ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಡಿಕೆಶಿ ಸಿಎಂ ಆಗಿರುವುದನ್ನು ಸಹಿಸಲಾಗದೇ ಬಿಡದಿ ಟೌನ್‌ಶಿಪ್‌ಗೆ ಜೆಡಿಎಸ್, ಬಿಜೆಪಿ ನಾಯಕರ ವಿರೋಧ: ಶಾಸಕ ಬಾಲಕೃಷ್ಣ ಕಿಡಿ

ಬಿಜೆಪಿ ನಾಯಕರ ನಿಯೋಗ ಬಿಡದಿಗೆ ಭೇಟಿ ನೀಡಿ ಬಿಡದಿ ಟೌನ್ ಶಿಪ್ ವಿರುದ್ಧ ಹೋರಾಟ ಮಾಡಿರುವ ಬಗ್ಗೆ ಮಾಗಡಿ ಶಾಸಕ ಎಚ್‌.ಸಿ.ಬಾಲಕೃಷ್ಣ ಪ್ರತಿಕ್ರಿಯಿಸಿದ್ದಾರೆ. ಟೌನ್ ಶಿಪ್ ಯೋಜನೆಯನ್ನು ಡಿ.ಕೆ. ಶಿವಕುಮಾರ್ ಸಿಎಂ ಆದ ಬಳಿಕ ಕೈಗೊಂಡ ಯೋಜನೆಯಲ್ಲ. ಈ ವಿಚಾರವಾಗಿ ವಿಜಯೇಂದ್ರ ಅವರ ಜೊತೆಗೆ ಚರ್ಚೆ ಮಾಡಲು ನಾನು ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.

ಮಾಗಡಿ ಶಾಸಕ ಎಚ್‌.ಸಿ.ಬಾಲಕೃಷ್ಣ

ಬಿಡದಿ, ಜೂ.17: “ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಲೂ ಬಿಡದಿ ಟೌನ್‌ಶಿಪ್‌ಗೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿತ್ತು. ಆಗಲೂ ಕೆಲ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದರು. ಆಗ ಕುಮಾರಸ್ವಾಮಿ, ಆರ್. ಅಶೋಕ್ ಅವರು ಯಾಕೆ ರೈತರ ಪರ ಹೋರಾಟಕ್ಕೆ ಬರಲಿಲ್ಲ? ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗಿರುವುದನ್ನು ಸಹಿಸಲಾಗದೇ ಅವರನ್ನು ರಾಜಕೀಯವಾಗಿ ಹಣಿಯಲು ವಿರೋಧ ಪಕ್ಷದವರು ಹೋರಾಟ ಮಾಡುತ್ತಿದ್ದಾರೆ” ಎಂದು ಶಾಸಕರಾದ ಬಾಲಕೃಷ್ಣ ಕಿಡಿಕಾರಿದ್ದಾರೆ.

ಬಿಜೆಪಿ ನಾಯಕರ ನಿಯೋಗ ಬಿಡದಿಗೆ ಭೇಟಿ ನೀಡಿ ಟೌನ್‌ಶಿಪ್ ವಿರುದ್ಧ ಹೋರಾಟ ಮಾಡಿರುವ ಬಗ್ಗೆ ಬಿಡದಿಯ ರೆಸಾರ್ಟ್ ಬಳಿ ಪ್ರತಿಕ್ರಿಯಿಸಿರುವ ಅವರು, ಜಗದೀಶ್ ಶೆಟ್ಟರ್ ಅವರು ಕೆಐಎಡಿಬಿ ಸಚಿವರಾಗಿದ್ದಾಗ 1 ಸಾವಿರ ಎಕರೆ ಜಾಗ ಸ್ವಾಧೀನಪಡಿಸಿಕೊಳ್ಳಲು ಮುಂದಾದಾಗ ನಾನು ಹೊಸೂರು ಭಾಗದಲ್ಲಿ ಮಾಧ್ಯಮಗೋಷ್ಠಿ ಮಾಡಿ, "ತೆಗೆದುಕೊಳ್ಳುವುದಾದರೆ ಪೂರ್ತಿ ಜಾಗ ಸ್ವಾಧೀನಪಡಿಸಿಕೊಳ್ಳಿ. ಕೇವಲ 1 ಸಾವಿರ ಎಕರೆ ಮಾತ್ರ ಸ್ವಾಧೀನ ಪಡಿಸಿಕೊಂಡು ಉಳಿದ ಜಾಗ ಹಾಗೆ ರೆಡ್ ಜೋನ್ ನಲ್ಲಿ ಇಡುವುದು ಸೂಕ್ತವಲ್ಲ ಎಂದು ಧ್ವನಿ ಎತ್ತಿದಾಗ, ಆ ಭಾಗದ ರೈತರು ಸ್ಪಂದಿಸಲಿಲ್ಲ” ಎಂದರು.

