ಬೆಂಗಳೂರು, ಡಿ.21: ಮನಸ್ಸು ಹಾಗೂ ದೇಹ ಬೇರೆಯದಲ್ಲ ಎಂದು ಆಧುನಿಕ ವಿಜ್ಞಾನ ಈಗ ಹೇಳುತ್ತಿದೆ. ಇದನ್ನು ಸಹಸ್ರಮಾನಗಳ ಹಿಂದೆಯೇ ಆಯುರ್ವೇದ ಹೇಳಿದೆ. vintage Car ಗಳಂತೆ ಆಯುರ್ವೇದವೂ ಹಳೆಯದಾದರೂ ಮಹತ್ವಪೂರ್ಣವಾಗಿದೆ ಎಂದು ಖ್ಯಾತ ನಟ ರಮೇಶ್ ಅರವಿಂದ್ ಹೇಳಿದರು. ಡಿಸೆಂಬರ್ 25 ರಿಂದ 4 ದಿನಗಳ ಕಾಲ ನಡೆಯಲಿರುವ ದ್ವಿತೀಯ ಆಯುರ್ವೇದ ವಿಶ್ವ ಸಮ್ಮೇಳನದ ಪ್ರಚಾರಾರ್ಥವಾಗಿ ನಡೆದ ವಿಂಟೇಜ್ ಕಾರ್ ರ‍್ಯಾಲಿಗೆ ಬೆಂಗಳೂರಿನ ಟೌನ್ ಹಾಲ್ ಮುಂಭಾಗ ಚಾಲನೆ ನೀಡಿ ಅವರು ಮಾತನಾಡಿದರು.
ಬೆಂಗಳೂರಿನಲ್ಲಿ ಸಮುದ್ರವಿಲ್ಲ. ಆದರೆ ಡಾ.ಕಜೆಯವರು ವಿಶ್ವ ಸಮ್ಮೇಳನದಲ್ಲಿ ಜನ ಸಾಗರವನ್ನು ಸೇರಿಸಿರುವುದನ್ನು ನಾನು ನೋಡಿದ್ದೇನೆ. ಆ ಶಕ್ತಿ ಅವರಿಗಿದ್ದು, ನಮ್ಮ ಆಯುರ್ವೇದ ಕುರಿತಾದ ಈ ವಿಶ್ವ ಸಮ್ಮೇಳನದಲ್ಲಿ ನಾವೆಲ್ಲರೂ ಭಾಗವಹಿಸುವ ಮೂಲಕ ಸಂಭ್ರಮಿಸೋಣ ಎಂದು ಕರೆ ನೀಡಿದರು.
ಭಾರತೀಯ ಐತಿಹಾಸಿಕ ಕಾರುಗಳ ಸಂಘದ ರಾಷ್ಟ್ರೀಯ ಅಧ್ಯಕ್ಷರಾದ ಡಾ. ರವಿ ಪ್ರಕಾಶ್ ಮಾತನಾಡಿ, ಇಂದಿನ ಆಧುನಿಕ ವೈದ್ಯಕೀಯ ಪದ್ಧತಿಯಂತೆ ಆಯುರ್ವೇದವೂ ವೈಜ್ಞಾನಿಕ ಮಹತ್ವವನ್ನು ಹೊಂದಿದೆ. ರೋಗಿಯ ಅಗತ್ಯ ಹಾಗೂ ಸಂದರ್ಭಕ್ಕೆ ಅನುಗುಣವಾಗಿ ಆಯುರ್ವೇದ ಹಾಗೂ ಆಧುನಿಕ ವೈದ್ಯಕೀಯ ಪದ್ಧತಿಯನ್ನು ಬಳಸಿಕೊಂಡಾಗ ಜಗತ್ತನ್ನು ಸ್ವಸ್ಥವಾಗಿಡಲು ಸಾಧ್ಯ ಎಂದರು.
ವಿಶ್ವ ಆಯುರ್ವೇದ ಸಮ್ಮೇಳನದ ರುವಾರಿ ಡಾ. ಗಿರಿಧರ ಕಜೆ ಮಾತನಾಡಿ, ನಮ್ಮ ಹಿಂದಿನ ವಿಚಾರಗಳನ್ನು ಅರಿತುಕೊಂಡಾಗ ಮಾತ್ರ ನಮ್ಮ ಭವಿಷ್ಯ ಉತ್ತಮವಾಗಿರಲು ಸಾಧ್ಯ. ನಮ್ಮ ಪರಂಪರೆ ಹಾಗೂ ಅಲ್ಲಿರುವ ಜ್ಞಾನವನ್ನು ನಾವು ತಿಳಿದುಕೊಂಡರೆ ಉತ್ತಮ ನಾಳೆಗಳು ನಮ್ಮದಾಗುತ್ತದೆ. ಎಲ್ಲಾ ವಯೋಮಾನದ ಜನಸಾಮಾನ್ಯರನ್ನೂ ತಲುಪುವ ರೀತಿಯಲ್ಲಿ ಸಮ್ಮೇಳನವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರಿಗೆ ಸಮ್ಮೇಳನದಲ್ಲಿ ಉಚಿತ ಪ್ರವೇಶವನ್ನು ಕಲ್ಪಿಸಲಾಗಿದೆ ಎಂದರು.
