ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

Govt Schools Development: ಖಾಸಗಿ ಶಾಲೆಗಳ ಸಹಭಾಗಿತ್ವದಲ್ಲಿ ರಾಜ್ಯದ 1,000 ಸರ್ಕಾರಿ ಶಾಲೆಗಳ ಅಭಿವೃದ್ಧಿ: ಸಿಎಂ ಘೋಷಣೆ

Karnataka Government Schools: ರಾಜ್ಯದ ಎಲ್ಲ ಖಾಸಗಿ ಶಾಲೆಯ ಆಡಳಿತ ಮಂಡಳಿಗಳು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲು ಅಥವಾ ಅವುಗಳ ಅಭಿವೃದ್ಧಿಗೆ ಕೈಜೋಡಿಸಬೇಕು. ನಮ್ಮ ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳನ್ನು ನಿಮ್ಮ ಶಾಲೆಯ ಮಕ್ಕಳೊಂದಿಗೆ ಸೇರಿಸಿಕೊಂಡು, ಗುಣಮಟ್ಟದ ಶಿಕ್ಷಣ ನೀಡಬೇಕು ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಮನವಿ ಮಾಡಿದ್ದಾರೆ.

ಬೆಂಗಳೂರು: ದೇಶದಲ್ಲೇ ಮೊದಲ ಬಾರಿ ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳನ್ನು ಖಾಸಗಿ ಶಿಕ್ಷಣ ಸಂಸ್ಥೆಗಳು ದತ್ತು ಪಡೆದು ಅಭಿವೃದ್ಧಿ ಮಾಡಲು ಅವಕಾಶ ಮಾಡಿಕೊಟ್ಟದ್ದೇವೆ. ಇದಕ್ಕಾಗಿ ನಮ್ಮ ಸರ್ಕಾರ ಸಿಎಸ್‌ಆರ್ (ಕಾರ್ಪೋರೇಟ್ ಸಾಮಾಜಿಕ ಹೊಣೆಗಾರಿಕೆ) ಹೊಸ ನೀತಿ ಜಾರಿ ಮಾಡಿದೆ ಎಂದು ಸಿಎಂ ಡಿ.ಕೆ.ಶಿವಕುಮಾರ್‌ ಘೋಷಿಸಿದ್ದಾರೆ.

ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಬುಧವಾರ ನಡೆದ ಸಾಂಸ್ಥಿಕ ಸಾಮಾಜಿಕ ಹೊಣೆಗಾರಿಕೆ (Institutional CSR) ಪ್ರತಿನಿಧಿಗಳ ಸಭೆಯಲ್ಲಿ ಸನ್ಮಾನ್ಯ ಮುಖ್ಯಮಂತ್ರಿ ಶ್ರೀ DK Shivakumar ಅವರು ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯದ ಎಲ್ಲ ಖಾಸಗಿ ಶಾಲೆಯ ಆಡಳಿತ ಮಂಡಳಿಗಳು ಗ್ರಾಮೀಣ ಭಾಗದ ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲು ಅಥವಾ ಅವುಗಳ ಅಭಿವೃದ್ಧಿಗೆ ಕೈಜೋಡಿಸಬೇಕು. ನಮ್ಮ ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳನ್ನು ನಿಮ್ಮ ಶಾಲೆಯ ಮಕ್ಕಳೊಂದಿಗೆ ಸೇರಿಸಿಕೊಂಡು, ಗುಣಮಟ್ಟದ ಶಿಕ್ಷಣ ನೀಡಬೇಕು. ಈ ನಿಟ್ಟಿನಲ್ಲಿ 2,000 ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳೊಂದಿಗೆ ಜೋಡಿಸುವ ಚಿಂತನೆ ಇದೆ. 6,000 ಪಂಚಾಯಿತಿಗಳಲ್ಲಿ ಮೂರು ವಿಭಾಗ ಮಾಡಿದ್ದೇವೆ. ಆರಂಭದಲ್ಲಿ 1,000 ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಖಾಸಗಿ ಶಾಲೆಗಳನ್ನು ಜೋಡಿಸುವ ಗುರಿ ಹೊಂದಿದ್ದೇವೆ. ಮುಂದಿನ 4-5 ವರ್ಷದ ಹೊತ್ತಿಗೆ ನಮ್ಮ ಈ ಪ್ರಯತ್ನಕ್ಕೆ ಒಳ್ಳೆಯ ಫಲ ದೊರೆಯಲಿದೆ.

