ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಬೆಂಗಳೂರಿನಲ್ಲಿ ನಟ ದರ್ಶನ್ ಪುತ್ರ ವಿನೀಶ್ ಚಲಾಯಿಸುತ್ತಿದ್ದ ಕಾರ್‌ ಅಪಘಾತ; ಸ್ಕೂಟರ್‌ಗೆ ಡಿಕ್ಕಿ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸದ್ಯ ಜೈಲಿನಲ್ಲಿರುವ ಸ್ಯಾಂಡಲ್‌ವುಡ್‌ ನಟ ದರ್ಶನ್‌ ಅವರ ಪುತ್ರ ವಿನೀಶ್‌ ಕೂಡ ಇದೀಗ ಯಡವಟ್ಟು ಮಾಡಿಕೊಂಡಿದ್ದಾನೆ. ವಿನೀಶ್‌ ಚಲಾಯಿಸುತ್ತಿದ್ದ ಐಷಾರಾಮಿ ಕಾರು ರಾಜರಾಜೇಶ್ವರಿ ನಗರದಲ್ಲಿ ಅಪಘಾತಕ್ಕೀಡಾಗಿದೆ. ನೀಶ್‌ ಡ್ರೈವ್‌ ಮಾಡುತ್ತಿದ್ದ ಪೋರ್ಡ್‌ ಎಂಡೋವರ್‌ ಕಾರು, ಮುಂಭಾಗದಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಏಕಾಏಕಿ ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ.

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿ ನಡೆದ ಅಪಘಾತ

ಬೆಂಗಳೂರು, ಜೂ. 25: ಅತ್ತ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್‌ವುಡ್‌ ನಟ ದರ್ಶನ್‌ (Darshan) ಸದ್ಯ ಜೈಲಿನಲ್ಲಿದ್ದರೆ ಇತ್ತ ಅವರ ಪುತ್ರ ವಿನೀಶ್‌ (Vineesh) ಇದೀಗ ಯಡವಟ್ಟು ಮಾಡಿಕೊಂಡಿದ್ದಾನೆ. ವಿನೀಶ್‌ ಚಲಾಯಿಸುತ್ತಿದ್ದ ಐಷಾರಾಮಿ ಕಾರು ರಾಜರಾಜೇಶ್ವರಿ ನಗರದಲ್ಲಿ ಅಪಘಾತಕ್ಕೀಡಾಗಿರುವ ಕುರಿತು ವರದಿಯಾಗಿದೆ. ರಸ್ತೆಯಲ್ಲಿ ಚಲಿಸುತ್ತಿದ್ದ, ವಿನೀಶ್‌ ಡ್ರೈವ್‌ ಮಾಡುತ್ತಿದ್ದ ಪೋರ್ಡ್‌ ಎಂಡೋವರ್‌ ಕಾರು, ಮುಂಭಾಗದಲ್ಲಿ ಹೋಗುತ್ತಿದ್ದ ದ್ವಿಚಕ್ರ ವಾಹನಕ್ಕೆ ಏಕಾಏಕಿ ಹಿಂಬದಿಯಿಂದ ಜೋರಾಗಿ ಡಿಕ್ಕಿ ಹೊಡೆದಿದೆ. ವಿನೀಶ್‌ನ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆಯೇ ಈ ಅಪಘಾತಕ್ಕೆ ಕಾರಣ ಎನ್ನಲಾಗುತ್ತಿದೆ.

ಅಪಘಾತ ನಡೆದ ಕೂಡಲೇ ದ್ವಿಚಕ್ರ ವಾಹನ ಸವಾರ ಹಾಗೂ ಸ್ಥಳದಲ್ಲಿದ್ದ ಸಾರ್ವಜನಿಕರು ಕಾರನ್ನು ತಡೆದು ನಿಲ್ಲಿಸಿದ್ದಾರೆ. ಈ ವೇಳೆ ಕಾರಿನಿಂದ ಇಳಿದ ವಿನೀಶ್‌ ಹಾಗೂ ಸ್ಥಳೀಯರ ಮಧ್ಯೆ ರಸ್ತೆಯಲ್ಲಿಯೇ ವಾಗ್ವಾದ ಮತ್ತು ಮಾತಿನ ಚಕಮಕಿ ನಡೆದಿದೆ. ಸಾರ್ವಜನಿಕರು ವಿನೀಶ್‌ನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌ ಆಗಿ 2 ವರ್ಷ; ಪರಪ್ಪನ ಅಗ್ರಹಾರದಲ್ಲಿ ಮೌನಕ್ಕೆ ಜಾರಿದ ʻದಾಸʼ

ದರ್ಶನ್‌ ಪುತ್ರ ಎನ್ನುವುದನ್ನು ನೋಡದೆ ಸಾರ್ವಜನಿಕರು ವಿನೀಶ್‌ ವಿರುದ್ಧ ವಾಗ್ದಾಳಿ ನಡೆದ್ದಾರೆ. ಅಪ್ರಾಪ್ತ ವಯಸ್ಸಿನ ವಿನೀಶ್‌ ಕಾರ್‌ ಚಲಾಯಿಸಿದ್ದು ಸದ್ಯ ಭಾರಿ ಕೋಲಾಹಲಕ್ಕೆ ಕಾರಣವಾಗಿದೆ. ಇತ್ತ ತಂದೆ ದರ್ಶನ್‌ ಕಾನೂನು ಸಂಕಷ್ಟ ಎದುರಿಸುತ್ತಿರುವ ಮಧ್ಯೆ ಇದೀಗ ಪುತ್ರನೂ ಕಾನೂನು ಕುಣಿಕೆಗೆ ಸಿಲುಕುವಂತಾಗಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಕಲೆ ಹಾಕಲಾಗುತ್ತಿದೆ.