“ನಂತರ ಯಡಿಯೂರಪ್ಪ ಅವರಿಗೆ ಮನವಿ ಕೊಟ್ಟಾಗ, ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಯಡಿಯೂರಪ್ಪ ಅವರು ವಿಜಯೇಂದ್ರ ಅವರ ಜೊತೆ ಮಾತನಾಡಿದೆವು. ಆಗ ವಿಜಯೇಂದ್ರ ಅವರು ನಮ್ಮನ್ನು ಕರೆದು, ನೀವು ಹೋರಾಟ ಮಾಡಬೇಡಿ, ಕಾನೂನಾತ್ಮಕವಾಗಿ ಉತ್ತಮ ಬೆಲೆ ಕೊಡಿಸುತ್ತೇವೆ. ಇಲ್ಲಿ ಏರೋನಾಟಿಕಲ್ ಗೆ ಸಂಬಂಧಿಸಿದ ಕೈಗಾರಿಕೆ ತರುವ ಆಲೋಚನೆ ಮಾಡಿದ್ದೇವೆ. ನೀವು ಸಹಕಾರ ನೀಡಿ ಎಂದು ನನಗೆ ಹೇಳಿದ್ದರು. ಬೇಕಾದರೆ ಅವರು ಹಾಗೇ ಹೇಳಿದ್ದರ ಇಲ್ಲವಾ ಎಂದು ವಿಜಯೇಂದ್ರ ಅವರು ಹೇಳಬೇಕು” ಎಂದರು. ಅವರನ್ನು ತಾವು ಭೇಟಿಯಾಗಿದ್ದ ಫೋಟೋಗಳನ್ನು ಬಹಿರಂಗಪಡಿಸಿದರು.

Bidadi Township: ಬಿಡದಿ ಟೌನ್‌ಶಿಪ್‌ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ: ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್

ಬಿಜೆಪಿಯಿಂದ ಅವಕಾಶವಾದಿ ರಾಜಕಾರಣ

“ಡಿ.ಕೆ. ಶಿವಕುಮಾರ್ ಅವರಿಗೆ ರಾಜಕೀಯ ವಿರೋಧ ಮಾಡುವುದಾದರೆ ಮಾಡಲಿ, ನನ್ನ ತಕರಾರಿಲ್ಲ. ಆದರೆ ವಿಜಯೇಂದ್ರ ಅವರು ಅಂದು ಆ ರೀತಿ ಮಾತನಾಡಿ, ಇಂದು ಯಾವ ಮನಸ್ಥಿತಿಯಲ್ಲಿ ಹೋರಾಟ ಮಾಡುತ್ತಾರೆ? ಅಶ್ವತ್ಥ್ ನಾರಾಯಣ ಅವರು ಹಾಗೂ ಆಗಿನ ಶಾಸಕರು ಈ ಬಗ್ಗೆ ಯಾವುದೇ ರೀತಿ ಪ್ರತಿಕ್ರಿಯೆ ನೀಡಿರಲಿಲ್ಲ. ಬಿಜೆಪಿಯವರು ಅಂದು ಮನಸ್ಸು ಮಾಡಿದ್ದರೆ ಈ ಯೋಜನೆ ಕೈಬಿಡಬಹುದಾಗಿತ್ತಲ್ಲವೇ? ರೈತರು ಇಷ್ಟು ಗಲಾಟೆ ಮಾಡುವ ಅಗತ್ಯವೇ ಇರುತ್ತಿರಲಿಲ್ಲ. ಇಂದು ರಾಜಕೀಯವಾಗಿ ವಿರೋಧ ಮಾಡಲು ಬಂದಿದ್ದಾರೆ. ಇಲ್ಲಿ ಅವಕಾಶವಾದ ರಾಜಕಾರಣ ಮಾಡುತ್ತಿದ್ದಾರೆ” ಎಂದು ತಿರುಗೇಟು ನೀಡಿದರು.

“ಈ ಯೋಜನೆ ಡಿ.ಕೆ. ಶಿವಕುಮಾರ್ ಅವರು ಪ್ರಾರಂಭ ಮಾಡಿರುವುದಲ್ಲ. ಕುಮಾರಸ್ವಾಮಿ ಅವರು ಪ್ರಾರಂಭ ಮಾಡಿದ್ದರು. ನಮ್ಮ ಸರ್ಕಾರ ಬಂದ ಮೇಲೆ ರೈತರು ರೆಡ್ ಜೋನ್ ತೆಗೆಯಿರಿ ಅಥವಾ ಪರಿಹಾರ ನೀಡಿ ಎಂದು ಮನವಿ ಮಾಡಿದ ಕಾರಣಕ್ಕೆ ಈ ಯೋಜನೆಗೆ ಚಾಲನೆ ನೀಡಲಾಯಿತು. ಇದು ಡಿ.ಕೆ. ಶಿವಕುಮಾರ್ ಸಿಎಂ ಆದ ಬಳಿಕ ಕೈಗೊಂಡ ಯೋಜನೆಯಲ್ಲ. ಈ ವಿಚಾರವಾಗಿ ವಿಜಯೇಂದ್ರ ಅವರ ಜೊತೆಗೆ ಚರ್ಚೆ ಮಾಡಲು ನಾನು ಸಿದ್ಧನಿದ್ದೇನೆ” ಎಂದರು.

