ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Bidadi Township: ಬಿಡದಿ ಟೌನ್‌ಶಿಪ್‌ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ: ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್

ನಮ್ಮ ರಾಜ್ಯದಲ್ಲಿ ಐಟಿ ಹಾಗೂ ಇತರೆ ಕ್ಷೇತ್ರದ ಉದ್ಯಮಗಳಿಗೆ ಮೂಲಭೂತ ಸೌಕರ್ಯ ಒದಗಿಸಲು ಬಿಡದಿ ಟೌನ್‌ಶಿಪ್‌ ನಿರ್ಮಾಣವಾಗುತ್ತಿದೆ. ಇದರ ಹಿಂದೆ ಯಾವುದೇ ರೀತಿಯ ರಿಯಲ್ ಎಸ್ಟೇಟ್ ಉದ್ದೇಶವಿಲ್ಲ. ಈ ಯೋಜನೆಯಲ್ಲಿ ಲೂಟಿ ಮಾಡಲು ಅವಕಾಶ ಎಲ್ಲಿದೆ ಎಂಬುದನ್ನು ಸಾಬೀತುಪಡಿಸಲಿ ಎಂದು ಬಿಜೆಪಿ ಮತ್ತು ಜೆಡಿಎಸ್‌ ನಾಯಕರಿಗೆ ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ ಆಗ್ರಹಿಸಿದ್ದಾರೆ.

ಬಿಡದಿ ಟೌನ್‌ಶಿಪ್‌ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲಲ್ಲ: ಎಂ. ಲಕ್ಷ್ಮಣ್

‌ಕಾಂಗ್ರೆಸ್‌ ವಕ್ತಾರ ಎಂ ಲಕ್ಷ್ಮಣ್ -

Prabhakara R
Prabhakara R Jun 16, 2026 5:07 PM

ಬೆಂಗಳೂರು: ಕುಮಾರಸ್ವಾಮಿ ಅವರು ಮೈತ್ರಿ ಸರ್ಕಾರದಲ್ಲಿ ಸಿಎಂ ಆಗಿದ್ದಾಗ (23-09-2006) ಬೆಂಗಳೂರಿನ ಜನಸಂಖ್ಯೆ ಪ್ರಮಾಣ ಕಡಿಮೆ ಮಾಡಲು ಬೆಂಗಳೂರಿನ ಸುತ್ತಮುತ್ತ ಐದು ಕಡೆ 60,700 ಎಕರೆಯಲ್ಲಿ ಟೌನ್‌ಶಿಪ್ ಮಾಡಲು ತೀರ್ಮಾನ ಮಾಡಿದ್ದರು. ನಂದಗುಡಿ, ಕಸಬಾ, ಬಿಡದಿ, ಸೋಲೂರು, ಸಾತನೂರಿನಲ್ಲಿ ಮಾಡಲು ಮುಂದಾಗಿದ್ದರು. ಈ ಪೈಕಿ ಬಿಡದಿಯಲ್ಲಿ 9,484 ಎಕರೆಯಲ್ಲಿ ಟೌನ್ ಶಿಪ್ (Bidadi Township) ಮಾಡಲು ಜೆಡಿಎಸ್ ಹಾಗೂ ಬಿಜೆಪಿ ಮೈತ್ರಿ ಸರ್ಕಾರದಲ್ಲಿ ತೀರ್ಮಾನಿಸಲಾಗಿತ್ತು ಎಂದು ಕಾಂಗ್ರೆಸ್ ವಕ್ತಾರ ಎಂ. ಲಕ್ಷ್ಮಣ್ (M. Lakshman) ಅವರು ತಿಳಿಸಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದ್ದಾರೆ. 7481 ಎಕರೆ ಜಮೀನನ್ನು ನಮ್ಮ ಸರ್ಕಾರ 27-05-2026ರಂದು ಮತ್ತೊಮ್ಮೆ ಅಧಿಸೂಚನೆ ಹೊರಡಿಸಿದೆ. ಈ ಯೋಜನೆಯಲ್ಲಿ 7ನೇ ಬಾರಿಗೆ ಪ್ರಾಥಮಿಕ ಅಧಿಸೂಚನೆ ಹೊರಡಿಸಲಾಗುತ್ತಿದೆ. ಈ ಯೋಜನೆಯಲ್ಲಿ ಜಮೀನು ಪಡೆದು ನಿವೇಶನ ಮಾಡಿ, ಅದನ್ನು ಬೇರೆಯವರಿಗೆ ಹಂಚುವ ಉದ್ದೇಶವಿಲ್ಲ. ಕೈಗಾರಿಕಾ ಕಾರಿಡಾರ್ ಮಾಡುವ 7481 ಎಕರೆ ಜತೆಗೆ ರೆಸಿಡೆನ್ಷಿಯಲ್ ಕಾರಿಡಾರ್ ನಿರ್ಮಿಸಲಾಗುತ್ತಿದೆ. ಭೂಮಿಯನ್ನು ವಶಪಡಿಸಿಕೊಂಡು ನೀಡುವುದಷ್ಟೇ ನಮ್ಮ ಕೆಲಸ. ಉಳಿದ ಟೌನ್ ಶಿಪ್ ಅನ್ನು ಅವರೇ ನಿರ್ಮಾಣ ಮಾಡಿಕೊಳ್ಳುತ್ತಾರೆ.

ಶೇ. 11 ರೈತರು ಮಾತ್ರ ಭೂಮಿ ಕೊಡಲ್ಲ ಎಂದು ಹೇಳುತ್ತಿದ್ದಾರೆ

ಕುಮಾರಸ್ವಾಮಿ ಅವರು 33 ಸಾವಿರ ಕೋಟಿ ಹಗರಣ ಎಂದು ಆರೋಪ ಮಾಡುತ್ತಿದ್ದಾರೆ. ಇಲ್ಲಿ ಇಷ್ಟು ಹಣ ಎಲ್ಲಿಂದ ಬರುತ್ತದೆ ಎಂಬುದು ಅರ್ಥವಾಗದ ಪ್ರಶ್ನೆ. ಮೋದಿ ಅವರು ಪ್ರಧಾನಿಯಾದ ಬಳಿಕ ಇಡೀ ದೇಶದಲ್ಲಿ ಸುಮಾರು 100 ಟೌನ್‌ಶಿಪ್‌ಗಳು ನಿರ್ಮಾಣವಾಗಿವೆ. ಇವುಗಳಲ್ಲಿ ಬಹುತೇಕ ಟೌನ್‌ಶಿಪ್‌ಗಳಾಗಿರುವುದು ಬಿಜೆಪಿ ಆಡಳಿತ ರಾಜ್ಯಗಳಲ್ಲಿ. ಇನ್ನು 100 ಸಣ್ಣ ಟೌನ್‌ಶಿಪ್‌ಗಳು ನಿರ್ಮಾಣವಾಗಿದೆ. ಬಿಡದಿಯಲ್ಲಿ 7481 ಎಕರೆ ಪೈಕಿ, 9 ಹಳ್ಳಿಗಳ 6,043 ರೈತರಿಂದ ಜಮೀನು ಪಡೆಯುತ್ತಿದ್ದೇವೆ. ಇದರಲ್ಲಿ ಯಾವುದೇ ಕಾರಣಕ್ಕೆ ಜಮೀನು ನೀಡುವುದಿಲ್ಲ ಎಂದು ಬರವಣಿಗೆ ಮೂಲಕ ಆಕ್ಷೇಪಣೆ ಸಲ್ಲಿಸಿರುವ ರೈತರ ಸಂಖ್ಯೆ 1367. ಈ ರೈತರಿಗೆ ಪರಿಶೀಲನೆಗೆ ಬಿಎಂಆರ್ ಡಿಎ ಆಯುಕ್ತರ ನೇತೃತ್ವದ ಸಮಿತಿ ಮೂಲಕ ನೊಟೀಸ್ ನೀಡಿ ನಿಮ್ಮ ಅಹವಾಲು ಏನು ಎಂದು ಕೇಳಲಾಗುತ್ತದೆ. 1,367 ರೈತರ ಪೈಕಿ 247 ರೈತರು ಬರಲಿಲ್ಲ. ಇನ್ನುಳಿದ ರೈತರ ಪೈಕಿ 259 ರೈತರು ಹಾಜರಾಗಿ ನಮಗೆ ಪರಿಹಾರ ಹೆಚ್ಚಿಸಿ ಎಂದು ಮನವಿ ಮಾಡಿದರು. 663 ರೈತರು ಮಾತ್ರ ಯಾವುದೇ ಕಾರಣಕ್ಕೆ ಜಮೀನು ಬಿಟ್ಟುಕೊಡುವುದಿಲ್ಲ ಎಂದು ಹೇಳಿದ್ದಾರೆ. ಇವರ ಒಟ್ಟು ಜಾಗ 1348 ಎಕರೆ. ಅಂದರೆ 11% ರೈತರು ಮಾತ್ರ ಭೂಮಿ ಕೊಡಲ್ಲ ಎಂದು ಹೇಳುತ್ತಿದ್ದಾರೆ.

