ಬೆಂಗಳೂರು, ಜು. 9: ಆಕೆ ಕಣ್ಣುಗಳಲ್ಲಿ ನೂರಾರು ಕನಸು ತುಂಬಿಕೊಂಡಿದ್ದ 8ನೇ ತರಗತಿಯ ವಿದ್ಯಾರ್ಥಿನಿ. ಆದರೆ ಈಗ ಅರಳುವ ಮುನ್ನವೇ ಉದುರಿ ಬಿದ್ದ ಹೂವಿನಂತಾಗಿದೆ ಆಕೆಯ ಸ್ಥಿತಿ. ಬಾಳಿ ಬದುಕಬೇಕಿದ್ದ ಈ ಬಾಲೆ ಶಿಕ್ಷಕಿ ಬೈದರು, ಅವಮಾನ ಮಾಡಿದರೆಂಬ ಕಾರಣಕ್ಕೆ ಸಾವಿಗೆ ಶರಣಾಗಿದ್ದಾಳೆ (Crime News). ಆತ್ಮಹತ್ಯೆ ಮಾಡಿಕೊಂಡ ಬಾಲಕಿಯನ್ನು ಮಧುಶ್ರೀ ಎಂದು ಗುರುತಿಸಲಾಗಿದೆ. ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮರಸೂರು ಮಡಿವಾಳದಲ್ಲಿ ಈ ಹೃದಯಸ್ಪರ್ಶಿ ಘಟನೆ ನಡೆದಿದೆ.
ಮರಸೂರು ಶಾಲೆಯ ವಿಧ್ಯಾರ್ಥಿನಿ ಮಧುಶ್ರೀ ಮನೆಯಲ್ಲಿಯೇ ಬುಧವಾರ (ಜುಲೈ 8) ರಾತ್ರಿ ನೇಣು ಹಾಕಿಕೊಂಡು ಪ್ರಾಣ ಬಿಟ್ಟಿದ್ದು, ಗುರುವಾರ ಬೆಳಗ್ಗೆ ಪೋಷಕರು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಮನೆ ಮಗಳನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳದಲ್ಲಿ ಡೆತ್‌ನೋಟ್ ಕೂಡ ಪತ್ತೆಯಾಗಿದ್ದು, ಅದರಲ್ಲಿ ಆಕೆ ಆತ್ಮಹತ್ಯೆಗೆ ಕಾರಣ ತಿಳಿಸಿದ್ದಾಳೆ.
ಪ್ರೀತಿಸುವುದಾಗಿ ನಂಬಿಸಿ ಗರ್ಭಿಣಿಯಾಗಿಸಿದ ಯುವಕ; ಡೆತ್‌ನೋಟ್ ಬರೆದಿಟ್ಟು ವಿದ್ಯಾರ್ಥಿನಿ ಆತ್ಮಹತ್ಯೆ
ʼʼಅಮ್ಮ ನನ್ನನ್ನು ಕ್ಷಮಿಸಿʼʼ
ಅನಿವಾರ್ಯ ಕಾರಣಗಳಿಂದ ಆತ್ಮಹತ್ಯೆಯ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿರುವ ಮಧುಶ್ರೀ ಇದಕ್ಕಾಗಿ ಮನೆಯವರಲ್ಲಿ ಕ್ಷಮೆಯನ್ನೂ ಕೋರಿದ್ದಾಳೆ. ಡೆತ್‌ನೋಟ್ ಆಕೆ ಹಲವು ವಿಚಾರಗಳನ್ನು ಉಲ್ಲೇಖಿಸಿದ್ದಾಳೆ. ʼʼಶಾಲೆಯಲ್ಲಿ ನಡೆದ ಘಟನೆ ನನಗೆ ಬಹಳ ನೋವು ತಂದಿದೆ. ಶಿಕ್ಷಕಿ ಬೈದು ನನ್ನ ಮೇಲೆ ಇಲ್ಲಸಲ್ಲದ ಅಪರಾಧವನ್ನ ಹೊರಿಸಿದ್ದಾರೆ. ಈ ಅವಮಾನವನ್ನು ಸಹಿಸಿಕೊಂಡು ಬದುಕಲು ಆಗುತ್ತಿಲ್ಲ. ಮನಸ್ಸಿಗೆ ತೀವ್ರ ನೋವಾಗಿರುವ ಕಾರಣ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆʼʼ ಎಂದು ಬರೆದುಕೊಂಡಿದ್ದಾಳೆ.