ಆ 1 ಸಾವಿರ ಎಕರೆ ಟೌನ್ ಶಿಪ್ ಜಾಗವೇ ಅಥವಾ ಅದರ ಹೊರಗಿನ ಜಾಗವೇ ಎಂದು ಕೇಳಿದಾಗ, “ಅದು ಟೌನ್ ಶಿಪ್ ಜಾಗವೆ. ಟೌನ್ ಶಿಪ್ ವ್ಯಾಪ್ತಿಯ 1 ಸಾವಿರ ಎಕರೆ ಜೊತೆಗೆ ಅದರ ಪಕ್ಕದಲ್ಲಿ ಬೇರೆ 1 ಸಾವಿರ ಎಕರೆಯನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ. ಅಂದು ಪ್ರತಿ ಎಕರೆಗೆ 90 ಲಕ್ಷದಿಂದ 1 ಕೋಟಿ ವರೆಗೆ ಪರಿಹಾರ ನೀಡಿದ್ದರು. ಇದಾಗಿ ಕೇವಲ ನಾಲ್ಕೈದು ವರ್ಷಗಳಾಗಿವೆ ಅಷ್ಟೇ. ಈ ಯೋಜನೆ ವಿರುದ್ಧ ಹೋರಾಟ ಮಾಡುತ್ತಿರುವ ಜೆಡಿಎಸ್ ಮುಖಂಡರು ಆಗ ಸರ್ಕಾರದಿಂದ ಪರಿಹಾರ ಪಡೆದಿದ್ದಾರೆ. ಈಗ ಕಾಂಗ್ರೆಸ್ ಸರ್ಕಾರ ಯೋಜನೆ ಜಾರಿ ಮಾಡುತ್ತಿರುವುದಕ್ಕೆ ಹೋರಾಟ ಮಾಡುತ್ತಿದ್ದಾರೆ” ಎಂದು ತಿಳಿಸಿದರು.

ಅದು ಕೃಷಿ ಭೂಮಿಯೇ ಎಂದು ಕೇಳಿದಾಗ, ಬಿಡದಿಯಲ್ಲಿ ಈಗ ಬಹುತೇಕ ಭಾಗ ಕೃಷಿ ಭೂಮಿಯಾಗಿ ಉಳಿದಿಲ್ಲ. ರಿಯಲ್ ಎಸ್ಟೇಟ್ ಮೂಲಕ ನಿವೇಶನ ಮಾಡಲಾಗಿದೆ. ಕುಮಾರಸ್ವಾಮಿ ಅವರು ರೆಡ್ ಜೋನ್ ಮಾಡದಿದ್ದರೆ, ಇಷ್ಟು ಹೊತ್ತಿಗೆ ಇದೆಲ್ಲವೂ ರಿಯಲ್ ಎಸ್ಟೇಟ್ ಮಾಫಿಯ ಪಾಲಾಗಿರುತ್ತಿತ್ತು. ರೆಡ್ ಜೋನ್ ಕಾರಣದಿಂದಾಗಿ ಭೂಮಿ ಪರಿವರ್ತನೆ ಆಗುವುದಿಲ್ಲ ಎಂದು ಇವು ಕೃಷಿ ಭೂಮಿಯಾಗಿಯೇ ಉಳಿದಿವೆ. ಸುತ್ತಮುತ್ತಲ ಪಂಚಾಯ್ತಿ ನೋಡಿಕೊಂಡು ಬನ್ನಿ ಎಲ್ಲವೂ ಲೇಔಟ್‌ಗಳಾಗಿವೆ. ಕುಮಾರಸ್ವಾಮಿ ಅಧಿಕಾರದಲ್ಲಿ ಇದ್ದಾಗ ಯೋಜನೆ ಕೈಬಿಡಲಿಲ್ಲ, ಡಿನೋಟಿಫೈ ಮಾಡಲಿಲ್ಲ ಯಾಕೆ? ಎಂದು ಪ್ರಶ್ನಿಸಿದರು.

ಭೂಮಿಯನ್ನು ಅಭಿವೃದ್ಧಿಪಡಿಸಿದ ಬಳಿಕ ಭೂಮಿಯನ್ನು ಬಂಡವಾಳ ಹೂಡಿಕೆಗೆ ತೆಗೆದುಕೊಳ್ಳುತ್ತಾರೆ. ಯಾರೂ ವಾಸಕ್ಕೆ ಬರುವುದಿಲ್ಲ ಎಂದು ಆರ್ ಅಶೋಕ್ ಅವರು ಆರೋಪ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ಅವರ ಸರ್ಕಾರ ಇದ್ದಾಗ ಅವರಿಗೆ ಈ ಪರಿಜ್ಞಾನ ಇರಬೇಕಾಗಿತ್ತಲ್ಲವೇ? ನಾನು ಹೋರಾಟ ಮಾಡಿದಾಗ ಅವರು ಸ್ಪಂದಿಸಬಹುದಿತ್ತಲ್ಲವೇ? ಈ ಭಾಗದ ರೈತರು ಬೆಳಗಾವಿ ಅಧಿವೇಶನದಲ್ಲಿ ಈ ವಿಚಾರ ಪ್ರಸ್ತಾಪಿಸಿ ಎಂದು ಅಶೋಕ್ ಅವರ ಬಳಿ ಮನವಿ ಮಾಡಿದರೂ ಅವರು ಈ ವಿಚಾರ ಚರ್ಚೆ ಮಾಡಿರಲಿಲ್ಲ” ಎಂದರು.

ಅಶೋಕ್ ಅವರು ಅಧಿವೇಶನದಲ್ಲಿ ಯಾಕೆ ಪ್ರಸ್ತಾಪ ಮಾಡಲಿಲ್ಲ?

ಉತ್ತರ ಕರ್ನಾಟಕ ಭಾಗದ ಸಮಸ್ಯೆ ಬಗ್ಗೆ ಚರ್ಚೆ ಮಾಡಬೇಕಾಗಿತ್ತು, ಹೀಗಾಗಿ ಮಾಡಲಿಲ್ಲ ಎಂದು ಅಶೋಕ್ ಅವರು ಸ್ಪಷ್ಟನೆ ನೀಡಿದ್ದಾರೆ ಎಂದು ಕೇಳಿದಾಗ, “ಇದು ರೈತರ ಸಮಸ್ಯೆಯಲ್ಲವೇ. ಈ ವಿಚಾರ ಪ್ರಸ್ತಾಪಿಸಿದರೆ ಯಾರಾದರೂ ಅವರಿಗೆ ವಿರೋಧ ವ್ಯಕ್ತಪಡಿಸುತ್ತಿದ್ದರಾ? ಬೆಳಗಾವಿ ಅಧಿವೇಶನದ ಬಳಿಕ ಬೆಂಗಳೂರಿನಲ್ಲೂ ಅಧಿವೇಶನ ನಡೆಯಲಿಲ್ಲವೇ? ರಾಜ್ಯಪಾಲರ ಜಂಟಿ ಅಧಿವೇಶನ ಹಾಗೂ ಬಜೆಟ್ ಅಧಿವೇಶನ ನಡೆದಿವೆ. ಅವರಿಗೆ ಇಚ್ಛಾಶಕ್ತಿ ಇದ್ದಿದ್ದರೆ ಈ ಅಧಿವೇಶನಗಳಲ್ಲಿ ಯಾಕೆ ಈ ವಿಚಾರ ಎತ್ತಲಿಲ್ಲ?” ಎಂದು ತಿಳಿಸಿದರು.

ಈ ಯೋಜನೆಗೆ ರೈತರು ವಿರೋಧ ವ್ಯಕ್ತಪಡಿಸುತ್ತಿದ್ದು, ರೈತರ ವಿರೋಧ ಕಟ್ಟಿಕೊಂಡು ಯೋಜನೆ ಮಾಡುತ್ತೀರಾ ಎಂದು ಕೇಳಿದಾಗ, “ಇಲ್ಲಿ ಯೋಜನೆ ಬೇಕು ಎನ್ನುವ ರೈತರೂ ಇದ್ದಾರೆ, ಬೇಡ ಎನ್ನುವ ರೈತರೂ ಇದ್ದಾರೆ. ಈ ಯೋಜನೆ ಬೇಕು ಎನ್ನುವವರು ನಮಗೆ ಆದಷ್ಟು ಬೇಗ ಹಣ ಬೇಕು ಎಂದು ಸಧ್ಯದಲ್ಲೇ ಪ್ರತಿಭಟನೆ ಮಾಡುತ್ತಾರಂತೆ. ನಿಮ್ಮ ರಾಜಕೀಯ ಜಗಳದಲ್ಲಿ ನಮ್ಮನ್ನು ಹಾಳು ಮಾಡಬೇಡಿ ಎಂದು ಆಗ್ರಹಿಸುತ್ತಿದ್ದಾರೆ. ಬಹುಸಂಖ್ಯಾತ ರೈತರು ಭೂಮಿ ನೀಡಲು ಒಪ್ಪಿದ್ದು, ಒಪ್ಪದ ರೈತರ ಮನವೊಲಿಸಿ ಯೋಜನೆ ಜಾರಿ ಮಾಡುತ್ತೇವೆ. ಈ ಭಾಗ ರೆಡ್ ಜೋನ್ ಆಗಿರುವ ಕಾರಣಕ್ಕೆ ಅಲ್ಲಿನ ರೈತರು ತಮ್ಮ ಜಮೀನು ಮಾರಲು ಹೋದರೆ ಅತಿ ಕಡಿಮೆ ಬೆಲೆಗೆ ಕೇಳುತ್ತಿದ್ದಾರೆ. ಹೀಗಾಗಿ ಜನರು ಬೇಸತ್ತು ಈ ಯೋಜನೆ ಜಾರಿಯಾಗಲಿ ಎಂದು ಬಯಸುತ್ತಿದ್ದಾರೆ. ಈ ಯೋಜನೆಯನ್ನು ಯಾವುದೇ ಕಾರಣಕ್ಕೂ ಡಿನೋಟಿಫಿಕೇಶನ್ ಮಾಡಲು ಸಾಧ್ಯವಿಲ್ಲ” ಎಂದು ತಿಳಿಸಿದರು.

