ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dr. Vishnuvardhan's samadhi: ನಟ ಡಾ.ವಿಷ್ಣುವರ್ಧನ್‌ ಸಮಾಧಿ ರಾತ್ರೋ ರಾತ್ರಿ ನೆಲಸಮ; ಅಭಿಮಾನಿಗಳ ಆಕ್ರೋಶ

Dr. Vishnuvardhan: ಕನ್ನಡ ಚಿತ್ರರಂಗದಲ್ಲಿ ಸಾಹಸಸಿಂಹ ಎಂಬ ಬಿರುದು ಪಡೆದಿರುವ ನಟ ಡಾ.ವಿಷ್ಣುವರ್ಧನ್ ಅವರು 200ಕ್ಕೂ ಅಧಿಕ ಕನ್ನಡ ಚಿತ್ರಗಳಲ್ಲಿ ನಟಿಸಿ, ಕನ್ನಡಿಗರ ಮನಗೆದ್ದಿದ್ದಾರೆ. ಆದರೆ, ತಮ್ಮ ನೆಚ್ಚಿನ ನಟನ ಸಮಾಧಿ ತೆರವು ಮಾಡಿರುವುದರಿಂದ ಆಘಾತಕ್ಕೆ ಒಳಗಾಗಿರುವ ವಿಷ್ಣು ಅಭಿಮಾನಿಗಳು ರಾಜ್ಯ ಸರ್ಕಾರ, ಪೊಲೀಸ್‌ ಇಲಾಖೆ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಬೆಂಗಳೂರು: ಅಭಿಮಾನಿಗಳ ವಿರೋಧದ ನಡುವೆಯೂ ಕನ್ನಡದ ಖ್ಯಾತ ನಟ ಡಾ. ವಿಷ್ಣುವರ್ಧನ್‌ ಅವರ ಸಮಾಧಿಯನ್ನು (Dr. Vishnuvardhan's samadhi) ತೆರವುಗೊಳಿಸಿದ್ದು, ಇದಕ್ಕೆ ಅಭಿಮಾನಿಗಳು ತೀವ್ರ ಆಕ್ರೋಶ ಹೋರಹಾಕಿದ್ದಾರೆ. ಹೈಕೋರ್ಟ್‌ ಸೂಚನೆ ಮೇರೆಗೆ ನಗರದ ಕೆಂಗೇರಿ ಬಳಿಯ ಅಭಿಮಾನ್ ಸ್ಟುಡಿಯೋದಲ್ಲಿದ್ದ ವಿಷ್ಣುವರ್ಧನ್‌ ಅವರ ಸಮಾಧಿಯನ್ನು ರಾತ್ರೋರಾತ್ರಿ ತೆರವುಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಸಮಾಧಿ ತೆರವು ಮಾಡಿರುವುದರಿಂದ ಆಘಾತಕ್ಕೆ ಒಳಗಾಗಿರುವ ವಿಷ್ಣು ಅಭಿಮಾನಿಗಳು ರಾಜ್ಯ ಸರ್ಕಾರ, ಪೊಲೀಸ್‌ ಇಲಾಖೆ ಹಾಗೂ ಚಲನಚಿತ್ರ ವಾಣಿಜ್ಯ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. 35 ವರ್ಷಗಳ ಕಲಾಸೇವೆ ಮತ್ತು 200 ಕನ್ನಡ ಚಲನಚಿತ್ರದಲ್ಲಿ ಅಭಿನಯಿಸಿ ಕನ್ನಡಿಗರ ಮನಗೆದ್ದ ಡಾ.ವಿಷ್ಣುವರ್ಧನ್‌ ಅವರ ಅಂತ್ಯಕ್ರಿಯೆಯನ್ನು ಬೆಂಗಳೂರಿನ ಕೆಂಗೇರಿಯಲ್ಲಿರುವ ಅಭಿಮಾನ್‌ ಸ್ಟುಡಿಯೋ ಆವರಣದಲ್ಲಿ ನಡೆಸಲಾಗಿತ್ತು. ನಂತರದಲ್ಲಿ ವಿಷ್ಣು ಸಮಾಧಿಯನ್ನು ಸಂರಕ್ಷಿಸಿ, ಅದನ್ನು ಸ್ಮಾರಕವಾಗಿ ಘೋಷಿಸಬೇಕೆಂಬ ಹೋರಾಟ ನಡೆಯುತ್ತಲೇ ಇತ್ತು. ಆದರೆ ಹೈಕೋರ್ಟ್‌ ಸೂಚನೆ ಮೇರೆ ರಾತ್ರೋರಾತ್ರಿ ಸಮಾಧಿಯನ್ನ ತೆರವುಗೊಳಿಸಲಾಗಿದೆ.

