ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಮಹಿಳೆಯರಿಗೆ ಗೌರವ ಸಲ್ಲಿಸಲು ಡಿಸೆಂಬರ್ 20ಕ್ಕೆ ಬೃಹತ್ ಮಾತೃಸಂಗಮ ಕಾರ್ಯಕ್ರಮ: ಡಾ.ಗಿರಿಧರ ಕಜೆ

Dr Giridhara Kaje: ಪ್ರತಿಬಿಂಬ ಸ್ಪರ್ಧಾ ಸೌರಭವನ್ನು 31 ವರ್ಷಗಳ ಹಿಂದೆ ಆರಂಭಿಸಲಾಯಿತು. ಇದು ಅಂದಿನಿಂದ ಇಂದಿನವರೆಗೂ ಸಮಾಜದ ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸಿಕೊಂಡು ಬಂದಿದೆ. ಈ ವರ್ಷ ವಿಶೇಷವಾಗಿ ರಾಜ್ಯ, ಹೊರ ರಾಜ್ಯಗಳ 13 ಪ್ರಾಂತ್ಯಗಳಲ್ಲಿ ಪ್ರತಿಬಿಂಬವನ್ನು ನಡೆಸಲಾಗಿದ್ದು, ಸಮಾಜದಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಹವ್ಯಕ ಮಹಾಸಭೆಯ ಅಧ್ಯಕ್ಷ ಡಾ. ಗಿರಿಧರ ಕಜೆ ತಿಳಿಸಿದ್ದಾರೆ.

ಬೆಂಗಳೂರು, ನ.18: ಸ್ಪರ್ಧೆಗಳ ಜತೆ ಅಸೂಯೆ ಜತೆಯಾಗಬಾರದು. ಸ್ಪರ್ಧೆಯು ಕ್ರೀಡಾ ಮನೋಭಾವ ಹಾಗೂ ಸಂಭ್ರಮಿಸುವ ಮನಸ್ಥಿತಿಯನ್ನು ಕಲಿಸಿಕೊಡಬೇಕು. ನಮ್ಮ ಪ್ರತಿಬಿಂಬ ಕಾರ್ಯಕ್ರಮದಲ್ಲಿ ಅಸೂಯೆ ಇಲ್ಲದ ಸ್ಪರ್ಧಾ ಮನೋಭಾವ ಹಾಗೂ ಪ್ರತಿಭೆಗಳನ್ನು ಸಂಭ್ರಮಿಸುವ ಸಹಜತೆ ಇದೆ ಎಂಬುದು ನಮ್ಮ‌ ಸಮಾಜದ ಹೆಮ್ಮೆ ಎಂದು ಹವ್ಯಕ ಮಹಾಸಭೆಯ ಅಧ್ಯಕ್ಷ ಡಾ. ಗಿರಿಧರ ಕಜೆ (Dr Giridhara Kaje) ಹೇಳಿದರು.

ಬೆಂಗಳೂರಿನ ಮಲ್ಲೇಶ್ವರದ ಹವ್ಯಕ ಭವನದಲ್ಲಿ ನಡೆದ 'ಪ್ರತಿಬಿಂಬ ಗ್ರ್ಯಾಂಡ್ ಫಿನಾಲೆ' ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅವರು, ಪ್ರತಿಬಿಂಬ ಸ್ಪರ್ಧಾ ಸೌರಭವನ್ನು 31 ವರ್ಷಗಳ ಹಿಂದೆ ಆರಂಭಿಸಲಾಯಿತು. ಇದು ಅಂದಿನಿಂದ ಇಂದಿನವರೆಗೂ ಸಮಾಜದ ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸಿಕೊಂಡು ಬಂದಿದೆ. ಈ ವರ್ಷ ವಿಶೇಷವಾಗಿ ರಾಜ್ಯ, ಹೊರ ರಾಜ್ಯಗಳ 13 ಪ್ರಾಂತ್ಯಗಳಲ್ಲಿ ಪ್ರತಿಬಿಂಬವನ್ನು ನಡೆಸಲಾಗಿದ್ದು, ಸಮಾಜದಿಂದ ಅಭೂತಪೂರ್ವ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.

