ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ಅದ್ಧೂರಿಯಾಗಿ ನಡೆದ 3ನೇ ಅನಿವಾಸಿ ಕನ್ನಡಿಗರ ಸಮ್ಮೇಳನ

ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ 3ನೇ ಅನಿವಾಸಿ ಹಾಗೂ ಹೊರನಾಡ ಕನ್ನಡಿಗರ ಸಮ್ಮೇಳನ ಇತ್ತೀಚೆಗೆ ಅದ್ಧೂರಿಯಾಗಿ ಜರುಗಿತು. ಸಮ್ಮೇಳನದ ಸಮ್ಮೇಳನಾಧ್ಯಕ್ಷೆಯಾಗಿ ಸುಮಾ ಮಹೇಶ್ ಗೌಡ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿದೇಶದಲ್ಲಿ ನೆಲೆಸಿದ್ದರೂ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ಗಟ್ಟಿಯಾದ ನಂಟನ್ನು ಉಳಿಸಿಕೊಂಡಿರುವ ಅನಿವಾಸಿ ಕನ್ನಡಿಗರು, ಮುಂದಿನ ಪೀಳಿಗೆಗೂ ಕನ್ನಡದ ಶ್ರೀಮಂತ ಪರಂಪರೆಯನ್ನು ಪರಿಚಯಿಸುವ ಮಹತ್ತರ ಜವಾಬ್ದಾರಿ ಹೊಂದಿದ್ದಾರೆ ಎಂದು ಹೇಳಿದ್ದಾರೆ.

ಬೆಂಗಳೂರು: ಕನ್ನಡ ನಾಡು–ನುಡಿ, ಸಂಸ್ಕೃತಿ ಹಾಗೂ ಪರಂಪರೆಯನ್ನು ವಿಶ್ವದಾದ್ಯಂತ ಪಸರಿಸುತ್ತಿರುವ ಅನಿವಾಸಿ ಕನ್ನಡಿಗರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವ ಉದ್ದೇಶದಿಂದ ಆಯೋಜಿಸಲಾಗಿದ್ದ 3ನೇ ಅನಿವಾಸಿ ಹಾಗೂ ಹೊರನಾಡ ಕನ್ನಡಿಗರ ಸಮ್ಮೇಳನ ಇತ್ತೀಚೆಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಅದ್ಧೂರಿಯಾಗಿ ನಡೆಯಿತು.

ಸಮ್ಮೇಳನದ ಸಮ್ಮೇಳನಾಧ್ಯಕ್ಷೆಯಾಗಿ ಸುಮಾ ಮಹೇಶ್ ಗೌಡ ಅಧ್ಯಕ್ಷತೆ ವಹಿಸಿ, ಅನಿವಾಸಿ ಕನ್ನಡಿಗರ ಕನ್ನಡಾಭಿಮಾನ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಕೊಡುಗೆಗಳನ್ನು ಮೆಚ್ಚಿ ಮಾತನಾಡಿದರು. ವಿದೇಶದಲ್ಲಿ ನೆಲೆಸಿದ್ದರೂ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯೊಂದಿಗೆ ಗಟ್ಟಿಯಾದ ನಂಟನ್ನು ಉಳಿಸಿಕೊಂಡಿರುವ ಅನಿವಾಸಿ ಕನ್ನಡಿಗರು, ಮುಂದಿನ ಪೀಳಿಗೆಗೂ ಕನ್ನಡದ ಶ್ರೀಮಂತ ಪರಂಪರೆಯನ್ನು ಪರಿಚಯಿಸುವ ಮಹತ್ತರ ಜವಾಬ್ದಾರಿ ಹೊಂದಿದ್ದಾರೆ ಎಂದು ಅವರು ಒತ್ತಿ ಹೇಳಿದರು.

