ನೆಲಮಂಗಲ: ನಗರ ಸಮೀಪದ (Nelamangala News) ದಾಸನಪುರ ಹೋಬಳಿಯ ಚಿಕ್ಕಬಿದರಕಲ್ಲು, ತಿರುಮಳಾಪುರ, ಹೊಟ್ಟಪ್ಪನಪಾಳ್ಯ, ಭೀಮೇಶ್ವರ ನಗರ, ಸಿದ್ದನಹೊಸಹಳ್ಳಿ, ದೊಂಬರಹಳ್ಳಿ, ಲಕ್ಷ್ಮೀಪುರ, ಗಂಗೊಂಡನಹಳ್ಳಿ, ಕೆ.ಜಿ.ಲಕ್ಕೇನಹಳ್ಳಿ, ಕಮ್ಮಸಂದ್ರ, ಬೈಲಕೊನೇನಹಳ್ಳಿ, ಚಿಕ್ಕಗೊಲ್ಲರಹಟ್ಟಿ, ಸೀಗೇಹಳ್ಳಿ, ಮಹಿಮಣ್ಣನಪಾಳ್ಯ, ಹುಣ್ಣಿಗೆರೆ ಗ್ರಾಮದ ಬಿಡಿಎ ವಿಲ್ಲಾ ರಸ್ತೆ ಹಾಗೂ ಒಳಚರಂಡಿ ಕಾಮಗಾರಿಗೆ ಭೂಮಿ ಪೂಜೆ ಹಾಗೂ ಕಿತ್ತನಹಳ್ಳಿ ಗ್ರಾಮದಲ್ಲಿ ಹೈ ಮಾಸ್ಟ್ ಲೈಟ್‌ಗಳ ಉದ್ಘಾಟನೆ ಸೇರಿದಂತೆ 12 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳಿಗೆ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಯಲಹಂಕ ಶಾಸಕ ಎಸ್.ಆರ್. ವಿಶ್ವನಾಥ್, ಜನರು ಶಾಸಕರಾಗಿ ಆಯ್ಕೆ ಮಾಡುವುದು ನಮ್ಮ ಗ್ರಾಮ, ನಗರಗಳ ಅಭಿವೃದ್ಧಿ ಮಾಡಲಿ ಎಂದು. ನಾವು ಶಾಸಕರಾಗಿ ಸರ್ಕಾರ ಅನುದಾನ ನೀಡುತ್ತದೆ ಎಂಬ ಭರವಸೆ, ನಂಬಿಕೆಯಲ್ಲಿರುತ್ತೇವೆ. ಆದರೆ ಕೆಲವು ಬಾರಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರದಿದ್ದಾಗ, ಬೇರೆ ಪಕ್ಷಗಳು ಅಧಿಕಾರಕ್ಕೆ ಬಂದು ಶಾಸಕರಿಗೆ ಅನುದಾನ ನೀಡದಿದ್ದರೆ ಜನರ ನಂಬಿಕೆ ಉಳಿಸಿಕೊಳ್ಳಲು ಸಾಧ್ಯವಿಲ್ಲ.