80% ರೈತರು ಭೂಮಿ ನೀಡಲು ಒಪ್ಪಿಗೆ ನೀಡಿಲ್ಲ ಎಂಬ ಕುಮಾರಸ್ವಾಮಿ ಅವರ ಮಾತು ಅಪ್ಪಟ ಸುಳ್ಳು. ನಮ್ಮ ಸರ್ಕಾರ ಅಧಿಸೂಚನೆ ಹೊರಡಿಸಿದ ಬಳಿಕ ಅನಿತಾ ಕುಮಾರಸ್ವಾಮಿ ಅವರು ಪತ್ರ ಬರೆದು, “35 ಎಕರೆ ಜಮೀನು ಅನಿತಾ ಕುಮಾರಸ್ವಾಮಿ ಅವರಾದ ನನ್ನ ಹೆಸರಿನಲ್ಲಿ ಖಾತೆ ಪಹಣಿ ಮಾಡಿಸಲಾಗಿದ್ದು, ಕೆಲವು ಕಾರಣಾಂತರಗಳಿಂದ ವಿನಯ್ ಗೌಡ ಎಂ.ಜಿ ಅವಿಗೆ ಎಸ್ಪಿಎ ಮೂಲಕ ಜಮೀನು ನೀಡಿರುತ್ತೇನೆ. ಈಗ ಆ ಜಮೀನನ್ನು ಸಂಪೂರ್ಣವಾಗಿ ನನ್ನ ಹೆಸರಿಗೆ ಪಡೆದುಕೊಂಡಿದ್ದು, ಹೀಗಾಗಿ ಈ ಜಮೀನು ಭೂಸ್ವಾಧೀನವಾದಲ್ಲಿ ಇದಕ್ಕೆ ಸಂಬಂಧಿಸಿದ ದಾಖಲಾತಿ, ನೋಟೀಸ್‌ಗಳನ್ನು, ಹಣವನ್ನು ನನ್ನ ವಿಳಾಸಕ್ಕೆ ನೀಡಬೇಕೆಂದು ಮನವಿ ಮಾಡುತ್ತೇನೆ” ಎಂದು ಪತ್ರದಲ್ಲಿ ತಿಳಿಸಿದ್ದಾರೆ.

