ಬೆಂಗಳೂರು: ಶಿವರಾಮ ಕಾರಂತರ ಮೂವರು ಮಕ್ಕಳೂ ಸೇರಿ ಬರೆದಿರುವ 'Growing Up Karanth' ಪುಸ್ತಕವು ಕಾರಂತರ ವ್ಯಕ್ತಿತ್ವವನ್ನು ನೋಡುವ ದೊಡ್ಡ ಪ್ರಯತ್ನವಾಗಿದೆ. ಈ ಪುಸ್ತಕದಲ್ಲಿ ಅತ್ಯಂತ ಸಮರ್ಥವಾಗಿ ತಂದೆಯವರನ್ನು ಮಕ್ಕಳು ಅರ್ಥ ಮಾಡಿಕೊಂಡಿದ್ದಾರೆ. ಕಾರಂತರ ಗುಣ ಕಥನಗಳ ಜತೆಗೆ ಸಣ್ಣಪುಟ್ಟ ಗುಣ-ದೋಷಗಳನ್ನು ಗುರುತಿಸುವ ಕೆಲಸ ಮಾಡಲಾಗಿದೆ. ಬಹುಶಃ ಇದು ಕಾರಂತರಿಗೆ ಮಕ್ಕಳು ಸಲ್ಲಿಸಿದ ಬಹುದೊಡ್ಡ ಶ್ರದ್ಧಾಂಜಲಿ ಎನ್ನಬಹುದು ಎಂದು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ತಿಳಿಸಿದರು.
ಶಿವರಾಮ ಕಾರಂತರ ಮೂವರು ಮಕ್ಕಳಾದ ಕೆ.ಉಲ್ಲಾಸ ಕಾರಂತ, ಮಾಲವಿಕಾ ಕಪೂರ ಮತ್ತು ಕ್ಷಮಾ ರಾವ್ ಬರೆದ ʼGrowing Up Karanthʼ ಕೃತಿಯ ಕನ್ನಡ ಅನುವಾದ ʼಕಾರಂತರ ಸುಳಿಯಲ್ಲಿʼ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಪುಸ್ತಕದ ಅನುವಾದಕರೂ ಆದ ವಿಶ್ವೇಶ್ವರ ಭಟ್ ಅವರು ಮಾತನಾಡಿದರು.
ಶಿವರಾಮ ಕಾರಂತರು ನಿಧನರಾದ 29 ವರ್ಷಗಳ ನಂತರ ಈ ಪುಸ್ತಕ ಹೊರಬರುತ್ತಿದೆ. ಬಹುಶಃ ಅವರು ಬದುಕಿದ್ದಾಗ ಈ ಪುಸ್ತಕವನ್ನು ಅವರ ಮೂವರು ಮಕ್ಕಳು ಬರೆದಿದ್ದರೆ ಒಂದಷ್ಟು ಪೂರ್ವಗ್ರಹ ಇರುತ್ತಿತ್ತೇನೋ, ಅಥವಾ ಅವರು ತೀರಿಕೊಂಡ ಒಂದೆರಡು ವರ್ಷಗಳ ನಂತರ ಪ್ರಕಟವಾಗಿದ್ದರೆ ಅದರಲ್ಲಿ ಹೆಚ್ಚು ಸಹಾನುಭೂತಿ, ಅನುಕಂಪ, ಶೋಕ ಇರುತ್ತಿತ್ತು. ಆದರೆ, 29 ವರ್ಷಗಳ ನಂತರ ಬಂದಿರುವುದರಿಂದ ತಂದೆಯವರಾಗಿ, ಮೇರು ವ್ಯಕ್ತಿಯಾಗಿ ಹಾಗೂ ಮೂರನೇ ಆಯಾಮದಲ್ಲಿ ನೋಡಲು ಸಾಧ್ಯವಾಗಿದೆ ಎಂದು ಹೇಳಿದರು.
