ಬೆಂಗಳೂರು ಗ್ರಾಮಾಂತರ ಬಿಜೆಪಿ ರೈತ ಮೋರ್ಚಾ ವತಿಯಿಂದ ನೆಲಮಂಗಲ ತಹಸೀಲ್ದಾರ್ ಮಲ್ಲೇಶ್ ಪೂಜಾರ್ ಅವರ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಲಾಯಿತು.