Bengaluru News: ಬೆಂಗಳೂರಿಗರೇ ಗಮನಿಸಿ; ನೀರು ವ್ಯರ್ಥ ಮಾಡಿದರೆ ಬೀಳುತ್ತೆ ದಂಡ
ನೀರು ವ್ಯರ್ಥವಾಗುವುದನ್ನು ತಡೆಯಲು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ(BWSSB) ಹೊಸ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ಅದರಂತೆ ಕೆಲವೊಂದು ನಿರ್ಬಂಧಗಳನ್ನು ಜಾರಿಗೊಳಿಸಿದೆ. ಅನಗತ್ಯವಾಗಿ ನೀರು ವ್ಯರ್ಥ ಮಾಡಿದವರಿಗೆ ದಂಡ ವಿಧಿಸಲು ಜಲಮಂಡಳಿ ಸಜ್ಜಾಗಿದೆ.

ಸಾಂದರ್ಭಿಕ ಚಿತ್ರ.

ಬೆಂಗಳೂರು: ಈಗಾಗಲೇ ಬೇಸಗೆ ಆರಂಭವಾಗಿದೆ. ಬಿಸಿಲ ಝಳಕ್ಕೆ ಜನರು ಹೈರಾಣಾಗಿದ್ದಾರೆ. ಈಗಲೇ ಹೀಗಾದರೆ ಮುಂದೆ ಹೇಗೆ ಎನ್ನುವ ಪ್ರಶ್ನೆಯೂ ಅನೇಕರನ್ನು ಕಾಡುತ್ತಿದೆ. ಈ ಮಧ್ಯೆ ನೀರು ವ್ಯರ್ಥವಾಗುವುದನ್ನು ತಡೆಯಲು ಬೆಂಗಳೂರು ನೀರು ಸರಬರಾಜು ಹಾಗೂ ಒಳಚರಂಡಿ ಮಂಡಳಿ
(BWSSB) ಹೊಸ ನಿಯಮಗಳನ್ನು ಜಾರಿಗೊಳಿಸಲು ಮುಂದಾಗಿದೆ. ಅದರಂತೆ ಕೆಲವೊಂದು ನಿರ್ಬಂಧಗಳನ್ನು ಜಾರಿಗೊಳಿಸಿದೆ (Bengaluru News). ಅನಗತ್ಯವಾಗಿ ನೀರು ವ್ಯರ್ಥ ಮಾಡಿದವರಿಗೆ ದಂಡ ವಿಧಿಸಲು ಜಲಮಂಡಳಿ ಸಜ್ಜಾಗಿದೆ. ನಿಯಮಗಳನ್ನು ಮೀರುವವರಿಗೆ ನಾನಾ ಹಂತಗಳಲ್ಲಿ ದಂಡ ವಿಧಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.
ಮೊದಲನೆಯ ಸಲ ನೀರು ವ್ಯರ್ಥ ಮಾಡಿದರೆ ಅಂತಹವರಿಗೆ 500 ರೂ. ದಂಡ ವಿಧಿಸಲು ನಿರ್ಧರಿಸಲಾಗಿದೆ. 2ನೇ ಬಾರಿ ಇದು ಮುಂದುವರಿದರೆ 5,000 ರೂ. ದಂಡ ಕಟ್ಟಬೇಕಾಗುತ್ತದೆ. ಮಾತ್ರವಲ್ಲ ಮೊದಲ ಪ್ರಕರಣದಡಿ ದಂಡ ಪ್ರಯೋಗವಾದ ದಿನದಿಂದ 2ನೇ ಪ್ರಕರಣದ ದಂಡ ಪ್ರಯೋಗವಾದ ದಿನದವರೆಗಿನ ಅವಧಿಗೆ ದಿನಕ್ಕೆ 500 ರೂ. ಹೆಚ್ಚುವರಿ ದಂಡ ಕೂಡ ಹಾಕಲಾಗುತ್ತದೆ ಎಂದು ಜಲಮಂಡಳಿ ಎಚ್ಚರಿಸಿದೆ.
ಕಾರಣವೇನು?
ಪ್ರಸ್ತುತ ನಗರದಲ್ಲಿ ಪ್ರತಿದಿನ ಉಷ್ಣಾಂಶ ಏರುತ್ತಿದೆ. ಅಲ್ಲದೆ ಮಳೆಯ ಕೊರತೆಯಿಂದ ಅಂತರ್ಜಲ ಕುಸಿದಿದ್ದು, ನೀರನ್ನು ಪೋಲು ಮಾಡುವುದನ್ನು ತಡೆಗಟ್ಟುವುದು ಅವಶ್ಯವೆಂದು ಮನಗಂಡು ದಂಡ ಪ್ರಯೋಗಕ್ಕೆ ಜಲ ಮಂಡಳಿ ಮುಂದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ: CM Siddaramaiah: ಯಾವ ಯೋಜನೆಗಳನ್ನು ನಿಲ್ಲಿಸುವ ಪ್ರಶ್ನೆಯೇ ಇಲ್ಲ: ಸಿದ್ದರಾಮಯ್ಯ ಸ್ಪಷ್ಟನೆ
ಈ ಎಲ್ಲ ಬಳಕೆ ನಿಷೇಧ
ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಕಾಯ್ದೆ-1964ರ ಕಲಂ 33 ಮತ್ತು 34ರ ಅನುಸಾರ ಕುಡಿಯುವ ನೀರನ್ನು ವಾಹನಗಳ ಸ್ವಚ್ಛತೆಗೆ, ಕೈದೋಟಕ್ಕೆ, ಕಟ್ಟಡ ನಿರ್ಮಾಣಕ್ಕೆ, ಮನೋರಂಜಕವಾಗಿ ಕಾರಂಜಿಯಂತಹ ಆಕರ್ಷಕ ವ್ಯವಸ್ಥೆಗೆ, ಸಿನಿಮಾ ಮಂದಿರ ಮತ್ತು ಮಾಲುಗಳಲ್ಲಿನ ಕುಡಿಯುವ ನೀರಿನ ಹೊರತು ಇನ್ನಿತರ ಬಳಕೆಗೆ ಮತ್ತು ರಸ್ತೆ ನಿರ್ಮಾಣ ಮತ್ತು ಸ್ವಚ್ಛತೆಗೆ ಬಳಸುವಂತಿಲ್ಲ.