ರೈತರಿಗೆ ಮಾರುಕಟ್ಟೆ ಮೌಲ್ಯಕ್ಕಿಂತ ಹೆಚ್ಚಿನ ಪರಿಹಾರ ನಿಗದಿ

ಪರಿಹಾರ ಕಡಿಮೆಯಾಯಿತು ಎಂದು ಹೇಳುತ್ತಿದ್ದಾರೆ ಎಂದು ಕೇಳಿದಾಗ, “ಈ ಭಾಗವನ್ನು ರೆಡ್ ಜೋನ್ ಮಾಡಿದ ಕಾರಣಕ್ಕೆ ಇಲ್ಲಿ ವರ್ಗಾವಣೆ ಪ್ರಕ್ರಿಯೆ ಆಗಲಿಲ್ಲ. ಸರ್ಕಾರ ಸ್ವಾಧೀನಪಡಿಸಿಕೊಳ್ಳಬೇಕಾದರೆ, 2 ವರ್ಷ ವರ್ಗಾವಣೆ ಸಮಯ ತೆಗೆದುಕೊಳ್ಳುತ್ತದೆ. ಇಲ್ಲಿ ವರ್ಗಾವಣೆ ಆಗದೆ ರೆಡ್ ಜೋನ್ ಆದ ಕಾರಣ ಎಸ್ ಆರ್ ಮೌಲ್ಯ ಹೆಚ್ಚಾಗದೇ, ತಟಸ್ಥವಾಗಿ ಉಳಿಯಿತು. ಪ್ರತಿ ಎಕರೆಗೆ 1.50 ಕೋಟಿ ಮಾತ್ರ ನಿಗದಿಯಾಗಿತ್ತು. ಜಿಲ್ಲಾಧಿಕಾರಿಗಳು ಬೇರೆ ಬೇರೆ ಸುಪ್ರೀಂ ಕೋರ್ಟ್ ಆದೇಶ ತೆಗೆದು ರೈತರಿಗೆ ಹೆಚ್ಚಿನ ಪರಿಹಾರ ನೀಡಬೇಕು ಎಂದು 2.50 ಕೋಟಿಗೆ ನಿಗದಿ ಮಾಡಲಾಗಿದೆ. ಈ ಪರಿಹಾರವನ್ನು ರೈತರು ಒಪ್ಪಿದ್ದರು. ಹಿಂದೆಯಿಂದ ಕೆಲವರು ಕಡ್ಡಿಯಾಡಿಸಿರುವುದಕ್ಕೆ ಈ ರೀತಿ ಆಗಿದೆ. ಕಾನೂನು ಪ್ರಕಾರ ನಾವು ಎಸ್ಆರ್ ಮೌಲ್ಯದ ಮೂರುಪಟ್ಟು ಪರಿಹಾರ ನೀಡಬೇಕು. ಆದರೆ ನಮ್ಮ ಸರ್ಕಾರ ಐದರಿಂದ ಆರುಪಟ್ಟು ಹೆಚ್ಚಿನ ಪರಿಹಾರ ನೀಡುತ್ತಿದೆ. ಈ ಜಾಗವನ್ನು ರೆಡ್ ಜೋನ್ ಮುಕ್ತಗೊಳಿಸಲು ಸಾಧ್ಯವಿಲ್ಲ” ಎಂದು ತಿಳಿಸಿದರು.

ಈ ಸರ್ಕಾರದ ಅವಧಿ 2 ವರ್ಷವಾಗಿದ್ದು, ಇದನ್ನು ಜಾರಿ ಮಾಡಲು ಸಾಧ್ಯವೇ ಎಂದು ಕೇಳಿದಾಗ, “ಕೆಲವರು ಹೇಗೆ ಅಪಪ್ರಚಾರ ಮಾಡಿದ್ದಾರೆ ಎಂದರೆ, ಪರಿಹಾರ ನೀಡಲು ಸರ್ಕಾರದ ಬಳಿ ದುಡ್ಡಿಲ್ಲ, ಸ್ವಾಧೀನಪಡಿಸಿಕೊಂಡು ಹಾಗೆ ಕೈಬಿಡುತ್ತಾರೆ. ರೈತರನ್ನು ಅತಂತ್ರ ಮಾಡುತ್ತಾರೆ ಎಂದು ಹೇಳುತ್ತಿದ್ದರು. ಆದರೆ ನಾವು ಈ ಯೋಜನೆಗೆ ಹೇಗೆ ಹಣ ನೀಡುತ್ತೇವೆ ಎಂದು ಮೂಲವನ್ನು ತಿಳಿಸಿದ್ದೇವೆ. ಮತ್ತೆ ಕೆಲವರು, ನಮ್ಮನ್ನು ಇಡೀ ಊರಿಗೆ ಊರೇ ಒಕ್ಕಲೆಬ್ಬಿಸುತ್ತಾರೆ ಎಂದು ಅಪಪ್ರಚಾರ ಮಾಡಿದರು. ನಾವು ಯಾರನ್ನೂ ಒಕ್ಕಲೆಬ್ಬಿಸುವುದಿಲ್ಲ ಎಂದು ಸ್ಪಷ್ಟನೆ ನೀಡಿದೆವು. ನಂತರ ಜಮೀನುರಹಿತ ಜನರನ್ನು ಒಕ್ಕಲೆಬ್ಬಿಸುತ್ತಾರೆ ಎಂದು ಅಪಪ್ರಚಾರ ಮಾಡಿದರು, ಅಲ್ಲಿ ವಾಸವಿರುವ ಜಮೀನುರಹಿತ ರೈತರಿಗೂ ಪರಿಹಾರವಾಗಿ ನಿವೇಶನ ನೀಡುತ್ತೇವೆ ಎಂದು ಭರವಸೆ ನೀಡಿದ್ದೇವೆ. ಹೀಗೆ ಬೇರೆ ಬೇರೆ ರೀತಿಯಲ್ಲಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ” ಎಂದು ತಿಳಿಸಿದರು.