ಮೈಸೂರಿನಲ್ಲಿದೆ ವಿಷ್ಣು ಸ್ಮಾರಕ

ಮೈಸೂರಿನಲ್ಲಿ ಈಗಾಗಲೇ ಒಟ್ಟು 2.75 ಎಕ್ರೆ ಪ್ರದೇಶದಲ್ಲಿ ವಿಷ್ಣು ಸ್ಮಾರಕ ನಿರ್ಮಾಣ ಮಾಡಲಾಗಿದೆ. ವಿಷ್ಣುವರ್ಧನ್ ಸಿನಿಮಾದಲ್ಲಿನ ಪ್ರಶಸ್ತಿಗಳೂ ಸ್ಮಾರಕದ ಮ್ಯೂಸಿಯಂನಲ್ಲಿವೆ. ವಿಶೇಷವಾದ ವಿಷ್ಣು ಪುತ್ಥಳಿಯನ್ನೂ ನಿರ್ಮಿಸಲಾಗಿದೆ. ನಟನ ಚಿತ್ರರಂಗ ಪ್ರಯಾಣದ ಗ್ಯಾಲರಿ, ವಿಷ್ಣು ಅವರ ಅಪರೂಪದ 600ಕ್ಕೂ ಹೆಚ್ಚು ಫೋಟೋಗಳು, ಅವರು ಬಳಸುತ್ತಿದ್ದ ವಸ್ತುಗಳು, ಬಟ್ಟೆ ಇಲ್ಲಿ ನೋಡಬಹುದಾಗಿದೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ವಿಷ್ಣುವರ್ಧನ್ ಸ್ಮಾರಕಕ್ಕೆ 2020ರ ಸೆ.15 ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. ವಿಷ್ಣು ಸ್ಮಾರಕದಲ್ಲಿ ಎರಡು ಕ್ಲಾಸ್ ರೂಮ್ ಕೂಡ ನಿರ್ಮಾಣ ಮಾಡಲಾಗಿದ್ದು, ಆಡಿಟೋರಿಯಂ ಕೂಡ ಇದೆ.

ಈ ಸುದ್ದಿಯನ್ನೂ ಓದಿ | Vishnuvardhan: ತಮಿಳು ಯುಟ್ಯೂಬರ್‌ನಿಂದ ಸಾಹಸಸಿಂಹ ವಿಷ್ಣು ಗೇಲಿ, ಕನ್ನಡಿಗರ ಆಕ್ರೋಶ

ಇವತ್ತು ನಾವು ನಿಜವಾಗಿಯೂ ಯಜಮಾನರನ್ನು ಕಳೆದುಕೊಂಡಿದ್ದೇವೆ: ರವಿ ಶ್ರೀವತ್ಸ ಕಣ್ಣೀರು

ವಿಷ್ಣುವರ್ಧನ್‌ ಅವರ ಸಮಾಧಿ ತೆರವು ಬಗ್ಗೆ ನಿರ್ದೇಶಕ ರವಿ ಶ್ರೀವತ್ಸ ಪ್ರತಿಕ್ರಿಯಿಸಿ, ಕೆಂಗೇರಿಯಲ್ಲಿರುವ ನನಗೆ ಅನ್ನ ಕೊಟ್ಟ, ನನಗೆ ಸೂರು ಕೊಟ್ಟಂತಹ ನಮ್ಮ ಯಜಮಾನರ ಸಮಾಧಿಯನ್ನು ನೆಲಸಮ ಮಾಡಿದ್ದಾರೆ. ಅಭಿಮಾನ್‌ ಸ್ಟುಡಿಯೋದಲ್ಲಿ ಪುಟ್ಟ ಗುಡಿಯನ್ನು ರಾತ್ರೋ ರಾತ್ರಿ ನೆಲಸಮ ಮಾಡಿದ್ದಾರೆ. ಇಲ್ಲಿ ಬಂದರೆ ಒಳಗೆ ಹೋಗಲು ಗೇಟ್‌ ಕೂಡ ತೆರೆಯುತ್ತಿಲ್ಲ, ಪೊಲೀಸ್‌ ಸರ್ಪಗಾವಲಿನಲ್ಲಿ ಈ ರೀತಿ ಮಾಡಿದ್ದಾರೆ. ಯಜಮಾನರ ಸಮಾಧಿಯನ್ನು ಕೂಡ ಕಾಪಾಡಿಕೊಳ್ಳಲಾಗದ ಮಟ್ಟಕ್ಕೆ ನಾವು ಬಂದಿದ್ದೇವೆ ಎಂದು ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ.



ಯಜಮಾನರು ನಿಧನರಾದ ದಿನ ನಾವು ಅವರನ್ನು ಕಳೆದುಕೊಳ್ಳಲಿಲ್ಲ, ಇವತ್ತು ನಾವು ನಿಜವಾಗಿಯೂ ಅವರನ್ನು ಕಳೆದುಕೊಂಡಿದ್ದೇವೆ. ನೆಮ್ಮದಿಯಾಗಿ ಮಲಗಿದ್ದ ಯಜಮಾನರ ಜಾಗ ತೆರವು ಮಾಡಲಾಗಿದೆ. ದೊಡ್ಡ ದೊಡ್ಡ ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಎಲ್ಲಿದ್ದೀರ? ಬನ್ನಿ ಸ್ವಾಮಿ ನೋಡುವಿರಂತೆ ಏನಾಗಿದೆ ಇಲ್ಲಿ ಎಂದು ಕಿಡಿಕಾರಿದ್ದಾರೆ.

ಹನ್ನೊಂದು ವರ್ಷಗಳ ಹೋರಾಟ ನೀರಲ್ಲಿ ಹೋಮ ಮಾಡಿದಂತಾಯಿತು: ವೀರಕಪುತ್ರ ಶ್ರೀನಿವಾಸ್

ಈ ಬಗ್ಗೆ ಡಾ.ವಿಷ್ಣು ಸೇನಾ ಸಮಿತಿಯ ರಾಜ್ಯಾಧ್ಯಕ್ಷ, ಪುಸ್ತಕೋದ್ಯಮಿ ವೀರಕಪುತ್ರ ಶ್ರೀನಿವಾಸ್ ಅವರು ಪ್ರತಿಕ್ರಿಯಿಸಿ, ಕೊನೆಗೂ ಡಾ.ವಿಷ್ಣುವರ್ಧನ್ ಅವರ ಪುಣ್ಯಭೂಮಿಯನ್ನು ನೆಲಸಮ ಮಾಡಿಬಿಟ್ಟರು!. ಹನ್ನೊಂದು ವರ್ಷಗಳ ಹೋರಾಟ ನೀರಲ್ಲಿ ಹೋಮ ಮಾಡಿದಂತಾಯಿತು ಎಂದು ಅಸಮಾಧಾನ ಹೊರಹಾಕಿದ್ದಾರೆ.