ಮತ್ತೆ ಸುಪ್ರೀಂ ಕೋರ್ಟ್ ಮೊರೆ ಹೋದ ನಟ ದರ್ಶನ್

ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಮತ್ತು ವಿಚಾರಣೆಯ ವಿಳಂಬ ಗತಿಯನ್ನು ಉಲ್ಲೇಖಿಸಿ, ಹೊಸದಾಗಿ ಜಾಮೀನು ಅರ್ಜಿ ಸಲ್ಲಿಸಲು ಅನುಮತಿ ಕೋರಿ ದರ್ಶನ್ ಮತ್ತೊಮ್ಮೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ. ಮೇ 15ರಂದು ಸುಪ್ರೀಂ ಕೋರ್ಟ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಆದರೆ, ಒಂದು ವರ್ಷದ ಒಳಗಾಗಿ ವಿಚಾರಣೆಯಲ್ಲಿ ಗಮನಾರ್ಹ ಪ್ರಗತಿ ಕಾಣದಿದ್ದರೆ ಮತ್ತೊಮ್ಮೆ ನ್ಯಾಯಾಲಯವನ್ನು ಸಂಪರ್ಕಿಸಲು ಅವಕಾಶ ನೀಡಿತ್ತು.

ಇದೀಗ ದರ್ಶನ್ ಈ ಹೊಸ ಕಾನೂನು ಹೆಜ್ಜೆ ಇಟ್ಟಿದ್ದಾರೆ. ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳ ವಿಚಾರಣೆಗೆ ನಿಗದಿಪಡಿಸಲಾಗಿರುವ ಒಂದು ವರ್ಷದ ಗಡುವನ್ನು ಕಡಿತಗೊಳಿಸುವಂತೆ ಸುಪ್ರೀಂ ಕೋರ್ಟ್‌ಗೆ ದರ್ಶನ್‌ ಪುನರ್ ಪರಿಶೀಲನಾ ಅರ್ಜಿ ಸಲ್ಲಿಸಿದ್ದಾರೆ. ಒಂದು ವರ್ಷದ ಅವಧಿಯನ್ನು ಮರುಪರಿಶೀಲಿಸಿ, ಕಡಿಮೆ ಮಾಡುವಂತೆ ಅರ್ಜಿಯಲ್ಲಿ ನಟ ಕೋರಿದ್ದಾರೆ.

ವಿವಾಹ ವಾರ್ಷಿಕೋತ್ಸವದಂದು ತಂದೆಯನ್ನು ಭೇಟಿಯಾಗಿದ್ದ ವಿನೀಶ್‌

ದರ್ಶನ್ ಹಾಗೂ ಅವರ ಪತ್ನಿ ವಿಜಯಲಕ್ಷ್ಮೀ ದಂಪತಿಗೆ ಮೇ 19ರಂದು 23ನೇ ವಿವಾಹ ವಾರ್ಷಿಕೋತ್ಸವ. ವಿಶೇಷ ದಿನದಂದು ದರ್ಶನ್ ಅವರನ್ನು ವಿಜಯಲಕ್ಷ್ಮೀ ಮತ್ತು ವಿನೀಶ್ ‌ಭೇಟಿಯಾಗಿದ್ದರು. ವಿವಾಹ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ಮುಂಜಾನೆ ವಿಜಯಲಕ್ಷ್ಮೀ ತಮ್ಮ ಸಾಮಾಜಿಕ ಜಾಲತಾಣದಲ್ಲಿ ದರ್ಶನ್ ಅವರನ್ನು ನೆನೆದು ಅತ್ಯಂತ ಭಾವುಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಬಳಿಕ ಮಗನ ಜತೆ ಜೈಲಿಗೆ ತೆರಳಿದ್ದರು. ತಮ್ಮ ವಿವಾಹ ವಾರ್ಷಿಕೋತ್ಸವದಂದು ದರ್ಶನ್‌ ಅವರನ್ನು ಮುಖಾಮುಖಿ ಭೇಟಿ ಮಾಡಲು ಅವಕಾಶ ನೀಡುವಂತೆ ವಿಜಯಲಕ್ಷ್ಮೀ ಮೊದಲೇ ಡಿಜಿಪಿ ಅಲೋಕ್‌ ಕುಮಾರ್‌ ಅವರಿಗೆ ವಿನಂತಿ ಮಾಡಿದ್ದರು.

ರಾಜ್ಯದ ಇನ್ನಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್‌ ಮಾಡಿ.

ʼಪ್ರವಾಸಿ ಪ್ರಪಂಚʼ ವೆಬ್‌ಸೈಟ್‌ಗೆ ಭೇಟಿ ನೀಡಲು ಇಲ್ಲಿ ಕ್ಲಿಕ್‌ ಮಾಡಿ.

Ramesh Ballamoole

View all posts by this author