ಬೆಂಗಳೂರು: ಕೊಪ್ಪಳ ಜಿಲ್ಲೆಯ ಸರ್ಕಾರಿ ಶಾಲೆಗಳಲ್ಲಿ 5 ರಿಂದ 8ನೇ ತರಗತಿಯಲ್ಲಿ ಓದುತ್ತಿರುವ 19 ಮಕ್ಕಳು ರಚಿಸಿ, ಚಿತ್ರಿಸಿರುವ 14 ಚಿತ್ರಪುಸ್ತಕಗಳ ಬಿಡುಗಡೆ ಕಾರ್ಯಕ್ರಮವನ್ನು ನವೆಂಬರ್ 1ರಂದು ಬೆಳಗ್ಗೆ 11ಗಂಟೆಗೆ ಬೆಂಗಳೂರಿನ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್ನಲ್ಲಿ (NGMA) ಆಯೋಜಿಸಲಾಗಿದೆ.
ಕಲಿಕೆ ಟಾಟಾ ಟ್ರಸ್ಟ್ ಸಹಯೋಗದಲ್ಲಿ ʼಎಲ್ಲರ ಪುಸ್ತಕʼ ಪ್ರಕಾಶನ ಸಂಸ್ಥೆಯಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. "ಮಕ್ಕಳಿಂದ. ಮಕ್ಕಳಿಗಾಗಿ ಮತ್ತು ಎಲ್ಲ ಮಕ್ಕಳಿಗಾಗಿ" ಸೃಷ್ಟಿಸಲಾದ ಈ ಪುಸ್ತಕಗಳು ಒಂದು ವಿಶಿಷ್ಟ ಸೃಜನಾತ್ಮಕ ಹಾಗೂ ಶೈಕ್ಷಣಿಕ ಪಯಣದ ಪ್ರೇರಣಾದಾಯಕ ಮೈಲುಗಲ್ಲಾಗಿವೆ. ಇವು ಕೇವಲ ಕಥೆಗಳ ಸಂಕಲನಗಳಲ್ಲ; ಮಕ್ಕಳ ಕಲ್ಪನೆ, ಸೃಜನಶೀಲತೆ, ಸೂಕ್ಷ್ಮ ಅವಲೋಕನ ಮತ್ತು ಬದುಕಿನ ಅನುಭವಗಳ ಸಂಭ್ರಮಾಚರಣೆಯೂ ಹೌದು. ಬರವಣಿಗೆ, ಚಿತ್ರಣ, ಆತ್ಮಾವಲೋಕನ, ಪರಿಷ್ಕರಣೆ ಮತ್ತು ಪರಸ್ಪರ ಸಹಯೋಗದ ಪ್ರಕ್ರಿಯೆಯ ಮೂಲಕ ರೂಪುಗೊಂಡ ಪ್ರತಿಯೊಂದು ಪುಸ್ತಕವೂ ಸೃಜನಶೀಲ ಮಕ್ಕಳ ವಿಶಿಷ್ಟ ಧ್ವನಿ ಮತ್ತು ದೃಷ್ಟಿಕೋನವನ್ನು ಒಳಗೊಂಡಿರುತ್ತದೆ.
ಈ ಕಲಿಕೆ (learning) ಮತ್ತು ಅಭಿವ್ಯಕ್ತಿಯ ಪಯಣದಿಂದ ಪ್ರೇರಣೆ ಪಡೆದು ಅದರಲ್ಲಿ ಭಾಗವಹಿಸಿದ ಕಲಿಕೆಯ ಶಿಕ್ಷಣ ತಂಡದ ಇಬ್ಬರು ಸದಸ್ಯರೂ ಚಿತ್ರಪುಸ್ತಕಗಳನ್ನು ರಚಿಸಿದ್ದಾರೆ - ಕಲ್ಲಂಗಡಿ ಸುಬ್ಬು (ಜಯಶ್ರೀ ಕುಲಕರ್ಣಿ) ಮತ್ತು ನೋಟ (ಸವಿತಾ ಶ್ರೀಧರ). ಮಕ್ಕಳ ಹದಿನಾಲ್ಕು ಪುಸ್ತಕಗಳೊಂದಿಗೆ ಈ ಎರಡು ಪುಸ್ತಕಗಳೂ ಸೇರಿ ಒಟ್ಟು ಹದಿನಾರು ಚಿತ್ರಪುಸ್ತಕಗಳ ಸಂಗ್ರಹ ರೂಪುಗೊಂಡಿದೆ. ಇದು ಕಥೆ ಕಟ್ಟುವಿಕೆ, ಕಥೆ ಹೇಳುವಿಕೆ, ಸೃಜನಶೀಲತೆ ಮತ್ತು ಪುಸ್ತಕಗಳನ್ನು ರಚಿಸುವ ಆನಂದದ ಮೇಲಿನ ನಮ್ಮ ಸಾಮೂಹಿಕ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ.
ಈ ಚಿತ್ರಪುಸ್ತಕಗಳು ಕೊಪ್ಪಳ ಜಿಲ್ಲೆಯ, ಕೊಪ್ಪಳ ತಾಲ್ಲೂಕಿನ, ನಾಲ್ಕು ಹಳ್ಳಿಗಳಾದ ಹ್ಯಾಟಿ, ಬುಡಶೆಟ್ನಾಳ್, ಗಿಣಿಗೇರಾ ಮತ್ತು ಶಹಾಪುರಗಳ ಸರ್ಕಾರಿ ಶಾಲೆಗಳಲ್ಲಿ 5 ರಿಂದ 8ನೇ ತರಗತಿಯಲ್ಲಿ ಓದುತ್ತಿರುವ ಹತ್ತೊಂಬತ್ತು ಮಕ್ಕಳ ಅನುಭವಗಳು ಮತ್ತು ಕಲ್ಪನೆಗಳಿಂದ ರೂಪುಗೊಂಡಿವೆ. ಭೌಗೋಳಿಕವಾಗಿ ಈ ಹಳ್ಳಿಗಳು ಒಂದಕ್ಕೊಂದು ದೂರದಲ್ಲಿದ್ದರೂ, ಅವುಗಳ ಶ್ರೀಮಂತ ಸಾಂಸ್ಕೃತಿಕ ಪರಂಪರೆ, ಸಮುದಾಯ ಜೀವನ ಮತ್ತು ದೈನಂದಿನ ಬದುಕಿನ ವಾಸ್ತವಗಳು ಒಂದಕ್ಕೊಂದು ಸಾಮ್ಯತೆಯನ್ನು ಹೊಂದಿವೆ. ಕಾರ್ಯಾಗಾರಗಳಲ್ಲಿ ಮಕ್ಕಳು ರಚಿಸಿದ ಕಥೆಗಳ ಮೇಲೆ ಈ ಅನುಭವಗಳು ಆಳವಾದ ಪ್ರಭಾವ ಬೀರಿವೆ.
ವಾರಾಂತ್ಯಗಳು, ರಜಾದಿನಗಳು ಮತ್ತು ವಿಶೇಷ ಅವಧಿಗಳಲ್ಲಿಯೂ ಕಾರ್ಯಾಗಾರಗಳಿಗೆ ನಿರಂತರವಾಗಿ ಹಾಜರಾಗಲು ಮಕ್ಕಳು ತೋರಿದ ಬದ್ಧತೆ, ಅವರ ಉತ್ಸಾಹ ಮತ್ತು ಈ ಸೃಜನಾತ್ಮಕ ಪ್ರಕ್ರಿಯೆಯಲ್ಲಿ ಅವರು ತೊಡಗಿಸಿಕೊಂಡ ಆಳವನ್ನು ಪ್ರತಿಬಿಂಬಿಸುತ್ತದೆ. ಇನ್ನಷ್ಟು ಕಾರ್ಯಾಗಾರಗಳನ್ನು ನಡೆಸುವಂತೆ ಅವರು ನಿರಂತರವಾಗಿ ಕೇಳಿಕೊಳ್ಳುತ್ತಿದ್ದದ್ದು, ಈ ಅನುಭವವು ಅವರ ಬದುಕಿನಲ್ಲಿ ಎಷ್ಟು ಮಹತ್ವವನ್ನು ಪಡೆದಿದೆ ಎಂಬುದಕ್ಕೆ ಬಹುಶಃ ಅತ್ಯಂತ ಪ್ರಬಲವಾದ ಸಾಕ್ಷಿಯಾಗಿದೆ.