ವಿನಯ್ ಗೌಡ ಎಂಬುವವರ ಬೇನಾಮಿ ಹೆಸರಿನಲ್ಲಿ ಈ ಜಮೀನನ್ನು ಪಡೆಯಲಾಗಿದೆ. ಈಗ ಬಿಎಂಆರ್‌ಡಿಎ ಮೂಲಕ ಪ್ರತಿ ಎಕರೆಗೆ 2.14 ಕೋಟಿ ಪರಿಹಾರ ಘೋಷಿಸಲಾಗಿದೆ. ಹಣ ಪಡೆದು ಜಮೀನು ನೀಡಬಹುದು ಅಥವಾ 40:60 ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ಭೂಮಿ ಪಡೆಯಬಹುದು. ಈ 40:60 ಅನುಪಾತದ ಭೂಮಿ ಪ್ರಸ್ತಾವನೆ ಕುಮಾರಸ್ವಾಮಿ ಅವರದ್ದು. ಈಗ ನಮ್ಮ ಕಾಂಗ್ರೆಸ್ ಸರ್ಕಾರ 50:50 ಅನುಪಾತದಲ್ಲಿ ಅಭಿವೃದ್ಧಿ ಪಡಿಸಿದ ಭೂಮಿ ನೀಡಲು ತೀರ್ಮಾನಿಸಲಾಗಿದೆ. ಮೂಲಸೌಕರ್ಯ ಬಳಕೆ ನಂತರ ಉಳಿಯುವ ಜಾಗದಲ್ಲಿ ರೈತರಿಗೆ 9,600 ಚ.ಅಡಿಯಷ್ಟು ಭೂಮಿಯನ್ನು ನೀಡಲಾಗುತ್ತಿದೆ. ಅದನ್ನು ರೈತರು ಯಾರಿಗೆ ಬೇಕಾದರೂ ಮಾರಾಟ ಮಾಡಿಕೊಳ್ಳಬಹುದು. ಕುಮಾರಸ್ವಾಮಿ ಅವರು 8 ಸಾವಿರ ಚ.ಅಡಿಗಳನ್ನು ಪರಿಹಾರವಾಗಿ ನೀಡಲು ನಿರ್ಧರಿಸಿದ್ದರು. ನಮ್ಮ ಸರ್ಕಾರ 1,600 ಚ.ಅಡಿಗಳಷ್ಟು ಜಮೀನು ಹೆಚ್ಚು ನೀಡುತ್ತಿದೆ.

ಬೆಂಗಳೂರಿನಲ್ಲಿರುವ ಐಟಿ ಉದ್ಯಮಿಗಳು ವಾರ್ಷಿಕವಾಗಿ ಕೇಂದ್ರ ಸರ್ಕಾರಕ್ಕೆ 2 ಲಕ್ಷ ಕೋಟಿ ತೆರಿಗೆ ಪಾವತಿಸುತ್ತಿದ್ದಾರೆ. ಈ ಉದ್ಯಮಗಳು ನಮಗೆ ಮೂಲಸೌಕರ್ಯ ವ್ಯವಸ್ಥೆ ಬೇಕು ಎಂದು ಬೇಡಿಕೆ ಇಡುತ್ತಿದ್ದಾರೆ. ಬೆಂಗಳೂರಿನಲ್ಲಿ ಜನದಟ್ಟಣೆ ಹಾಗೂ ವಾಹನ ದಟ್ಟಣೆ ಹೆಚ್ಚಾಗುತ್ತಿದ್ದು, ಬೆಂಗಳೂರಿನ ಮೇಲೆ ಹೊರೆ ಹೆಚ್ಚಾಗುತ್ತಿದೆ ಎಂದು ಬಿಜೆಪಿ ಪರ ದಿನನಿತ್ಯ ಮಾತನಾಡುವ ಉದ್ಯಮಿಗಳು ಮಾಧ್ಯಮಗಳ ಮುಂದೆ ಹೇಳುತ್ತಿದ್ದಾರೆ. ಈ ಸಮಸ್ಯೆ ಬಗೆಹರಿಸಬೇಕು ಎಂಬ ಉದ್ದೇಶದಿಂದ ವರ್ಕ್, ಲೀವ್ ಅಂಡ್ ಪ್ಲೇ ಅಡಿಯಲ್ಲಿ ಬಿಡದಿ ಟೌನ್ ಶಿಪ್ ನಿರ್ಮಾಣ ಮಾಡಲಾಗುತ್ತಿದೆ.

ಈ ಯೋಜನೆಯಲ್ಲಿ ಲೂಟಿ ಮಾಡಲು ಅವಕಾಶ ಎಲ್ಲಿದೆ

ಬೇರೆ ರಾಜ್ಯಗಳಲ್ಲಿ ಮಾಡಿರುವ ಟೌನ್ ಶಿಪ್ ಮಾದರಿಯಾಗಿ, ನಮ್ಮ ರಾಜ್ಯದಲ್ಲಿ ಐಟಿ ಹಾಗೂ ಇತರೆ ಕ್ಷೇತ್ರದ ಉದ್ಯಮಗಳಿಗೆ ನೀಡಲಾಗುವ ಮೂಲಭೂತ ಸೌಕರ್ಯ. ಇದರ ಹಿಂದೆ ಯಾವುದೇ ರೀತಿಯ ರಿಯಲ್ ಎಸ್ಟೇಟ್ ಉದ್ದೇಶವಿಲ್ಲ. ಕುಮಾರಸ್ವಾಮಿ ಅವರು ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ನವರು ಪದೇ ಪದೆ ಹೇಳಿಕೆ ನೀಡುತ್ತಿದ್ದಾರೆ. ಈ ಯೋಜನೆಯಲ್ಲಿ ಲೂಟಿ ಮಾಡಲು ಅವಕಾಶ ಎಲ್ಲಿದೆ ಎಂಬುದನ್ನು ಸಾಬೀತುಪಡಿಸಲಿ.