ಈಗಿನ ಕಾಂಗ್ರೆಸ್ ನೇತೃತ್ವದ ಸರ್ಕಾರದಲ್ಲಿ ಅವರ ಪಕ್ಷಗಳ ಶಾಸಕರೇ ಅನುದಾನ ಪಡೆಯಲು ಪರದಾಡುತ್ತಿದ್ದಾರೆ. ಅವರ ಶಾಸಕರುಗಳಿಗೆ 50 ಕೋಟಿ ಅನುದಾನ ಎಂದೂ ಇಲ್ಲಿಯವರೆಗೂ ಕೊಟ್ಟಿಲ್ಲ, ಸ್ವಪಕ್ಷದ ಶಾಸಕರಿಗೆ ಈ ಗತಿಯಾದರೆ ವಿರೋಧ ಪಕ್ಷದ ಶಾಸಕರ ಸ್ಥಿತಿಗತಿಯ ಬಗ್ಗೆ ಜನರು ಯೋಚನೆ ಮಾಡಬೇಕು. ಬಹಳಷ್ಟು ವರ್ಷಗಳ ವಿಶ್ವಾಸದಿಂದ ಕೆಲ ಸಚಿವರಿಂದ ಅಲ್ಪಸ್ವಲ್ಪ ಅನುದಾನ ಪಡೆಯುವ ಕೆಲಸ ಮಾಡುತ್ತಿದ್ದು, ಇರುವುದರಲ್ಲಿ ಜನರಿಗೆ ಅನುಕೂಲವಾಗುವ ಕಾಮಗಾರಿ ಮಾಡಲಾಗುತ್ತಿದೆ. ದಾಸನಪುರ ಹೋಬಳಿ ಜನರು ನನಗೆ ಬಹಳಷ್ಟು ಶಕ್ತಿ ನೀಡಿದ್ದಾರೆ, ನಮ್ಮ ಪಕ್ಷಕ್ಕೆ ಬಹಳಷ್ಟು ಬಲ ತುಂಬಿದ್ದಾರೆ. ಅವರ ಸೇವೆ ಮಾಡುವುದು ನನ್ನ ಕರ್ತವ್ಯ ಎಂದರು.
ದಾಸನಪುರ ಹೋಬಳಿ ಬಿಜೆಪಿ ಅಧ್ಯಕ್ಷ ನರಸೇಗೌಡ ಮಾತನಾಡಿ, ಶಾಸಕ ಎಸ್.ಆರ್. ವಿಶ್ವನಾಥ್ ಅವರು ದಾಸನಪುರ ಹೋಬಳಿಯ ಅಭಿವೃದ್ದಿಗೆ ವಿಶೇಷ ಕಾಳಜಿಯನ್ನು ವಹಿಸಿದ್ದು ನಮ್ಮ ಸರ್ಕಾರವಿಲ್ಲದಿದ್ದರು ಹೆಚ್ಚಿನ ಅನುದಾನ ತಂದು ಅಭಿವೃದ್ಧಿಗೆ ಮುಂದಾಗಿರುವುದು ಸಂತೋಷವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುವ ವಿಶ್ವಾಸವಿದೆ ಎಂದರು.
ಈ ಸುದ್ದಿಯನ್ನೂ ಓದಿ | CT Ravi: ಗುತ್ತಿಗೆದಾರರ ಪತ್ರ ಓದಿ ನಿಮಗೆ ನಾಚಿಕೆ ಆಗಲಿಲ್ಲವೇ? : ಸಿಎಂ ವಿರುದ್ಧ ಸಿ.ಟಿ.ರವಿ ಕಿಡಿ
ಈ ಸಂದರ್ಭದಲ್ಲಿ ಯಲಹಂಕ ಗ್ರಾಮಾಂತರ ಮಂಡಲ ಅಧ್ಯಕ್ಷ ರಾಮಮೂರ್ತಿ, ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಮಂಜುನಾಥ್ ಹಾಗೂ ದಾಸನಪುರ ಹೋಬಳಿ ಪ್ರಧಾನ ಕಾರ್ಯದರ್ಶಿ ಸಂಪತ್ ಕುಮಾರ್, ಲಕ್ಷಣ್ ಗೌಡ, ಗ್ರಾಮಾಂತರ ಮಂಡಲದ ಯುವ ಮೋರ್ಚಾ ಅಧ್ಯಕ್ಷ ಆಕಾಶ್ ಗೌಡ, ಜಿಲ್ಲಾ ಮಾಧ್ಯಮ ಸಹ ಸಂಚಾಲಕ ಅಭಿನಾಶ್ ಗಣೇಶ್, ಮಾಧ್ಯಮ ಸಂಚಾಲಕ ಮುಖೇಶ್, ಸಾಮಾಜಿಕ ಜಾಲತಾಣದ ಚನ್ನಕೇಶವ ಹಾಗೂ ಪಕ್ಷದ ಪದಾಧಿಕಾರಿಗಳು, ಮುಖಂಡರು ಉಪಸ್ಥಿತರಿದ್ದರು.