ಡಾ.ವಿಷ್ಣುವರ್ಧನ್ ಅವರಿಗೆ ಹತ್ತು ಗುಂಟೆ ಜಾಗ ಕೊಡಲಾಗದ ನಾಚಿಕಗೇಡಿನ ಸರ್ಕಾರ ಇದು. ಅದರ ಮೇಲೆ ನಂಬಿಕೆ ಕಳೆದುಕೊಂಡು ನಾವು ಕೋರ್ಟ್ ಮೆಟ್ಟಿಲೇರಿದ್ದೆವು. ಕೋರ್ಟ್ ಅತ್ಯಂತ ಸ್ಪಷ್ಟವಾಗಿ ಹೇಳಿದ್ದು... ಈ ವಿಷ್ಯವಾಗಿ ಅಭಿಮಾನಿಗಳಾದ ನಿಮಗೆ ಯಾವುದೇ ಹಕ್ಕಿಲ್ಲ. ಅವರ ಕುಟುಂಬ ಅಥವಾ ಸರ್ಕಾರವಷ್ಟೇ ಕೇಳಬೇಕು ಎಂದುಬಿಟ್ಟಿತು. ಕುಟುಂಬದವರಂತೂ ನಮಗೆ ಮೈಸೂರಿನಲ್ಲಿ ಜಾಗ ಸಿಕ್ಕಿದೆ, ಅಲ್ಲಿ ಸ್ಮಾರಕವೂ ಆಗಿದೆ ಆದ್ದರಿಂದ ಅಭಿಮಾನ್ ಸ್ಟುಡಿಯೋದ ಜಾಗವನ್ನು ನಾವು ಕೇಳುವುದಿಲ್ಲ ಎಂದುಬಿಟ್ಟರು. ಸರ್ಕಾರದ ಸಚಿವರಾದ ಡಿಕೆ ಶಿವಕುಮಾರ್ , ಶಿವರಾಜ್ ತಂಗಡಗಿ ಅವರಿಗೆ ಮನವಿ ಕೊಟ್ಟಾಗ ಅವರು ಪುಣ್ಯಭೂಮಿ ಉಳಿಸುವ ಭರವಸೆ ಕೊಟ್ಟರು. ಆ ಎಲ್ಲದರ ಜೊತೆ ಇದುವರೆಗೆ ಅನೇಕ ಹೋರಾಟಗಳನ್ನು ಮಾಡಿದ್ದೇವೆ. ಇಷ್ಟೆಲ್ಲದರ ನಂತರ ನಮಗೆ ಹೇಳಲು, ಕೇಳಲು ಇನ್ನೇನಿತ್ತು? ರಾತ್ರೋರಾತ್ರಿ ನೂರಾರು ಪೋಲೀಸರ ನೇತೃತ್ವದಲ್ಲಿ ಈ ನೆಲಸಮ ಕಾರ್ಯಾಚರಣೆ ನಡೆದಿದೆ. ಒಬ್ಬ ಮೇರು ಕಲಾವಿದನಿಗೆ ಹತ್ತು ಗುಂಟೆ ಜಾಗ ಕೊಡಲಾಗದಂತಹ ವ್ಯವಸ್ಥೆಗೆ ದಿಕ್ಕಾರವಿರಲಿ. ಬಾಲಣ್ಣನ ವಂಶಸ್ಥರೆನಿಸಿಕೊಂಡವರು ಸಮಾಧಿ ಜಾಗದಲ್ಲಿ ಮಾಲ್ ಕಟ್ಟಲು ಹೊರಟಿದ್ದಾರೆ. ಅವರಿಗೆ ಬೆನ್ನೆಲುಬಾಗಿ ಒಬ್ಬ ರಾಜಕಾರಣಿಯೂ ಜೊತೆಯಾಗಿದ್ದಾನೆ. ಹಣಕ್ಕಾಗಿ ಇಷ್ಟು ನೀಚ ಬಾಳು ಬಾಳಬೇಕಾ? ಧಿಕ್ಕಾರವಿರಲಿ... ರಾತ್ರೋರಾತ್ರಿ ಹೇಡಿಗಳ ಹಾಗೆ ನೆಲಸಮ ಮಾಡುವುದು ಬಿಟ್ಟು ಹಗಲಲ್ಲಿ ಮಾಡುವ ಎದೆಗಾರಿಕೆಯಾದರೂ ಅವರಿಗೆ ಇರಬೇಕಿತ್ತು. ಕರಾಳ ದಿನ ಎಂದು ಹೇಳಿದ್ದಾರೆ.