ಈ ಯೋಜನೆಯನ್ನು ಬಿಎಂಆರ್‌ಡಿಎ ಮೂಲಕ ಅಧಿಕೃತವಾಗಿ ಅಧಿಸೂಚನೆ ಹೊರಡಿಸಿ, ಜಾಗ ಸ್ವಾಧೀನ ಪಡಿಸಿಕೊಂಡ ರೈತರಿಗೆ ಸೂಕ್ತ ಪರಿಹಾರ ನೀಡಿ, ಉಳಿಕೆ ಜಾಗವನ್ನು ಉದ್ಯಮಿಗಳಿಗೆ ನೀಡಿದ ಬಳಿಕ ಅವರು ಅಲ್ಲಿ ತಮ್ಮ ಕಂಪನಿ ಸ್ಥಾಪಿಸುತ್ತಾರೆ. ಎಲ್ಲವನ್ನು ನೋಂದಣಿ ಮೂಲಕವೇ ಮಾಡಲಾಗುವುದು. ಇಲ್ಲಿ ಯಾವುದೇ ಮಧ್ಯವರ್ತಿಗಳು, ಸರ್ಕಾರ ಅಥವಾ ಡಿ.ಕೆ. ಶಿವಕುಮಾರ್ ಅವರು ಹೇಗೆ ದುಡ್ಡು ಹೊಡೆಯುತ್ತಾರೆ ಎಂದು ವಿರೋಧ ಪಕ್ಷಗಳು ಹೇಳಬೇಕು. ಈ ಹಿಂದೆ ನೀವು ಹಣ ಹೊಡೆದಿದ್ದರೆ, ಅದರ ಅನುಭವವನ್ನು ಹಂಚಿಕೊಳ್ಳಿ.

ಯಾವ ಕಾರಣಕ್ಕೆ ಕುಮಾರಸ್ವಾಮಿ ರೆಡ್ ಜೋನ್ ಮಾಡಿದರು?

ಇದು ಕಾನೂನು ಬಾಹಿರ ಹೇಗಾಗುತ್ತದೆ ಎಂದು ಹೇಳಿ. 2006ರಲ್ಲಿ ಕುಮಾರಸ್ವಾಮಿ ಅವರು ಅಧಿಸೂಚನೆ ಹೊರಡಿಸಿ, ಡಿಎಲ್ಎಫ್ ಬಳಿ 400 ಕೋಟಿ ಕೋಟಿ ಪಡೆದು, ಅವರಿಗೆ ಜಾಗ ನೀಡದೇ ಒಂದೂವರೆ, ಎರಡು ವರ್ಷ ಕಾಯಿಸಿದ ಪರಿಣಾಮ ಅವರು ನಿಮ್ಮ ಸಹವಾಸ ಸಾಕು ಎಂದು ಈ ಯೋಜನೆಯಿಂದ ಹಿಂದೆ ಸರಿದರು. ಕುಮಾರಸ್ವಾಮಿ ಅವರು ಅಧಿಕಾರದಿಂದ ಹೋಗುವಾಗ ಈ ಪ್ರದೇಶವನ್ನು ರೆಡ್ ಜೋನ್ ಎಂದು ಆದೇಶ ಹೊರಡಿಸುತ್ತಾರೆ. ಈಗಲೂ ಅದು ರೆಡ್ ಜೋನ್ ಆಗಿಯೇ ಉಳಿದಿದೆ. ನಂತರ ಯಡಿಯೂರಪ್ಪನವರು ಈ ಯೋಜನೆಯಲ್ಲಿ ಕೆಲವು ಮಾರ್ಪಾಡು ಮಾಡಿದರು. ಈ ಟೌನ್ ಶಿಪ್ ಯೋಜನೆ ಜಾರಿಯಾಗಿ ಆ ಪ್ರದೇಶ ಅಭಿವೃದ್ಧಿಯಾಗುವವರೆಗೂ ಇದು ರೆಡ್ ಜೋನ್ ಆಗಿಯೇ ಇರುತ್ತದೆ.