Havyaka Mahasabha

ಡಿಸೆಂಬರ್ 20 ಕ್ಕೆ ಬೃಹತ್ ಮಾತೃಸಂಗಮ

ಮಹಿಳೆಯರಿಗೆ ಗೌರವ ಸಲ್ಲಿಸಿ ಸಂಭ್ರಮಿಸುವ ಕಾರ್ಯಕ್ರಮ ಮಾತೃಸಂಗಮವಾಗಿದ್ದು, ಬೆಂಗಳೂರಿನ ಅರಮನೆ ಮೈದಾನದಲ್ಲಿ ಈ ಬೃಹತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈಗಾಗಲೇ 115 ಪ್ರಾಂತ್ಯಗಳಲ್ಲಿ ಹವ್ಯಕ ಮಹಿಳಾ ವೇದಿಕೆಗಳನ್ನು ಸಂಘಟಿಸಲಾಗಿದ್ದು, ಡಿಸೆಂಬರ್ 20 ರ ಒಳಗೆ ರಾಜ್ಯ - ಹೊರ ರಾಜ್ಯ - ಹೊರದೇಶಗಳಲ್ಲಿ 150 ಹವ್ಯಕ ಮಹಿಳಾ ವೇದಿಕೆಯನ್ನು ಉದ್ಘಾಟಿಸಲಾಗುವುದು. ಆ ಮೂಲಕ 2000 ಕ್ಕೂ ಅಧಿಕ ಮಹಿಳಾ ಪದಾಧಿಕಾರಿಗಳು ಸಮಾಜ ಸಂಘಟನೆಯಲ್ಲಿ ತೊಡಗಿಸಿಕೊಳ್ಳಲಿದ್ದಾರೆ ಎಂದರು.

ಹವ್ಯಕ ಮಹಾಸಭೆಯಲ್ಲಿ ಬಹಳ ಮೊದಲಿನಿಂದಲೂ ಮಹಿಳೆಯರಿಗೆ ಪ್ರಧಾನ್ಯತೆ ನೀಡಲಾಗಿದ್ದು, 1950 ಹಾಗೂ 1960 ದಶಕದ ಆದಿಯಲ್ಲಿಯೇ ಮಹಾಸಭೆಯ ಅಧ್ಯಕ್ಷ ಪದವಿಯನ್ನು ಮಹಿಳೆಯರು ಅಲಂಕರಿಸಿದ್ದರು ಎಂದರು.

Giridhara Kaje

ಜಿ.ಎಸ್.ಟಿ. ಉಪ ಆಯುಕ್ತೆ ಸಹನಾ ಬಾಳ್ಕಲ್ ಮಾತನಾಡಿ, ಸ್ಪರ್ಧೆಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಮನೋಬಲ ವೃದ್ಧಿಯಾಗುತ್ತದೆ. ಸ್ಪರ್ಧೆಯಿಂದ ಸಂಘಟನೆ, ಸ್ಪರ್ಧಾ ಮನೋಭಾವವನ್ನು ಮಾತ್ರವಲ್ಲ, ಸುಂದರ ನೆನಪುಗಳನ್ನು ಹಾಗೂ ಜೀವನಾನುಭವಗಳನ್ನು ಕಟ್ಟಿಕೊಳ್ಳಬಹುದು. ಪ್ರತಿಬಿಂಬದಂತಹ ಕಾರ್ಯಕ್ರಮಗಳು ಇಂದಿನ ಕಾಲಕ್ಕೆ ಅತ್ಯಗತ್ಯವಾದ ಡಿಜಿಟಲ್ ಡಿಟಾಕ್ಸ್‌ಗೂ ಸಹಾಯಕ ಎಂದು ಅಭಿಪ್ರಾಯಪಟ್ಟರು.

ಇಸ್ರೋದ ನಿವೃತ್ತ ವಿಜ್ಞಾನಿ ಪಿ.ಜೆ. ಭಟ್ ಮಾತನಾಡಿ, ಹವ್ಯಕ ಮಹಾಸಭೆಯಿಂದ ಅನೇಕ ಸಂಘಟನಾತ್ಮಕ ಕಾರ್ಯಗಳು ನಡೆಯುತ್ತಿದ್ದು, ಕಳೆದ ಎರಡು ವಿಶ್ವ ಹವ್ಯಕ ಸಮ್ಮೇಳನಗಳು ಹವ್ಯಕ ಸಮಾಜಕ್ಕೆ ನಾಡಿನಲ್ಲಿ ವಿಶೇಷ ಮಾನ್ಯತೆಯನ್ನು ತಂದು ಕೊಟ್ಟಿದೆ ಎಂದರು.

