ಬೆಂಗಳೂರು: ಚಿನ್ನ ಕಳ್ಳಸಾಗಣೆ ಪ್ರಕರಣದಲ್ಲಿ ಬಂಧನವಾಗಿ ಜೈಲಿನಲ್ಲಿರುವ ನಟಿ ರನ್ಯಾ ರಾವ್ (Ranya Rao Case) ಕುರಿತು ತನಿಖೆಯಲ್ಲಿ ಮತ್ತಷ್ಟು ಸ್ಫೋಟಕ ಅಂಶಗಳು ಬಯಲಾಗಿವೆ. ಆಫ್ರಿಕಾದಿಂದ ನೇರವಾಗಿ ಚಿನ್ನ ತರಲು ಪ್ಲ್ಯಾನ್ ಮಾಡಿದ್ದ ರನ್ಯಾ ರಾವ್‌ಗೆ, ಉಗಾಂಡ ಮೂಲದ ಏಜೆಂಟ್‌ನಿಂದ ಸುಮಾರು 2 ಕೋಟಿ ರೂ. ವಂಚನೆ ನಡೆದಿತ್ತು ಎಂಬ ವಿಚಾರ ತಿಳಿದುಬಂದಿದೆ.
102 ಕೋಟಿ ರೂ. ಮೌಲ್ಯದ ಚಿನ್ನ ಅಕ್ರಮ ಸಾಗಣೆ ಪ್ರಕರಣದಲ್ಲಿ ನಟಿ ವಿರುದ್ಧ ಜಾರಿ ನಿರ್ದೇಶನಾಲಯವು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ. ಇದರಲ್ಲಿ ರನ್ಯಾ ರಾವ್‌ಗೆ ಆಗಿದ್ದ ವಂಚನೆ ಬಗ್ಗೆ ಉಲ್ಲೇಖಿಸಲಾಗಿದೆ.
ನಟಿ ರನ್ಯಾ ರಾವ್ ಮತ್ತು ಆಕೆಯ ಸಹಚರ ತರುಣ್ ಕೊಂಡೂರು ಮೊದಲು ಆಫ್ರಿಕಾದಿಂದ ನೇರವಾಗಿ ಚಿನ್ನ ತರಲು ಫ್ಲ್ಯಾನ್ ಮಾಡಿದ್ದರಂತೆ. ದುಬೈ ಮಾರುಕಟ್ಟೆಯಲ್ಲಿ ಸಿಗುವ ಬಹುತೇಕ ಚಿನ್ನ ಆಫ್ರಿಕಾದ ಗಣಿಗಳಿಂದ ಬರುತ್ತದೆ ಎಂದು ತಿಳಿದ ಆರೋಪಿಗಳು, ದುಬೈನಲ್ಲಿ 'ವೀರ ಡೈಮಂಡ್ಸ್ ಟ್ರೇಡಿಂಗ್' ಎಂಬ ಕಂಪನಿ ತೆರೆದಿದ್ದರು. ಬಳಿಕ ಉಗಾಂಡಾ, ಕೀನ್ಯಾ ಮತ್ತು ಟಾಂಜಾನಿಯಾದಲ್ಲಿ ಚಿನ್ನದ ಮೂಲ ಹುಡುಕಲು ಆರಂಭಿಸಿದರು ಎನ್ನಲಾಗಿದೆ.
ಚಿನ್ನದ ದಂಧೆಗೆ ಇಳಿದ ಆರಂಭದಲ್ಲಿ ನಟಿ ರನ್ಯಾ ರಾವ್‌ಗೆ ದೊಡ್ಡ ಪೆಟ್ಟು ಬಿದ್ದಿತ್ತು. ಉಗಾಂಡಾದ 'ಬೆನ್' ಎಂಬ ಏಜೆಂಟ್ ಮೂಲಕ 5 ಕೆಜಿ ಚಿನ್ನ ತರಿಸಲು ಈಕೆ ಮುಂಗಡವಾಗಿ 23.5 ಲಕ್ಷ ರೂ. ನೀಡಿದ್ದರು. ನಂತರ ತೆರಿಗೆ ಹೆಸರಲ್ಲಿ ಮತ್ತೆ ಲಕ್ಷಾಂತರ ರೂಪಾಯಿ ಪಾವತಿಸಿದ್ದರು. ಆದರೆ ಅಂತಿಮವಾಗಿ ಆ ಏಜೆಂಟ್ ಚಿನ್ನವನ್ನೂ ನೀಡದೆ ಹಣವನ್ನೂ ವಾಪಸ್ ಕೊಡದೆ 2 ಕೋಟಿ ರೂಪಾಯಿಗೂ ಅಧಿಕ ಹಣ ವಂಚಿಸಿದ್ದ ಎನ್ನಲಾಗಿದೆ.
ಆಫ್ರಿಕಾದಲ್ಲಿ ಮೋಸ ಹೋದ ಮೇಲೆ ರನ್ಯಾ ಮತ್ತು ತಂಡ ದುಬೈನ ‘ದೇರಾ ಗೋಲ್ಡ್ ಸೂಕ್’ ಮಾರುಕಟ್ಟೆಯಲ್ಲಿ ನಗದು ನೀಡಿ ಚಿನ್ನ ಖರೀದಿಸಲು ಆರಂಭಿಸಿತು. ಇಲ್ಲಿ ನಟಿ ರನ್ಯಾ ರಾವ್ ಖುದ್ದಾಗಿ ಹಣ ಹೊತ್ತು ಹೋಗಿ ಚಿನ್ನ ಖರೀದಿಸುತ್ತಿದ್ದರು. ಈ ಚಿನ್ನವನ್ನು ಸ್ವಿಟ್ಜರ್ಲೆಂಡ್ ಅಥವಾ ಥಾಯ್ಲೆಂಡ್‌ಗೆ ರಫ್ತು ಮಾಡುತ್ತಿರುವುದಾಗಿ ಸುಳ್ಳು ದಾಖಲೆ ಸೃಷ್ಟಿಸಿ, ವಿಮಾನ ನಿಲ್ದಾಣದ ಒಳಗೆ ಅದನ್ನು ತಮ್ಮ ಮೈಮೇಲೆ ಅಡಗಿಸಿಕೊಂಡು ಬೆಂಗಳೂರಿಗೆ ತರುತ್ತಿದ್ದರು. ಮಾರ್ಚ್ 2024 ರಿಂದ ಮಾರ್ಚ್ 2025 ರ ನಡುವೆ ಒಟ್ಟು 15 ಬಾರಿ ಪ್ರಯಾಣ ಮಾಡಿದ್ದ ರನ್ಯಾ, ಬರೋಬ್ಬರಿ 127.87 ಕೆಜಿ ಚಿನ್ನವನ್ನು (ಮೌಲ್ಯ 102 ಕೋಟಿ ರೂ.) ಸ್ಮಗ್ಲಿಂಗ್ ಮಾಡಿದ್ದರು ಎನ್ನಲಾಗಿದೆ.
ರನ್ಯಾ ರಾವ್ ಸಿಕ್ಕಿಬಿದ್ದಿದ್ದು ಹೇಗೆ?
ರನ್ಯಾ ರಾವ್ ಹಿರಿಯ ಪೊಲೀಸ್ ಅಧಿಕಾರಿ ರಾಮಚಂದ್ರರಾವ್ ಸಾಕು ಮಗಳಾಗಿದ್ದರಿಂದ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅವರಿಗೆ ‘ವಿಐಪಿ ಪ್ರೋಟೋಕಾಲ್’ ಸಿಗುತ್ತಿತ್ತು. ಇದನ್ನೇ ಬಂಡವಾಳ ಮಾಡಿಕೊಂಡಿದ್ದ ಅವರು ಕಸ್ಟಮ್ಸ್ ತಪಾಸಣೆಯಿಂದ ಸುಲಭವಾಗಿ ತಪ್ಪಿಸಿಕೊಳ್ಳುತ್ತಿದ್ದರು. ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಅಧಿಕಾರಿಗಳು ದುಬೈನಿಂದ ಬಂದಿದ್ದ ರನ್ಯಾ ರಾವ್ ಅವರನ್ನು ಬಂಧಿಸಿ, ಆಕೆಯ ಬಳಿಯಿದ್ದ 12.56 ಕೋಟಿ ಮೌಲ್ಯದ 14.2 ಕೆಜಿ ಚಿನ್ನದ ಬಿಸ್ಕೆಟ್‌ಗಳನ್ನು ವಶಪಡಿಸಿಕೊಂಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಈಗಾಗಲೇ ರನ್ಯಾ ರಾವ್‌ಗೆ ಸೇರಿದ 34 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ. ದಂಧೆಯಲ್ಲಿ ಭಾಗಿಯಾದ ತರುಣ್ ಕೊಂಡೂರು ಮತ್ತು ಬಳ್ಳಾರಿ ಮೂಲದ ಚಿನ್ನದ ವ್ಯಾಪಾರಿ ಸಾಹಿಲ್ ಸಕಾರಿಯಾ ಜೈನ್ ಹೆಸರನ್ನೂ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ. ಸದ್ಯ ಇಡೀ ಜಾಲದ ಕುರಿತು ತನಿಖೆ ಮುಂದುವರಿದಿದೆ.