ವಾಕಥಾನ್‌ಗೆ ಶಾಸಕ ಸುರೇಶ್ ಕುಮಾರ್ ಚಾಲನೆ

ಮಲ್ಲೇಶ್ವರಂನ SHVNM ಕಾಲೇಜು ಮೈದಾನದಲ್ಲಿ ಆಯುರ್ವೇದ ವಾಕಥಾನ್‌ಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಎಸ್. ಸುರೇಶ್ ಕುಮಾರ್ ಅವರು, ಶಾರೀರಿಕ ಆರೋಗ್ಯದ ಜತೆಗೆ ಮಾನಸಿಕ ಆರೋಗ್ಯವೂ ಮುಖ್ಯವಾಗಿದ್ದು, ಶರೀರ ಹಾಗೂ ಮಾನಸಿಕ ಸ್ವಾಸ್ಥ್ಯವನ್ನು ಕಾಪಾಡಿಕೊಳ್ಳಲು ಪರಿಪೂರ್ಣ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಬಹುಮುಖ್ಯವಾಗಿದೆ. ಆಯುರ್ವೇದ ಆ ದಾರಿಯನ್ನು ತೋರುತ್ತದೆ ಎಂದರು.
ತಮ್ಮ ವೈಯಕ್ತಿಕ ಜೀವನದ ಅನುಭವವನ್ನು ಉದಾಹರಿಸಿದ ಅವರು, ನಾನು ಕಳೆದ ವರ್ಷ 6 ತಿಂಗಳುಗಳ ಕಾಲ ಸಂಪೂರ್ಣ ಹಾಸಿಗೆಯನ್ನು ಹಿಡಿದಿದ್ದೆ. ಆಯುರ್ವೇದದ ಶಕ್ತಿ ಹಾಗೂ ಡಾ.ಗಿರಿಧರ ಕಜೆಯವರ ಕೈಚಳಕದ ಪ್ರಭಾವದಿಂದಾಗಿ ನಾನು ಇಂದು ಕನ್ಯಾಕುಮಾರಿಯ ವರೆಗೂ ಸೈಕಲ್ ಓಡಿಸುವಷ್ಟು ಸದೃಢವಾಗಿದ್ದೇನೆ. ಡಾ. ಗಿರಿಧರ ಕಜೆಯವರು ಎರಡನೇ ಬಾರಿಗೆ ವಿಶ್ವ ಆಯುರ್ವೇದ ಸಮ್ಮೇಳನವನ್ನು ಆಯೋಜಿಸುತ್ತಿದ್ದು, ಭಾರತೀಯ ಪರಂಪರೆಯ ಭಾಗವಾದ ಆಯುರ್ವೇದ ಕುರಿತಾದ ಅವರ ಕಾಳಜಿಯ ಜೊತೆಗೆ ನಾವೆಲ್ಲರೂ ಜತೆಯಾಗೋಣ. ಸಮ್ಮೇಳನದಲ್ಲಿ ಭಾಗವಹಿಸೋಣ ಎಂದು ಕರೆ ನೀಡಿದರು.
ಮಲ್ಲೇಶ್ವರಂನ ಪ್ರಮುಖ ರಸ್ತೆಗಳಲ್ಲಿ ಸಾಗಿದ ಆಯುರ್ವೇದ ವಾಕಥಾನ್ ಸಮ್ಮೇಳನದ ಕುರಿತಾಗಿ ಜಾಗೃತಿಯನ್ನು ಮೂಡಿಸಿತು. ಹಿರಿಯ ನಟ ಮಂಜುನಾಥ ಹೆಗಡೆ, ಕಿರುತೆರೆ ನಟಿ ನಮಿತಾ ದೇಸಾಯಿ ಮುಂತಾದವರು ಇದ್ದರು.
ಡಿ.25ರಿಂದ ದ್ವಿತೀಯ ವಿಶ್ವ ಆಯುರ್ವೇದ ಸಮ್ಮೇಳನ; ಬೈಕ್ ರ್‍ಯಾಲಿಗೆ ಹೈಕೋರ್ಟ್ ನ್ಯಾಯಮೂರ್ತಿ ವಿ. ಶ್ರೀಶಾನಂದ ಚಾಲನೆ
ಟೌನ್ ಹಾಲ್‌ನಿಂದ ಆರಂಭವಾದ Vintage Car ರ‍್ಯಾಲಿಯು ಸ್ಯಾಂಕಿಟ್ಯಾಂಕಿಯ ಮೂಲಕ ಅರಮನೆ ಮೈದಾನದ ತನಕ ಸಾಗಿತು. ವೈವಿಧ್ಯಮಯ 35 Vintage car ಗಳು ಜನರು ರೋಮಾಂಚನಗೊಂಡರು. ಹಿಮಾಲಯ ಕಂಪನಿಯ ಅಧಿಕಾರಿಗಳು ಭಾಗಿಗಳಾಗಿದ್ದರು.