ಖಾಸಗಿ ಶಾಲೆಯ ಆಡಳಿತ ಮಂಡಳಿಗಳು ಯಾವ ಶಾಲೆಗಳನ್ನು ಪಡೆಯಬೇಕು ಎನ್ನುವ ಆಯ್ಕೆ ಸರ್ಕಾರ ಮಾಡುವುದಿಲ್ಲ. ನಿಮ್ಮ ಅನುಕೂಲಕ್ಕೆ ತಕ್ಕಂತೆ ಆಯ್ಕೆ ಮಾಡಿಕೊಳ್ಳಿ. ನಿಮ್ಮ ಆರ್ಥಿಕ ಸ್ಥಿತಿಗತಿ ನೋಡಿಕೊಂಡು ನಿರ್ಧಾರ ಮಾಡಿ. ರಾಜ್ಯದಲ್ಲಿ ವಾರ್ಷಿಕ ಒಟ್ಟು 8,800 ಕೋಟಿ ಸಿಎಸ್ಆರ್‌ ನಿಧಿ ಇದೆ. ರಾಜ್ಯದ ಎಲ್ಲ ಕಂಪನಿಗಳ ಆಡಳಿತ ಮಂಡಳಿಗಳೊಂದಿಗೆ ಮಾತುಕತೆ ನಡೆಸಿ, ಸಿಎಸ್ಆರ್‌ ನಿಧಿಯನ್ನು ಗ್ರಾಮೀಣ ಭಾಗದ ಶಾಲೆಗಳ ಅಭಿವೃದ್ಧಿಗೆ ವಿನಿಯೋಗಿಸಲು ಮೊದಲ ಆದ್ಯತೆ ನೀಡಿ ಎಂದು ಮನವಿ ಮಾಡಿದ್ದೇನೆ. ಅವರು ಈಗಾಗಲೇ ಕೆಲಸ ಆರಂಭಿಸಿದ್ದಾರೆ. ಈಗ ಖಾಸಗಿ ಆಡಳಿತ ಮಂಡಳಿಯವರ ಸರದಿ.

ಈ ಸಿಎಸ್‌ಆರ್‌ ವಿಚಾರವಾಗಿ ನಾನು ವಿತ್ತ ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿಯಾಗಿ, ಚರ್ಚಿಸಿದ್ದೇನೆ. ಕೆಲವರು ಮುಂಬೈನಲ್ಲಿ ಕಚೇರಿ ತೆರೆದು, ಇಲ್ಲಿ ಕಂಪನಿ ನೋಂದಣಿ ಮಾಡಿಸಿ, ಇಲ್ಲಿ ಗಳಿಸಿದ ಹಣವನ್ನು ಅಲ್ಲಿ ವಿನಿಯೋಗ ಮಾಡುತ್ತಿದ್ದಾರೆ. ಹೀಗೆ ಬಿಡುಗಡೆ ಮಾಡಿದ ಹಣದಲ್ಲಿ ಅರ್ಧದಷ್ಟು ವಾಪಸ್‌ ಪಡೆಯುತ್ತಿದ್ದು, ಈ ದಂಧೆಗೆ ಕಡಿವಾಣ ಹಾಕಬೇಕು ಎಂದು ಮನವಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ.

ಬೆಂಗಳೂರು ದಕ್ಷಿಣ ಜಿಲ್ಲೆಯಲ್ಲಿ 30 ಶಾಲೆಗಳಲ್ಲಿ ಕಂಪನಿಗಳ ಸಿಎಸ್‌ಆರ್‌ ನಿಧಿ ಬಳಸಿ, ಅಭಿವೃದ್ಧಿ ಕಾರ್ಯಗಳು ಆರಂಭಗೊಂಡಿವೆ. ಅದರಲ್ಲಿ ಶೇ.10ರಷ್ಟು ಶಾಲೆಗಳ ಕೆಲಸ ಪೂರ್ಣಗೊಂಡಿದ್ದು, 8 ಶಾಲೆಗಳಲ್ಲಿ ಕೆಲಸ ನಡೆಯುತ್ತಿದೆ, 12 ಶಾಲೆಗಳೊಂದಿಗೆ ಒಪ್ಪಂದ ಮುಗಿದಿದೆ. ಟೊಯೊಟಾ ಕಂಪನಿಯು ರಾಮನಗರ ಜಿಲ್ಲೆಯಲ್ಲಿ 23 ಶಾಲೆಗಳ ನಿರ್ಮಾಣಕ್ಕೆ ನೆರವಾಗಿದೆ. ಪ್ರತಿ ಶಾಲೆಗೆ 10-15 ಕೋಟಿ ರೂ. ಹೂಡಿಕೆ ಮಾಡುತ್ತಿದೆ. ಕಟ್ಟಡ ನಿರ್ಮಾಣಕ್ಕೆ ಸರ್ಕಾರದಿಂದಲೇ ಪ್ಲಾನ್ ನೀಡಲಾಗಿದೆ. ಖಾಸಗಿ ಶಾಲೆಗಳು ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಿದರೆ, ತಮ್ಮ ಶಾಲೆಯ ಹೆಸರನ್ನು ಸರ್ಕಾರಿ ಶಾಲೆಯ ಹೆಸರಿನೊಂದಿಗೆ ಸೇರಿಸಿಕೊಳ್ಳಬಹುದು. ತಮಿಳುನಾಡು ಗಡಿಯಲ್ಲಿರುವ ಹೆಗ್ಗನೂರು ಸರ್ಕಾರಿ ಶಾಲೆಗೆ, ಹೆಗ್ಗನೂರು ಸರ್ಕಾರಿ ಟೊಯೊಟಾ ಶಾಲೆ ಅಂತ ಹೆಸರಿಡುವುದಕ್ಕೆ ಅವಕಾಶ ನೀಡಲಾಗಿದೆ.

