ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

TET Exam: ಕನ್ನಡದಲ್ಲೂ ಟಿಇಟಿ ಪರೀಕ್ಷೆ ನಡೆಸಿ; ಮಹಾರಾಷ್ಟ್ರ ಸರ್ಕಾರಕ್ಕೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಪತ್ರ

ಮಹಾರಾಷ್ಟ್ರದ ಕನ್ನಡ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಕನ್ನಡದಲ್ಲೇ ಟಿಇಟಿ ಬರೆಯಲು ಅವಕಾಶ ನೀಡಬೇಕು. ಎಲ್ಲಾ ಶಿಕ್ಷಕರ ನೇಮಕಾತಿ ಅಧಿಸೂಚನೆಗಳಲ್ಲಿ ಈ ಆಯ್ಕೆಯನ್ನು ಒದಗಿಸಬೇಕು. ಕನ್ನಡ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಆದ್ಯತೆಯ ಮೇರೆಗೆ ಭರ್ತಿ ಮಾಡಬೇಕು ಎಂದು ಮಹಾರಾಷ್ಟ್ರ ಸರ್ಕಾರಕ್ಕೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಮನವಿ ಮಾಡಿದ್ದಾರೆ.

ಕರ್ನಾಟಕದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌.

ಬೆಂಗಳೂರು: ಮಹಾರಾಷ್ಟ್ರದ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರಿಗೆ, ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು (ಟಿಇಟಿ-TET Exam) ಕನ್ನಡ ಮಾಧ್ಯಮದಲ್ಲೂ ನಡೆಸುವಂತೆ ಮಹಾರಾಷ್ಟ್ರ ಸರ್ಕಾರವನ್ನು ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್‌ ಅವರು ಕೋರಿದ್ದಾರೆ.

ಈ ಬಗ್ಗೆ ಪತ್ರ ಮಹಾರಾಷ್ಟ್ರ ಮುಖ್ಯ ರಾಜೇಶ್‌ ಅಗರವಾಲ್‌ ಅವರಿಗೆ ಬರೆದಿರುವ ಅವರು, ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಕನ್ನಡ ಮಾಧ್ಯಮ ಶಾಲೆಗಳ ಶಿಕ್ಷಕರ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಆದರೆ, ಅಲ್ಲಿ ಟಿಇಟಿ ಪರೀಕ್ಷೆಯನ್ನು ಕನ್ನಡ ಮಾಧ್ಯಮದಲ್ಲಿ ಬರೆಯಲು ಅವಕಾಶವಿಲ್ಲದ ಕಾರಣ ಶಿಕ್ಷಕರಲ್ಲಿ ಆತಂಕ ಮೂಡಿದೆ. ಈ ಹಿನ್ನೆಲೆಯಲ್ಲಿ ಕನ್ನಡ ಮಾಧ್ಯಮದಲ್ಲೂ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು ಎಂದು ಪತ್ರದಲ್ಲಿ ವಿನಂತಿಸಿದ್ದಾರೆ.

ಸುಪ್ರೀಂ ಕೋರ್ಟ್‌ನ ಆದೇಶದಂತೆ 2027ರ ಒಳಗೆ ಸೇವೆಯಲ್ಲಿರುವ ಎಲ್ಲಾ ಶಿಕ್ಷಕರು ಟಿಇಟಿ ಪರೀಕ್ಷೆಯಲ್ಲಿ ಉತ್ತೀರ್ಣರಾಗುವುದು ಕಡ್ಡಾಯವಾಗಿದೆ. ಪರೀಕ್ಷೆ ಕನ್ನಡದಲ್ಲಿ ಲಭ್ಯವಿಲ್ಲದಿದ್ದರೆ ಅಲ್ಲಿನ ಸಾವಿರಾರು ಶಿಕ್ಷಕರ ಉದ್ಯೋಗ ಭದ್ರತೆಗೆ ತೊಂದರೆಯಾಗಲಿದೆ.

