ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಛತ್ರಪತಿ ಶಿವಾಜಿ ಮಹಾರಾಜರ ಸ್ವರಾಜ್ಯದ ಮಾದರಿಯಲ್ಲೇ ಭಾರತದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯಾಗಬೇಕು: ರಮೇಶ್ ಶಿಂದೆ

ಹಿಂದೂ ಜನಜಾಗೃತಿ ಸಮಿತಿ 25ನೇ ವರ್ಷಕ್ಕೆ ಕಾಲಿಟ್ಟ ಶುಭಸುದ್ದಿಯ ನಿಮಿತ್ತ ಬೆಂಗಳೂರಿನ ಮಾನಂದಿ ನಂಜುಂಡ ಶೆಟ್ಟಿ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ಹಿಂದುತ್ವನಿಷ್ಠರ ಸ್ನೇಹ ಸಮ್ಮೇಳನದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ರಮೇಶ್ ಶಿಂದೆ ಅವರು ಮಾತನಾಡಿದ್ದಾರೆ.

ಬೆಂಗಳೂರು: ಛತ್ರಪತಿ ಶಿವಾಜಿ ಮಹಾರಾಜರು ಸ್ವರಾಜ್ಯ ನಿರ್ಮಿಸಿದ್ದರಿಂದಲೇ ಇಂದು ಜನಮಾನಸದಲ್ಲಿ ಅಮರರಾಗಿದ್ದಾರೆ. ಅದೇ ಮಾದರಿಯಲ್ಲಿ ಭಾರತದ ಸುರಕ್ಷತೆ ಹಾಗೂ ಅಸ್ತಿತ್ವಕ್ಕಾಗಿ 'ಹಿಂದೂ ರಾಷ್ಟ್ರ' ಸ್ಥಾಪನೆ ಮಾಡುವುದು ಅತ್ಯಗತ್ಯವಾಗಿದೆ" ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ರಮೇಶ್ ಶಿಂದೆ ಪ್ರತಿಪಾದಿಸಿದರು. ನಗರದಲ್ಲಿ ಹಿಂದೂ ಜನಜಾಗೃತಿ ಸಮಿತಿ 25ನೇ ವರ್ಷಕ್ಕೆ ಕಾಲಿಟ್ಟ ಶುಭಸುದ್ದಿಯ ನಿಮಿತ್ತ ಮಾನಂದಿ ನಂಜುಂಡ ಶೆಟ್ಟಿ ಸಭಾಗೃಹದಲ್ಲಿ ಆಯೋಜಿಸಲಾಗಿದ್ದ ‘ಹಿಂದುತ್ವನಿಷ್ಠರ ಸ್ನೇಹ ಸಮ್ಮೇಳನ’ವನ್ನುದ್ದೇಶಿಸಿ ಅವರು ಮಾತನಾಡಿದರು.

