ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ʼʼಗಾಂಧೀಜಿ ನಡೆದ ಜಾಗದಲ್ಲಿ ಈಗ ಡಿಕೆಶಿ ದರ್ಪದ ಹೆಜ್ಜೆʼʼ: ನೂತನ ಸಿಎಂ ನಡೆ ವಿರುದ್ಧ ಜೆಡಿಎಸ್‌ ಕಿಡಿಕಿಡಿ

Kumarakrupa: ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಶತಮಾನದ ಇತಿಹಾಸವಿರುವ, ಪುರಾತತ್ವ ಕಟ್ಟಡಗಳ ಪಟ್ಟಿಯಲ್ಲಿರುವ ಕುಮಾರ ಕೃಪ ಅತಿಥಿ ಗೃಹದ ಮುಖ್ಯ ಕಟ್ಟಡ ಮತ್ತು ಅದಕ್ಕೆ ಹೊಂದಿಕೊಂಡಿರುವ ಕಟ್ಟಡವನ್ನು ತಮ್ಮ ಗೃಹ ಕಚೇರಿಯನ್ನಾಗಿ ಪರಿವರ್ತಿಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಕಟ್ಟಡವನ್ನು ತಮಗೆ ಬೇಕಾದಂತೆ ಪರಿವರ್ತಿಸಲು ಮುಂದಾಗಿದ್ದು, ಜೆಡಿಎಸ್‌ ಕಿಡಿ ಕಾರಿದೆ.

ಕುಮಾರ ಕೃಪ ಅತಿಥಿ ಗೃಹ ಮತ್ತು ಡಿಕೆಸಿ ಅವರ ಎಐ ರಚಿತ ಚಿತ್ರ

ಬೆಂಗಳೂರು, ಜೂ. 11: ನೂತನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ (DK Shivakumar) ಶತಮಾನದ ಇತಿಹಾಸವಿರುವ, ಪುರಾತತ್ವ ಕಟ್ಟಡಗಳ ಪಟ್ಟಿಯಲ್ಲಿರುವ ಕುಮಾರ ಕೃಪ (Kumarakrupa) ಅತಿಥಿ ಗೃಹದ ಮುಖ್ಯ ಕಟ್ಟಡ ಮತ್ತು ಅದಕ್ಕೆ ಹೊಂದಿಕೊಂಡಿರುವ ಕಟ್ಟಡವನ್ನು ತಮ್ಮ ಗೃಹ ಕಚೇರಿಯನ್ನಾಗಿ ಪರಿವರ್ತಿಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರವನ್ನು ಅತಿಯಾಗಿ ನಂಬುವ ಡಿಕೆಶಿ ಇದೀಗ ಈ ಕಟ್ಟಡವನ್ನು ತಮಗೆ ಬೇಕಾದ ರೀತಿಯಲ್ಲಿ ಬದಲಾಯಿಸಲು ಮುಂದಾಗಿದ್ದಾರೆ. ಅದಕ್ಕೆ ಪೂರಕವಾಗಿ ಲೋಕೋಪಯೋಗಿ ಇಲಾಖೆ ನವೀಕರಣ ಕಾಮಗಾರಿ ಆರಂಭಿಸಿದ್ದು, ಜೆಡಿಎಸ್‌ (JDS) ಕಿಡಿ ಕಾರಿದೆ. ʼʼಬೆಂಗಳೂರಿನ ಅಸ್ಮಿತೆಯಾಗಿರುವ 160 ವರ್ಷಗಳ ಇತಿಹಾಸವಿರುವ 'ಕುಮಾರ ಕೃಪಾ' ಪಾರಂಪರಿಕ ಕಟ್ಟಡವನ್ನು ಡಿಕೆಶಿ ಸ್ವಾರ್ಥಕ್ಕಾಗಿ ಮಾರ್ಪಡು ಮಾಡುತ್ತಿರುವುದು ಖಂಡನೀಯ ಮತ್ತು ಹೇಯʼʼ ಎಂದು ಹೇಳಿದೆ.

ʼʼಪಾರಂಪರಿಕ ಕಟ್ಟಡಕ್ಕೆ ಧಕ್ಕೆ! ಗಾಂಧೀಜಿ ನಡೆದ ಜಾಗದಲ್ಲಿ ಈಗ ಡಿಕೆಶಿ ದರ್ಪದ ಹೆಜ್ಜೆʼʼ ಶೀರ್ಷಿಕೆ ನೀಡಿ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಜೆಡಿಎಸ್‌, ಪ್ರಜಾಪ್ರಭುತ್ವವೋ ಅಥವಾ ಪಾಳೇಗಾರಿಕೆಯೋ ಎಂದು ಮುಖ್ಯಮಂತ್ರಿಯ ನಡೆಯನ್ನು ಕಟುವಾಗಿ ಟೀಕಿಸಿದೆ. ʼʼಕಾವೇರಿ, ಅನುಗ್ರಹ ನಿವಾಸಗಳಿದ್ದರೂ ಇತಿಹಾಸವನ್ನು ಧ್ವಂಸಗೊಳಿಸಲು ಹೊರಟಿರುವ ಈ ನಡೆ ಉದ್ಧಟತನ ಅಷ್ಟೇ ಅಲ್ಲ, ಮೂರ್ಖತನದ ಪರಮಾವಧಿ! ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ತಂಗಿದ್ದ, ದಿವಾನ್‌ ಕೆ. ಶೇಷಾದ್ರಿ ಅಯ್ಯರ್ ಅವರ ನೆನಪಿನ ʼಕುಮಾರ ಕೃಪʼ ಪಾರಂಪರಿಕ ಕಟ್ಟಡವನ್ನು ಕೇವಲ ವೈಯಕ್ತಿಕ ತೆವಲಿಗಾಗಿ, ಗೃಹ ಕಚೇರಿ ಮಾಡಿಕೊಳ್ಳಲು ಮಾರ್ಪಾಡು ಮಾಡುತ್ತಿರುವುದು ಇತಿಹಾಸಕ್ಕೆ ಬಗೆಯುವ ಮಹಾದ್ರೋಹʼʼ ಎಂದಿದೆ.