ಉದ್ಯಮಿ ಆನಂದ ಭಟ್ ಮಾತನಾಡಿ, ಪ್ರತಿಭೆಗಳಿಗೆ ಅವಕಾಶವಿಲ್ಲದೇ ಪ್ರತಿಭೆಗಳು ಮುದುಡುವುದನ್ನು ಹಲವೆಡೆ ನೋಡುತ್ತೇವೆ. ಆದರೆ ಇಲ್ಲಿ ಪ್ರತಿಭೆಗಳಿಗೆ ವೇದಿಕೆಯನ್ನು ಕಲ್ಪಿಸಿಕೊಡುವ ಕಾರ್ಯ ನಡೆದಿದೆ. ಸುಪ್ತ ಪ್ರತಿಭೆಗಳನ್ನು ಹೊರತರಲು ಹಾಗೂ ಪ್ರತಿಭೆಯನ್ನು ಬೆಳೆಸಿಕೊಳ್ಳಲು ಪ್ರತಿಬಿಂಬ ಎಂಬುದು ಒಂದು ಅವಕಾಶ. ನಮ್ಮ ಜನಸಂಖ್ಯೆ ಕಡಿಮೆ ಇರಬಹುದು. ಆದರೆ ಎಲ್ಲಾ ಕ್ಷೇತ್ರದಲ್ಲಿ ನಾವು ನಮ್ಮದೇ ಆದ ಛಾಪು ಮೂಡಿಸಿದ್ದೇವೆ ಎಂಬುದು ಸಮಾಜದ ಹೆಮ್ಮೆ ಎಂದರು.

ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ, ಹುಬ್ಬಳ್ಳಿ, ಬೆಂಗಳೂರು, ಗೋವಾ, ಮುಂಬೈ ಜಿಲ್ಲೆಗಳ ವಿವಿಧ ಪ್ರಾಂತ್ಯಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ವಿಜೇತರಾದ ಸ್ಪರ್ಧಿಗಳಿಗೆ ಗ್ರ್ಯಾಂಡ್ ಫಿನಾಲೆ ನಡೆಯಿತು.

ಬೆಂಗಳೂರಿನ 25 ಮಹಿಳಾ ವೇದಿಕೆಗಳ ಉದ್ಘಾಟನೆ

ಇದಕ್ಕೂ ಮುನ್ನ ಬೆಂಗಳೂರಿನ ವಿವಿಧ 25 ಪ್ರಾಂತ್ಯಗಳ ಹವ್ಯಕ ಮಹಿಳಾ ವೇದಿಕೆಯನ್ನು ಉದ್ಘಾಟಿಸಲಾಯಿತು. ಡಾ. ಶಾರದಾ ಜಯಗೋವಿಂದ, ಉಪ‌ ಅರಣ್ಯ ಸಂರಕ್ಷಣಾಧಿಕಾರಿ ಹಿಮವತಿ ಭಟ್ ವೇದಿಕೆಯನ್ನು ಉದ್ಘಾಟಿಸಿ, ಮಹಿಳಾ ಪದಾಧಿಕಾರಿಗಳಿಗೆ ನಿಯುಕ್ತಿಪತ್ರ ನೀಡಿದರು‌. ಕಾರ್ಯಕ್ರಮದಲ್ಲಿ ಮಹಾಸಭೆಯ ಉಪಾಧ್ಯಕ್ಷ ಶ್ರೀಧರ ಜೆ. ಭಟ್ ಕೆಕ್ಕಾರು, ಪ್ರಧಾನ ಕಾರ್ಯದರ್ಶಿ ಸಿಎ. ವೇಣುವಿಘ್ನೇಶ ಸಂಪ, ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಭಟ್ ಮಲವಳ್ಳಿ, ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ಯಲಹಂಕ, ಪ್ರತಿಬಿಂಬ ಸಂಚಾಲಕ ದೀಪಕ ಹೆಗಡೆ ಗೋಳಿಕೈ, ಮಹಿಳಾ ವೇದಿಕೆ ಸಂಚಾಲಕಿ ಮಧುರಾ ಗಾಂವ್ಕರ್ ಹಾಗೂ ಇತರರು ಉಪಸ್ಥಿತರಿದ್ದರು.