ದೇಶದ ಆಂತರಿಕ ಭದ್ರತೆಗೆ ಸವಾಲಾಗಿರುವ ಅಕ್ರಮ ನುಸುಳುಕೋರರ ಸಮಸ್ಯೆಯನ್ನು ಉಲ್ಲೇಖಿಸಿ ಮ್ಯಾನ್ಮಾರ್‌ನಿಂದ 3,500 ಕಿ.ಮೀ ದಾಟಿ ಬಂದ ರೋಹಿಂಗ್ಯಾಗಳು ಜಮ್ಮುವಿನ ಸುಂಜುವಾನ್ ಸೇನಾ ಕ್ಯಾಂಪ್‌ಗಳ ಬಳಿ ನೆಲೆಸಿರುವುದು ಗಂಭೀರ ಭದ್ರತಾ ಲೋಪವಾಗಿದೆ. ದೇಶದ ವಿವಿಧೆಡೆ ವೇಗವಾಗಿ ನಡೆಯುತ್ತಿರುವ ಅನಧಿಕೃತ ಜನಸಂಖ್ಯಾ ಬದಲಾವಣೆಯು (Demographic Change) ಭಾರತದ ಭವಿಷ್ಯದ ಸುರಕ್ಷತೆಗೆ ಭೀಕರ ಬೆದರಿಕೆಯೊಡ್ಡುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಇದಲ್ಲದೆ, ಪರವಾನಗಿ ಇಲ್ಲದೆ ನಡೆಯುವ ಬೃಹತ್ ಸ್ಕ್ರ್ಯಾಪ್‌ಯಾರ್ಡ್‌ಗಳು ಅಕ್ರಮ ನುಸುಳುಕೋರರ ಅಡಗುದಾಣಗಳಾಗುತ್ತಿದ್ದು, ಪಾಲಿಕೆ ನಿಯಮಗಳನ್ನು ಉಲ್ಲಂಘಿಸಿ ರಸ್ತೆಬದಿಯಲ್ಲಿ ನಡೆಯುವ ಅಕ್ರಮ ಮಾಂಸ ಮಾರಾಟವು ಆರೋಗ್ಯ ಮತ್ತು ಭದ್ರತೆಗೆ ಅಪಾಯ ತರುತ್ತಿದೆ ಎಂದು ವಿವರಿಸಿದರು. ಅದಕ್ಕಾಗಿ ಸಮರ್ಥ ಭಾರತ ಮತ್ತು ಸುರಕ್ಷಿತ ‘ಹಿಂದೂ ರಾಷ್ಟ್ರ’ ನಿರ್ಮಾಣಕ್ಕಾಗಿ ಅನಧಿಕೃತ ಸ್ಕ್ರ್ಯಾಪ್‌ಯಾರ್ಡ್‌ ಹಾಗೂ ಅಕ್ರಮ ಮಾಂಸ ಮಾರಾಟದ ವಿರುದ್ಧ ನೂತನ ಅಭಿಯಾನಗಳನ್ನು ಪ್ರಾರಂಭಿಸಲಾಗುವುದು ಎಂದು ತಿಳಿಸಿದರು.

'ಗಜ್ವಾ-ಎ-ಹಿಂದ್' ಮತ್ತು 'ವಿಷನ್ 2047' ನಂತಹ ದೇಶವಿರೋಧಿ ಆಪತ್ತುಗಳ ವಿರುದ್ಧ ಯುವಜನತೆ ಜಾಗೃತರಾಗಬೇಕು ಎಂದರು. ಹಿಂದೂ ಕಾರ್ಯಕರ್ತರ ರಕ್ಷಣೆಗೆ 'ಪೋಲಿಸ್ ದೂರು ಪ್ರಾಧಿಕಾರ' ಮತ್ತು ದೇವಸ್ಥಾನಗಳ ಸುರಕ್ಷತೆಗೆ 'ಮಂದಿರ ಮಹಾಸಂಘ' ಸ್ಥಾಪಿಸಲಾಗಿದೆ ಎಂದು ತಿಳಿಸಿದರು.

ಮನೆ-ಮನೆಯಲ್ಲಿ 'ಕ್ಷಾತ್ರತ್ವ' ಜಾಗೃತಿಗೆ ಪ್ರಮೋದ್ ಮುತಾಲಿಕ್ ಕರೆ

_Hindu Janajagruti Samiti (1)

ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್‌ ಮುತಾಲಿಕ್ ಮಾತನಾಡಿ, ಹಿಂದೂ ಜನಜಾಗೃತಿ ಸಮಿತಿಯು ಅಧ್ಯಾತ್ಮದ ತಳಹದಿಯ ಮೇಲೆ ಭಕ್ತಿ ಮತ್ತು ಶಕ್ತಿ'ಯ ರಾಷ್ಟ್ರೀಯತೆಯ ಜಾಗೃತಿ ಮೂಡಿಸುತ್ತಿದೆ. ಮುಂಬರುವ ಸಂಘರ್ಷದ ದಿನಗಳನ್ನು ಎದುರಿಸಲು ಪ್ರತಿಯೊಬ್ಬರೂ ಶಾರೀರಿಕವಾಗಿ, ಮಾನಸಿಕವಾಗಿ ಮತ್ತು ಕ್ಷಾತ್ರತ್ವ'ದ ಜಾಗೃತಿಯೊಂದಿಗೆ ಸಿದ್ಧರಾಗಬೇಕಿದೆ ಎಂದು ಕರೆ ನೀಡಿದರು.