ಕರ್ನಾಟಕ ಸರ್ಕಾರವು ತನ್ನ ರಾಜ್ಯದಲ್ಲಿರುವ ಮರಾಠಿ ಭಾಷಿಕರಿಗಾಗಿ ಟಿಇಟಿ ಪರೀಕ್ಷೆಯನ್ನು ಮರಾಠಿ ಮಾಧ್ಯಮದಲ್ಲಿಯೂ ನಡೆಸುತ್ತಿದೆ. ಇದೇ ರೀತಿಯ ಸೌಲಭ್ಯವನ್ನು ಮಹಾರಾಷ್ಟ್ರದ ಕನ್ನಡ ಭಾಷಿಕರಿಗೂ ನೀಡಬೇಕು ಎಂದು ಶಾಲಿನಿ ರಜನೀಶ್ ಅವರು ಮನವಿ ಮಾಡಿದ್ದಾರೆ.

ಮಹಾರಾಷ್ಟ್ರದ ಜತ್ತ, ಅಕ್ಕಲಕೋಟೆ, ದಕ್ಷಿಣ ಸೊಲ್ಲಾಪುರ ಮತ್ತು ಮುಂಬೈನ ಹಲವು ಭಾಗಗಳಲ್ಲಿ ಕನ್ನಡಿಗರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ರಾಜ್ಯದಲ್ಲಿ ಸುಮಾರು 377 ಕನ್ನಡ ಮಾಧ್ಯಮ ಶಾಲೆಗಳಿದ್ದು, 44,860ಕ್ಕೂ ಹೆಚ್ಚು ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.

ಪ್ರಮುಖವಾಗಿ ಮಹಾರಾಷ್ಟ್ರದ ಕನ್ನಡ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಕನ್ನಡದಲ್ಲೇ ಟಿಇಟಿ ಬರೆಯಲು ಅವಕಾಶ ನೀಡಬೇಕು. ಭವಿಷ್ಯದ ಎಲ್ಲಾ ಶಿಕ್ಷಕರ ನೇಮಕಾತಿ ಅಧಿಸೂಚನೆಗಳಲ್ಲಿ ಈ ಆಯ್ಕೆಯನ್ನು ಒದಗಿಸಬೇಕು. ಮಹಾರಾಷ್ಟ್ರದ ಕನ್ನಡ ಶಾಲೆಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ಆದ್ಯತೆಯ ಮೇರೆಗೆ ಭರ್ತಿ ಮಾಡಬೇಕು ಎಂದು ಮನವಿ ಮಾಡಲಾಗಿದೆ.

ಎಸ್ಸೆಸ್ಸೆಲ್ಸಿಯಲ್ಲಿ ಹಿಂದಿ ಭಾಷೆ ಪರೀಕ್ಷೆ ಅಂಕಕ್ಕೆ ಕೊಕ್‌: ಮುಖ್ಯ ಕಾರ್ಯದರ್ಶಿಗೆ ರಾಜ್ಯಪಾಲರ ಪತ್ರ

ಟಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಏಪ್ರಿಲ್ 16 ಕೊನೆಯ ದಿನಾಂಕವಾಗಿರುವುದರಿಂದ, ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿಗಳಾದ ರಾಜೇಶ್ ಅಗರ್ವಾಲ್ ಅವರು ತಕ್ಷಣ ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಮುಖ್ಯಕಾರ್ಯದರ್ಶಿಗಳು ವಿನಂತಿಸಿದ್ದಾರೆ.

ಟಿಇಟಿ ವಿಚಾರವಾಗಿ 'ಆದರ್ಶ ಕನ್ನಡ ಬಳಗ ಮಹಾರಾಷ್ಟ್ರ' ಸಂಘಟನೆಯು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರಕ್ಕೆ ಪತ್ರ ಬರೆದು, ಗಡಿಭಾಗದ ಕನ್ನಡಿಗರು ಎದುರಿಸುತ್ತಿರುವ ತಾರತಮ್ಯವನ್ನು ಗಮನಕ್ಕೆ ತಂದಿತ್ತು. ಈ ಮನವಿಗೆ ಸ್ಪಂದಿಸಿ ಮುಖ್ಯ ಕಾರ್ಯದರ್ಶಿ ಮಂಗಳವಾರ ಪತ್ರ ಬರೆದು ತುರ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ.