ಬೆಂಗಳೂರು: ದುಬೈನಿಂದ ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ (Gold smuggling case:) ಸಂಬಂಧಿಸಿ ನಟಿ ರನ್ಯಾ ರಾವ್ ಕಳೆದ ಮೂರು ದಿನಗಳಿಂದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಕಸ್ಟಡಿಯಲ್ಲಿದ್ದರು. ಇದೀಗ ನಟಿ ರನ್ಯಾ ರಾವ್ (Actress Ranya Rao ) ಕಸ್ಟಡಿ ಅವಧಿ ಅಂತ್ಯವಾದ ಹಿನ್ನೆಲೆಯಲ್ಲಿ ಮತ್ತೆ ಅಧಿಕಾರಿಗಳು ಬೆಂಗಳೂರಿನ ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಅವರನ್ನು ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಧೀಶರು ನಟಿಗೆ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಕೋರ್ಟ್‌ನಲ್ಲಿ ನಟಿ ರನ್ಯಾರಾವ್ ಹಾಜರಾದ ಬಳಿಕ ಕಣ್ಣೀರು ಹಾಕಿದ್ದಾರೆ. ಈ ವೇಳೆ ಪೊಲೀಸರು ಹಲ್ಲೆ ಮಾಡಿದರಾ ಎಂದು ನ್ಯಾಯಾಧೀಶರು ಪ್ರಶ್ನೆ ಮಾಡಿದಾಗ, ನಟಿ ರನ್ಯಾ ರಾವ್ ಅತ್ತಿದ್ದಾರೆ. ನನಗರ ಕೆಟ್ಟದಾಗಿ ಬೈದಿದ್ದಾರೆ. ಮಾನಸಿಕವಾಗಿ ನಾನು ಕುಗ್ಗಿದ್ದೇನೆ. ಬೆದರಿಸುವ ರೀತಿಯಲ್ಲಿ ಅಧಿಕಾರಿಗಳು ಮಾತನಾಡಿದ್ದಾರೆ ಎಂದು ಜಡ್ಜ್ ಮುಂದೆ ಹೇಳಿದ್ದಾರೆ.
ಈ ವೇಳೆ ಡಿಆರ್‌ಐ ಅಧಿಕಾರಿಳು ಪ್ರತಿಕ್ರಿಯಿಸಿ, ರನ್ಯಾ ರಾವ್ ಮೇಲೆ ಹಲ್ಲೆ ಮಾಡಿಲ್ಲ. ವಿಚಾರಣೆಯ ಸಿಸಿಟಿವಿ ದೃಶ್ಯ ಕೋರ್ಟ್‌ಗೆ ಪ್ರೊಡ್ಯೂಸ್ ಮಾಡಲು ತಯಾರಿದ್ದೇವೆ ಎಂದಿದ್ದಾರೆ. ವಿಚಾರಣೆಯ ವೇಳೆ ಡಿಆರ್‌ಐ ಪರ ವಕೀಲರು ಉಪಸ್ಥಿತರಿದ್ದರಾ ? ಎಂದು ಕೇಳಿದಾಗ ನಟಿ ರನ್ಯಾ ರಾವ್ ಇಲ್ಲ ಎಂದು ಹೇಳಿಕೆ ನೀಡಿದ್ದಾರೆ.
ದುಬೈನಿಂದ ಚಿನ್ನ ಕಳ್ಳ ಸಾಗಣೆ ಮಾಡಿದ ಪ್ರಕರಣದಲ್ಲಿ ಬಂಧಿತರಾಗಿರುವ ಸ್ಯಾಂಡಲ್‌ವುಡ್ ನಟಿ ರನ್ಯಾ ರಾವ್ ಅಲಿಯಾಸ್ ಹರ್ಷವರ್ಧಿನಿ ರನ್ಯಾ ಅವರನ್ನು ತನಿಖೆಗೆ ಒಳಪಡಿಸಲು ಈ ಹಿಂದೆ ಮೂರು ದಿನಗಳ ಕಾಲ ಕಂದಾಯ ಗುಪ್ತಚರ ನಿರ್ದೇಶನಾಲಯದ (ಡಿಆರ್‌ಐ) ವಶಕ್ಕೆ ನೀಡಲಾಗಿತ್ತು. ಇದೀಗ 15 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
ಮಾರ್ಚ್ 3ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾರನ್ನು ಬಂಧಿಸಿದ್ದ ಡಿಆರ್‌ಐ ಅಧಿಕಾರಿಗಳು ಆಕೆಯಿಂದ ₹12.86 ಕೋಟಿ ಮೌಲ್ಯದ 14.2 ಕೆ ಜಿ ಚಿನ್ನ ಜಫ್ತಿ ಮಾಡಿದ್ದರು. ಇವರು ಕಸ್ಟಮ್ ಅಧಿಕಾರಿಗಳ ತಪಾಸಣೆ ತಪ್ಪಿಸಿಕೊಳ್ಳಲು ಚಿನ್ನವನ್ನು ಬೆಲ್ಟ್ ಮತ್ತು ಜಾಕೆಟ್‌ಗಳಲ್ಲಿ ಇಟ್ಟುಕೊಂಡು ಬರುತ್ತಿದ್ದರು ಎನ್ನಲಾಗಿದೆ. ರಾಜ್ಯದ ಡಿಜಿಪಿ ಶ್ರೇಣಿ ಅಧಿಕಾರಿಯೊಬ್ಬರ ಸಾಕು ಮಗಳಾದ ರನ್ಯಾ ಅವರು ಅತಿ ಗಣ್ಯ ವ್ಯಕ್ತಿಗಳಿಗೆ ಇರುವ ಮಾರ್ಗದ ಮೂಲಕ ವಿಮಾನ ನಿಲ್ದಾಣದಿಂದ ಸರಾಗವಾಗಿ ಹೊರಬರುತ್ತಿದ್ದರು ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ | Reels Craze: ಮತ್ತೊಂದು ರೀಲ್ಸ್ ಕ್ರೇಜ್; ಎಲ್‍ಪಿಜಿ ಸಿಲಿಂಡರ್ ಲೀಕ್ ಮಾಡಿ ವಿಡಿಯೊ ಮಾಡಿದ ಜೋಡಿ
ಆನಂತರ ಆಕೆಯ ಮನೆಯಲ್ಲಿ ಶೋಧ ನಡೆಸಿದ್ದ ಡಿಆರ್‌ಐ ಅಧಿಕಾರಿಗಳು 2.06 ಕೋಟಿ ಮೌಲ್ಯದ ಆಭರಣ ಮತ್ತು 2.67 ಕೋಟಿ ನಗದು ಜಫ್ತಿ ಮಾಡಿದ್ದರು. ಇದರಿಂದ ಪ್ರಕರಣದಲ್ಲಿ ಒಟ್ಟು ಜಫ್ತಿಯು 17.29 ಕೋಟಿಗೆ ಏರಿಕೆಯಾಗಿದೆ.