ಕಾರಂತರು ಒಂದೇ ತೆಕ್ಕೆಗೆ ಸಿಗುವ ಒಬ್ಬ ವ್ಯಕ್ತಿಯಲ್ಲ. ಸಾಮಾನ್ಯವಾಗಿ ದೊಡ್ಡ ವ್ಯಕ್ತಿಗಳ ಮಕ್ಕಳಿಗೆ ಅಥವಾ ಹೆಂಡತಿಗೆ ತಮ್ಮ ತಂದೆ ಅಥವಾ ಗಂಡನನ್ನು ಅರ್ಥ ಮಾಡಿಕೊಳ್ಳುವುದು ಬಹಳ ಕಷ್ಟ. ಧಾರವಾಡದಲ್ಲಿ ವಾಮನ ಬೇಂದ್ರೆಯವರನ್ನು ಭೇಟಿಯಾದ ವೇಳೆ ನಿಮ್ಮ ತಂದೆಯವರ ಬಗ್ಗೆ ಏನು ಅನಿಸುತ್ತದೆ ಎಂದು ಕೇಳಿದ್ದೆ. ಅದಕ್ಕೆ ಪ್ರತಿಕ್ರಿಯಿಸಿದ ಅವರು, ತಂದೆಯವರ ಬಗ್ಗೆ ಏನು ಹೇಳಲಿಕ್ಕೆ ಇದೆ, ಒಂದಷ್ಟು ಕವನಗಳನ್ನು ಬರೆದಿದ್ದಾರೆ. ಆ ಕವನಗಳನ್ನು ಸೇರಿಸಿ ಪುಸ್ತಕ ಮಾಡಿದ್ದಾರೆ, ಅದಕ್ಕೆ ಜ್ಞಾನಪೀಠ ಪ್ರಶಸ್ತಿ ಬಂದಿದೆ. ಅವರ ಮಗನಾಗಿದ್ದರಿಂದ ಒಂದಷ್ಟು ವಿಮರ್ಶೆ ಮಾಡಿದ್ದೇನೆ. ಅಪ್ಪನ ಬಗ್ಗೆ ಏನೂ ತಿಳಿದುಕೊಳ್ಳಲಿಲ್ಲ ಎಂದರೆ ತಪ್ಪಾಗಿ ಭಾವಿಸುತ್ತಾರೆ ಎಂದು ಅವರ ಬಗ್ಗೆ ಒಂದಷ್ಟು ಬರೆದಿದ್ದೇನೆ ಎಂದಿದ್ದರು.
ವಾಮನ ಬೇಂದ್ರೆಯವರ ಮಾತುಗಳಿಂದ ನನಗೆ ಬಹಳ ನಿರಾಸೆಯಾಯಿತು, ಹಾಗೆಯೇ ಸಂತೋಷವೂ ಆಯಿತು. ಸಂತೋಷ ಯಾಕೆಂದರೆ ಅವರು ವಾಸ್ತವವಾದ ಅಭಿಪ್ರಾಯ ಹೇಳಿದ್ದಾರೆ ಎಂಬ ಕಾರಣ. ಬೇಸರ ಆಗಿದ್ದು ಯಾಕೆಂದರೆ, ಇಡೀ ಜಗತ್ತೇ ಕೊಂಡಾಡುತ್ತಿದೆ, ಆದರೆ, ಮಗನಿಗೆ ತಂದೆಯ ಪರಿಚಯ ಆಗಲಿಲ್ಲವಲ್ಲ ಎಂದು ಅನಿಸಿತು. ಅದು ವಾಮನ ಬೇಂದ್ರೆಯವರ ತಪ್ಪಲ್ಲ, ಬೇಂದ್ರೆಯವರ ವಿರಾಟ್ ಸ್ವರೂಪ. ನಾವು ಸಮುದ್ರಕ್ಕೆ ಹೋದರೆ ಅವರವರ ಸಾಮರ್ಥ್ಯಕ್ಕೆ ಅನುಸಾರವಾಗಿ ನೀರನ್ನು ಮೊಗೆದು ತರುತ್ತೇವೆ, ಅದೇ ರೀತಿ ವಾಮನ ಬೇಂದ್ರೆ ಅವರಿಗೆ ತಂದೆಯವರಿಂದ ಅಷ್ಟೇ ಮೊಗೆದು ತರಲು ಸಾಧ್ಯವಾಯ್ತು ಎನಿಸುತ್ತದೆ ಎಂದು ತಿಳಿಸಿದರು.