ಕುಮಾರಸ್ವಾಮಿ ಅವರು ಯಾವ ಕಾರಣಕ್ಕೆ ರೆಡ್ ಜೋನ್ ಮಾಡಿದರು? ಅಲ್ಲಿ ಯಾವ ಅಭಿವೃದ್ಧಿ ಆಗಬಾರದು ಎಂಬ ಉದ್ದೇಶ. 2011ರಲ್ಲಿ ಸದಾನಂದ ಗೌಡರು ಸಿಎಂ ಆಗಿದ್ದಾಗ, 912 ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಂಡು ಕೈಗಾರಿಕೆಗಳಿಗೆ ಹಂಚಿಕೆ ಮಾಡಲಾಗಿದೆ. ಆಗ ರೈತರಿಗೆ ಪರಿಹಾರವಾಗಿ ನೀಡಿದ್ದು, ಪ್ರತಿ ಎಕರೆಗೆ 60-80 ಲಕ್ಷ ರೂ. ಮಾತ್ರ. ಈ ಎಲ್ಲಾ ಜಾಗವೂ ತೆಂಗು ಹಾಗೂ ಅಡಕೆ ತೋಟವೇ. ಈ ಪ್ರಕ್ರಿಯೆ ವೇಳೆ ಕುಮಾರಸ್ವಾಮಿ ಅವರು ಏನು ಮಾಡುತ್ತಿದ್ದರು? ಬಿಬಿಎಂಪಿ ವ್ಯಾಪ್ತಿಗೆ ಹೊರವಲಯದ ಪ್ರದೇಶಗಳನ್ನು ಸೇರಿಸಿ ರೈತರಿಗೆ ಮೋಸ ಮಾಡಿದ್ದು ನೀವೇ ಅಲ್ಲವೇ? ಆಗ ರೈತರ ಮೇಲೆ ನಿಮ್ಮ ಕನಿಕರ ಎಲ್ಲಿ ಹೋಗಿತ್ತು? ಈಗ ಶಿವಕುಮಾರ್ ಅವರ ಘನತೆ ಕುಗ್ಗಿಸಲು ಬಾಯಿಗೆ ಬಂದಂತೆ ಟೀಕೆ ಮಾಡುತ್ತಿದ್ದಾರೆ. ಶಿವಕುಮಾರ್ ಅವರು ಸಿಎಂ ಆದ ಬಳಿಕ ಕುಮಾರಸ್ವಾಮಿ ಹಾಗೂ ಅಶೋಕ್ ಅವರಿಗೆ ನಿದ್ದೆ ಬರುತ್ತಿಲ್ಲ. ಶಿವಕುಮಾರ್ ಅವರಿಗೆ ಕೆಟ್ಟ ಹೆಸರು ತರುವ ಪ್ರಯತ್ನ ಮಾಡುತ್ತಿದ್ದಾರೆ.

ಅಶೋಕ್ ಅವರು ನಾಲಾಯಕ್ ವಿರೋಧ ಪಕ್ಷದ ನಾಯಕರು. ಬಾಯಿಗೆ ಬಂದಂತೆ ಸುಳ್ಳು ಹೇಳುತ್ತಾರೆ. ಇಂತಹ ಸುಳ್ಳು ಹೇಳುವ ವ್ಯಕ್ತಿ ಪ್ರಪಂಚದಲ್ಲೇ ಯಾರು ಇಲ್ಲವೇನೋ. ಸುಳ್ಳು ಹೇಳುವುದರಲ್ಲಿ ಪಿಎಚ್‌ಡಿ ಮಾಡಿಕೊಂಡಿದ್ದಾರೆ. ಕಸದ ಬಗ್ಗೆ ಮಾತನಾಡಿ 39 ಸಾವಿರ ಕೋಟಿ ಹಗರಣ ಎಂದು ಆರೋಪ ಮಾಡಿದರು, ದಾಖಲೆ ಮಾತ್ರ ಬಿಡುಗಡೆ ಮಾಡಲಿಲ್ಲ. ಸುಳ್ಳು ಹೇಳುವುದರಲ್ಲಿ ಮೊದಲ ಸ್ಥಾನದಲ್ಲಿದ್ದಾರೆ.

ಜೆಡಿಎಸ್ ಕಾರ್ಯಕರ್ತರಿಗೆ ಹಸಿರು ಶಾಲು ಹಾಕಿಸಿ ಹೋರಾಟ

ಈ ಬಿಡದಿ ಟೌನ್ ಶಿಪ್ ಯೋಜನೆ ಯಾವುದೇ ಕಾರಣಕ್ಕೂ ನಿಲ್ಲುವುದಿಲ್ಲ. ರಾಜಕೀಯವಾಗಿ ಒಳಿಸಿಕೊಳ್ಳುವ ಪ್ರಯತ್ನ ಮಾಡಬಹುದು. ಜನರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಈ ಯೋಜನೆ ಮಾಡಲಾಗುತ್ತಿದೆ. ಈ ಯೋಜನೆಯಿಂದ ಮುಂದೆ ಜನರಿಗೆ ಅನ್ಯಾಯವಾಗುತ್ತದೆ ಎಂದು ಅನಿಸಿದರೆ ಅದಕ್ಕೆ ದಾಖಲೆ ಬಿಡುಗಡೆ ಮಾಡಿ. ಈ ಯೋಜನೆ ವಿರುದ್ಧ ಧರಣಿ ಮಾಡುತ್ತಿರುವ ಜನರಲ್ಲಿ ಕೆಲವು ನೈಜ ರೈತರೂ ಇರಬಹುದು. ಈ ಹೋರಾಟಕ್ಕೆ ಕರೆತಂದಿದ್ದವರು ಯಾರು? ರಾಜಕೀಯವಾಗಿ ಸಂಪೂರ್ಣವಾಗಿ ಕಳೆದು ಹೋಗುತ್ತೇವೆ ಎಂಬ ಉದ್ದೇಶದಿಂದ, ಜೆಡಿಎಸ್ ಕಾರ್ಯಕರ್ತರನ್ನು ಕರೆತಂದು ಹಸಿರು ಶಾಲು ಹಾಕಿ ಹೋರಾಟ ಮಾಡುತ್ತಿದ್ದಾರೆ.

ಈ ಯೋಜನೆ ನಿಮ್ಮ ಕೂಸು, ನಮ್ಮದಲ್ಲ. ಈ ಕೂಸು ಹುಟ್ಟಿದ್ದು ನಿಮ್ಮ ಆಡಳಿತ ಅವಧಿಯಲ್ಲಿ, ಇದು ಬೆಳೆದಿದ್ದು ಬಿಜೆಪಿ ಆಡಳಿತದಲ್ಲಿ. ಈ ಅವಧಿಯಲ್ಲಿ ಬೆಂಗಳೂರು ಹಾಗೂ ಟೌನ್ ಶಿಪ್ ಯೋಜನೆಗೆ ಉಸ್ತುವಾರಿ ಸಚಿವರಾಗಿದ್ದವರು ಆರ್.ಅಶೋಕ್ ಅವರು. 2006ರಿಂದ ಅವರು ಇದ ಜವಾಬ್ದಾರಿ ಭಾಗವಾಗಿದ್ದರು, ಕಂದಾಯ ಸಚಿವರೂ ಆಗಿದ್ದರು. ಅವರ ಜಾಗವು ಈ ಭಾಗದಲ್ಲಿದೆ. ಅವರು ಅವರ ಪಾಡಿಗೆ ಹೋರಾಟ ಮಾಡುತ್ತಾರೆ, ಇವರು ಇವರ ಪಾಡಿಗೆ ಹೋರಾಟ ಮಾಡುತ್ತಾರೆ. ಇದು ದುರಂತ. ಇದೆಲ್ಲದಕ್ಕೂ ರಾಜ್ಯ ಸರ್ಕಾರ ಅಂತ್ಯವಾಡುತ್ತದೆ ಎಂದು ಭಾವಿಸಿದ್ದೇನೆ.