“ಇಲ್ಲಿ ದರ ಕಡಿಮೆಯಾಯ್ತು ಎಂದರೆ ಅದಕ್ಕೆ ಹೊಣೆ ಕುಮಾರಸ್ವಾಮಿ ಅವರಲ್ಲವೇ? ನಾವು ಸುಮ್ಮನೆ ಹೇಳುತ್ತಿಲ್ಲ. ನಾವು ಇದುವರೆಗೂ ಎಲ್ಲೂ ನೀಡದ ಪರಿಹಾರವನ್ನು ಈ ಯೋಜನೆಯಲ್ಲಿ ನೀಡಿದ್ದೇವೆ. ದೇವನಹಳ್ಳಿ ಹಾಗೂ ಇತರೆ ಭಾಗಕ್ಕಿಂತ ಇಲ್ಲಿ ಹೆಚ್ಚಿನ ಪರಿಹಾರ ನೀಡಲಾಗಿದೆ” ಎಂದು ತಿಳಿಸಿದರು.

ಬಿಜೆಪಿಗೆ ಕಾಳಜಿ ಇದ್ದಿದ್ದರೆ ಯಡಿಯೂರಪ್ಪ ಸರ್ಕಾರದಲ್ಲೇ ಯೋಜನೆ ಕೈಬಿಡಲಿಲ್ಲ ಯಾಕೆ?

ಅಧಿಕಾರಕ್ಕೆ ಬಂದರೆ ಈ ಯೋಜನೆ ರದ್ದುಪಡಿಸುತ್ತೇವೆ ಎಂಬ ಬಿಜೆಪಿ ನಾಯಕರ ಹೇಳಿಕೆ ಬಗ್ಗೆ ಕೇಳಿದಾಗ, “ಯಡಿಯೂರಪ್ಪನವರು ಇದ್ದಾಗಲೇ ರದ್ದುಪಡಿಸಬಹುದಿತ್ತಲ್ಲವೇ? ನಾವು ಯಡಿಯೂರಪ್ಪನವರನ್ನು ಭೇಟಿ ಮಾಡಿ ಮನವಿ ಮಾಡಿದಾಗಲೇ ರದ್ದು ಮಾಡಬಹುದಿತ್ತಲ್ಲವೇ? ಅವರು ಇದನ್ನು ರಾಜಕೀಯವಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ” ಎಂದು ಪ್ರಶ್ನಿಸಿದರು.

“ಅಧಿವೇಶನದಲ್ಲಿ ಬೆಂಗಳೂರು ಅಭಿವೃದ್ಧಿ ವಿಚಾರವಾಗಿ ಚರ್ಚೆ ಮಾಡುವಾಗ ಸ್ವತಃ ಆರ್ ಅಶೋಕ್ ಅವರು ನೀವು ಟೌನ್ ಶಿಪ್ ಮಾಡಿ ಬೆಂಗಳೂರನ್ನು ವಿಸ್ತರಣೆ ಮಾಡಬೇಡಿ ಎಂದು ಹೇಳಿದ್ದರು. ರೈತರ ಜಾಗ ತೆಗೆದುಕೊಳ್ಳದೇ ರೈತರ ಟೌನ್ ಶಿಪ್ ಮಾಡಲು ಹೇಗೆ ಸಾಧ್ಯ? ನೀವು ಎಲ್ಲೇ ಟೌನ್ ಶಿಪ್ ಮಾಡಿದರೂ ರೈತರ ಜಾಗವನ್ನೇ ಪಡೆಯಬೇಕು” ಎಂದು ತಿಳಿಸಿದರು.

