ಬೆಂಗಳೂರು, ಆ.30: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿಗೆ (Gruhalakshmi Scheme) ಮೂರು ವರ್ಷಗಳ ಸಂಭ್ರಮ ಹಿನ್ನೆಲೆಯಲ್ಲಿ ರಾಜ್ಯದ ಪ್ರಸಿದ್ಧ ಸ್ಮಾರಕಗಳು ಗುಲಾಬಿ ಬಣ್ಣದಲ್ಲಿ ಕಂಗೊಳಿಸಿವೆ. ಈ ಮಹತ್ವಾಕಾಂಕ್ಷಿ ಯೋಜನೆಗೆ 3 ವರ್ಷ ಪೂರ್ಣಗೊಂಡಿದ್ದು, ಈ ಸಂಭ್ರಮದ ಸವಿನೆನಪಿಗಾಗಿ ಬೆಂಗಳೂರಿನ ವಿಧಾನಸೌಧ, ಬೆಳಗಾವಿಯ ಸುವರ್ಣಸೌಧ, ಮೈಸೂರು ಅರಮನೆ, ಚಿತ್ರದುರ್ಗದ ಕಲ್ಲಿನಕೋಟೆ, ಹಂಪಿಯ ಕಲ್ಲಿನರಥ, ಮಂಗಳೂರಿನಲ್ಲಿರುವ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಕಟ್ಟಡ, ಬೆಳಗಾವಿ ಕಿತ್ತೂರು ಚೆನ್ನಮ್ಮ ವೃತ್ತಗಳು ಭಾನುವಾರ ಸಂಜೆ 6ರಿಂದ ರಾತ್ರಿ 10ರವರೆಗೆ ಗುಲಾಬಿ ಬಣ್ಣದ ದೀಪಾಲಂಕಾರದ ಬೆಳಕಿನಲ್ಲಿ ಕಂಗೊಳಿಸಿದವು.


ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಈ ವಿದ್ಯುತ್ ದೀಪಾಲಂಕಾರವನ್ನು ಆಯೋಜಿಸಿದೆ. ಪ್ರತಿ ಮನೆಯ ಯಜಮಾನಿಗೆ ಪ್ರತಿ ತಿಂಗಳು ರೂ 2,000/- ನೀಡುವ ಮೂಲಕ ಮಹಿಳೆಯರು ಸ್ವಾವಲಂಬಿ ಜೀವನ ರೂಪಿಸಿಕೊಳ್ಳಲು ಗೃಹಲಕ್ಷ್ಮಿ ಯೋಜನೆ ನೆರವಾಗಿದೆ.


ಸರ್ಕಾರವು ಗೃಹಲಕ್ಷ್ಮಿ ಯೋಜನೆ ಮೂರು ವರ್ಷಗಳನ್ನು ಪೂರೈಸುತ್ತಿರುವ ಈ ಸುಸಂದರ್ಭದಲ್ಲಿ ಮಹಿಳೆಯರ ಹೆಮ್ಮೆಯ ಸಂಕೇತವೆಂದು ಗುರುತಿಸಿರುವ ಗುಲಾಬಿ(PINK) ಬಣ್ಣದ ಬೆಳಕಿನ ವ್ಯವಸ್ಥೆಯನ್ನು ಮಾಡಲಾಗಿದೆ. ಇದುವರೆಗೂ ಸದರಿ ಯೋಜನೆ ಅಡಿ 1.20ಕೋಟಿಗೂ ಹೆಚ್ಚು ಫಲನುಭವಿಗಳ ಖಾತೆಗೆ 76,500 ಕೋಟಿ ರೂ.ಗೂ ಹೆಚ್ಚು ಹಣ ಪಾವತಿಸಲಾಗಿದೆ.