Non Resident Kannadigas Conference

ಮೂರು ವರ್ಷಗಳ ಹಿಂದೆ ಮೂಡಿದ ಪರಿಕಲ್ಪನೆ

ಹೃದಯವಾಹಿನಿ ಮಂಗಳೂರು ಸ್ಥಾಪಕ ಅಧ್ಯಕ್ಷರು ಹಾಗೂ ಸಂಪಾದಕ ಕೆ.ಪಿ. ಮಂಜುನಾಥ್ ಸಾಗರ್ ಮಾತನಾಡಿ, ಅನಿವಾಸಿ ಕನ್ನಡಿಗರಿಗೆ ತಾಯ್ನಾಡಿನಲ್ಲಿ ಗೌರವ ಮತ್ತು ಆತ್ಮೀಯತೆ ನೀಡುವ ಉದ್ದೇಶದಿಂದ ಮೂರು ವರ್ಷಗಳ ಹಿಂದೆ ಈ ಸಮ್ಮೇಳನದ ಪರಿಕಲ್ಪನೆ ರೂಪುಗೊಂಡಿತು ಎಂದು ಹೇಳಿದರು. ಅವರ ನಿರಂತರ ಪ್ರಯತ್ನ ಮತ್ತು ಸಂಘಟನಾ ಶಕ್ತಿಯ ಫಲವಾಗಿ 2024ರಲ್ಲಿ ಪ್ರಥಮ ಸಮ್ಮೇಳನ ಯಶಸ್ವಿಯಾಗಿ ನಡೆಯಿತು. ಇದೀಗ ಸತತ ಮೂರನೇ ಬಾರಿಗೆ ಸಮ್ಮೇಳನವನ್ನು ಯಶಸ್ವಿಯಾಗಿ ಆಯೋಜಿಸಿ, ಈ ಮಹತ್ವದ ಕಾರ್ಯಕ್ರಮದ ಯಶಸ್ಸಿಗೆ ಪ್ರಮುಖ ರೂವಾರಿಯಾಗಿ ಅವರು ಮತ್ತೊಮ್ಮೆ ತಮ್ಮ ಸಂಘಟನಾ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದಾರೆ.

ಅನಿವಾಸಿ ಕನ್ನಡಿಗರು ದೇಶದಿಂದ ದೂರವಿದ್ದರೂ ಕನ್ನಡ ನಾಡು–ನುಡಿ ಮತ್ತು ಸಂಸ್ಕೃತಿಯೊಂದಿಗೆ ತಮ್ಮ ಭಾವನಾತ್ಮಕ ನಂಟನ್ನು ನಿರಂತರವಾಗಿ ಉಳಿಸಿಕೊಂಡಿದ್ದಾರೆ. ಅವರ ಸಾಧನೆ ಮತ್ತು ಸೇವೆಯನ್ನು ಗುರುತಿಸಿ ಗೌರವಿಸುವುದು ಇಂತಹ ಸಮ್ಮೇಳನಗಳ ಪ್ರಮುಖ ಉದ್ದೇಶವಾಗಿದೆ ಎಂದು ಅವರು ತಿಳಿಸಿದರು.

Bengaluru News

ಸಮ್ಮೇಳನದಲ್ಲಿ ಹಲವು ಕ್ಷೇತ್ರಗಳ ಗಣ್ಯರು ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು. ಪ್ರಥಮ ಅನಿವಾಸಿ ಕನ್ನಡಿಗರ ಸಮ್ಮೇಳನದ ಅಧ್ಯಕ್ಷರು ಹಾಗೂ ಅಬುದಾಬಿ ಕನ್ನಡ ಸಂಘದ ಅಧ್ಯಕ್ಷ ಡಾ. ಸರ್ವೋತ್ತಮ ಶೆಟ್ಟಿ, ಕರ್ನಾಟಕ ಅನಿವಾಸಿ ಭಾರತೀಯ ಸಮಿತಿಯ ಮಾಜಿ ಉಪಾಧ್ಯಕ್ಷ ಡಾ. ಆರತಿ ಕೃಷ್ಣ, ಎಂಎಲ್‌ಸಿ ಹಾಗೂ ಕರ್ನಾಟಕ ವಿಧಾನಪರಿಷತ್ತಿನ ಮಾಜಿ ಸಭಾಧ್ಯಕ್ಷ ಬಸವರಾಜ ಹೊರಟ್ಟಿ, ಬಹರೇನ್ ಕನ್ನಡ ಸಂಘದ ಅಧ್ಯಕ್ಷ ಅಜಿತ್ ಬಂಗೇರ, ಕನ್ನಡ ಸಂಘದ ಮಾಜಿ ಅಧ್ಯಕ್ಷ ವಿ.ಟಿ. ಶ್ರೀನಿವಾಸ್, ಇಸ್ರೇಲ್‌ನ ಉದ್ಯಮಿ ದಿನಕರ್ ಪುತ್ರನ್, ಎನ್‌ಆರ್‌ಐ ಸಂಘಟನೆಯ ಕೃಷ್ಣಮೂರ್ತಿ ಮುನಿಯಪ್ಪ ಅವರ ಪತ್ನಿ ಲಕ್ಷ್ಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಕಿರಣ್ ಸಿಂಗ್ ಹಾಗೂ ಖ್ಯಾತ ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಖ್ಯಾತ ಕನ್ನಡ ಚಲನಚಿತ್ರ ಹಾಗೂ ರಂಗಭೂಮಿ ನಟ ಮುಖ್ಯಮಂತ್ರಿ ಚಂದ್ರು ಅವರು ಸಹ ಸಮ್ಮೇಳನದಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.

ಕನ್ನಡ ಸೇವೆಯಲ್ಲಿ ಸುಮಾ ಮಹೇಶ್ ಗೌಡ

ಸುಮಾ ಮಹೇಶ್ ಗೌಡ ಅವರು ಕತಾರ್ ಸೇರಿದಂತೆ ವಿದೇಶಗಳಲ್ಲಿ ಕನ್ನಡ ಹಾಗೂ ಭಾರತೀಯ ಸಂಸ್ಕೃತಿಯ ಬೆಳವಣಿಗೆಗೆ ಹಲವು ವರ್ಷಗಳಿಂದ ಸಕ್ರಿಯವಾಗಿ ಕೊಡುಗೆ ನೀಡುತ್ತಿರುವ ಸಾಂಸ್ಕೃತಿಕ ಕಾರ್ಯಕರ್ತೆ ಹಾಗೂ ಸಮಾಜಮುಖಿ ವ್ಯಕ್ತಿತ್ವವಾಗಿ ಗುರುತಿಸಿಕೊಂಡಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮಗಳು, ಮಹಿಳಾ ಮತ್ತು ಮಕ್ಕಳ ಸಬಲೀಕರಣ ಹಾಗೂ ಕನ್ನಡಪರ ಚಟುವಟಿಕೆಗಳಲ್ಲಿ ಅವರ ನಿರಂತರ ಸೇವೆ ಗಮನಾರ್ಹವಾಗಿದೆ. ವಿಶೇಷವಾಗಿ ಕತಾರ್‌ನಲ್ಲಿ ಕನ್ನಡ ಸಂಸ್ಕೃತಿಯನ್ನು ಪಸರಿಸುವಲ್ಲಿ ಅವರು ವಹಿಸಿರುವ ಪಾತ್ರ ಹಾಗೂ ಗಲ್ಫ್ ರಾಷ್ಟ್ರಗಳಲ್ಲಿ ಮೊದಲ ಮಹಿಳಾ ಡೊಳ್ಳು ಕುಣಿತ ತಂಡವನ್ನು ನಿರ್ಮಿಸಿ, ತರಬೇತಿ ನೀಡಿ ವೇದಿಕೆಯಲ್ಲಿ ಪ್ರದರ್ಶಿಸಿದ ಸಾಧನೆ ಕನ್ನಡಿಗರ ಹೆಮ್ಮೆಗೆ ಪಾತ್ರವಾಗಿದೆ.

ಅನಿವಾಸಿ ಕನ್ನಡಿಗರ ಸಾಧನೆ ಮತ್ತು ಸೇವೆಯನ್ನು ಗುರುತಿಸಿ ಗೌರವಿಸುವುದು, ಅವರ ಅನುಭವಗಳನ್ನು ಹಂಚಿಕೊಳ್ಳಲು ವೇದಿಕೆ ಕಲ್ಪಿಸುವುದು ಹಾಗೂ ಮುಂದಿನ ಪೀಳಿಗೆಯಲ್ಲಿ ಕನ್ನಡದ ಬಗ್ಗೆ ಅಭಿಮಾನ ಮೂಡಿಸುವುದು ಸಮ್ಮೇಳನದ ಪ್ರಮುಖ ಆಶಯವಾಗಿತ್ತು.

ತುಮಕೂರು ದಸರಾದಲ್ಲಿ ಮನಸೂರೆಗೊಂಡ ಕಾಡುಗೊಲ್ಲರ ವಿಶಿಷ್ಟ ‘ಅಲಗು ಕುಣಿತʼ ಪ್ರದರ್ಶನ

ಸಮ್ಮೇಳನದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಗೌರವಿಸಲಾಯಿತು. ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ವಿಚಾರ ವಿನಿಮಯ ಹಾಗೂ ಕನ್ನಡಪರ ಚಟುವಟಿಕೆಗಳು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದವು. ವಿದೇಶಗಳಲ್ಲಿ ನೆಲೆಸಿರುವ ಕನ್ನಡಿಗರು ತಮ್ಮ ವೃತ್ತಿ ಮತ್ತು ಬದುಕಿನೊಂದಿಗೆ ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಕೊಂಡೊಯ್ಯುವ ಸಂಕಲ್ಪದೊಂದಿಗೆ ಒಂದಾಗಬೇಕು ಎಂಬ ಸಂದೇಶದೊಂದಿಗೆ ಸಮ್ಮೇಳನವು ಅರ್ಥಪೂರ್ಣವಾಗಿ ಮುಕ್ತಾಯಗೊಂಡಿತು.