ಬಿಡದಿಯಲ್ಲಿ ಪೋಸ್ಟರ್ ಅಂಟಿಸಿರುವ ವಿಚಾರಕ್ಕೆ ಕುಮಾರಸ್ವಾಮಿ ಅವರು ಟೀಕೆ ಮಾಡಿರುವ ಬಗ್ಗೆ ಕೇಳಿದಾಗ, “ಯಾರೋ ಅಂಟಿಸಿದರೆ, ಅದಕ್ಕೂ ನಮಗೂ ಸಂಬಂಧವಿಲ್ಲ” ಎಂದು ತಿಳಿಸಿದರು.

ರೈತರು 50% ಅಭಿವೃದ್ಧಿ ಹೊಂದಿದ ಭೂಮಿ ಪಡೆಯಲು ಅವಕಾಶ

ಶಿವಕುಮಾರ್ ಅವರು ಸಿಎಂ ಆದ ಬಳಿಕವೂ ತಮ್ಮ ಚಾಳಿ ಬಿಟ್ಟಿಲ್ಲ ಎಂಬ ಕುಮಾರಸ್ವಾಮಿ ಅವರ ಟೀಕೆ ಬಗ್ಗೆ ಕೇಳಿದಾಗ, “ಸಿದ್ದರಾಮಯ್ಯ ಅವರು ಸಿಎಂ ಕುಮಾರಸ್ವಾಮಿ ಬಂದಿದ್ದರಾ? ಅವರ ಮಗ ಬಂದಿದ್ದರಾ? ಅಶೋಕ್ ಅವರು ಬಂದಿದ್ದರಾ? ಶಿವಕುಮಾರ್ ಅವರು ಸಿಎಂ ಆದ ಬಳಿಕ ಇದ್ದಕ್ಕಿಂದಂತೆ ಯಾಕೆ ಇಷ್ಟು ಹೋರಾಟ ಮಾಡುತ್ತಿರುವುದರ ಹಿಂದಿರುವ ಉದ್ದೇಶವೇನು? ಕುಮಾರಸ್ವಾಮಿ ಅವರೇ ಈ ಭಾಗದ ಜನರಿಗೆ 40% ಅಭಿವೃದ್ಧಿ ಪಡಿಸಿದ ಭೂಮಿಯನ್ನು ಪರಿಹಾರ ನೀಡುತ್ತೇನೆ ಎಂದು ಭರವಸೆ ನೀಡಿರುವ ವಿಡಿಯೋ ನಾನೇ ತೋರಿಸಿದ್ದೇನೆ. ರೈತರಿಗೆ ಪರಿಹಾರದ ಮೊತ್ತ ಕಡಿಮೆಯಾದರೆ, ಅವರು ಹಣ ತೆಗೆದುಕೊಳ್ಳುವುದು ಬೇಡ 50% ಅಭಿವೃದ್ಧಿಪಡಿಸಿದ ಭೂಮಿಯನ್ನೇ ನೀಡುತ್ತೇವೆ. ಆಗ ಇಂದಿನ ಮಾರುಕಟ್ಟೆ ಬೆಲೆಗಿಂತ ಹೆಚ್ಚಿನ ಹಣ ಸಿಗುತ್ತದೆ. ದುಡ್ಡನ್ನೇ ಪಡೆಯಬೇಕು ಎಂದು ನಾವು ಯಾರಿಗೂ ಒತ್ತಡ ಹಾಕುತ್ತಿಲ್ಲ. ಸಣ್ಣ ಪುಟ್ಟ ರೈತರಿಗೆ ಅನುಕೂಲವಾಗಲಿ ಎಂದು ದುಡ್ಡಿನ ಪರಿಹಾರ ಹೆಚ್ಚಿಸಿದ್ದೇವೆ. ಇಲ್ಲಿ ಸುಮಾರು 80% ಜನ ನಮಗೆ ಹಣ ಬೇಡ ಭೂಮಿ ಹಂಚಿಕೆ ಮಾಡಿ ಎಂದು ಹೇಳುತ್ತಿದ್ದಾರೆ. ಇಲ್ಲಿ ಶಿವಕುಮಾರ್ ಅವರನ್ನು ರಾಜಕೀಯವಾಗಿ ಹಣಿಯುವ ಪ್ರಯತ್ನವಿದೆಯೇ ಹೊರತು, ರೈತರ ಪರವಾಗಿ ಯಾರೂ ಇಲ್ಲ” ಎಂದು ತಿಳಿಸಿದರು.

ಶಿವಕುಮಾರ್ ಅವರನ್ನು ಹಣಿಯುವ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾರಾ ಎಂದು ಕೇಳಿದಾಗ, “ಅದು ಅವರ ಹೋರಾಟ ಅವರು ಮಾಡಲಿ, ನಮ್ಮ ಕೆಲಸ ನಾವು ಮಾಡುತ್ತೇವೆ. ಚುನಾವಣೆ ಬಂದಾಗ ತೀರ್ಮಾನವಾಗುತ್ತದೆ” ಎಂದು ತಿಳಿಸಿದರು.

