ಬೆಂಗಳೂರು: ನಮ್ಮ ಮೆಟ್ರೋ ನೇರಳೆ ಮಾರ್ಗದ ದೀಪಾಂಜಲಿ ನಗರ ಮತ್ತು ಮೈಸೂರು ರಸ್ತೆ ಮೆಟ್ರೋ ನಿಲ್ದಾಣಗಳ ನಡುವಿನ ಹಳಿಗೆ ವ್ಯಕ್ತಿಯೊಬ್ಬ ಸೋಮವಾರ ರಾತ್ರಿ ಹಾರಿದ್ದರಿಂದ ಮೆಟ್ರೊ ಸಂಚಾರ ವ್ಯತ್ಯಯಗೊಂಡಿತು. ರಾತ್ರಿ 8.15ರ ಹೊತ್ತಿಗೆ ನಿಲ್ದಾಣದಿಂದ ವ್ಯಕ್ತಿ ದೂರ ಸಾಗಿ ಹಳಿಗೆ ಹಾರಿದ್ದರಿಂದ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ವ್ಯಕ್ತಿ ಹಳಿಗೆ ಹಾರಿದ್ದು ಮೆಟ್ರೊ ಸಿಬ್ಬಂದಿಯ ಗಮನಕ್ಕೆ ಬಂದಿದ್ದರಿಂದ ಮೆಟ್ರೊ ರೈಲು ಡಿಕ್ಕಿಯಾಗುವುದು ಸ್ವಲ್ಪದರಲ್ಲೇ ತಪ್ಪಿದೆ. ಇದರಿಂದ ವಿಜಯನಗರದಿಂದ ಚಲ್ಲಘಟ್ಟ ನಡುವಿನ ಮೆಟ್ರೊ ರೈಲುಗಳ ಸಂಚಾರವನ್ನು ಅಲ್ಪ ಕಾಲ ತಡೆ ಹಿಡಿಯಲಾಯಿತು. ರಾತ್ರಿ 8.30ರ ನಂತರ ಮತ್ತೆ ಮೆಟ್ರೊ ಸಂಚಾರ ಆರಂಭಗೊಂಡಿತು ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ತಿಳಿಸಿದ್ದಾರೆ.
ಹಳಿ ಪ್ರವೇಶಿಸಿದವ ವ್ಯಕ್ತಿಯ ವಿವರ, ಯಾಕೆ ಹಳಿ ಮೇಲೆ ಹೋದರು ಎಂಬುದೆಲ್ಲ ಇನ್ನಷ್ಟೇ ಗೊತ್ತಾಗಬೇಕಿದೆ. ಈ ಘಟನೆಯಿಂದ ಪ್ರಯಾಣಿಕರಿಗೆ ಅನನುಕೂಲತೆ ಉಂಟಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.