ಬೆಂಗಳೂರು: ಸ್ಯಾಂಡಲ್‌ವುಡ್ ನಟಿಯ ಸಹೋದರಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ವ್ಯಕ್ತಿಯೊಬ್ಬನನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಘವೇಂದ್ರ ಬಂಧಿತ ಆರೋಪಿ. ಮದುವೆಯಾಗುವುದಾಗಿ ನಂಬಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಸಂತ್ರಸ್ತ ಯುವತಿ ನೀಡಿದ ದೂರಿನ ಆಧಾರದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ.
ದೂರುದಾರ ಯುವತಿ ಹಾಗೂ ಆರೋಪಿ ರಾಘವೇಂದ್ರ ಕೆಲಸ ಮಾಡುತ್ತಿದ್ದ ಸ್ಥಳದಲ್ಲಿ ಪರಿಚಯವಾಗಿದ್ದರು. ಬಳಿಕ ಇಬ್ಬರ ನಡುವೆ ಸ್ನೇಹ ಬೆಳೆದಿತ್ತು, ಸ್ನೇಹ ಪ್ರೀತಿಗೆ ತಿರುಗಿತ್ತು. ಬಳಿಕ ಮದುವೆಯಾಗುವುದಾಗಿ ನಂಬಿಸಿ ರಾಘವೇಂದ್ರ ತನ್ನ ಇಚ್ಛೆಗೆ ವಿರುದ್ಧವಾಗಿ ದೈಹಿಕ ಸಂಪರ್ಕ ಬೆಳೆಸಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ.
ಇದೇ ವೇಳೆ, ರಾಘವೇಂದ್ರ ತನ್ನ ಕ್ರೆಡಿಟ್ ಕಾರ್ಡ್ ಬಳಸಿ ಸಾಲ ಪಡೆದಿದ್ದಾನೆ, ಇದರಿಂದ ಆಕೆಗೆ ಸಮಸ್ಯೆಯಾಗಿದ್ದು ಇಬ್ಬರ ನಡುವೆ ಜಗಳ ನಡೆದಿತ್ತು. ಬಳಿಕ ವಿಚಾರಿಸಿದಾಗ ರಾಘವೇಂದ್ರಗೆ ಈಗಾಗಲೇ ಮದುವೆಯಾಗಿರುವುದು ತಿಳಿದುಬಂದಿತ್ತು ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ರಾಘವೇಂದ್ರನನ್ನ ಮದುವೆ ವಿಚಾರವಾಗಿ ಪ್ರಶ್ನಿಸಿದಾಗ, ನಟಿಯ ಸಹೋದರಿಯ ಖಾಸಗಿ ಫೋಟೊಗಳನ್ನು ತೋರಿಸಿ ಬೆದರಿಕೆ ಹಾಕಿದ್ದಾನೆ. ತನ್ನ ಮಾತು ಕೇಳದಿದ್ದರೆ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಹಿಂದೆಯೂ ಚಂದ್ರಾಲೇಔಟ್ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು. ಪೊಲೀಸರು ರಾಘವೇಂದ್ರನನ್ನು ಠಾಣೆಗೆ ಕರೆಸಿ ಖಾಸಗಿ ಫೋಟೊಗಳನ್ನು ಡಿಲೀಟ್ ಮಾಡಿಸಿ ಎಚ್ಚರಿಕೆ ನೀಡಿ ಕಳುಹಿಸಿದ್ದರು. ಆದರೆ ಕೆಲ ದಿನಗಳ ಬಳಿಕ ಕೈ ಕೊಯ್ದುಕೊಂಡಿರುವ ಫೋಟೊ ಹಾಗೂ ಖಾಸಗಿ ಫೋಟೊಗಳನ್ನು ರಾಘವೇಂದ್ರ ಯುವತಿಗೆ ಕಳುಹಿಸಿದ್ದಾನೆ. ಅಲ್ಲದೇ, ತಾನು ಹೇಳಿದ ಸ್ಥಳಕ್ಕೆ ಬರುವಂತೆ ಬೆದರಿಕೆ ಹಾಕಿದ್ದಾನೆ.
ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಆರೋಪಿ ಪ್ರದೋಷ್ ಮಾಫಿ ಸಾಕ್ಷಿ; ನಟ ದರ್ಶನ್‌ಗೆ ಹೈಕೋರ್ಟ್‌ನಲ್ಲೂ ಬಿಗ್ ಶಾಕ್!
ಆರೋಪಿಯಿಂದಲೂ ಪ್ರತಿದೂರು ದಾಖಲು
ಇನ್ನು ಆರೋಪಿ ರಾಘವೇಂದ್ರ ಕೂಡ ನಟಿಯ ಸಹೋದರಿ ವಿರುದ್ಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಪ್ರತಿ ದೂರು ನೀಡಿದ್ದಾನೆ. ತನಗೆ ಹಾಗೂ ತಾಯಿಗೆ ಕರೆ ಮಾಡಿ ಬೆದರಿಕೆ ಹಾಕಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ತಲಘಟ್ಟಪುರ ಪೊಲೀಸರು ಎನ್‌ಸಿಆರ್ ದಾಖಲಿಸಿ ನೋಟಿಸ್ ನೀಡಿದ್ದರು. ಆದರೆ ವಿಚಾರಣೆಗೆ ನಟಿಯ ಸಹೋದರಿ ಹಾಜರಾಗಿಲ್ಲ. ಪ್ರಕರಣದ ಎರಡೂ ದೂರುಗಳ ಕುರಿತು ಪೊಲೀಸರು ತನಿಖೆ ಮುಂದುವರಿಸಿದ್ದಾರೆ.