ಬೆಂಗಳೂರು: ವಿದ್ಯಾರ್ಥಿನಿಯೊಬ್ಬಳು ಬೆಂಗಳೂರಿನ (Bengaluru) ಸದಾಶಿವನಗರದ ಸ್ಯಾಂಕಿ ಕೆರೆಗೆ ಹಾರಿ ಆತ್ಮಹತ್ಯೆ (Student Suicide) ಮಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಪ್ರೀತಿ ವಿಚಾರವಾಗಿ ಪೋಷಕರು ಬುದ್ಧಿ ಹೇಳಿದ್ದರಿಂದ ಮನನೊಂದು ವಿದ್ಯಾರ್ಥಿನಿ ಈ ರೀತಿಯ ನಿರ್ಧಾರ ತೆಗೆದುಕೊಂಡಿದ್ದಾಳೆ ಎಂದು ತಿಳಿದುಬಂದಿದೆ.
20 ವರ್ಷದ ತೇಜು ಮೃತ ವಿದ್ಯಾರ್ಥಿನಿ. ನಗರದ ಖಾಸಗಿ ಕಾಲೇಜಿನಲ್ಲಿ ಅಂತಿಮ ವರ್ಷದ ಬಿಕಾಂ ವ್ಯಾಸಂಗ ಮಾಡುತ್ತಿದ್ದ ಈಕೆ, ಕಾಲೇಜಿನಲ್ಲಿ ಯುವಕನೊಬ್ಬನನ್ನು ಪ್ರೀತಿಸುತ್ತಿದ್ದಳು. ಈ ವಿಷಯ ತಿಳಿದ ಪೋಷಕರು, ಇನ್ನೂ ಇಬ್ಬರಿಗೂ ಚಿಕ್ಕ ವಯಸ್ಸು, ಪ್ರೀತಿ ಮಾಡೋಕೆ ತುಂಬಾ ಟೈಮ್ ಇದೆ. ಈಗ ಓದಿನ ಕಡೆ ಗಮನ ಕೊಡಿ ಎಂದು ಬುದ್ಧಿ ಹೇಳಿದ್ದರು. ಇದಾದ ಬಳಿಕ ಯುವಕ ತೇಜುವಿನಿಂದ ಅಂತರ ಕಾಯ್ದುಕೊಂಡಿದ್ದಳು. ಆದರೆ, ಲವ್ವರ್‌ನಿಂದ ದೂರವಾಗಿದ್ದರಿಂದ ಬೇಸರದಲ್ಲಿದ್ದಳು.
ಸೋಮವಾರ ಕಾಲೇಜು ಮುಗಿಸಿ ಹೊರಬಂದ ತೇಜು, ತನ್ನ ಲವ್ವರ್‌ಗೆ ‘ನನಗೆ ಬದುಕು ಸಾಕಾಗಿದೆ, ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ’ ಎಂದು ಮೆಸೇಜ್ ಕಳುಹಿಸಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಳು. ಮೆಸೇಜ್ ನೋಡಿದ ಯುವಕ ಅದನ್ನು ತೇಜು ಪೋಷಕರಿಗೆ ಮಾಹಿತಿ ನೀಡಿದ್ದ. ಬಳಿಕ ಗಾಬರಿಗೊಂಡ ಪೋಷಕರು ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು.
ಟವರ್ ಲೊಕೇಶನ್ ಆಧಾರದಲ್ಲಿ ಹುಡುಕಾಟ ನಡೆಸಿದ ವೇಳೆ ತೇಜು ಕೊನೆಯದಾಗಿ ಸದಾಶಿವನಗರದ ಸ್ಯಾಂಕಿ ಕೆರೆ ಬಳಿ ಬಂದಿರುವುದು ಪತ್ತೆಯಾಗಿದೆ. ಪರಿಶೀಲನೆ ವೇಳೆ ಮಧ್ಯಾಹ್ನ ಸುಮಾರು 3:30ರ ವೇಳೆಗೆ ತೇಜು ಕೆರೆ ಬಳಿ ಬಂದಿದ್ದು, ಸಂಜೆ 6 ಗಂಟೆಯವರೆಗೂ ಅಲ್ಲೇ ಸುತ್ತಾಡಿದ್ದಳು. ಬಳಿಕ ತನ್ನ ಬ್ಯಾಗ್ ಅಲ್ಲೇ ಬಿಟ್ಟು ನಾಪತ್ತೆಯಾಗಿದ್ದಳು.
ರಾತ್ರಿ ಪೂರ್ತಿ ಪೊಲೀಸರು ಹಾಗೂ ಕುಟುಂಬಸ್ಥರು ಹುಡುಕಾಟ ನಡೆಸಿದರೂ ತೇಜು ಪತ್ತೆಯಾಗಿರಲಿಲ್ಲ. ಇಂದು ಬೆಳಗ್ಗೆ ಅದೇ ಸ್ಥಳದಲ್ಲಿ ಮತ್ತೆ ಶೋಧ ಕಾರ್ಯ ನಡೆಸಿದ ವೇಳೆ ಸ್ಯಾಂಕಿ ಕೆರೆಯಲ್ಲಿ ತೇಜುವಿನ ಶವ ಪತ್ತೆಯಾಗಿದೆ. ಸ್ಥಳಕ್ಕೆ ಸದಾಶಿವನಗರ ಪೊಲೀಸರು ಭೇಟಿ ನೀಡಿ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಮೇಲ್ನೋಟಕ್ಕೆ ಪ್ರೀತಿ ವಿಚಾರವೇ ಆತ್ಮಹತ್ಯೆಗೆ ಕಾರಣ ಎಂಬ ಶಂಕೆ ವ್ಯಕ್ತವಾಗಿದ್ದು, ಸದಾಶಿವನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.