ಇನ್ನು ಮಾಜಿ ಪ್ರಧಾನಿ ವಾಜಪೇಯಿ ಅವರ ಬಯೋಗ್ರಫಿ ಬರೆಯುವ ಸಂದರ್ಭದಲ್ಲಿ ಇದೇ ರೀತಿಯ ಅನುಭವ ಆಯಿತು. ವಾಜಪೇಯಿ ಜತೆ 60 ವರ್ಷ ಕಳೆದಿದ್ದ ಕುಶಾಭಾವ್ ಠಾಕ್ರೆ ಅವರನ್ನು ಭೇಟಿಯಾಗಿದ್ದೆ. ಅವರು ತಮ್ಮ ಆಪ್ತನ ಬಗ್ಗೆ ಮಾತನಾಡುತ್ತಾ, ಮಧ್ಯ ಪ್ರದೇಶದಲ್ಲಿ ಓದುವಾಗ ವಾಜಪೇಯಿ ಬಹಳ ಕಿಲಾಡಿಯಾಗಿದ್ದರು. ಸ್ಕೂಲ್‌ನಲ್ಲಿ ಯಾವುದೋ ಕಲ್ಲಿನ ಹಿಂದೆ ಅಡಗಿ ಕೂರುತ್ತಿದ್ದರು, ಅವರನ್ನು ನಾವು ಹುಡುಕುತ್ತಿದ್ದೆವು ಎಂದು ಹೇಳಿದ್ದರು. ಹೀಗೆ 60 ವರ್ಷ ಒಬ್ಬ ವ್ಯಕ್ತಿಯನ್ನು ನೋಡಿದ್ದರೂ ಕೂಡ ಅವರು ಯಾರು ಎಂದು ಠಾಕ್ರೆ ಅವರಿಗೆ ಅರ್ಥವಾಗಿರಲಿಲ್ಲ. ಇದು ನಮ್ಮೆಲ್ಲರ ದೊಡ್ಡ ಸಮಸ್ಯೆ. ದೊಡ್ಡ ದೊಡ್ಡ ವ್ಯಕ್ತಿಗಳ ಮಕ್ಕಳನ್ನು ಕೇಳಿದಾಗ ತಂದೆಯವರ ಮಹತ್ವದ ಬಗ್ಗೆ ಗೊತ್ತೇ ಇರಲ್ಲ ಎಂದು ಹೇಳಿದರು.
ಆದರೆ, ಕಾರಂತರನ್ನು ಒಂದು ಪುಸ್ತಕದಲ್ಲಿ ಹಿಡಿದಿಡುವುದು ಬಹಳ ಕಷ್ಟದ ಕೆಲಸ. ಉಲ್ಲಾಸ್ ಅವರು ʼಗ್ರೋವಿಂಗ್ ಆಫ್ ಕಾರಂತ್ʼ ಇಂಗ್ಲಿಷ್ ಪುಸ್ತಕ ಕೊಟ್ಟಾಗ ನನಗೆ ಬಹಳ ಕುತೂಹಲ ಇತ್ತು. ಕಾರಂತರಂತಹ ಮಹಾನ್ ವ್ಯಕ್ತಿಗಳನ್ನು ಜನರು ಹತ್ತಾರು ಆಯಾಮಗಳಲ್ಲಿ ನೋಡುತ್ತಾರೆ. ಆ ಎಲ್ಲಾ ಆಯಾಮಗಳಲ್ಲಿ ವ್ಯಕ್ತಿಯನ್ನು ಹಿಡಿದಿಡುವುದು ಕಷ್ಟ. ಆದರೆ, ಕಾರಂತರ ಮಕ್ಕಳು ಎಲ್ಲೂ ಕೂಡ ತಂದೆಯವರ ಬಗ್ಗೆ ವೈಭವೀಕರಣ ಮಾಡಿಲ್ಲ. ಹಾಗೆಯೇ ತಂದೆಯನ್ನು ಟೀಕಿಸುವ ಭಾವನೆಯೂ ಪುಸ್ತಕದಲ್ಲಿ ಇಲ್ಲ. ಕಾರಂತರನ್ನು ಕಾರಂತರಾಗಿಯೇ ನೋಡುವ, ಅವರ ಮಕ್ಕಳಾಗಿಯೇ ನೋಡುವುದು ಅಥವಾ ಮೂರನೇಯವರಾಗಿ ನೋಡುವುದನ್ನು ಈ ಪುಸ್ತಕದಲ್ಲಿ ಗುರುತಿಸಬಹುದು.
ಈ ಕೃತಿಯ ವಿಶೇಷತೆ ಏನೆಂದರೆ, ಇದನ್ನು ಕಾರಂತರ ಮೂವರು ಮಕ್ಕಳೂ ಸೇರಿ ಬರೆದಿದ್ದಾರೆ. ಕಾರಂತರ ವ್ಯಕ್ತಿತ್ವವನ್ನು ನೋಡುವ ದೊಡ್ಡ ಪ್ರಯತ್ನವಾಗಿದೆ. ಈ ಪುಸ್ತಕದಲ್ಲಿ ಮೂವರೂ ಮಕ್ಕಳಿಗೆ ತಂದೆಯವರು ಸಿಕ್ಕಿದ್ದಾರೆ ಎನಿಸುತ್ತದೆ. ಅತ್ಯಂತ ಸಮರ್ಥವಾಗಿ ತಂದೆಯವರನ್ನು ಅರ್ಥ ಮಾಡಿಕೊಂಡಿದ್ದಾರೆ. ಕಾರಂತರ ಗುಣ ಕಥನಗಳ ಜತೆಗೆ ಸಣ್ಣಪುಟ್ಟ ಗುಣ-ದೋಷಗಳನ್ನು ಗುರುತಿಸುವ ಕೆಲಸ ಮಾಡಲಾಗಿದೆ. ಈ ಮೂಲಕ ಕಾರಂತರು ನಮ್ಮ ಕಣ್ಣಿಗೆ ಎಷ್ಟು ದೊಡ್ಡವರಂತೆ ಕಾಣುತ್ತಾರೆ ಎಂಬುವುದನ್ನು ಹೇಳದೆಯೇ ನಮ್ಮ ಮನಸ್ಸಿನಲ್ಲಿ ಸ್ಥಾಯಿ ರೂಪದಲ್ಲಿ ಇಡುವ ಪ್ರಯತ್ನವೂ ಈ ಕೃತಿಯಲ್ಲಿ ಇದೆ. ಬಹುಶಃ ಇದು ಕಾರಂತರಿಗೆ ಮಕ್ಕಳು ಸಲ್ಲಿಸಿದ ಬಹುದೊಡ್ಡ ಶ್ರದ್ಧಾಂಜಲಿ ಎನ್ನಬಹುದು ಎಂದು ವಿಶ್ವೇಶ್ವರ್ ಭಟ್ ತಿಳಿಸಿದರು.
Karantara Suliyalli Book: ವಿಶ್ವೇಶ್ವರ್ ಭಟ್ ಅವರ ‘ಕಾರಂತರ ಸುಳಿಯಲ್ಲಿ’ ಪುಸ್ತಕ ಲೋಕಾರ್ಪಣೆ
ಕಾರ್ಯಕ್ರಮದಲ್ಲಿ ಗ್ರಂಥಕರ್ತೃಗಳಾದ ಉಲ್ಲಾಸ್ ಕಾರಂತ, ಕ್ಷಮಾ ರಾವ್, ಮಾಲವಿಕಾ ಕಪೂರ್, ಪತ್ರಕರ್ತ ಎಸ್. ದಿವಾಕರ್, ವಿಮರ್ಶಕ ಎಸ್.ಆರ್. ವಿಜಯಶಂಕರ್, ಡಾ.ಅಜಯ್ ಕುಮಾರ್ ಸಿಂಗ್, ಚಿರಂಜೀವಿ ಸಿಂಗ್ ಶೇರಿ ನೂರಾರು ಮಂದಿ ಉಪಸ್ಥಿತರಿದ್ದರು.