ಯಾರದ್ದೂ ತಪ್ಪಿಲ್ಲ
ʼʼಈ ವಿಚಾರದಲ್ಲಿ ಅಮ್ಮ, ಅಕ್ಕ, ತಂಗಿ ಮತ್ತು ತಮ್ಮ ಯಾರದ್ದು ಕೂಡ ತಪ್ಪಿಲ್ಲ. ಅವರನ್ನು ಚೆನ್ನಾಗಿ ನೋಡಿಕೊಳ್ಳಿ. ಅಮ್ಮನನ್ನು ಯಾರು ಕೂಡ ಬೈಯ್ಯಬೇಡಿ. ನನಗೆ ಈ ಭೂಮಿ ಮೇಲೆ ಬದುಕಲು ಆರ್ಹತೆ ಇಲ್ಲ. ಅಮ್ಮ ಮತ್ತು ಎಲ್ಲರೂ ನನ್ನನ್ನ ಕ್ಷಮಿಸಿʼʼ ಎಂದು ವಿಧ್ಯಾರ್ಥಿನಿ ಮಧುಶ್ರೀ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾಳೆ. ಸೂರ್ಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನೀಟ್ ಪರೀಕ್ಷೆ ಬರೆದಿದ್ದ 18 ವರ್ಷದ ವಿದ್ಯಾರ್ಥಿನಿ ಆತ್ಮಹತ್ಯೆ
ಕಳವು ಆರೋಪದಿಂದ ನೊಂದು ವಿದ್ಯಾರ್ಥಿನಿ ಆತ್ಮಹತ್ಯೆ
ಕೆಲವು ತಿಂಗಳ ಹಿಂದೆ ಇಂತಹದ್ದೇ ಘಟನೆಯೊಂದು ಬಾಗಲಕೋಟೆಯಲ್ಲಿ ನಡೆದಿತ್ತು. ಶಿಕ್ಷಕಿಯೊಬ್ಬರು ಕಳ್ಳತನದ ಆರೋಪ ಹೊರಿಸಿ ಪರಿಶೀಲಿಸಿದ್ದಕ್ಕೆ ಕದಂಪುರದಲ್ಲಿ 8ನೇ ತರಗತಿ ವಿದ್ಯಾರ್ಥಿನಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಳು. ದಿವ್ಯಾ ಬಾರಕೇರ (14) ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ. ಕದಂಪುರ ಪ್ರೌಢ ಶಾಲೆಯ ಶಿಕ್ಷಕಿಯೊಬ್ಬರ 2 ಸಾವಿರ ರುಪಾಯಿ ಕಳೆದು ಹೋಗಿದ್ದು, ವಿದ್ಯಾರ್ಥಿಗಳ ಬಳಿ ವಿಚಾರಿಸಿದ್ದಾರೆ. ಬಳಿಕ ದಿವ್ಯಾ ಸೇರಿ ಕೆಲವು ವಿದ್ಯಾರ್ಥಿನಿಯರ ವಿರುದ್ಧ ಕಳ್ಳತನ ಆರೋಪ ಮಾಡಿ ಶಿಕ್ಷಕಿ, ಮುಖ್ಯಶಿಕ್ಷಕ ಸೇರಿದಂತೆ ಹಲವರು ದೇವಿ ಹೆಸರಲ್ಲಿ ಮುಂದೆ ಆಣೆ ಮಾಡಿಸಿದ್ದಾರೆ. ಅಲ್ಲದೇ ವಿದ್ಯಾರ್ಥಿನಿಯ ಸಮವಸ್ತ್ರ ಬಿಚ್ಚಿಸಿ ಪರಿಶೀಲನೆ ಮಾಡಿದ್ದು, ಇದೇ ಕಾರಣಕ್ಕೆ ಮನನೊಂದು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪ ಕೇಳಿ ಬಂದಿತ್ತು.
ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್ ಮಾಡಿ.