ಬೆಂಗಳೂರು: ಪಿಜಿಯಲ್ಲಿ ಯುವತಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ, ಚಾಕುವಿನಿಂದ ಇರಿದ ಘಟನೆ ( Stabbing Case) ನಗರದ ವೈಟ್‌ಫೀಲ್ಡ್‌ನಲ್ಲಿ ನಡೆದಿದೆ. ಆಗಸ್ಟ್ 29ರಂದು ನಡೆದಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಆಂಧ್ರ ಮೂಲದ ಬೈಕ್ ಟ್ಯಾಕ್ಸಿ ಡ್ರೈವರ್ ಸಾಯಿಬಾಬು ಚೆನ್ನೂರು ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಕೋ ಲಿವಿಂಗ್ ಪಿಜಿಯಲ್ಲಿದ್ದ ಆರೋಪಿ ಸಾಯಿಬಾಬು ಚೆನ್ನೂರು, ಬ್ಯಾಂಕ್ ಉದ್ಯೋಗಿಯಾಗಿದ್ದ 23 ವರ್ಷದ ಯುವತಿಯೊಂದಿಗೆ ಸ್ನೇಹ ಬೆಳೆಸಿದ್ದ. ಆಗಸ್ಟ್ 29ರಂದು ಮುಂಜಾನೆ 3 ಗಂಟೆ ಸುಮಾರಿಗೆ ಯುವತಿ ಪಿಜಿಯಲ್ಲಿ ನಿದ್ದೆ ಮಾಡುತ್ತಿದ್ದ ವೇಳೆ ಆರೋಪಿ, ಆಕೆಯ ಕೋಣೆಗೆ ನುಗ್ಗಿ ಅನುಚಿತವಾಗಿ ಸ್ಪರ್ಶಿಸಿದ್ದಾನೆ. ಇದಕ್ಕೆ ಆಕೆ ಪ್ರತಿರೋಧಿಸಿದಾಗ ಬೆನ್ನಿಗೆ ಚಾಕುವಿನಿಂದ ಇರಿದು, ಲೈಂಗಿಕ ದೌರ್ಜನ್ಯ ಎಸಗಿದ್ದಾನೆ.
ಘಟನೆ ವೇಳೆ ಯುವತಿಗೆ 70,000 ರೂ. ನೀಡುವಂತೆ ಬೇಡಿಕೆ ಇಟ್ಟಿದ್ದ ಆರೋಪಿ, ಆಕೆಯ ಫೋನ್‌ನಿಂದ 14,000 ರೂ.ಗಳನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ. ಅಲ್ಲದೇ ಕೆಯ ಬೀರುವಿನಿಂದ 2,500 ರೂಪಾಯಿ ನಗದು ತೆಗೆದುಕೊಂಡಿದ್ದಾನೆ. ಈ ಬಗ್ಗೆ ಯಾರಿಗಾದರೂ ಹೇಳಿದರೆ ಅವಳ ಖಾಸಗಿ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ.
ಈ ಸುದ್ದಿಯನ್ನೂ ಓದಿ | Bank Robbery: ಭೀಮಾತೀರದ ಎಸ್‌ಬಿಐ ಬ್ಯಾಂಕ್‌ಗೆ ಕನ್ನ; ಪಿಸ್ತೂಲ್, ಚಾಕು ತೋರಿಸಿ ಮುಸುಕುಧಾರಿಗಳಿಂದ ದರೋಡೆ
ಈ ಬಗ್ಗೆ ಯುವತಿ ದೂರು ನೀಡಿದ್ದಳು. ಘಟನೆ ನಡೆದ ಎರಡು ದಿನಗಳ ನಂತರ ಸಿಸಿಟಿವಿ ದೃಶ್ಯಾವಳಿ ಆಧರಿಸಿ ಆರೋಪಿಯನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಆರೋಪಿ ಆಂಧ್ರಪ್ರದೇಶದ ಮದನಪಲ್ಲಿ ಮೂಲದವನು ಎಂದು ತಿಳಿದುಬಂದಿದ್ದು, ಈತ 2021ರಲ್ಲಿ ಎರಡು ದರೋಡೆ ಪ್ರಕರಣಗಳಲ್ಲಿ ಬಂಧನವಾಗಿದ್ದ. ಬಳಿಕ ಜಾಮೀನಿನ ಮೇಲೆ ಹೊರಬಂದು ಬೆಂಗಳೂರಿಗೆ ಬಂದು, ಬೈಕ್ ಟ್ಯಾಕ್ಸಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ ಎಂದು ತಿಳಿದುಬಂದಿದೆ.
ಇನ್ನು ಪ್ರಕರಣಕ್ಕೆ ಸಂಬಂಧಿಸಿ ಆರೋಪಿ ಕೂಡ ಪ್ರತಿ ದೂರು ದಾಖಲಿಸಿದ್ದಾನೆ. ನಮ್ಮಿಬ್ಬರಿಗೆ ಕಳೆದ ಕಳೆದ 2 ತಿಂಗಳಿಂದ ಪರಿಚಯವಿತ್ತು. ನಮ್ಮ ನಡುವೆ ಜಗಳ ನಡೆದ ಬಳಿಕ ನಾನು ಪಿಜಿಯಿಂದ ಹೊರಟುಹೋಗಿದ್ದೆ. ಬಳಿಕ ಮಾರನೇ ದಿನ ಪಿಜಿಗೆ ಹೋದಾಗ ಪಿಜಿ ಮ್ಯಾನೇಜ್‌ಮೆಂಟ್‌ನ ಶಿವ ಮತ್ತು ಪ್ರದೀಪ್ ಸೇರಿ ಐವರು, ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಯುವಕ ಆರೋಪಿಸಿದ್ದಾನೆ.