ಬೆಂಗಳೂರು: ವಿದ್ಯಾರ್ಥಿಗಳು ಕೇವಲ ಎಂಜಿನಿಯರ್, ಡಾಕ್ಟರ್ ಆಗಬೇಕೆಂದೇನಿಲ್ಲ. ಸತತ ಪರಿಶ್ರಮ ಪಟ್ಟರೆ ತಮ್ಮ ಆಸಕ್ತಿ-ಅಭಿರುಚಿಗೆ ತಕ್ಕಂತೆ ನಾನಾ ಅವಕಾಶಗಳು ಹೇರಳವಾಗಿ ಲಭ್ಯವಿದೆ. ಸಿನಿಮಾ-ಕಿರುತೆರೆ, ಯೂಟ್ಯೂಬ್, ಮಾಧ್ಯಮ, ಕ್ರೀಡೆ, ಸ್ವಂತ ಬಿಸಿನೆಸ್ ಸೇರಿ ನೂರಾರು ಕ್ಷೇತ್ರಗಳಲ್ಲಿ ಅಪಾರ ಸಾಧನೆ ಮಾಡಲು ಸಾಧ್ಯವಿದೆ. ಯಾವುದೇ ರಂಗದಲ್ಲಾದರೂ, ಸತತ ಪರಿಶ್ರಮದಿಂದ ಮಾತ್ರ ಯಶಸ್ಸು ಗಳಿಸಲು ಸಾಧ್ಯ ಎಂದು ಖ್ಯಾತ ನಟ, ನಿರ್ದೇಶಕ, ಲೇಖಕ ಹಾಗೂ ಕೆಎಎಸ್ ಅಧಿಕಾರಿಗಳಾದ ಸಂಗಮೇಶ್ ಉಪಾಸೆ (Sangamesh Upase) ಅವರು ಹೇಳಿದರು.
ಎಲೆಕ್ಟ್ರಾನಿಕ್ ಸಿಟಿ ಬಳಿಯ ಹುಸ್ಕೂರ್‌ನಲ್ಲಿರುವ ಸ್ಮೃತಿ ಅಕಾಡೆಮಿ ಸಿಬಿಎಸ್‌ಇ ಸ್ಕೂಲ್‌ನಲ್ಲಿ (Smrti Academy CBSE school) ಶನಿವಾರ ನಡೆದ, 'ಸ್ಮೃತಿ ಕನೆಕ್ಟ್ ವಿತ್ ಅಚೀವರ್ಸ್ʼ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
"ವಿದ್ಯಾರ್ಥಿಗಳು ಕೆಎಎಸ್, ಐಎಎಸ್ ಅಧಿಕಾರಿಗಳಾಗಬಹುದು. ಆದರೆ ಅದಕ್ಕಾಗಿ ಕಷ್ಟಪಟ್ಟು ಕಲಿಯುವುದು ಅವಶ್ಯಕ. ದಿನಕ್ಕೆ ಎಂಟು ಗಂಟೆ ಓದುವವರು ಹದಿನಾರು ಗಂಟೆಗಳ ಕಾಲ ಓದಲೂ ರೆಡಿ ಇರಬೇಕು. ಅಂಥ ತಪಸ್ಸಿನಂಥ ಅಧ್ಯಯನ ನಡೆಸಿದರೆ ಕೆಎಎಸ್, ಐಎಎಸ್ ಕನಸನ್ನು ನನಸಾಗಿಸಬಹುದು. ನಿಮ್ಮ ಪರಿಸ್ಥಿತಿ ಹೇಗೆಯೇ ಇರಲಿ, ಧೈರ್ಯ, ಶ್ರದ್ಧೆ, ಆತ್ಮ ವಿಶ್ವಾಸ ಮತ್ತು ಶ್ರಮದಿಂದ ಕಲಿತರೆ ಯಶಸ್ಸು ಸಿಗುತ್ತದೆ. ನಾನು ಚಿಕ್ಕವನಿದ್ದಾಗ ಯಾವುದೇ ಸೌಲಭ್ಯ ಇದ್ದಿರಲಿಲ್ಲ. ನಾನು ಸಾಮಾನ್ಯ ಗ್ರಾಮೀಣ ರೈತಾಪಿ ಕುಟುಂಬದಿಂದ ಬಂದವನು. ಧರಿಸಲು ಸಾಕಷ್ಟು ಬಟ್ಟೆಬರೆಗಳೂ ಇದ್ದಿರಲಿಲ್ಲ. ಶಾಲೆಗೆ ಹದಿನೈದು ಕಿಲೋಮೀಟರ್ ನಡೆದು ಹೋಗಬೇಕಿತ್ತು. ಹೋಟೆಲ್, ರೆಸ್ಟೊರೆಂಟ್‌ಗಳಲ್ಲಿ ಕೆಲಸ ಮಾಡುತ್ತಾ ಓದಿದೆ. ನಡುವೆ ನಾಟಕ, ಕಲೆ, ಸಾಹಿತ್ಯಗಳಲ್ಲೂ ಆಸಕ್ತಿ ಇತ್ತು. ಇವೆಲ್ಲವೂ ನನ್ನ ವ್ಯಕ್ತಿತ್ವವನ್ನು ರೂಪಿಸಿತುʼʼ ಎಂದು ಸಂಗಮೇಶ್ ತಿಳಿಸಿದರು.
ಮಕ್ಕಳು ಓದಿನ ಜತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಕ್ರಿಯರಾಗಬೇಕು. ಉತ್ತಮ ಸಂಸ್ಕಾರವನ್ನು ರೂಢಿಸಿಕೊಳ್ಳಬೇಕು. ಬದುಕಿನ ಸಾರ್ಥಕತೆಯನ್ನು ಸಾಧಿಸಲು ಮುಂದೆ ಗುರಿ ಇರಬೇಕು. ಗುರುಗಳ ಮಾರ್ಗದರ್ಶನವನ್ನು ತಪ್ಪದೇ ಪಾಲಿಸಬೇಕು. ಪೋಷಕರನ್ನು ಮತ್ತು ಹಿರಿಯರನ್ನು ಗೌರವಿಸಬೇಕು ಎಂದು ಮಕ್ಕಳಿಗೆ ಕಿವಿ ಮಾತು ತಿಳಿಸಿದರು. ಮಕ್ಕಳು ಕುತೂಹಲದಿಂದ ಕೇಳಿದ ಹಲವಾರು ಪ್ರಶ್ನೆಗಳಿಗೂ ಉತ್ತರಿಸಿದರು.
ಕಾರ್ಯಕ್ರಮದಲ್ಲಿ ಸ್ಮೃತಿ ಅಕಾಡೆಮಿಯ ವಿದ್ಯಾರ್ಥಿಗಳು, ಪೋಷಕರು ಭಾಗವಹಿಸಿದ್ದರು. ಶಾಲೆಯ ಸಹ ಸಂಸ್ಥಾಪಕರಾದ ರವಿ ರಾಮಚಂದ್ರ ಮತ್ತು ಪ್ರಾಂಶುಪಾಲರಾದ ಡಾ. ಅಮುದಾ ಸಿ. ಮುನಿರಾಜ್ ಭಾಗವಹಿಸಿದ್ದರು.