ಬೆಂಗಳೂರು: ನಗರದ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ (Chinnaswamy Stadium) ಮೊಬೈಲ್ ಕಳ್ಳತನ ಪ್ರಕರಣಕ್ಕೆ (Mobile phone theft) ಸಂಬಂಧಿಸಿ ಈವರೆಗೆ ಒಟ್ಟು 13 ಆರೋಪಿಗಳನ್ನು ಕಬ್ಬನ್ ಪಾರ್ಕ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಮಾರ್ಚ್ 28 ರಂದು ನಡೆದ ಆರ್‌ಸಿಬಿ-ಎಸ್‌ಆರ್‌ಎಚ್ ಪಂದ್ಯದ ವೇಳೆ ಅಭಿಮಾನಿಗಳ ಮೊಬೈಲ್‌ಗಳನ್ನು ಎಗರಿಸಿದ್ದ ಆರೋಪಿಗಳ ಪೈಕಿ 9 ಅಪ್ರಾಪ್ತ ವಯಸ್ಸಿನ ಬಾಲಕರು ಸೇರಿದ್ದಾರೆ.
ಜಾರ್ಖಂಡ್ ಮೂಲದ ನಾಲ್ವರು ಖದೀಮರು, ಉತ್ತರ ಭಾರತ ಮೂಲದ 9 ಮಂದಿ ಅಪ್ರಾಪ್ತರನ್ನು ಬಳಸಿಕೊಂಡು ಮೊಬೈಲ್ ಕದಿಯುತ್ತಿದ್ದರು. ಅವರನ್ನು ಬಂಧಿಸಲಾಗಿದ್ದು, 75 ಮೊಬೈಲ್‌ಗಳನ್ನು ವಶಕ್ಕೆ ಪಡೆಯಲಾಗಿದೆ. ಜಾರ್ಖಂಡ್‌ನಿಂದ ಗ್ಯಾಂಗ್ ಕಟ್ಟಿಕೊಂಡು ಸೋಹನ್ ಕುಮಾರ್, ಸಂಜೀತ್ ಕುಮಾರ್, ಇಶಾಲ್‌ಕುಮಾರ್ ಮತ್ತು ಶುಭಂಕುಮಾರ್‌ನ ಗ್ಯಾಂಗ್ ಕೃತ್ಯ ಎಸಗಿತ್ತು. ಈ ನಾಲ್ವರು ಆರೋಪಿಗಳು 9 ಅಪ್ರಾಪ್ತರನ್ನು ಮೊಬೈಲ್ ಕಳ್ಳತನಕ್ಕೆ ಬಿಟ್ಟಿರೋದು ಗೊತ್ತಾಗಿದೆ. ಬೆಂಗಳೂರು ಮಾತ್ರವಲ್ಲದೆ ಚೆನ್ನೈ, ಮುಂಬೈ, ಕೋಲ್ಕತ್ತಾಗೆ ಹೋಗಿ ಸಾಕಷ್ಟು ಕಡೆಗಳಲ್ಲಿ ಈ ಗ್ಯಾಂಗ್ ತಮ್ಮ ಕೈಚಳಕ ತೋರಿದೆ.
ಕಳ್ಳತನದ ಮಾಡುವಾಗ ಸಿಕ್ಕಿ ಹಾಕಿಕೊಂಡರೆ ಕಾನೂನು ಕುಣಿಕೆಯಿಂದ ಸುಲಭವಾಗಿ ಪಾರಾಗಬಹುದು ಎಂಬ ನಿಟ್ಟಿನಲ್ಲಿ ಅಪ್ರಾಪ್ತರಿಗೆ ಆರ್‌ಸಿಬಿ ಟಿ-ಶರ್ಟ್ ಧರಿಸಿ, ಕಳ್ಳತನ ಮಾಡಲು ಪ್ರಕರಣದ ಸೂತ್ರಧಾರ ಶುಭಂ ಸೂಚಿಸಿದ್ದ ಎಂದು ತಿಳಿದುಬಂದಿದೆ. ಅದರಂತೆ ಬಾಲ ಆರೋಪಿಗಳು ಟಿ-ಶರ್ಟ್ ಧರಿಸಿ ಕ್ರೀಡಾಂಗಣಕ್ಕೆ ಅಭಿಮಾನಗಳ ರೀತಿ ಬಂದು ಪ್ರವೇಶದ್ವಾರ, ಪೇಕ್ಷಕರ ಗ್ಯಾಲರಿ ಹಾಗೂ ಮೆಟ್ರೋ ನಿಲ್ದಾಣಗಳಲ್ಲಿ ಕೈಚಳಕ ತೋರಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಗಳು ಕೃತ್ಯ ಎಸಗಲು ಪ್ಲ್ಯಾನ್ ಮಾಡಿಕೊಂಡು ವಿಮಾನದಲ್ಲಿ ನಗರಕ್ಕೆ ಬಂದಿದ್ದರು. ಅಭಿಮಾನಿಗಳ ಸೋಗಿನಲ್ಲಿ ಸ್ಟೇಡಿಯಂ ಪ್ರವೇಶಿಸಿ ಕೃತ್ಯವೆಸುಗುತ್ತಿದ್ದರು. ಆರೋಪಿಗಳ ಹಿಂದೆ ದೊಡ್ಡ ಜಾಲವಿರುವ ಶಂಕೆಯಿದೆ.
ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಮಾತನಾಡಿ, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮೊಬೈಲ್ ಕಳ್ಳತನ ಪ್ರಕರಣ ಸಂಬಂಧ 13 ಮಂದಿಯನ್ನು ಬಂಧಿಸಿ 75 ಮೊಬೈಲ್ಗಳನ್ನ ವಶಕ್ಕೆ ಪಡೆಯಲಾಗಿದೆ. ಕೃತ್ಯದಲ್ಲಿ ಇನ್ನೂ ಹಲವಾರು ಭಾಗಿಯಾಗಿರುವ ಮಾಹಿತಿಯಿದ್ದು, ತನಿಖೆ ಮುಂದುವರೆಸಲಾಗುವುದು. ಪಂದ್ಯ ವೀಕ್ಷಿಸಲು ಬರುವ ಜನರು ತಮ್ಮ ಮೌಲ್ಯಯುತ ವಸ್ತುಗಳ ಬಗ್ಗೆ ಜಾಗರೂಕರಾಗಿರಬೇಕು ಎಂದು ಮನವಿ ಮಾಡಿದ್ದಾರೆ.
ನಾಳಿನ ಆರ್‌ಸಿಬಿ-ಸಿಎಸ್‌ಕೆ ಪಂದ್ಯಕ್ಕೆ 2,000 ಪೊಲೀಸ್ ಭದ್ರತೆ
ಇನ್ನು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಾಳೆ ಆರ್‌ಸಿಬಿ ಮತ್ತು ಸಿಎಸ್‌ಕೆ ಪಂದ್ಯ ನಡೆಯಲಿರುವ ಹಿನ್ನೆಲೆಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದ್ದು, 2000 ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಕಳೆದ ಪಂದ್ಯದಂತೆ ಈ ಪಂದ್ಯಕ್ಕೂ ಟಿಕೆಟ್ ಇರುವವರು ಮಾತ್ರ ಸ್ಟೇಡಿಯಂ ಕಡೆ ಹೋಗಬೇಕು, ಅನವಶ್ಯಕವಾಗಿ ಯಾರೂ ಸ್ಟೇಡಿಯಂ ಬಳಿ ಓಡಾಡದಂತೆ ಪೊಲೀಸರು ಸೂಚಿಸಿದ್ದಾಎ. ಕಳೆದ ಮ್ಯಾಚ್ ವೇಳೆ 15 ಸಾವಿರ ಜನರು ಮೆಟ್ರೋ ಮೂಲಕ ಬಂದಿದ್ರು. ಹೋಗುವಾಗ 22 ಸಾವಿರ ಪೇಕ್ಷಕರು ವಾಪಸ್ಸು ಹೋಗಿದ್ದು, ಈ ಪ್ರಯೋಗ ಯಶಸ್ವಿಯಾಗಿತ್ತು. ಹೀಗಾಗಿ ಮ್ಯಾಚ್ ನೋಡಲು ಬರುವವರು ಮೆಟ್ರೋ ಬಳಸುವಂತೆ ಸಲಹೆ ನೀಡಲಾಗಿದೆ.
ಕಳೆದ ಬಾರಿಯ ಅವಘಡದಿಂದ ಎಚ್ಚೆತ್ತಿರುವ ಪೊಲೀಸರು ಪಂದ್ಯಕ್ಕೆ ಸೂಕ್ತ ಬಂದೋಬಸ್ತ್ ಮಾಡಿಕೊಂಡಿದ್ದಾರೆ. ನಾಳಿನ ಮ್ಯಾಚ್ ವೇಳೆ ಮೊಬೈಲ್ ಕಳ್ಳತನವಾಗದಂತೆ ಪೊಲೀಸರು ಮಫ್ತಿಯಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿದುಬಂದಿದೆ.