ಬೆಂಗಳೂರು: ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಿಸಿ ಕೆಮಿಕಲ್ ತುಂಬಿದ್ದ ಬಕೆಟ್‌ನೊಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಮಗು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ (child death) ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನವೆಂಬರ್ 2ರಂದು ನಗರದ (Bengaluru) ಶ್ರೀರಾಮಪುರದ ಎಲ್. ಎನ್. ಪುರದಲ್ಲಿ 1 ವರ್ಷ 9 ತಿಂಗಳ ಮಗು ಸುಬ್ರಮಣಿ ಗಂಭೀರವಾಗಿ ಗಾಯಗೊಂಡಿತ್ತು. ಬಳಿಕ ಮಗುವಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಶುಕ್ರವಾರ ತಡರಾತ್ರಿ ಮೃತಪಟ್ಟಿದೆ.
ನವೆಂಬರ್ 2ರಂದು ಬೆಳಗ್ಗೆ ಸುಮಾರು 11 ಗಂಟೆ ವೇಳೆಗೆ ಈ ಘಟನೆ ಸಂಭವಿಸಿತ್ತು. ಮನೆ ಪಕ್ಕದಲ್ಲೇ ಇರುವ ಕಾಪರ್ ಮೇಕರ್ ಫ್ಯಾಕ್ಟರಿಯಲ್ಲಿ ಮಗು ಸುಬ್ರಮಣಿ ತನ್ನ ಅಕ್ಕನೊಂದಿಗೆ ಆಟವಾಡುತ್ತಿತ್ತು. ಈ ವೇಳೆ ಆಕಸ್ಮಿಕವಾಗಿ ಫ್ಯಾಕ್ಟರಿಯಲ್ಲಿ ಬಿಸಿ ಕೆಮಿಕಲ್ ತುಂಬಿದ ಬಕೆಟ್‌ಗೆ ಮಗು ಬಿದ್ದಿದೆ. ಪರಿಣಾಮ ಮಗುವಿನ ದೇಹಕ್ಕೆ ಗಂಭೀರ ಗಾಯಗಳಾಗಿದ್ದವು.
Bengaluru News: ಮಕ್ಕಳಾಗಲಿಲ್ಲ ಎಂದು ಹೀಯಾಳಿಸುತ್ತಿದ್ದ ಪತಿಯನ್ನೇ ಚಾಕುವಿನಿಂದ ಇರಿದು ಕೊಂದ ಪತ್ನಿ!
ತಕ್ಷಣ ಮಗುವನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ನಗರದ ಮತ್ತೊಂದು ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿತ್ತು. ಆದರೆ ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದ ಮಗು ತಡರಾತ್ರಿ ಕೊನೆಗೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ. ಘಟನೆಯ ಕುರಿತು ಶ್ರೀರಾಮಪುರ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ (UDR) ದಾಖಲಾಗಿದೆ.