ವಂದೇ ಮಾತರಂ ಗೀತೆಯ ತುಷ್ಟೀಕರಣವನ್ನು ಖಂಡಿಸಿದ ಅವರು, ಧರ್ಮ ರಕ್ಷಣೆಗೆ ಹಿಂದೂ ರಾಷ್ಟ್ರ' ಸ್ಥಾಪನೆ ಹಾಗೂ ಕಟ್ಟುನಿಟ್ಟಿನ ಗೋಹತ್ಯೆ ನಿಷೇಧ ಕಾನೂನು ಜಾರಿಗೆ ತರುವುದು ಅನಿವಾರ್ಯ ಎಂದು ಪ್ರತಿಪಾದಿಸಿದರು. ಹಲಾಲ್ ಮತ್ತು ಲವ್ ಜಿಹಾದ್‌ನಂತಹ ವಿಷಯಗಳು ರಾಷ್ಟ್ರ ಮತ್ತು ಧರ್ಮದ ಮೇಲಷ್ಟೇ ಅಲ್ಲದೆ ಹಿಂದೂ ಸಮಾಜದ ಮೇಲೆ ಬೀರುತ್ತಿರುವ ದುಷ್ಪರಿಣಾಮಗಳ ಕುರಿತು ಆಧಾರಸಹಿತವಾಗಿ, ಅಂಕಿ-ಅಂಶಗಳೊಂದಿಗೆ ಅಧ್ಯಯನ ನಡೆಸಿ ಸಾವಿರಾರು ಪ್ರಬುದ್ಧ ಜಾಗೃತಿ ಪುಸ್ತಕಗಳನ್ನು ಪ್ರಕಟಿಸಲಾಗಿದೆ. ಧರ್ಮಜಾಗೃತಿ ಸಭೆಗಳು, ಮನೆ-ಮನೆ ಸಂಪರ್ಕ ಹಾಗೂ ಧಾರ್ಮಿಕ ಶಿಕ್ಷಣದ ಮೂಲಕ ಪ್ರಖರ ರಾಷ್ಟ್ರೀಯತೆಯ ವಿಚಾರಧಾರೆಗಳನ್ನು ಬಿತ್ತಲಾಗುತ್ತಿದೆ ಎಂದರು. ಧರ್ಮ, ದೇಶ, ಧರ್ಮಗ್ರಂಥಗಳು ಹಾಗೂ ಗೋಮಾತೆಯ ರಕ್ಷಣೆಗಾಗಿ ಪ್ರತಿಯೊಬ್ಬ ಹಿಂದೂವೂ ಹಿಂಜರಿಕೆಯಿಲ್ಲದೆ ಧೈರ್ಯದಿಂದ ಕ್ಷಾತ್ರತ್ವ'ವನ್ನು ಬೆಳೆಸಿಕೊಳ್ಳುವುದು ಕಾಲದ ಅತ್ಯಂತ ಅನಿವಾರ್ಯ ಅಗತ್ಯವಾಗಿದೆ ಎಂದು ಜಾಗೃತಿ ಮೂಡಿಸಲಾಗುತ್ತಿದೆ ಎಂದರು.

_Hindu Janajagruti Samiti

1,000ಕ್ಕೂ ಹೆಚ್ಚು ಸಂಘಟನೆಗಳನ್ನು ಒಗ್ಗೂಡಿಸಿದ ಹಿಂದೂ ಜನಜಾಗೃತಿ ಸಮಿತಿ

ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಮೋಹನ್ ಗೌಡ ಅವರು ಮಾತನಾಡಿ, ಇಂದು ದೇಶದ 22 ರಾಜ್ಯಗಳಲ್ಲಿ ಅವಿರತವಾಗಿ ಕಾರ್ಯನಿರ್ವಹಿಸುತ್ತಿದೆ. ಹಿಂದೂ ರಾಷ್ಟ್ರದ ಸ್ಥಾಪನೆಯ ಸಂಕಲ್ಪದೊಂದಿಗೆ ಕಳೆದ 25 ವರ್ಷಗಳಿಂದ ಸಮಿತಿಯು ಧರ್ಮ ಪ್ರಚಾರ, ರಕ್ಷಣೆ ಮತ್ತು ಸಂಘಟನೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದೆ. ಧರ್ಮದ ಮೇಲಿನ ಆಘಾತಗಳ ವಿರುದ್ಧ ಸಮಿತಿಯು 3,000ಕ್ಕೂ ಹೆಚ್ಚು ಆಂದೋಲನಗಳನ್ನು ನಡೆಸಿದೆ. ರಾಷ್ಟ್ರೀಯ ಹಿಂದೂ ರಾಷ್ಟ್ರ ಅಧಿವೇಶನದ ಮೂಲಕ 1000 ಕ್ಕೂ ಅಧಿಕ ಹಿಂದೂ ಸಂಘಟನೆಯನ್ನು ಒಗ್ಗೂಡಿಸಿದೆ ಎಂದರು. ಶಾಲೆಗಳಲ್ಲಿ ಬೈಬಲ್ ಕಡ್ಡಾಯಗೊಳಿಸಿದ್ದನ್ನು ರದ್ದುಪಡಿಸುವುದು, ಧರ್ಮನಿಂದನೆ ಮಾಡುವ ಶೋಗಳನ್ನು ಕಾನೂನುಬದ್ಧವಾಗಿ ತಡೆಯುವುದು, ಹಲಾಲ್ ಮುಕ್ತ ಅಭಿಯಾನ ಮತ್ತು ದೇವಸ್ಥಾನಗಳ ಜಾತ್ರೆಗಳಲ್ಲಿ ಧಾರ್ಮಿಕ ನಿಯಮಗಳ ಪಾಲನೆಗಾಗಿ ಸಮಿತಿಯು ಯಶಸ್ವಿಯಾಗಿ ಹೋರಾಡಿದೆ. 'ರಣರಾಗಿಣಿ' ಮಹಿಳಾ ವಿಭಾಗ ಹಾಗೂ 'ರಾಷ್ಟ್ರಭಕ್ತ ಅಧಿವಕ್ತಾ ಸಮಿತಿ' ಮೂಲಕ ವಕೀಲರ ಕಾನೂನು ನೆರವು ನೀಡಲಾಗುತ್ತಿದ್ದು, ರಾಷ್ಟ್ರಧ್ವಜ ಗೌರವ ಅಭಿಯಾನದ ಮೂಲಕ ರಾಷ್ಟ್ರ ರಕ್ಷಣೆಯ ಕಾರ್ಯವನ್ನೂ ಅಷ್ಟೇ ಅಲ್ಲದೆ ಸಮಿತಿಯ ಕಾನೂನು ಹೋರಾಟದ ಬಳಿಕ ಪೊಲೀಸ್ ದೂರು ಪ್ರಾಧಿಕಾರದ ಸ್ಥಾಪನೆಯಾಗಲು ಸಾಧ್ಯವಾಯಿತು.

ಈ ಸಮ್ಮೇಳನದಲ್ಲಿ ಹಿಂದೂ ಮುಖಂಡರಾದ ಪ್ರಶಾಂತ್ ಸಂಬರ್ಗಿ, ಶಿವಕುಮಾರ್, ಶ್ರೀ ಆರೂಢ ಭಾರತಿ ಸ್ವಾಮೀಜಿ, ರಾಷ್ಟ್ರೀಯ ಸ್ವಯಂ ಸೇವಕ ಸಂಘ, ರಾಷ್ಟ್ರ ರಕ್ಷಣಾ ಪಡೆ, ಶ್ರೀರಾಮ ಸೇನೆ, ವಿಶ್ವ ಹಿಂದೂ ಪರಿಷತ್ ಸೇರಿದಂತೆ ವಿವಿಧ ಹಿಂದುತ್ವಪರ ಸಂಘಟನೆಗಳ ಪ್ರಮುಖರು, ಚಿಂತಕರು, ವಕೀಲರು ಹಾಗೂ ನೂರಾರು ಸಂಖ್ಯೆಯಲ್ಲಿ ಧರ್ಮಪ್ರೇಮಿ ಕಾರ್ಯಕರ್ತರು ಉಪಸ್ಥಿತರಿದ್ದರು.