ಬೆಂಗಳೂರು: ರಾಜ್ಯದಲ್ಲಿ ರಾಜ್ಯ ಪಠ್ಯಕ್ರಮದ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರಾಥಮಿಕ, ಪ್ರೌಢ ಶಾಲೆಗಳಿಗೆ 2026-27ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಶೈಕ್ಷಣಿಕ ಅವಧಿ ಮತ್ತು ರಜಾ ಅವಧಿಯನ್ನು ನಿಗದಿಪಡಿಸಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಆಯುಕ್ತರು ವಾರ್ಷಿಕ ಶೈಕ್ಷಣಿಕ ಕ್ರಿಯಾಯೋಜನೆಯ ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ.
ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 2026-27ನೇ ಶೈಕ್ಷಣಿಕ ಸಾಲಿನಲ್ಲಿ ಏಕರೂಪದ ಶೈಕ್ಷಣಿಕ ಚಟುವಟಿಕೆಗಳನ್ನು ಅನುಷ್ಠಾನಗೊಳಿಸಲು ಸಹಾಯವಾಗುವಂತೆ ಒಟ್ಟು ವಾರ್ಷಿಕ ದಿನಗಳಲ್ಲಿ ಲಭವಾಗುವ ಲಭ್ಯವಾಗುವ ಶೈಕ್ಷಣಿಕ ಚಟುವಟಿಕೆ ಅವಧಿಗಳು, ಕರ್ತವ್ಯದ ಕರ್ತ ದಿನಗಳು ಮತ್ತು ರಜಾ ದಿನಗಳನ್ನಾಧರಿಸಿ ಅದಕ್ಕನುಗುಣವಾಗಿ ವಾರ್ಷಿಕ ಕಾರ್ಯಸೂಚಿಯನ್ನು ಶಿಕ್ಷಣ ಇಲಾಖೆ ನಿಗದಿಪಡಿಸಿದ್ದು, ರಾಜ್ಯ ಪಠ್ಯಕ್ರಮದ ಎಲ್ಲಾ ಶಾಲೆಗಳಲ್ಲಿ ಅನುಷ್ಠಾನಗೊಳಿಸಿ ಮತ್ತು ಅನುಪಾಲನೆ ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಲಾಗಿದೆ.
ಶೈಕ್ಷಣಿಕ ವರ್ಷ ಮೇ 29ಕ್ಕೆ ಆರಂಭ
2026-27ನೇ ಸಾಲಿನ ಶೈಕ್ಷಣಿಕ ವರ್ಷ ಮೇ 29ಕ್ಕೆ ಆರಂಭವಾಗಲಿದೆ (Schools reopen). ಮೊದಲ ಅವಧಿ ಮೇ 29ರಿಂದ ಅಕ್ಟೋಬರ್ 2ರವರೆಗೆ ಮತ್ತು 2ನೇ ಅವಧಿ ಅಕ್ಟೋಬರ್ 22ರಿಂದ 2027ರ ಏಪ್ರಿಲ್ 10ರವರೆಗೆ ನಡೆಯಲಿದೆ. ಅ.3ರಿಂದ 21ರವರೆಗೆ ದಸರಾ ರಜೆ ಇರಲಿದೆ. ಮುಂದಿನ ಶೈಕ್ಷಣಿಕ ವರ್ಷದ ಒಟ್ಟು 365 ದಿನಗಳಲ್ಲಿ 119 ರಜಾ ದಿನಗಳಿರಲಿದ್ದು 245 ಕರ್ತವ್ಯದ ದಿನಗಳೆಂದು ಪರಿಗಣಿಸಲಾಗಿದೆ.
ಈ 245 ದಿನಗಳಲ್ಲಿ ಪರೀಕ್ಷೆಗಳು ಮತ್ತು ಮೌಲ್ಯಾಂಕನ ಕಾರ್ಯಕ್ಕಾಗಿ (ಎಫ್‌ಎ ಮತ್ತು ಎಸ್‌ಎ) 26 ದಿನಗಳು, ಪಕ್ಷೇತರ ಚಟುವಟಿಕೆ ಸ್ಪರ್ಧೆಗಳ ನಿರ್ವಹಣೆಗಾಗಿ 24 ದಿನಗಳು, ಮೌಲ್ಯಮಾಪನ ಮತ್ತು ಫಲಿತಾಂಶ ವಿಶ್ಲೇಷಣೆ ಕಾರ್ಯಕ್ಕಾಗಿ 10 ದಿನಗಳು, ಶಾಲಾ ಸ್ಥಳೀಯ ರಜೆ 4 ದಿನಗಳು ಮತ್ತು ಬೋಧನಾ ಕಲಿಕಾ ಪ್ರಕ್ರಿಯೆಗೆ 181 ದಿನಗಳನ್ನು ಮೀಸಲಿಡುವಂತೆ ಸೂಚಿಸಲಾಗಿದೆ. ಇನ್ನುಳಿದಂತೆ ದಾಖಲಾತಿ ಆಂದೋಲನ, ಶಾಲಾ ಪ್ರಾರಂಭೋತ್ಸವ ಕುರಿತು ಎಂದಿನಂತೆ ಚಟುವಟಿಕೆಯನ್ನು ನೀಡಲಾಗಿದೆ.
ಸರ್ಕಾರಿ ನೌಕರರ ಸಾರ್ವತ್ರಿಕ ವರ್ಗಾವಣೆ: ಏಪ್ರಿಲ್ 15ರಂದು ಆರಂಭ, ನಿಯಮಗಳು, ಅರ್ಹತೆಯ ಮಾರ್ಗಸೂಚಿ ಬಿಡುಗಡೆ
ಮಕ್ಕಳ ದಾಖಲಾತಿ ಪ್ರಕ್ರಿಯೆಯನ್ನು ಜೂನ್ 30ರೊಳಗೆ ಪೂರ್ಣಗೊಳಿಸಬೇಕು, ಶಾಲೆ ಬಿಟ್ಟಿರುವ 6 ವರ್ಷದಿಂದ 18 ವರ್ಷದ ಮಕ್ಕಳನ್ನು ಮರಳಿ ಶಾಲೆಗೆ ಕರೆತರಲು ದಾಖಲಾತಿ ಜಾಗೃತಿ ಅಭಿಯಾನವನ್ನು ನಡೆಸಬೇಕು ಎಂದು ಸೂಚಿಸಲಾಗಿದೆ.