ಜೆಡಿಎಸ್‌ ಎಕ್ಸ್‌ ಪೋಸ್ಟ್‌:



ಮುಂದುವರಿದು, ʼ'ಕುಮಾರ ಕೃಪ' ಯಾರ ವೈಯಕ್ತಿಕ ಆಸ್ತಿಯೂ ಅಲ್ಲ, ಅದು ಇತಿಹಾಸದ ಹೆಗ್ಗುರುತು. ಪಾರಂಪರಿಕ ಕಟ್ಟಡಗಳ ರಕ್ಷಣೆ ಮಾಡಬೇಕಾದವರೇ ಅದರ ವಿನಾಶಕ್ಕೆ ನಿಂತಿರುವುದು ವಿಪರ್ಯಾಸ. ಗೃಹ ಕಚೇರಿ ನೆಪದಲ್ಲಿ ಅದರ ಮೂಲ ಸ್ವರೂಪಕ್ಕೆ ಧಕ್ಕೆ ತರುತ್ತಿರುವುದು ಅಕ್ಷಮ್ಯ. ಪಾರಂಪರಿಕ ಕಟ್ಟಡಗಳಿಗೆ ಕೈ ಹಾಕಬೇಡಿ! ಈ ಕೂಡಲೇ ನವೀಕರಣ ಕಾಮಗಾರಿಯನ್ನು ನಿಲ್ಲಿಸಿ!ʼʼ ಎಂದು ಆಗ್ರಹಿಸಿದೆ.

ʼಕುಮಾರ ಕೃಪʼ ಕಟ್ಟಡದ ಪ್ರಾಮುಖ್ಯತೆ

ಕುಮಾರ ಕೃಪ ಅತಿಥಿಗೃಹದ ಮುಖ್ಯ ಕಲ್ಲಿನ ಕಟ್ಟಡ 1856ರಲ್ಲಿ ನಿರ್ಮಾಣವಾಯಿತು. ಇನ್ನು ಅದಕ್ಕೆ ಹೊಂದಿಕೊಂಡಿರುವ ಕಟ್ಟಡದ ಕಾಮಗಾರಿ 1960ರಲ್ಲಿ ಪೂರ್ಣಗೊಂಡಿತು. ಮುಖ್ಯ ಕಟ್ಟಡದಲ್ಲಿ 12 ಕೊಠಡಿಗಳಿವೆ. ಈ ಕಟ್ಟದ ಹಿಂಭಾಗದಲ್ಲಿ ರಾಜ್ಯ ಆತಿಥ್ಯ ಸಂಸ್ಥೆಯ ಬಿಲ್ಡಿಂಗ್‌ ಕೂಡ ಇದೆ. ಈ ಐತಿಹಾಸಿಕ ಕಟ್ಟಡದಲ್ಲಿ ಮಹಾತ್ಮ ಗಾಂಧೀಜಿ ತಂಗಿದ್ದರು ಎನ್ನುತ್ತದೆ ಇತಿಹಾಸ.

ಸಿಎಂ ಡಿಕೆ ಶಿವಕುಮಾರ್ ಅವರಿಗಾಗಿ ಪಾರಂಪರಿಕ ಕಟ್ಟಡ ಕುಮಾರ ಕೃಪ ಗೆಸ್ಟ್ ಹೌಸ್‌ನ ಒಳಾಂಗಣ ವಿನ್ಯಾಸವೇ ಬದಲಾಗಲಿದೆ. ಕೊಠಡಿ ನಂಬರ್ 1 ಸಂಪೂರ್ಣ ನೆಲಸಮವಾಗಲಿದ್ದು, ವಾಸ್ತು ಪ್ರಕಾರವೇ ನವೀಕರಣಗೊಳ್ಳುತ್ತಿದೆ ಎಂದು ಮೂಲಗಳು ತಿಳಿಸಿವೆ. ಈವರೆಗೆ ಕುಮಾರ ಕೃಪಾ ರಸ್ತೆಯಲ್ಲಿನ ಕೃಷ್ಣ ಸಿಎಂ ಗೃಹ ಕಚೇರಿಯಾಗಿತ್ತು. ಆದರೆ ಇದೀಗ ಈ ಸಂಪ್ರದಾಯ ಮುರಿಯಲು ನೂತನ ಸಿಎಂ ಡಿಕೆಶಿ ಮುಂದಾಗಿದ್ದು, ಕುಮಾರ ಕೃಪಾ ಅತಿಥಿ ಗೃಹವನ್ನು ಗೃಹ ಕಚೇರಿ ಮಾಡಲು ತೀರ್ಮಾನಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author