ಸಿದ್ದರಾಮಯ್ಯ ಅವರ ಮೇಲೆ ಕುಮಾರಸ್ವಾಮಿ, ಅಶೋಕ್ ಹಾಗೂ ವಿಜಯೇಂದ್ರ ಅವರಿಗೆ ವಿಶೇಷ ಪ್ರೀತಿ ಏಕೆ ಎಂದು ಕೇಳಿದಾಗ, “ಇದನ್ನು ನೀವು ಅವರ ಬಳಿಯೇ ಕೇಳಬೇಕು” ಎಂದು ಹೇಳಿದರು.

ಶಿವಕುಮಾರ್ ಸಿಎಂ ಆಗಿರುವುದನ್ನು ಬಿಜೆಪಿ, ಜೆಡಿಎಸ್ ಒಕ್ಕಲಿಗ ನಾಯಕರಿಗೆ ಸಹಿಸಲಾಗುತ್ತಿಲ್ಲ

ಶಿವಕುಮಾರ್ ಮುಖ್ಯಮಂತ್ರಿಯಾಗಿರುವುದನ್ನು ಸಹಿಸುತ್ತಿಲ್ಲವೇ ಎಂದು ಕೇಳಿದಾಗ, “ವಿಶೇಷವಾಗಿ ನಮ್ಮ ಸಮುದಾಯದ ಬೇರೆ ಪಕ್ಷಗಳ ನಾಯಕರಿಗೆ ಸಹಿಸಲು ಆಗುತ್ತಿಲ್ಲ. ಅವರ ಹೊಟ್ಟೆ ತೊಳಿಸುತ್ತದೆ. ಅವರ ಪ್ರಕಾರ ಸಿದ್ದರಾಮಯ್ಯ ಅವರು ಯಾವುದೇ ಕಾರಣಕ್ಕೂ ಅಧಿಕಾರ ಬಿಟ್ಟುಕೊಡಲ್ಲ, ಶಿವಕುಮಾರ್ ಅವರು ಸಿಎಂ ಆಗಲ್ಲ ಎಂದು ಭಾವಿಸಿದ್ದರು. ಒಳಜಗಳದಲ್ಲಿ ಕಾಂಗ್ರೆಸ್ ಹಾಳಾಗುತ್ತದೆ ಎಂದು ಭಾವಿಸಿದರು. ಸಿದ್ದರಾಮಯ್ಯ ಅವರು ದೊಡ್ಡ ಮನಸ್ಸು ಮಾಡಿ ಅಧಿಕಾರ ಬಿಟ್ಟುಕೊಟ್ಟಿರುವುದನ್ನು ಅವರಿಂದ ಸಹಿಸಲು ಆಗುತ್ತಿಲ್ಲ” ಎಂದು ತಿಳಿಸಿದರು.

ಬಿಡದಿ ಟೌನ್‌ಶಿಪ್‌ಗೆ ಬಲವಂತವಾಗಿ ರೈತರ ಜಮೀನು ಸ್ವಾಧೀನ: ವಿಜಯೇಂದ್ರ ಆಕ್ರೋಶ

ನಮಗೆ ಬೇರೆ ಪಕ್ಷದ ಶಾಸಕರ ಮತಗಳ ಅಗತ್ಯವಿಲ್ಲ

ಎಲ್ಲಾ ಶಾಸಕರು ಬಿಡದಿ ರೆಸಾರ್ಟ್ ನಲ್ಲಿರುವ ಬಗ್ಗೆ ಕೇಳಿದಾಗ, “ಎಲ್ಲಾ ಶಾಸಕರು ಬಂದಿದ್ದಾರೆ. ಯಾವುದೇ ಸಮಸ್ಯೆ ಇಲ್ಲ. ನಾಳೆ ಪರಿಷತ್ ಚುನಾವಣೆಯಲ್ಲಿ ಎರಡು ಮತಗಳಿದ್ದು, ಪ್ರಾಶಸ್ತ್ಯ ಮತಗಳಿರುವ ಕಾರಣ ಅಣಕು ಮತದಾನ ಮಾಡಲಾಗುತ್ತಿದೆ. ನಾಳೆ ಬೆಳಗ್ಗೆ 8 ಗಂಟೆಗೆ ಇಲ್ಲಿಂದ ತೆರಳುತ್ತೇವೆ” ಎಂದರು.

ಜೆಡಿಎಸ್ ನ ನಾಲ್ಕು ಶಾಸಕರನ್ನು ಸೆಳೆದಿದ್ದೀರಿ ಎಂಬ ಸುದ್ದಿ ಇದೆ ಎಂದು ಕೇಳಿದಾಗ, “ನಮಗೆ ಅದರ ಅವಶ್ಯತೆ ಇಲ್ಲ. ನಮಗೆ ಇರುವ ಮತ ಹಾಕಿಕೊಂಡರೆ ನಾವು ಯಶಸ್ವಿಯಾಗಿ ಐದನೇ ಅಭ್ಯರ್ಥಿ ಗೆಲ್ಲಿಸಿಕೊಳ್ಳಬಹುದು” ಎಂದು ತಿಳಿಸಿದರು.