ವಿಶ್ವಬ್ಯಾಂಕ್‌ನಿಂದ 2,000 ಕೋಟಿ ರೂ. ಸಾಲ ಮಾಡಿ ಕೆಪಿಎಸ್ ಶಾಲೆಗಳ ಮೂಲಸೌಕರ್ಯ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದೇವೆ. ಸರ್ಕಾರಿ ಶಾಲೆಗಳ ಗುಣಮಟ್ಟ ಸುಧಾರಿಸಲು ಈಗ ಆಯ್ಕೆಯ ಸಂದರ್ಭದಲ್ಲೇ ಶಿಕ್ಷಕರ ಗುಣಮಟ್ಟಕ್ಕೆ ಹೆಚ್ಚು ಒತ್ತು ಕೊಟ್ಟಿದ್ದೇವೆ. ಖಾಸಗಿ ಶಾಲೆಯ ಆಡಳಿತ ಮಂಡಳಿಗಳು ಸರ್ಕಾರಿ ಶಾಲೆಯೊಂದಿಗೆ ಪಾಲುದಾರರಾಗಬೇಕು. ಒಂದು ಖಾಸಗಿ ಶಾಲೆ 3 ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲು ಅವಕಾಶವಿದೆ. ವಿದೇಶದಲ್ಲಿರುವವರು ಕೂಡ ತಮ್ಮ ಹಳ್ಳಿಗಳಲ್ಲಿರುವ ಶಾಲೆಗಳ ಅಭಿವೃದ್ಧಿಗೆ ಮುಂದೆ ಬಂದಿದ್ದಾರೆ.

ದೇಶದಲ್ಲಿ 140 ಅಂತಾರಾಷ್ಟ್ರೀಯ ಗುಣಮಟ್ಟದ ಶಾಲೆಗಳಿವೆ. ಅದರಲ್ಲಿ 38 ಕರ್ನಾಟಕದಲ್ಲಿವೆ. ಬೆಂಗಳೂರಿನ ದಟ್ಟಣೆಗೆ ಉದ್ಯೋಗ ಮತ್ತು ಶಿಕ್ಷಣ ವಲಯ ಪ್ರಮುಖ ಕಾರಣ. ಮಕ್ಕಳಿಗೆ ತಮ್ಮ ಹಳ್ಳಿಯಲ್ಲೇ ಗುಣಮಟ್ಟದ ಶಿಕ್ಷಣ ದೊರೆತರೆ ಬೆಂಗಳೂರಿನ ಮೇಲಿನ ಒತ್ತಡವೂ ಕಡಿಮೆಯಾಗುತ್ತದೆ. ಖಾಸಗಿ ಶಾಲೆಯ ಆಡಳಿತ ಮಂಡಳಿಗಳು ಸರ್ಕಾರಿ ಶಾಲೆಗಳನ್ನು ದತ್ತು ಪಡೆಯಲು ಆರ್ಥಿಕವಾಗಿ ಸದೃಢವಾಗಿವೆ. ಖಾಸಗಿ ಶಾಲೆಗಳಲ್ಲಿನ ಗುಣಮಟ್ಟದ ಶಿಕ್ಷಣ, ಸಾಮರ್ಥ್ಯದ ಸ್ವಲ್ಪ ಭಾಗವನ್ನು ಸರ್ಕಾರಿ ಶಾಲೆಗಳಿಗೂ ವಿಸ್ತರಿಸಿದರೆ, ವಿದ್ಯಾಭ್ಯಾಸಕ್ಕಾಗಿ ಗ್ರಾಮೀಣ ಭಾಗದಿಂದ ನಗರ ಪ್ರದೇಶಕ್ಕೆ ಬರುವುದನ್ನು ತಪ್ಪಿಸಬಹುದು. ನೀವು ಕೂಡ ಹಳ್ಳಿಯಿಂದ ಬಂದವರು, ನಿಮ್ಮ ಹಳ್ಳಿಯ ಶಾಲೆಗೆ ಏನಾದರೂ ಕೊಡುಗೆ ನೀಡಿ. ಸರ್ಕಾರಿ ಶಾಲೆಗಳನ್ನು ದತ್ತು ಪಡೆದು, ಅವುಗಳ ಅಭಿವೃದ್ಧಿಗೆ ಕೈಜೋಡಿಸುವುದು ನಿಮ್ಮೆಲ್ಲರ ಕರ್ತವ್ಯ ಎಂದು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಸಿಎಂ ತಿಳಿಸಿದ್ದಾರೆ.